” ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆ ” ಎನ್ನುವ ಲೈನುಗಳೇ ನೂರಾರು ಜನರಲ್ಲಿ ಪುಳಕ‌ ಮೂಡಿಸಿದೆ.  ಆದರೆ ಸರ್ಕಾರ ಹಾಕಿರುವ ಷರತ್ತುಗಳ ವಿವರ ಪೂರ್ಣವಾಗಿ ತಿಳಿದುಬಂದಾಗ ಎಲ್ಲರ ನಿರೀಕ್ಷೆಯೂ ಠುಸ್ ಎಂದಾಗುವುದು ಖಂಡಿತಾ ಸತ್ಯ.

ಧಾರಾವಾಹಿಗಳ ಚಿತ್ರೀಕರಣ ಮಾಡುವುದಕ್ಕೆ ಸುಮಾರು 72 ಷರತ್ತುಗಳನ್ನು ಸರ್ಕಾರ ಹೇರಿದೆ ಎಂದು ತಿಳಿದು ಬಂದಿದ್ದು, ಅದರ ಪ್ರಕಾರ ಚಿತ್ರೀಕರಣ ಮಾಡುವುದು ನಿಜಕ್ಕೂ ಸಾಧ್ಯವಿಲ್ಲದ ಸಂಗತಿಯಾಗಿದೆ.‌ ಯಾರೋ ಒಬ್ಬಿಬ್ಬ ನಿರ್ಮಾಪಕರು,  ‘ತಾರಾ’ಬಲದ ಮುಖಾಂತರ ಮುಖ್ಯಮಂತ್ರಿಗಳ ಸನಿಹ ಸಾಗಿ, ‘ಚಿತ್ರೀಕರಣಕ್ಕೆ ಅವಶ್ಯ ಅನುಮತಿ ಕೊಡಿ’ ಎಂದು ಕೇಳಿದಾಗ ವಿಧಿಯಿಲ್ಲದೆ ಸರ್ಕಾರ ಅನುಮತಿ ನೀಡಿರುವುದಂತೂ ಸತ್ಯ.

ಅದಕ್ಕೆ ಸರಿಯಾಗಿ ಟೆಲಿವಿಷನ್ ಅಸೋಸಿಯೇಷನ್ನಿನ ಅಧ್ಯಕ್ಷರು,  ಹಾಲಿ ಪ್ರಸಾರವಾಗುತ್ತಿರುವ  ಧಾರಾವಾಹಿಗಳ,  ಯಾವುದೇ ನಿರ್ಮಾಪಕರನ್ನೂ ಸಹ  ಸಂಪರ್ಕಿಸದೆ, ತಮ್ಮ ಎಡಬಲದ ಮಿತ್ರರನ್ನು ಮಾತ್ರ ಮುಖ್ಯಮಂತ್ರಿಗಳ ಬಳಿಗೆ ಕರೆದುಕೊಂಡು ಹೋಗಿ, ಫೋಟೋಗೆ ಪೋಸ್ ಕೊಟ್ಟು,  ‘ತಮ್ಮಿಂದಲೇ ಚಿತ್ರೀಕರಣಕ್ಕೆ ಅನುಮತಿ ದೊರೆಯಿತು, ಕಿರುತೆರೆಯ ಸಕಲರ ಉದ್ಧಾರಕ್ಕೆ ತಾವೇ ಕಾರಣರು’ ಎಂದು ಪೋಸು ಕೊಡಲೆತ್ನಿಸಿ, ಈಗ ಇಂಗು ತಿಂದ ಮಂಕಿ ಅಂತೆ ಮುಗುಳ್ನಗುತ್ತಿದ್ದಾರೆ. ಅದೇನಾದರೂ ಇರಲಿ, ಚಿತ್ರೀಕರಣ ಮಾಡುವುದು, ಸದ್ಯದ ಮಟ್ಟಿಗೆ ಅಸಾಧ್ಯದ ಸಂಗತಿಯೇ ಸರಿ ಎನ್ನುವುದಕ್ಕೆ ಹಲವು ಕಾರಣಗಳನ್ನು ಹೀಗೆ ವಿಶ್ಲೇಷಿಸಬಹುದು.

