
ಭಾರೀ ನಿರೀಕ್ಷೆಗಳ ನಡುವೆ ಸೀತಾರಾಮ ಕಲ್ಯಾಣ ಸಿನಿಮಾ ರಿಲೀಸಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಚೆನ್ನಾಂಬಿಕಾ ಬ್ಯಾನರಿನಲ್ಲಿ ಅವರ ಮಗ ನಿಖಿಲ್ ಕುಮಾರ್ ನಟನೆಯ ಎರಡನೇ ಚಿತ್ರ ಇದಾಗಿದ್ದರಿಂದ ಎಲ್ಲರ ಗಮನ ಈ ಸಿನಿಮಾದ ಕಡೆಯಿತ್ತು. ನಿರ್ದೇಶಕ ಎ. ಹರ್ಷ ಈ ವರೆಗೆ ಸಾಕಷ್ಟು ಸ್ಟಾರ್ಗಳ ಸಿನಿಮಾಗಳನ್ನು ನಿರ್ದೇಶಿಸಿದ್ದವರು. ಈ ಬಾರಿ ಯುವರಾಜ ನಿಖಿಲ್ಗಾಗಿ ಎಂಥಾ ಸಿನಿಮಾವನ್ನು ನೀಡಿರಬಹುದು ಅನ್ನೋದು ಸಹಜ ಕುತೂಹಲವಾಗಿತ್ತು.
ಸ್ನೇಹಿತನ ಮದುವೆಯ ಕಾರಣಕ್ಕಾಗಿ ಚಿತ್ರದ ನಾಯಕ ಆರ್ಯ (ನಿಖಿಲ್) ದೊಡ್ಡ ಕುಟುಂಬವೊಂದಕ್ಕೆ ಎಂಟ್ರಿ ಕೊಡುತ್ತಾನೆ. ಮನೆ ಒಡೆಯನ ಮಗಳ ಮೇಲೆ ಈತನಿಗೆ ಲವ್ವಾಗುತ್ತದೆ. ಮದುವೆ ಮುಗಿದ ನಂತರ ಹುಡುಗ ತನ್ನೂರಿಗೆ ವಾಪಾಸಾದರೂ ಆ ದೊಡ್ಡ ಮನೆ ಹುಡುಗಿಯ ಕಡೆಗಿನ ಸೆಳೆತ ಹೆಚ್ಚಾಗಿರುತ್ತದೆ. ಹೇಗಾದರೂ ಮಾಡಿ ಆಕೆಯ ಸಂಪರ್ಕ ಹೊಂದಬೇಕು ಅನ್ನೋವಷ್ಟರಲ್ಲಿ ಓದಲು ಬೆಂಗಳೂರಿಗೆ ಬಂದ ಗೀತಾ (ರಚಿತಾರಾಮ್) ಇವನಿಗೆ ಫೋನು ಮಾಡುವ ಮೂಲಕ ಇವರಿಬ್ಬರ ಸ್ನೇಹದ ಟ್ರ್ಯಾಕು ಮುಂದುವರೆಯುತ್ತದೆ.
