ಒಂದು ಕಾಲದಲ್ಲಿ ಕಿರುತೆರೆ ಎಂದರೆ ಮೂಗು ಮುರಿಯುತ್ತಿದ್ದವರೇ ಇಂದು ಅದನ್ನು ಅವಲಂಬಿಸಿ ಬದುಕು ಸಾಗಿಸುತ್ತಿದ್ದಾರೆ . ಝಣ ಝಣ ಎಂದು ಹಣ ಬರುವಾಗ , ನಾನೊಲ್ಲೇ ಎಂದು ದಡ್ಡತನ ತೋರುವ ಗುಣ ಯಾರಿಗೆ ತಾನೇ ಇದ್ದೀತು?
– ನಕ್ಷತ್ರಿಕ
ಕಥೆಯಲ್ಲಿ ವೈವಿಧ್ಯತೆ ಇಲ್ಲದಿದ್ದರೂ, ವೈದವ್ಯತೆ, ವಿಕಲತೆಗೆ ಏನೂ ಕೊರತೆಯಿಲ್ಲದ ಧಾರಾವಾಹಿಗಳು ಇಂದು ವೀಕ್ಷಕರಿಗೆ ನಿರಂತರವಾಗಿ ಅಪ್ಪಳಿಸುತ್ತಿದೆ. ಚಲನಚಿತ್ರಗಳಲ್ಲಿ ಖಳನಾಯಕರು ವಿಜೃಂಭಿಸಿದರೆ, ಧಾರಾವಾಹಿಗಳಲ್ಲಿ ಖಳನಾಯಕಿಯರಿಗೇ ಪ್ರಾಧಾನ್ಯತೆ, ಅವರಿಗೇ ಅಗ್ರಸ್ಥಾನ. ಗಂಡು ಪಾತ್ರಗಳಿಗೆ ಗಂಡುತನವಿಲ್ಲದ , ಬರಿಯೆ ಪ್ರತಿಕ್ರಿಯೆ ಯ ಪಾತ್ರಗಳಷ್ಟೇ ಪರ್ಮನೆಂಟಾಗಿ ಉಳಿದುಕೊಂಡಿದೆ. ಆ ಪಾತ್ರ ಇರಬೇಕು ಎಂದಷ್ಟೇ ಗಂಡು ಕಲಾವಿದರನ್ನು ಬಳಸಿಕೊಂಡು, ಕರಿಬೇವಿನ ಸೊಪ್ಪಿನಂತೆ ಮಾಡಿಬಿಟ್ಟಿದ್ದಾರೆ. ರುಚಿಗೆ ಬೇಕು ಊಟಕ್ಕೆ ಬೇಡ !
ಎಲ್ಲಾ ಹೆಣ್ಣೇ ಎಂದಾಗ… : ಸಾಮಾನ್ಯವಾಗಿ ಈಗ ಪ್ರಸಾರವಾಗುತ್ತಿರುವ ಎಲ್ಲ ಧಾರಾವಾಹಿಗಳಲ್ಲಿ , ಸುಂದರವಾದ ಹೆಣ್ಣುಗಳಿಗೆ ಮಾತ್ರ ಕಥೆ ಸೀಮಿತವಾಗಿ ಬಿಡುತ್ತಿದೆ . ಎಲ್ಲಾ ಹೆಣ್ಣೆ ಎಂದಾಗ, ಎಲ್ಲ ಹೆಗ್ಗಣಗಳೂ ಬಾಯಿ ಬಾಯಿ ಬಿಡುತ್ತವೆ.