ಅದೊಂದು ದಿನ ಯೋಗರಾಜಭಟ್ಟರ ಬಳಿ ಹೋದ ನಟ ವೀರೇಂದ್ರ ಶೆಟ್ಟಿ “ಸಿನಿಮಾ ಕಥೆ ಹಿಡಿದು ನಿರ್ಮಾಪಕರನ್ನು ಹುಡುಕಿ ಸುಸ್ತಾಗಿದ್ದೇನೆ. ಏನಾದರೂ ಗೈಡೆನ್ಸ್ ಕೊಡಿ ನಾನೇ ಸಿನಿಮಾ ಮಾಡಿಬಿಡ್ತೀನಿ” ಅಂದಿದ್ದರಂತೆ. ಆ ಮಟ್ಟಕ್ಕೆ ರೊಚ್ಚಿಗೆದ್ದಿದ್ದ ವೀರೇಂದ್ರ ಶೆಟ್ಟಿ ಅವರಿಗೆ ಭಟ್ರು “ನಾನು ರಾಂಗ್ ಗೈಡೆನ್ಸ್ ಕೊಡೋದರಲ್ಲಿ ಫೇಮಸ್ಸು. ನನ್ನ ಬಳಿ ಬಂದಿದ್ದೀಯಲ್ಲಾ?” ಎನ್ನುವ ರೀತಿಯಲ್ಲಿ ಮತಾಡಿದ್ದರಂತೆ. ಇನ್ನು ಈ ಹುಡುಗ ಸುಮ್ಮನಿರೋದಿಲ್ಲ ಅಂತಾ ತಿಳಿದ ಭಟ್ಟರು “ಬೇಕಿದ್ದರೆ ನನ್ನ ಬ್ಯಾನರ್ ಹೆಸರನ್ನು ಬಳಸಿಕೋ. ಹುಷಾರಾಗಿ ಸಿನಿಮಾ ಮಾಡು” ಅಂದಿದ್ದರಂತೆ. ಹಾಗೆ ಶುರುವಾದ ಸಿನಿಮಾ ಸವರ್ಣದೀರ್ಘ ಸಂಧಿ. ಈಗಾಗಲೇ ತುಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ವೀರೇಂದ್ರ ಶೆಟ್ಟಿ ನಿರ್ದೇಶಿಸಿ ನಟಿಸಿರುವ, ವೀರು ಟಾಕೀಸ್ ಮತ್ತು ಲೈಲಾಕ್ ಎಂಟರ್ಟೈನ್ಮೆಂಟ್ಸ್ ಜಂಟಿಯಾಗಿ ನಿರ್ಮಿಸಿರುವ ಸಿನಿಮಾ ಸವರ್ಣದೀರ್ಘ ಸಂಧಿ!
ಮನೋಮೂರ್ತಿ ಈ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಸವರ್ಣದೀರ್ಘ ಸಂಧಿಯ ಸುಮಧುರ ಹಾಡುಗಳು ಲೋಕಾರ್ಪಣೆಗೊಂಡಿವೆ. ಜಯಂತ್ ಕಾಯ್ಕಿಣಿ, ಯೋಗರಾಜ ಭಟ್ ಮತ್ತು ಮನೋಮೂರ್ತಿ ಸೇರಿ ಈ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.
ಜನವರಿ ಫೆಬ್ರವರಿ ತಿಂಗಳಲ್ಲಿ ಆರಂಭಿಸಿದ ಚಿತ್ರ ಈಗಾಗಲೇ ಮುಕ್ತಾಯವಾಗಿದೆ. ವೀರೇಂದ್ರ ಶೆಟ್ಟಿ ಅವರ ಸಿನಿಮಾ ಮೇಲಿನ ಪ್ರೀತಿ, ಕಾಳಜಿ, ಅವರು ಕಥೆ ಹೇಳಿದ ರೀತಿ ನೋಡಿ ನಾನು ಸಹಾ ಪಾಲುದಾರನಾದೆ. ಇದರಲ್ಲಿ ಸೆಮಿ ಕಲಾಸಿಕಲ್ ಪ್ಯಾಟ್ರನ್ನಲ್ಲಿ ಹಾಡುಗಳನ್ನು ಕಂಪೋಸ್ ಮಾಡಿದ್ದೇನೆ. ಕಾಮಿಡಿ ಮತ್ತು ಪಾಸಿಟೀವ್ ರೌಡಿಸಂ ಕಥಾ ಹಂದರ ಈ ಚಿತ್ರದಲ್ಲಿ ಎಂದು ಮನೋಮೂರ್ತಿ ತಿಳಿಸಿದರು.
