ಕನ್ನಡ ಸಿನಿಮಾ ಪ್ರೇಕ್ಷಕರ ಪಾಲಿಗೆ ಅಮ್ಮನ್, ಅಕ್ಕನ್ ಅನ್ನೋ ‘ರೌಡಿಸಂ ಭಾಷೆಯಷ್ಟೇ ಪರಿಚಿತ. ಇಲ್ಲೇನಿದ್ದರೂ ದೀರ್ಘ ಅಂದ್ರೆ ಲಾಂಗು, ಸಂಧಿ ಅಂದ್ರೆ ಗಲ್ಲಿ ಅಂತಾ ಅಪಾರ್ಥ ಮಾಡಿಕೊಳ್ಳುವವರೇ ಹೆಚ್ಚು!
ಹೀಗಿರುವಾಗ, ‘ಸವರ್ಣದೀರ್ಘ ಸಂಧಿ ಅನ್ನೋ ಸಿನಿಮಾ ಮೂಲಕ ಹೊಸದಾಗಿ ‘ರೌಡಿಸಂ ವ್ಯಾಕರಣವನ್ನು ಹುಟ್ಟು ಹಾಕಿದ್ದಾರೆ ನಿರ್ದೇಶಕ ವೀರೇಂದ್ರ ಶೆಟ್ಟಿ. ತೀರಾ ಚಿಕ್ಕ ವಯಸ್ಸಿಗೇ ಜೀತಕ್ಕೆ ಸಿಲುಕಿ, ಬೆಳೆಬೆಳೆಯುತ್ತಾ ರೌಡಿಯಾಗಿ ರೂಪಾಂತರ ಹೊಂದುವ ಹೀರೋ ಮುದ್ದಣ್ಣ. ಇವತ್ತಿನ ದಿನಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೂ ನೆಟ್ಟಗೆ ಕನ್ನಡದ ವ್ಯಾಕರಣ ಗೊತ್ತಿರೋದಿಲ್ಲ. ಸಂಧಿ, ಸಮಾಸದ ಬಗ್ಗೆ ಪ್ರಶ್ನೆ ಕೇಳಿದರಂತೂ ಪಿಎಚ್.ಡಿ. ಪದವೀಧರರೂ ತಿಣುಕಾಡಿಬಿಡುತ್ತಾರೆ. ಇಂಥಾದ್ದರಲ್ಲಿ ಸ್ಕೂಲು ಎಂದರೇನು ಅಂತಲೇ ಗೊತ್ತಿಲ್ಲದ ಮುದ್ದಣ್ಣ ಕನ್ನಡದಲ್ಲಿ ಪಾಂಡಿತ್ಯ ಪಡೆದಿರುತ್ತಾನೆ.
ಮುದ್ದಣ್ಣನ ರೌಡಿಸಂ ಏನಿದ್ದರೂ ಅಮಾಯಕ ಜನರಿಗೆ ಕಂಟಕಪ್ರಾಯರಾಗಿರುವವರ ವಿರುದ್ಧ. ಈತ ಯಾರಿಗೆ ಅಟಕಾಯಿಸಿಕೊಳ್ಳುತ್ತಾನೋ ಅಂಥವರಿಗೆ ವ್ಯಾಕರಣದ ಪರಿಚಯವಿದ್ದರೆ ಬದುಕಿದಂತೆ. ಇಲ್ಲದಿದ್ದರೆ ಅವರಿಗೆ ಕೊಡಬಾರದ ಕಾಟ ಕೊಟ್ಟು ಕನ್ನಡದ ಪಾಠ ಹೇಳಿಕೊಡುವುದು ಮುದ್ದಣ್ಣ ಶಿಕ್ಷಿಸುವ ಪರಿ. ಅಸಲಿಗೆ, ಶಾಲೆಯ ಪರಿಚಯವೇ ಇಲ್ಲದ ಈತ ಕನ್ನಡ ಪಂಡಿತನಾಗಿದ್ದಾದರೂ ಯಾಕೆ ಅನ್ನೋ ಕುತೂಹಲವಿದ್ದರೆ ಅದನ್ನು ನೀಗಿಸಿಕೊಳ್ಳಲು ಸವರ್ಣದೀರ್ಘ ಸಂಧಿಯನ್ನೊಮ್ಮೆ ನೋಡಲೇ ಬೇಕು!
