ತುಳು ಇಂಡಸ್ಟ್ರಿಯಲ್ಲಿ ಖಾತೆ ತೆರೆದು ಬಂದಿರುವ ವೀರೇಂದ್ರ ಕನ್ನಡ ಚಿತ್ರರಂಗದಲ್ಲೂ ಚರಿತ್ರೆ ನಿರ್ಮಿಸುವ ಸೂಚನೆ ನೀಡಿದ್ದಾರೆ. ಇಂಥ ವೀರೇಂದ್ರ ಶೆಟ್ಟಿ ಇದೇ ತಿಂಗಳ ೧೮ಕ್ಕೆ ತೆರೆಗೆ ಬರುತ್ತಿರುವ ಸವರ್ಣದೀರ್ಘ ಸಂಧಿಯ ಕುರಿತಾಗಿ ಮಾತಾಡಿರುವ ಮೊದಲ ಕಂತು ಇಲ್ಲಿದೆ…
ಪ್ರಾದೇಶಿಕ ಚಿತ್ರವಾಗಿಯಷ್ಟೇ ಉಳಿದಿದ್ದ ತುಳು ಸಿನಿಮಾಗಳ ವ್ಯಾಪ್ತಿ ವಿಸ್ತರಿಸಿದ ಚಿತ್ರ ಚಾಲಿ ಪೋಲಿಲು. ತುಳು ಭಾಷೆಯಲ್ಲಿ ನಿರ್ಮಾಣವಾದ ಸಿನಿಮಾಗಳು ಮಂಗಳೂರು, ಉಡುಪಿಗಳಿಗಷ್ಟೇ ಸೀಮಿತ ಎನ್ನುವ ಮಾತನ್ನು ಮುರಿದು, ಬೆಂಗಳೂರು, ಕಾಸರಗೋಡು, ಮಡಿಕೇರಿ, ಮುಂಬೈ, ಪೂನಾದಂಥ ನಗರಗಳಲ್ಲೂ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡ ಸಿನಿಮಾವದು. ಬರೋಬ್ಬರಿ ೭೩ ವಾರಗಳ ಕಾಲ ಓಡಿ ಇತಿಹಾಸ ಸೃಷ್ಟಿಸಿದ ‘ಚಾಲಿಪೋಲಿಲುವಿನ ಸೃಷ್ಟಿಕರ್ತ ವೀರೇಂದ್ರ ಶೆಟ್ಟಿ. ಈಗ ಅದೇ ವೀರೇಂದ್ರ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸವರ್ಣದೀರ್ಘ ಸಂಧಿ ಎನ್ನುವ ಕನ್ನಡದ ಸಾಲನ್ನೇ ತಮ್ಮ ಸಿನಿಮಾದ ಶೀರ್ಷಿಕೆಯನ್ನಾಗಿಸಿದ್ದಾರೆ. ಇತ್ತೀಚೆಗೆ ತುಳುನಾಡಿನಿಂದ ಬರುತ್ತಿರುವ ಪ್ರತಿಭೆಗಳೆಲ್ಲಾ ಚಿತ್ರರಂಗದಲ್ಲಿ ಮಿನುಗುತ್ತಿವೆ. ಈ ನಿಟ್ಟಿನಲ್ಲಿ ನೋಡಿದರೆ, ಈಗಾಗಲೇ ತುಳು ಇಂಡಸ್ಟ್ರಿಯಲ್ಲಿ ಖಾತೆ ತೆರೆದು ಬಂದಿರುವ ವೀರೇಂದ್ರ ಕನ್ನಡ ಚಿತ್ರರಂಗದಲ್ಲೂ ಚರಿತ್ರೆ ನಿರ್ಮಿಸುವ ಸೂಚನೆ ನೀಡಿದ್ದಾರೆ. ಇಂಥ ವೀರೇಂದ್ರ ಶೆಟ್ಟಿ ಇದೇ ತಿಂಗಳ ೧೮ಕ್ಕೆ ತೆರೆಗೆ ಬರುತ್ತಿರುವ ಸವರ್ಣದೀರ್ಘ ಸಂಧಿಯ ಕುರಿತಾಗಿ ಮಾತಾಡಿರುವ ಮೊದಲ ಕಂತು ಇಲ್ಲಿದೆ…
ಸಂಧಿಯಲ್ಲಿ ಸಂಚರಿಸಿದ ವೀರೇಂದ್ರ ಶೆಟ್ಟಿ
ಸಿನಿಮಾ ನನ್ನ ಆಸಕ್ತಿ. ಆದರೆ, ನಾನು ಮೊದಲಿಗೆ ನನ್ನ ವೃತ್ತಿಜೀವನವನ್ನು ಆರಂಭಿಸಿದ್ದು ಪತ್ರಕರ್ತನಾಗಿ. ಮಂಗಳೂರಿನಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೆ. ಸಿನಿಮಾರಂಗಕ್ಕೆ ಕಾಲಿಡುವ ಸಂದರ್ಭ ಒದಗಿಬಂತು. ತುಳುವಿನಲ್ಲಿ ‘ಚಾಲಿಪೋಲಿಲು ಎನ್ನುವ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದೆ. ಆ ಚಿತ್ರ ೫೦೧೧ ದಿನ ಅಂದರೆ ೭೩ ವಾರ ಓಡಿ ದಾಖಲೆ ನಿರ್ಮಿಸಿತು. ಅದರ ನಂತರ ನನ್ನ ಮೂಲ ಆಸಕ್ತಿಯಾದ ಕನ್ನಡ ಚಿತ್ರರಂಗಕ್ಕೆ ಬರುವ ಪ್ರಯತ್ನ ಮಾಡಿದ್ದೇನೆ. ಇಷ್ಟು ವರ್ಷಗಳ ಕಾಲ ಸ್ಕ್ರಿಪ್ಟ್ ಮಾಡಿಕೊಂಡು, ಇಷ್ಟಪಟ್ಟು ಮಾಡಿರುವ ಸಿನಿಮಾ ಸವರ್ಣದೀರ್ಘ ಸಂಧಿ ಇದೇ ಅಕ್ಟೋಬರ್ ೧೮ಕ್ಕೆ ತೆರೆಗೆ ಬರುತ್ತಿದೆ.