ಹೀರೋ ತಂದೆ ದೊಡ್ಡ ಬಿಲ್ಡರ್. ಈತನಿಗೂ ನಾಯಕಿಯ ಮನೆಯವರಿಗೂ ಹಳೇ ನಂಟು. ಫ್ಲಾಷ್ ಬ್ಯಾಕಿಗೆ ಹೋದರೆ, ನಾಯಕನ ತಂದೆ ಶಂಕರ್ (ಶರತ್ ಕುಮಾರ್) ಮತ್ತು ರವಿಶಂಕರ್ ಅವರ ಹಿನ್ನೆಲೆ ತೆರೆದುಕೊಳ್ಳುತ್ತದೆ. ರವಿಶಂಕರ್ ತಂಗಿಯ ಪ್ರೇಮ ಪ್ರಕರಣ ಮತ್ತು ಅದರ ಸುತ್ತ ಉಂಟಾದ ಗೊಂದಲ, ತಪ್ಪು ತಿಳಿವಳಿಕೆಗಳು ಇಬ್ಬರು ಜೀವದ ಗೆಳೆಯರ ನಡುವೆ ಬಿರುಕು ಉಂಟುಮಾಡಿರುತ್ತದೆ. ಈ ಇಬ್ಬರ ಗೆಳತನದ ಮಧ್ಯೆ ಕಂದಕ ಸೃಷ್ಟಿಸಿದವರು ಯಾರು? ಈ ಹುಡುಗ ಆರ್ಯನಿಗೂ ದೊಡ್ಡ ಮನೆಗೂ ಇರೋ ನಂಟು ಯಾವುದು? ಅಸಲಿಗೆ ಈತ ಯಾರ ಮಗ ಅನ್ನೋದೆಲ್ಲಾ ಸಿನಿಮಾದ ಅಂತ್ಯದೊಳಗೆ ರಟ್ಟಾಗುವ ಸತ್ಯದ ಗಂಟು!
ಈ ನಡುವೆ ಹೀರೋ ರೈತಪರವಾಗಿ ನಿಲ್ಲುವ ದೃಶ್ಯಗಳು, ಮಣ್ಣಿನ ಮಕ್ಕಳಿಗಾಗಿ ಬರಡು ನೆಲದಲ್ಲಿ ಡ್ಯಾಂ ಕಟ್ಟಿಸಲು ಮುಂದಾಗೋ ಪರೋಪಕಾರಿ ಧೋರಣೆಗಳನ್ನೆಲ್ಲಾ ಬೆಸೆಯಲಾಗಿದೆ. ‘ಮರ ಎಷ್ಟೇ ದೊಡ್ಡದಾದರೂ ಅದರ ಬೇರಿರುವುದು ಮಣ್ಣಿನಲ್ಲಿ… ಮಣ್ಣನ್ನು ಪ್ರೀತಿಸೋದನ್ನು ನನ್ನ ತಾತನಿಂದಿ ಕಲಿತೆ, ಜನರನ್ನು ಪ್ರೀತಿಸೋದನ್ನು ನನ್ನ ಅಪ್ಪನಿಂದ ಕಲಿತೆ, ಕೆಲಸವನ್ನು ಪ್ರೀತಿಸೋದನ್ನು ನಿಮ್ಮಂತಾ ಶ್ರಮಿಕರಿಂದ ಕಲಿತೆ…”, “ಆಳೋ ವಂಶದಲ್ಲಿ ಹುಟ್ಟಿದರೂ ಆಳಿನ ಥರಾ ದುಡಿಯೋರು ನನ್ನ ತಂದೆ” ಎನ್ನುವ ಮಾರ್ಮಿಕ ಮಾತುಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನೇ ಗಮನದಲ್ಲಿಟ್ಟುಕೊಂಡು ಹೇಳಿಸಿದಂತಿದೆ.
