ಸೀತಾರಾಮ ಕಲ್ಯಾಣ ಪಕ್ಕಾ ಫ್ಯಾಮಿಲಿ ಸಬ್ಜೆಕ್ಟು. ನಿಮಗೆಲ್ಲಾ ಗೊತ್ತಿರುವಂತೆ ನಮ್ಮ ತಂದೆಯವರು ಸೂರ್ಯವಂಶ, ಚಂದ್ರಚಕೋರಿಯಂಥಾ ಕೌಟುಂಬಿಕ ಕಥಾಹಂದರದ ಸಿನಿಮಾಗಳನ್ನು ನಿರ್ಮಾಣ ಮಾಡಿದವರು. ನಮ್ಮ ಮನೆಯಲ್ಲಿ ನಮ್ಮ ಅಜ್ಜಿ, ಅಪ್ಪ ಎಲ್ಲರೂ ಇವತ್ತಿಗೂ ಆ ಸಿನಿಮಾದ ಪಾತ್ರಗಳನ್ನು ನೆನಪಿಸಿಕೊಳ್ತಾ ಇರ್ತಾರೆ. ದೊಡ್ಡ ಮಟ್ಟದ ಯಶಸ್ಸು ಕೊಟ್ಟ ಸಿನಿಮಾಗಳವು. ಇಂಥಾ ಸಿನಿಮಾ ಗಳು ಬಂದು ಬಹಳಷ್ಟು ವರ್ಷಗಳಾಗಿದ್ದವು. ಈಗ ಸೀತಾರಾಮಕಲ್ಯಾಣದ ಮೂಲಕ ಅದು ರಿಪೀಟ್ ಆಗಲಿದೆ. ಈಗಾಗಲೇ ಸಾಯಿ ಸುಕನ್ಯಾ ಅವರು ಬರೆದಿರುವ ನಿನ್ನ ರಾಜ ನಾನು ನನ್ನ ರಾಣಿ ನೀನು ಹಾಡಂತೂ ಸಿಕ್ಕಾಪಟ್ಟೆ ಪಾಪ್ಯುಲಾರಿಟಿ ಪಡೆದಿದೆ. ಜನ ಖುಷಿಯಿಂದ ಸ್ವೀಕಾರ ಮಾಡಿದ್ದಾರೆ.
ಸೀತಾರಾಮ ಕಲ್ಯಾಣ ಶುರು ಮಾಡುವ ಮುಂಚೆ ನಾವು ಯಾವ ರೀತಿ ಮಾಡಬೇಕು ಅಂತಾ ಅಂದುಕೊಂಡಿದ್ವೋ ಅದಕ್ಕಿಂತಾ ಅದ್ಭುತವಾಗಿ ಸಿನಿಮಾ ಮೂಡಿಬಂದಿದೆ. ನಾವು ಜಾಗ್ವಾರ್ ಸಿನಿಮಾವನ್ನು ಸರಿಸುಮಾರು 173 ಕಾಲ್ಶೀಟ್ಗಳಲ್ಲಿ ಶೂಟ್ ಮಾಡಿದ್ವಿ. ಅಷ್ಟೂ ಸಂದರ್ಭದಲ್ಲೂ ನಮ್ಮ ತಂದೆ ಕುಮಾರಸ್ವಾಮಿಯವರು ಹಾಜರಿದ್ದರು. ಈಗ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿರುವುದರಿಂದ ಅವರದ್ದೇ ಆದ ಜವಾಬ್ದಾರಿಗಳಿವೆ. ಹೀಗಾಗಿ ಅವರು ಸೆಟ್ಗೆ ಬರಲು ಆಗಲೇ ಇಲ್ಲ. ಅವರನ್ನು ತುಂಬಾನೇ ಮಿಸ್ ಮಾಡಿಕೊಂಡ್ವಿ. ಬಹುಮುಖ್ಯವಾದ ಅಂಶವೆಂದರೆ ನಮ್ಮ ತಂದೆಯೇ ಖುದ್ದು ಕತೆ ಕೇಳಿ `ಸೀತಾರಾಮಕಲ್ಯಾಣವನ್ನು ಫೈನಲ್ ಮಾಡಿದ್ದು. ಅವರಿಗೆ ಸಿನಿಮಾ ಕಥೆಮೇಲೆ ಒಳ್ಳೇ ಜಡ್ಜ್ಮೆಂಟ್ ಇದೆ. ಸಿನಿಮಾರಂಗದಲ್ಲಿ ನಿರ್ಮಾಪಕರಾಗಿ, ವಿತರಕರಾಗಿ, ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವರು ಅವರು. ಎಂಥಾ ಕತೆಯನ್ನು ಜನ ಒಪ್ಪುತ್ತಾರೆ ಅನ್ನೋದು ಅವರಿಗೆ ಗೊತ್ತಿದೆ. ನಾವು ಜಗ್ವಾರ್ ಮಾಡಿದಾಗ, ಅದರ ಮೇಕಿಂಗ್ ಬಗ್ಗೆ ತುಂಬಾ ಒಳ್ಳೇ ಮಾತುಗಳು ಕೇಳಿಬಂದಿದ್ದವು. ಈ ಸಲ ಸೀತಾರಾಮ ಕಲ್ಯಾಣ ಅದನ್ನೂ ಮೀರಿಸುವಂತೆ ತಯಾರಾಗಿದೆ. ನಮ್ಮ ಸಿನಿಮಾದಲ್ಲಿ ಏನಿಲ್ಲವೆಂದರೂ 130ಜನ ಕಲಾವಿದರಿದ್ದಾರೆ. ಇಷ್ಟು ಜನ ಆರ್ಟಿಸ್ಟುಗಳು ಒಂದೇ ಸಿನಿಮಾದಲ್ಲಿ ತೊಡಗಿಸಿಕೊಳ್ಳೋದೆಂದರೆ ಸುಮ್ಮನೇ ಮಾತಲ್ಲ. ಎಲ್ಲರೂ ಒಂದು ಕುಟುಂಬದಂತೆ ಕೆಲಸ ಮಾಡಿದ್ದೇವೆ. ಶರತ್ ಲೋಹಿತಾಶ್ವ ಮತ್ತು ಶಿವರಾಜ್ ಕೆ.ಆರ್. ಪೇಟೆ ಅವರಿಂದ ನಾನು ಈ ಚಿತ್ರದಲ್ಲಿ ಸಾಕಷ್ಟು ಕಲಿತಿದ್ದೀನಿ.
ಒಟ್ಟಾರೆಯಾಗಿ ಹೇಳಬೇಕೆಂದರೆ, ಸೀತಾರಾಮಕಲ್ಯಾಣ ಒಂದು ಪರಿಪೂರ್ಣ ಸಿನಿಮಾ. ಇದು ಸಾಧ್ಯವಾಗಿರೋದು ನಮ್ಮ ಡೈರೆಕ್ಟರ್ ಎ. ಹರ್ಷ ಅವರಿಂದ. ನನ್ನ ಮತ್ತು ಅವರ ಸಂಬಂಧ ಇದೊಂದು ಸಿನಿಮಾದ ಜೊತೆಗೆ ಮುಗಿಯುವಂಥಾದ್ದಲ್ಲ. ಮತ್ತೊಂದು ಸಿನಿಮಾ ಮಾಡೋಣ ಅಂತಾ ಈಗಾಗಲೇ ಹೇಳಿದ್ದೀನಿ. ಆದಷ್ಟು ಬೇಗ ಅದು ಕಾರ್ಯರೂಪಕ್ಕೂ ಬರಲಿದೆ. ಇದೇ ತಿಂಗಳು ೨೫ನೇ ತಾರೀಖು `ಸೀತಾರಾಮಕಲ್ಯಾಣ ತೆರೆಗೆ ಬರುತ್ತಿದೆ. ನಿಮ್ಮೆಲ್ಲರ ಪ್ರೀತಿ, ಸಹಕಾರವಿರಲಿ…
– ನಿಖಿಲ್ ಕುಮಾರ್
#
No Comment! Be the first one.