ಒಟ್ಟಾರೆ ನಿರ್ದೇಶಕರ ಸ್ವಾತಂತ್ರವನ್ನು ಸಾರಾಸಗಟಾಗಿ ಕಸಿದುಕೊಂಡು. ಈ ಪಾತ್ರಕ್ಕೆ ಇಂತಹವರನ್ನೇ ಹಾಕಿಕೊಳ್ಳಿ. ಅದೇ ನಮ್ಮ ಟೇಸ್ಟು ಎಂದು, ಭಾಷೆಯ ಗತ್ತೇ ಗೊತ್ತಿಲ್ಲದ, ವೇಸ್ಟ್ ಬಾಡಿಗಳನ್ನು ವಾಹಿನಿಯವರೇ ತೂರಿಸಲಾರಂಭಿಸಿರುವಾಗ, ಕಲಾವಿದೆಯರ ಆಂತರಿಕ ಬೇಗುದಿಗಳು ಹೆಚ್ಚಾಗುತ್ತಿವೆ. ವಿಷಯ ಎಲ್ಲೆಲ್ಲಿಗೋ ಹೋಗಿ ಮುಟ್ಟುವಂಥ ಸಂದರ್ಭ ಬರುತ್ತಿದೆ.ಅದನ್ನೇ ಕೆಲವರು ಕಮಿಟ್ಮೆಂಟ್ ಹೆಸರಿನಲ್ಲಿ ಗುರ್ತಿಸಲಾರಂಭಿಸಿದ್ದಾರೆ. ಹೆಣ್ಣು ಹೈಕಳಿಗೆ, ನುಂಗಲೂ ಆಗದ ಉಗುಳಲೂ ಆಗದ ಪರಿಸ್ಥಿತಿ ಬಂದಾಗಿದೆ.
ಮುಂದಿನ ದಿನಗಳಲ್ಲಿ ಕಥೆ ಚಿತ್ರಕಥೆ-ಸಂಭಾಷಣೆ, ಕಲಾವಿದರು, ಚಿತ್ರೀಕರಣಕ್ಕೆ ಬೇಕಾದ ಉಪಕರಣಗಳು, ಸಂಕಲನ – ವ್ಯವಕಲನ, ಊಟ – ತಿಂಡಿ, ಮಣ್ಣು ಮಸಿ ಹೀಗೆ ಎಲ್ಲವನ್ನೂ ವಾಹಿನಿಯವರೇ ನೋಡಿಕೊಳ್ಳುವ ಸಂಗತಿ ಎದ್ದು ಕಾಣುತ್ತಿದೆ. ನಾವು ಎರವಲು ತಂದ ಕಥೆಯನ್ನು, ಅಲ್ಲಿಯ ಭಾಷೆಯಲ್ಲಿ ಪ್ರಸಾರವಾದ ದೃಶ್ಯದಂತೆಯೇ ಸೇಮ್ ಟು ಸೇಮ್ ಚಿತ್ರೀಕರಿಸಿ ಎಂದು ವಾಹಿನಿಯ ಮುಖಂಡರು ಹೇಳುವುದು ಖಚಿತವಾಗಿದೆ. ಅಲ್ಲಿಗೆ, ಇಲ್ಲಿಯ ಎಲ್ಲ ತಾಂತ್ರಿಕ ವರ್ಗದವರೂ ಸಹ, ಕೂಲಿಗೆ ಮಾತ್ರ ಕೆಲಸ ಮಾಡಬೇಕಾಗುತ್ತದೆ. ಕ್ರಿಯೇಟಿವಿಟಿಯ ಅವಶ್ಯಕತೆ ವಾಹಿನಿಯವರಿಗೆ ಇಲ್ಲ. ನೇಟಿವಿಟಿ ಎಂಬುದು ಈಗಾಗಲೇ ಸತ್ತು ಹೋಗಿದೆ.ಯಾವಾಗ ವಾಹಿನಿಗಳು ತಮ್ಮ ಕೃಪಾ‘ಪೋಷಿತ ನಿರ್ಮಾಪಕರಿಗೆ ಮಾತ್ರ ಧಾರಾವಾಹಿಗಳನ್ನು ಮಾರಿಕೊಳ್ಳಲು ಆರಂಭಿಸಿದ್ದಾರೆಯೋ ಆಗಿನಿಂದ ಹಲವಾರು ಹಗರಣಗಳ ವಾಸನೆ, ಒಗ್ಗರಣೆಯ ಘಾಟಿನಂತೆ ಎಲ್ಲರಿಗೂ ಬಡಿಯಲಾರಂಭಿಸಿದೆ.