ಧಾರಾವಾಹಿಗೆ ಸಂಬಂಧಪಟ್ಟ ಬಹಳಷ್ಟು ಕಲಾವಿದರು ಹೊರ ಊರಿನಿಂದ ಬಂದಿದ್ದವರೇ ಆಗಿದ್ದು, ಲಾಕ್ ಡೌನ್ ನ ಅವಧಿಯಲ್ಲಿ ತಮ್ಮ ತಮ್ಮ ಊರುಗಳಲ್ಲಿ ಹಾಯಾಗಿ ಸೆಟಲ್ ಆಗಿದ್ದಾರೆ. ಈಗ ಅವರುಗಳು ದಿನದ ಕೂಳು ನಂಬಿ,  ‘ ಲೈಫ್ ರಿಸ್ಕ್ ‘ ತೆಗೆದುಕೊಂಡು  ಬೆಂಗಳೂರಿನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಭಾಗವಹಿಸುವುದು ದೂರದ ಸಂಗತಿಯೇ ಸರಿ. ಯಾವುದೇ ಚಿತ್ರೀಕರಣಕ್ಕೂ ಸಹ ನಿರ್ಮಾಪಕರು, ನಿರ್ದೇಶಕರು, ಸಹ ನಿರ್ದೇಶಕರು,  ಸಹಾಯಕ ನಿರ್ದೇಶಕರು, ಛಾಯಾಗ್ರಾಹಕರು, ಸಹ ಛಾಯಾಗ್ರಹಕರು, ನಿರ್ಮಾಣ ನಿಯಂತ್ರಕರು, ಧ್ವನಿಯನ್ನು ಹಿಡಿದಿರುವವರು, ಲೈಟ್ ಬಾಯ್ಸ್ ಗಳು, ಮೇಕಪ್ ಮೆನ್, ಟಚಪ್ ಬಾಯ್, ಊಟ-ತಿಂಡಿ ಒದಗಿಸುವ ಹುಡುಗರು, ಉಡುಗೆ-ತೊಡುಗೆ, ಕೇಶಾಲಂಕಾರ ಪ್ರವೀಣರು ಮೊದಲಾದ ದಂಡಿನವರ ಜೊತೆಗೆ ಹಲವಾರು ಕಲಾವಿದರು ಅವಶ್ಯ ಬೇಕಾಗಿರುತ್ತಾರೆ.

ಅಲ್ಲದೆ ಚಿತ್ರೀಕರಣಕ್ಕೆ ಅಗತ್ಯವಾಗಿರುವ ಮನೆ-ಮಠ ಇತ್ಯಾದಿ ಲೊಕೇಶನ್ ಗಳು, ಆ ಮನೆಯವರು, ಅಲ್ಲಿಯ ಆಳುಕಾಳುಗಳು ಎಲ್ಲರನ್ನೂ ಗಮನದಲ್ಲಿರಿಸಿಕೊಂಡಾಗ, ಅತಿ ಕಡಿಮೆ ಎಂದರೂ ಸಹ ಮೂವತ್ತರಿಂದ ಮೂವತ್ತೈದು ಸಂಖ್ಯೆಯ ದೊಡ್ಡ ತಂಡವೇ ಸಂಪರ್ಕದಲ್ಲಿ ಇರುತ್ತದೆ. ‘ಕೊರೋನ ವೈರಸ್’ ಅತಿಮುಖ್ಯವಾಗಿ ಸಂಪರ್ಕದಿಂದಲೇ ಸಾಂಕ್ರಾಮಿಕ ವಾಗುತ್ತಿದ್ದು, ಸೋಶಿಯಲ್ ಡಿಸ್ಟೆನ್ಸ್ ಅತಿ ಮುಖ್ಯ ಭಾಗವಾಗಿರುತ್ತದೆ . ಹಾಗಿದ್ದಾಗ ಮಾತ್ರ ‘ ಕೋರೋನಾ ಹರಡುವ ಸಾಧ್ಯತೆ ಬಹಳ ಕಡಿಮೆ’ ಎಂಬುದು ವೈದ್ಯರ ತಗ್ನ ಅಭಿಪ್ರಾಯ.