‘ಸವರ್ಣದೀರ್ಘ ಸಂಧಿ ಎನ್ನುವ ಶೀರ್ಷಿಕೆಗೂ ನಮ್ಮ ಚಿತ್ರಕ್ಕೂ ನೇರವಾದ ಸಂಬಂಧವಿದೆ. ಅದು ಹೇಗೆ ಅಂತಾ ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತದೆ. ಈ ಸಿನಿಮಾ ಗ್ಯಾಂಗ್ಸ್ಟರ್ ಕಾಮಿಡಿ ಜಾನರಿನ ಚಿತ್ರ. ಇದರ ಕಥಾ ನಾಯಕ ರೌಡಿ ಗ್ಯಾಂಗ್ವೊಂದರ ಪ್ರಮುಖನಾಗಿರುತ್ತಾನೆ. ಅವನಿಗೆ ಸರಿಯಾದ ವಿದ್ಯಾರ್ಹತೆ ಇರುವುದಿಲ್ಲ. ಗಣಿತ, ವಿಜ್ಞಾನಗಳ ಪರಿಚಯವಿರುವುದಿಲ್ಲ. ಆದರೆ, ಆತ ಕನ್ನಡ ವ್ಯಾಕರಣದಲ್ಲಿ ಪಂಟನಾಗಿರುತ್ತಾನೆ. ಏನೇನೂ ವಿದ್ಯಾಭ್ಯಾಸವಿಲ್ಲದ ವ್ಯಕ್ತಿ ಕನ್ನಡ ವ್ಯಾಕರಣದಲ್ಲಿ ಮಾತ್ರ ಹೇಗೆ ಪಂಡಿತನಾಗಿರುತ್ತಾನೆ ಅನ್ನೋದು ಸಿನಿಮಾದ ಗುಟ್ಟು!
ಈ ಚಿತ್ರಕ್ಕೆ ‘ಸವರ್ಣದೀರ್ಘ ಸಂಧಿ ಸೂಕ್ತವಾಗುವ ಮತ್ತು ಕತೆಗೆ ಕನೆಕ್ಟ್ ಆಗುವ ಶೀರ್ಷಿಕೆ. ಸಾಮಾನ್ಯವಾಗಿ, ಶಾಲಾ ಜೀವನದಲ್ಲಿದ್ದಾಗ ಪ್ರತಿಯೊಬ್ಬರಿಗೂ ‘ಸವರ್ಣದೀರ್ಘ ಸಂಧಿಯ ಪರಿಚಯವಿದ್ದೇ ಇರುತ್ತದೆ. ನಂತರ ಪ್ರಾಕ್ಟಿಕಲ್ ಬದುಕಿನಲ್ಲಿ ಈ ಸಂಧಿಯ ಸಾವಾಸಕ್ಕೆ ಜನ ಹೋಗಿರುವುದಿಲ್ಲ. ಆದರೆ ತೀರಾ ಸಣ್ಣ ವಯಸ್ಸಿಗೇ ಕೇಳಿದ ಶಬ್ಧವಾದ್ದರಿಂದ ಬೇಗ ನೋಡುಗರ ಮನಸ್ಸಿಗೆ ಹತ್ತಿರವಾಗುತ್ತದೆ. ಈ ಕಾರಣಕ್ಕೇ ಇಂದು ನಮ್ಮ ಸಿನಿಮಾದ ಟೈಟಲ್ಲು ತುಂಬಾ ಜನಪ್ರಿಯವಾಗಿದೆ.
ನಿರ್ದೇಶನ ಮತ್ತು ನಾಯಕನಟನಾಗಿ ಏಕಕಾಲಕ್ಕೆ ಕಾರ್ಯ ನಿರ್ವಹಿಸುವುದು ಒಂಚೂರು ಕಷ್ಟದ ಕೆಲಸವೇ ನಿಜ. ಆದರೆ, ಈ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ನಾನೇ ಬರೆದಿರುವುದರಿಂದ ಕ್ಯಾಮೆರಾ ಮುಂದೆ ಏನೆಲ್ಲಾ ನಡೆಯಬೇಕು ಅನ್ನೋದು ನನಗೆ ಮೊದಲೇ ಸ್ಪಷ್ಟವಾಗಿ ಗೊತ್ತಿರುತ್ತಿತ್ತು. ನಾನು ಹೇಳಿಕೊಡಬೇಕಿದ್ದದ್ದು ಉಳಿದ ಪಾತ್ರಗಳಿಗೆ ಮಾತ್ರ. ನನ್ನ ಪಾತ್ರ ನಿಭಾಯಿಸುವುದು ತುಂಬಾನೇ ಸುಲಭವಾಗಿತ್ತು. ನಿರ್ದೇಶನ ಮತ್ತು ನನ್ನ ನಟನೆ ನನ್ನ ಆಸಕ್ತಿಯ ಕ್ಷೇತ್ರಗಳೇ ಆಗಿರುವುದರಿಂದ ಯಾವತ್ತೂ ಅದು ಸಮಸ್ಯೆ ಅಂತಾ ಫೀಲ್ ಆಗಲೇ ಇಲ್ಲ.