ಇದು ಪಕ್ಕಾ ಫ್ಯಾಮಿಲಿ ಕಥೆ. ಇದರೊಳಗೆ ರೈತರ ಸಮಸ್ಯೆಗಳನ್ನೂ ಸೇರಿಸುವ ಮೂಲಕ ಸಾಮಾಜಿಕ ಚಿತ್ರವನ್ನಾಗಿಯೂ ಮಾಡಿದ್ದಾರೆ. ಮುಖ್ಯಮಂತ್ರಿಗಳ ಮಗನನ್ನಿಟ್ಟುಕೊಂಡು ಸಿನಿಮಾ ಮಾಡುವಾಗ ನಿರ್ದೇಶಕರಿಗೆ ಅನೇಕ ರೀತಿಯ ಸವಾಲುಗಳು ಎದುರಾಗುತ್ತವೆ. ನಿರ್ದೇಶಕ ಹರ್ಷ ತುಂಬಾ ಜಾಣ್ಮೆಯಿಂದ ಸಿ.ಎಂ. ಮಗ ಅನ್ನೋದನ್ನು ಗಮನದಲ್ಲಿಟ್ಟುಕೊಂಡೇ ಕಥೆ, ಚಿತ್ರಕತೆ ಹೊಸೆದಿರೋದು ಅವರ ಬುದ್ದಿವಂತಿಕೆ. ಅದಕ್ಕೆ ಪೂರಕವಾಗಿ ರಘು ನಿಡುವಳ್ಳಿ ಅರ್ಥಪೂರ್ಣ ಸಂಭಾಷಣೆಯನ್ನು ರಚಿಸಿದ್ದಾರೆ. ಸಿನಿಮಾದಲ್ಲಿನ ಒಂದೊಂದು ಮಾತುಗಳೂ ತೂಕವಾಗಿವೆ. ಇಡೀ ಸಿನಿಮಾದಲ್ಲಿ ಕಿರಿಕಿರಿ ಅನಿಸೋದು ಒಂದೇ ಅಂಶ. ಅದು ಕಾಮಿಡಿ. ಭಾವನೆಗಳೇ ಇಲ್ಲದಂತೆ ಶುಷ್ಕವಾಗಿ ಅಭಿನಯಯಿಸಿರುವ ಕಾಮಿಡಿ ನಟ ಚಿಕ್ಕಣ್ಣನನ್ನು ನೋಡೋದೇ ಒಂದು ಅವಸ್ಥೆ. ಕಾಮಿಡಿ ಕಿಲಾಡಿ ನಯನಾ ಅನ್ನೋ ಹೆಣ್ಣುಮಗಳು ಸ್ಟೇಜ್ ಮೇಲೆ ನಿಂತು ಅಭಿನಯಿಸೋದಕ್ಕೂ ಕ್ಯಾಮೆರಾ ಮುಂದೆ ನಟಿಸೋದಕ್ಕೂ ತುಂಬಾ ವ್ಯತ್ಯಾಸವಿದೆ ಅನ್ನೋದನ್ನು ತಿಳಿದುಕೊಳ್ಳದಿದ್ದರೆ ಕಷ್ಟ.
ಸಿನಿಮಾದ ಹೀರೋ ನಿಖಿಲ್ ಪಾಲಿಗೆ ಇದು ಎರಡನೇ ಸಿನಿಮಾವಾದರೂ ಹತ್ತಾರು ಸಿನಿಮಾಗಳ ಅನುಭವಿಯಂತೆ ಮಾಗಿದ ನಟನೆ ನೀಡಿದ್ದಾರೆ. ರವಿಶಂಕರ್, ಶರತ್ ಕುಮಾರ್ ರಂಥಾ ದೈತ್ಯ ನಟರ ಬಗ್ಗೆ ಹೇಳೋದೇ ಬೇಡ. ರಚಿತಾರಾಮ್ ಎಂದಿನಂತೆ ಕ್ಯೂಟ್ ಆಗಿ ಕಾಣಿಸುತ್ತಾರೆ. ಆಕೆಯ ಅಮ್ಮನ ಪಾತ್ರದಲ್ಲಿ ನಟಿಸಿರುವ ಮಧುಬಾಲಾ ಮಗಳನ್ನೇ ನಾಚಿಸುವಂತೆ ಮಿಂಚಿದ್ದಾರೆ!
ಒಟ್ಟಾರೆ ‘ಸೀತಾರಾಮ ಕಲ್ಯಾಣ’ ಕುಟುಂಬ ಸಮೇತವಾಗಿ ನೋಡಬಹುದಾದ ಸೆಂಟಿಮೆಂಟ್, ಆಕ್ಷನ್, ಲವ್ವು ಸೇರಿದಂತೆ ಎಲ್ಲವೂ ಮಿಶ್ರಣಗೊಂಡಿರುವ ಫ್ಯಾಮಿಲಿ ಪ್ಯಾಕ್ನಂತಿದೆ. ಈ ಮನರಂಜಿಸೋ ಸಿನಿಮಾವನ್ನೊಮ್ಮೆ ನೀವೂ ನೋಡಿ..
#