ಚಿತ್ರೀಕರಣದ ಮೊದಲ ಭಾಗವಾಗಿ ಎಲ್ಲರನ್ನೂ ಅವರವರ ಮನೆಗಳಿಂದ ಚಿತ್ರೀಕರಣವಾಗಲಿರುವ ಸ್ಥಳಗಳಿಗೆ ಕರೆತರುವುದೇ ದುಸ್ಸಾಹಸದ ಸಂಗತಿ. ಅಲ್ಲಿ ವಾಹನ ಚಾಲಕರ ಆರೋಗ್ಯದ ಬಗೆಗಿನ ಮೂಲ ಮಾಹಿತಿಯೇ ಯಾರಿಗೂ ಇರುವುದಿಲ್ಲ. ಇದೇ ರೀತಿ ಊಟ – ತಿಂಡಿ ತರುವ, ಅದನ್ನು  ಎಲ್ಲಿಂದಲೋ ತಂದು ಬಡಿಸುವ ಪ್ರೊಡಕ್ಷನ್ ಬಾಯ್ ಗಳ ಮಾಹಿತಿಯೂ ಸಹ  ಯಾರೆಂದರೆ ಯಾರಿಗೂ ಖಚಿತವಾಗಿ ತಿಳಿದಿರುವುದಿಲ್ಲ. ಇದು ಒಂದು ಹಂತವಾದರೆ, ಎಲ್ಲ ಕಲಾವಿದರಿಗೂ ಅತ್ಯಂತ ಅವಶ್ಯಕವಾಗಿರುವ ಪ್ರಸಾದನದ ಸಂಗತಿ. ಇಲ್ಲಿ ಎಲ್ಲಾ ಕಲಾವಿದರಿಗೂ ಕೇವಲ ಅರ್ಧ ಅಡಿಯ ಅಂತರದಿಂದಲೇ ಮೇಕಪ್ ಮಾಡಬೇಕಾಗುತ್ತದೆ. ಅವರುಗಳಿಗೆ ಬಳಸಲಾಗುವ ವೆಟ್ ಕ್ಲಾಥ್   ಸಕಲರನ್ನೂ ಸವರಿಕೊಂಡು ಓಲೈಸುತ್ತಾ ಹೋಗುತ್ತಲೇ ಇರುತ್ತದೆ. ಅದರಲ್ಲಿ ಯಾವ ಬಗೆಯ ಸೋಂಕು  ಇರುತ್ತದೆಯೋ ಬಲ್ಲವರಾರು ?

ಯಾರೊಬ್ಬರ ಅರಿವಿಗೂ ಬಾರದಂತೆ ಅದರಲ್ಲಿ ಅಡಗಿಕೊಂಡಿರಬಹುದಾದ ಕೊರೋನಾ ಸೋಂಕು ಒಬ್ಬರನ್ನು ಆಲಂಗಿಸಿದರೂ ಸಾಕು, ನಂತರ ಇಡೀ ಚಿತ್ರೀಕರಣದ ಸೆಟ್ಟಿಗೆ, ಬಂದು ಹೋಗುವವರಿಗೆ, ಹಲವಾರು ಬಡಾವಣೆಗಳಿಗೆ ವ್ಯಾಪಿಸಿ, ವಿಜೃಂಭಿಸಿ ಬಿಡುತ್ತದೆ. ಅತಿಮುಖ್ಯವಾಗಿ ಸ್ಟೀಲಿನ ಸಾಮಗ್ರಿಗಳು ಮತ್ತು ಉಪಯೋಗಿಸುವ ಉಡುಪುಗಳ ಮೇಲೆ ದಟ್ಐಸಿರುವ ಧೂಳು, ಎಲ್ಲಿಂದಲೋ ತರುವ ಊಟ – ತಿಂಡಿಯ ಸಾಂಗತ್ಯ ಕೊರೋನಾದ ಗೂಡಾಗಿರಬಹುದಾಗಿದ್ದು, ಸ್ವಲ್ಪ  ಏಮಾರಿದರೂ ಸಹ ಎಲ್ಲರನ್ನೂ ಎಲುಬಿನ ಗೂಡಾಗಿಸಿ ಬಿಡುತ್ತದೆ.

ಅಲ್ಲದೆ ಒಬ್ಬಿಬ್ಬರನ್ನೇ ಕಥೆಯಾಗಿಸಿ ಚಿತ್ರೀಕರಿಸುವುದು ಕಷ್ಟಸಾಧ್ಯದ ಸಂಗತಿಯೇ ಸರಿ.  “ಯಾರೂ ಹತ್ತಿರಕ್ಕೆ ಹೋಗಬಾರದು,  ಒಬ್ಬರನ್ನು ಒಬ್ಬರು ಮುಟ್ಟಬಾರದು, ನಿರ್ದಿಷ್ಟ ಅಂತರದಿಂದಲೇ ಸಂಭಾಷಣೆ ಹೇಳಬೇಕು” ಎಂಬ ಹಲವು ಷರತ್ತುಗಳಿದ್ದಾಗ, ಇಂಟಿಮೆಸಿ ಹೇಗೆ ತಾನೆ ಬರಲು ಸಾಧ್ಯ ? ಕಾನೂನನ್ನು ಉಲ್ಲಂಘಿಸಿ, ಕಲಾವದರೆಲ್ಲರೂ ಮಾಸ್ಕ್ ಧರಿಸಿಕೊಂಡೇ ನಟಿಸಲು ಸಾಧ್ಯವೇ ? ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಸ್ಕ್ರಿಪ್ಟನ್ನು ವಾಹಿನಿಗಳು ಬರೆಸಿ ಕೊಡಲು ಆಗುತ್ತದೆಯೇ ?  ಹಾಗೊಂದುವೇಳೆ  ಆದರೂ, ವಾಹಿನಿ ಜೀವಕ್ಕಿಂತ ಹೆಚ್ಚಾಗಿ ನಂಬಿಕೊಂಡಿರುವ ಟಿಆರ್ಪಿಯ ಗತಿ ತಾನೇ ಏನಾದೀತು ?