ಸೆಟ್ಟಿನಲ್ಲಿನ ಸಂಗತಿ ಹೊರಗೆ ಬಂದರೆ, ಧಾರಾವಾಹಿಯ ಟಿ ಆರ್ ಟಿ ಗೆ ಕಷ್ಟ , ನಮಗೇ ನಷ್ಟ ಎಂದು ಭಾವಿಸಿರುವ ವಾಹಿನಿಗಳವರು . ವಿಷಯಗಳನ್ನು ಮುಗುಮ್ಮಾಗಿ ತೆಗೆದುಕೊಂಡು , ತಿರುಗಿ ಬಿದ್ದವರ ವಿರುದ್ಧ ಆಕ್ಷನ್ ತೆಗೆದುಕೊಂಡು, ತಪ್ಪು ಮಾಡಿದವರನ್ನು ಪೋಷಿಸಿಕೊಂಡು, ನೊಂದವರ ನಟನೆಯನ್ನು ಬೇರೆಯವರಿಗೆ ವರ್ಗಾಯಿಸಿ , ಆಲ್ ಇಸ್ ವೆಲ್, ಸಬ್ ಟೀಕ್ ಹೈ ಎಂಬಂತೆ ಬಿಂಕದ ನಗೆಯನ್ನು ಬೀರಲಾರಂಭಿಸಿದ್ದಾರೆ. ಇದು ಎಷ್ಟು ದಿನ ನಡೆದೀತು ಎನ್ನುವುದು ತಿಳಿಯದ ಸಂಗತಿ .ಆದರೆ, ತಮಗಾದ ಅವಮಾನ, ಒತ್ತಡ , ಅಸಹ್ಯತೆಯನ್ನು ಯಾರಿಗಾದರೂ ತಿಳಿಸಿದರೆ, ಎಲ್ಲ ವಾಹಿನಿಗಳವರೂ ಒಂದಾಗಿ, ತಮ್ಮನ್ನು ಅಸ್ಪೃಶ್ಯರಂತೆ ಕಂಡಾರು ಎಂದು ಭಾವಿಸುವ ಬಹಳಷ್ಟು ಮಂದಿ, ನರ ಸತ್ತವರಂತೆ ಮುಲಮುಲ ಮರುಗುತ್ತಿದ್ದಾರೆ. ಈ ಎಲ್ಲ ಸಂಗತಿಗಳೂ ಸಹ ಗಮ್ಮತ್ತಿನ ಸಂಗತಿಗಳಾಗಿ, ಮುಂದಿನ ದಿನಗಳಲ್ಲಿ ಧಾರಾವಾಹಿಯಂತೆ ನಮ್ಮಲ್ಲಿ ಹರಿದುಬರಲಿದೆ. ರಂಗೋಲಿ ಹಾಕುವುದಕ್ಕೆ ಮುಂಚೆ, ಚೊಕ್ಕಟವಾಗಿ ಗುಡಿಸಬೇಕು ಮತ್ತು ಗುಡಿಸುತ್ತೇವೆ. ಈ ವಿಷಯಗಳತ್ತ ನಿಮ್ಮ ಗಮನವಿರಲಿ ಅಷ್ಟೇ.
CG ARUN

ನಾನು ಯಾವತ್ತೂ ಭೂಮಿ ಮೇಲೆ ದುಡ್ಡು ಹಾಕಿಲ್ಲ!

Previous article

ಕಾಡುವ ಕಪಟನಾಟಕ!

Next article

You may also like

Comments

Leave a reply

Your email address will not be published. Required fields are marked *