ಈ ಚಿತ್ರದಲ್ಲಿ ಸ್ವತಃ ವೀರೇಂದ್ರ ಶೆಟ್ಟಿ ನಟನೆಯೊಂದಿಗೆ ನಿರ್ದೇಶನವನ್ನೂ ಮಾಡಿದ್ದಾರೆ. ಈ ಹಿಂದೆ ಚಾಲಿ ಪೋಲಿಲು ಎನ್ನುವ ತುಳು ಸಿನಿಮಾ ಮಾಡಿ ಗೆದ್ದಿದ್ದವರು ವೀರೇಂದ್ರ ಶೆಟ್ಟಿ. ಈಗ ಸವರ್ಣದೀರ್ಘ ಸಂಧಿಯ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಸಿದ್ಧಸೂತ್ರಗಳಾಚೆಗೆ ಕಥೆ ಕಟ್ಟುವುದು, ಮತ್ತು ಅದನ್ನು ಅಷ್ಟೇ ಭಿನ್ನ ರೀತಿಯಲ್ಲಿ ನಿರೂಪಿಸುವ ಕಲೆ ಬಹುಶಃ ವೀರೇಂದ್ರ ಶೆಟ್ಟರಿಗೆ ಸಿದ್ಧಿಸಿದೆ. ಈ ಕಾರಣದಿಂದಲೇ ಕಾಮಿಡಿ ರೌಡಿಸಂ ಎನ್ನುವ ಹೊಸಾ ಜಾನರನ್ನು ವೀರೇಂದ್ರ ಸೃಷ್ಟಿಸಿದ್ದಾರೆ. ಸಿನಿಮಾಗಳ ಮಟ್ಟಿಗೆ ಗೊತ್ತಿರದಿದ್ದ, ವ್ಯಾಕರಣ, ಸಂಧಿ ಸಮಾಸ, ಪ್ರತ್ಯಯ, ಅಲಂಕಾರಗಳನ್ನೆಲ್ಲಾ ಪರದೆಗೆ ಪರಿಚಯಿಸಿದ್ದಾರೆ.
ಈ ಚಿತ್ರದಲ್ಲಿ ನಾಯಕ ವೀರೇಂದ್ರ ಶೆಟ್ಟಿ ಅವರಿಗೆ ಜೋಡಿಯಾಗಿ ಸಾಥ್ ನೀಡಿರುವುದು ನಟಿ ಕೃಷ್ಣಾ. ಈಕೆಗಿದು ಮೊದಲ ಸಿನಿಮಾವಾದರೂ ಪಳಗಿದವರಂತೆ ನಟಿಸಿದ್ದಾರೆ. ಅಜಿತ್ ಹನುಮಕ್ಕನವರ್ ಟೀವಿಯಲ್ಲಿ ಮಾತ್ರವಲ್ಲ, ಸಿನಿಮಾದಲ್ಲೂ ನಟನೆ ಮಾಡಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಭವಿಷ್ಯದಲ್ಲಿ ಅಜಿತ್ ಪೂರ್ಣಪ್ರಮಾಣದ ಕಲಾವಿದನಾಗುವ ಎಲ್ಲ ಸೂಚನೆ ನೀಡಿದ್ದಾರೆ. ಮನೋಮೂರ್ತಿಯವರ ಸಂಗೀತದ ಹಾಡುಗಳು ಮನೋಲ್ಲಾಸಗೊಳಿಸುತ್ತವೆ. ಲೋಗನಾಥ್ ಛಾಯಾಗ್ರಹಣ ಪರವಾಗಿಲ್ಲ. ಹೊಸಾ ಥರದ ಸಿನಿಮಾ ನೋಡಲಿಚ್ಚಿಸುವವರು ಒಮ್ಮೆ ಸವರ್ಣದೀರ್ಘ ಸಂಧಿಯನ್ನು ನೋಡಬಹುದು.