ಒಂಟಿಮರ, ನಾಲ್ಕು ಹನಿ ಮಳೆ, ಬೆಳ್ಳಕ್ಕಿ ಸಾಲು, ಯಾವುದು ನೋಡಿದರೂ ನನಗೆ ಜಯಂತ್ ಕಾಯ್ಕಿಣಿ ಮತ್ತು ಮನೋ ಮಊರ್ತಿ ನೆನಪಾಗುತ್ತಾರೆ. ನನ್ನನ್ನೂ ಸೇರಿಸಿ ಜಗತ್ತಿನ ಎಲ್ಲರಿಗೆ ಪರಿಸರವನ್ನು ಪರಿಚಯಿಸಿದವರು ಇವರಿಬ್ಬರೂ. ಬೆಳಿಗ್ಗೆ ಎದ್ದು ತಿಂಡಿ ತಿನ್ನುವಾಗ ಮನೋಮೂರ್ತಿ ಅವರ ಸಂಯೋಜನೆಯ ಯಾವುದಾದರೂ ಹಾಡು ಕಿವಿಗೆ ಬಿದ್ದರೆ ಇಡೀ ದಿನ ಅದೇ ಗುಂಗುನಲ್ಲಿರುವಂತಾಗುತ್ತದೆ. ಮಾಧುರ್ಯ ತಾಯಿ ಥರಾ. ಒಂದು ಮಸಾಲೆ ಸಾಂಗು ಹುಟ್ಟಲು ಕೂಡಾ ಮಾಧುರ್ಯ ಬೇಕು. ಇಂಥಾ ಮಾಧುರ್ಯಕ್ಕೆ ರಾಜಪಟ್ಟ ಕೊಡುವುದಿದ್ದರೆ ಅದು ಮನೋಮೂರ್ತಿಯವರಿಗೆ ದಕ್ಕಬೇಕು. ಟಿಪಿಕಲ್ ಆದ ಕರಾವಳಿ ಫ್ಲೇವರು ಹೊಂದಿರುವ ಮಜವಾದ ವ್ಯಕ್ತಿತ್ವ ಈ ಚಿತ್ರದ ನಿರ್ದೇಶಕ ಕಂ ನಾಯಕನಟ ವೀರೇಂದ್ರ ಶೆಟ್ಟಿಯವರದ್ದು. ಹಾಡಿನ ಒಂದು ಶಾಟ್ ನಲ್ಲಿ ಲಘು ಗುರು ಬರೀತಿರುತ್ತಾನೆ. ಅದನ್ನು ನೋಡಿ ಖುಷಿಯಾಯ್ತು. ಭಾಷೆ ಮೇಲೆ ಈತನಿಗೆ ಒಳ್ಳೇ ಹಿಡಿತವಿದೆ. ಸಿನಿಮಾ ರಂಗದಲ್ಲಿ ಈತ ಏನೋ ಮಾಡುತ್ತಾನೆ ಎನ್ನುವ ನಂಬಿಕೆ ನನಗಿದೆ ಅನ್ನೋದು ಭಟ್ಟರ ಅಭಿಪ್ರಾಯ.
ಇನ್ನು ಜಯಂತ ಕಾಯ್ಕಿಣಿ ಮಾತನಾಡುತ್ತಾ ಸಿನಿಮಾ ಹಾಡು ಬರೆಯೋದು ಹೇಗೆ ಅಂತಾನೇ ಗೊತ್ತಿಲ್ಲದ ನನ್ನನ್ನು ಮೇಲಿಂದ ತಳ್ಳಿ ಮಜಾ ನೋಡಿದವರು ಯೋಗರಾಜ ಭಟ್ಟರು. ಹಾಗೆ ಶುರುಮಾಡಿದ ನನ್ನ ಗೀತಸಾಹಿತ್ಯ ಬರೆಯುವ ಕಸುಬು ಮುಂದೆವರೆದೇ ಇದೆ. ಕನ್ನಡ ಭಾಷೆ ಮೇಲೆ ಅಪಾರ ಪ್ರೀತಿ ಇರುವವರು ಮಾತ್ರ ಇಂಥ ಶುದ್ಧ ಶೀರ್ಷಿಕೆಯ ಸಿನಿಮಾ ಮಾಡಲು ಸಾಧ್ಯ. ಸವರ್ಣಧೀರ್ಘ ಸಂಧಿ ಎಂದು ಹೆಸರಿಟ್ಟು ಸಿನಿಮಾ ಮಾಡಿರುವ ವೀರೇಂದ್ರ ಶೆಟ್ಟಿ ಮತ್ತು ಅವರ ತಂಡಕ್ಕೆ ಒಳಿತಾಗಲಿ ಎಂದರು.
ನೆಲ್ಯಾಡಿಯಲ್ಲಿ ಪೆಟ್ರೋಲ್ ಬಂಕ್ ವ್ಯವಹಾರ ನಡೆಸುವ ಲೂಷಿಂಗ್ಟನ್ ಥಾಮಸ್, ಹಿಂದೆ ಪಿ.ವಿ.ಆರ್.ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೇಮಂತ್ ಕುಮಾರ್, ಮನೋಮೂರ್ತಿ ಮತ್ತು ವೀರೇಂದ್ರ ಶಟ್ಟಿ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವೀರೇಂದ್ರ ಶೆಟ್ಟಿ ಅವರೊಂದಿಗೆ ಕೃಷ್ಣಾ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಪತ್ರಕರ್ತ, ನಿರೂಪಕ ಅಜಿತ್ ಹನುಮಕ್ಕನವರ್ ಕೂಡಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ.
No Comment! Be the first one.