ಸರಿ, ‘ಸಾಧ್ಯವಾದಷ್ಟು ಕಡಿಮೆ ಮಂದಿಯನ್ನು ಬಳಸಿಕೊಂಡು ಚಿತ್ರೀಕರಣ ಮಾಡುತ್ತೇವೆ’ ಎಂದರೂ ಸಹ, ಯಾರೊಬ್ಬರಿಗಾದರೂ ‘ಕೋರೋನಾ’ ಎಂಬ ಮಹಾಮಾರಿಯ ಸೋಂಕು ತಗಲಿದರೆ, ಆ ಜೀವ ಹಾಗೂ ಅವರನ್ನು ನಂಬಿಕೊಂಡಿರುವ ಇತರರಿಗಷ್ಟೇ ಅಲ್ಲದೆ, ಅವರ ಅಕ್ಕಪಕ್ಕದ ಮನೆಯವರಿಗೂ  ಸಹ ಆಗಬಹುದಾದ ನಷ್ಟಕ್ಕೆ ಹೊಣೆ ಹೊರುವ ತಾಕತ್ತು ನಿರ್ಮಾಪಕರಿಗೆ ಇದೆಯೇ ? “ನೀವು, ನಿಮ್ಮಿಷ್ಟ ನಮಗೆ ಎಪಿಸೋಡ್ ಅಷ್ಟೇ ಬೇಕು, ಯಾರೊಬ್ಬರ ಜವಾಬ್ದಾರಿಯೂ ನಮ್ಮದಲ್ಲ” ಎಂದು ವಾಹಿನಿಯಾಗಲೀ  ಅಥವಾ ” ನೀವಾಗಿ ನೀವು ಚಿತ್ರೀಕರಣಕ್ಕೆಅನುಮತಿ ಕೇಳಿದಿರೆ ನಾವು ಕೊಟ್ಟಿದ್ದೇವೆ . ಉಳಿದ ಉಸಾಬರಿ ನಮ್ಮದಲ್ಲ” ಎಂದು ಸರ್ಕಾರವೂ ಸಹ ತಾರಮ್ಮಯ್ಯ ಆಡಿಸಿಬಿಟ್ಟರೆ, ಎಲ್ಲರ ವರ್ಷದ ಕೂಳಿಗೇ‌ ಗೋಳಾಗಿ ಬಿಡುತ್ತದೆ.

ಒಂದಂತೂ ಸತ್ಯ, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಚಿತ್ರೀಕರಣದ ವೇಳೆ ನಡೆಯಬಹುದಾದ ಯಾವುದೇ ಅನಾಹುತಗಳಿಗೆ ಹೊಣೆ ಹೊರಲು ಮುಂದೆ ಬರುವುದಿಲ್ಲ. ಹಾಗಿರುವಾಗ ಯಾರು ತಾನೇ ಚಿತ್ರೀಕರಣಕ್ಕೆ ಹಾತೊರೆದು ಮುಂದೆ ಬಂದು ಭವಿಷ್ಯವನ್ನು ಇಲ್ಲವಾಗಿಸಿ ಕೊಳ್ಳುತ್ತಾರೆ ? ಅವರ ಜೀವಗಳಿಗೆ ಬೆಲೆ ಇಲ್ಲವೇ ? ನಿರ್ಮಾಪಕರ ಪರವಾಗಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕೊಂಡೊಯ್ದವರು, ಮುಂದಾಗಬಹುದಾದ ಎಡವಟ್ಟಿನ ಹೊಣೆ ಹೊರುತ್ತಾರೆಯೇ? ಇದೆಲ್ಲವನ್ನೂ ಗಮನಿಸಿದಾಗ ಸದ್ಯಕ್ಕೆ ಕಿರುತೆರೆಯ ಚಿತ್ರೀಕರಣಕ್ಕೆ ಮುಂದಾಗದಿರುವುದೇ‌ ಲೇಸು?

– ರಾಘವೇಂದ್ರ

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ನಿಮಗೆ ಮಾತ್ರ ಯಾಕಿಷ್ಟು ಆತುರ…

Previous article

ದೇವರ ಸ್ನಾನ ತೋರಿಸೋದು ತಪ್ಪಾ?

Next article

You may also like

Comments

Leave a reply