ಶಶಾಂಕ್ ಶೇಷಗಿರಿ… ಇದೀಗ ಕನ್ನಡ ಚಿತ್ರರಂಗ ಮಾತ್ರವಲ್ಲದೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ಗಾಯಕರಾಗಿ ಹೆಸರು ಮಾಡಿರೋ ಮೈಸೂರಿನ ಹುಡುಗ. ಸಂಗೀತವನ್ನು ಹೊರತಾಗಿಸಿ ಬೇರೆ ಜಗತ್ತೇ ಇಲ್ಲ, ತನಗೆ ಹಾಡೋದನ್ನ ಬಿಟ್ಟರೆ ಬೇರೇನೂ ಗೊತ್ತಿಲ್ಲ ಅಂದುಕೊಂಡೇ ಅವರು ಸಂಗೀತ ಯಾನ ಆರಂಭಿಸಿ ಬರೋಬ್ಬರಿ ಹದಿಮೂರು ವರ್ಷಗಳಾಗುತ್ತಾ ಬಂದಿವೆ. ಈ ಅವಧಿಯಲ್ಲಿ ಸಾಕಷ್ಟು ಕಷ್ಟಗಳನ್ನು ಕಂಡರೂ ನಾನಾ ಪ್ರಶಸ್ತಿ ಪುರಸ್ಕಾರಗಳನ್ನೂ ತಮ್ಮದಾಗಿಸಿಕೊಂಡಿರೋ ಶಶಾಂಕ್ ಈಗ ರಾಂಧವ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿಯೂ ಮತ್ತೊಂದು ಆಯಾಮದ ಸಾಧನೆಗೆ ಅಡಿಗಲ್ಲು ಹಾಕಿಕೊಂಡಿದ್ದಾರೆ.
ಇದೇ ಆಗಸ್ಟ್ 23ಕ್ಕೆ ತೆರೆಗೆ ಬರುತ್ತಿರುವ ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಚಿತ್ರದ ಹಾಡುಗಳೀಗ ಟ್ರೆಂಡಿಂಗ್ನಲ್ಲಿವೆ. ಈ ಎಲ್ಲ ಹಾಡುಗಳಿಗೂ ಸಂಗೀತ ನಿರ್ದೇಶನ ಮಾಡಿರುವವರು ಶಶಾಂಕ್ ಶೇಷಗಿರಿ. ಈ ಮೂಲಕ ಹದಿಮೂರು ವರ್ಷಗಳ ಅವರ ಸಂಗೀತ ಧ್ಯಾನ ಸಾರ್ಥಕಗೊಂಡಂತಾಗಿದೆ. ಶಿವಮೊಗ್ಗದಲ್ಲಿ ಹುಟ್ಟಿ ಮೈಸೂರಿನಲ್ಲಿ ಬೆಳೆದ ಶಶಾಂಕ್, ಶೇಷಗಿರಿ ಮತ್ತು ಅರುಂಧತಿ ದಂಪತಿಯ ಪುತ್ರ. ಬಾಲ್ಯದಿಂದಲೇ ಸಂಗೀತಾಸಕ್ತಿ ಹೊಂದಿದ್ದ ಅವರ ಪಾಲಿಗೆ ಆ ಸಾಹಚರ್ಯದಲ್ಲಿಯೇ ಮುಂದುವರೆಯಲು ಪ್ರೋತ್ಸಾಹ ನೀಡಿದ್ದು ಅಮ್ಮ ಅರುಂಧತಿ. ಮೈಸೂರಿನಲ್ಲಿಯೇ ಶಶಾಂಕ್ ಪಿಯುಸಿಯಲ್ಲಿದ್ದಾಗ ಹಾಡಿನ ಬಂಡಿ ಅಂತೊಂದು ಹಾಡಿನ ರಿಯಾಲಿಟಿ ಶೋ ನಡೆದಿತ್ತು. ಅದರಲ್ಲಿ ಭಾಗವಹಿಸುವಂತೆ ಬಲವಂತ ಮಾಡಿ ಒಪ್ಪಿಸಿದ್ದು ಕೂಡಾ ಅಮ್ಮನೇ. ಭಯ ಕಾಡುತ್ತಿದ್ದರೂ ಅಮ್ಮನ ಒತ್ತಾಯಕ್ಕೆ ಮಣಿದು ಆ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಶಶಾಂಕ್ ಮೊದಲ ಬಹುಮಾನ ಪಡೆದುಕೊಂಡಿದ್ದರು. ಗಾಯಕನಾಗಿ ಅವರ ಪಯಣ ಆರಂಭವಾಗಿದ್ದು ಅಲ್ಲಿಂದಲೇ.
ಆ ನಂತರ ಬಿಕಾಂ ಪದವಿಯನ್ನು ಅರ್ಧಕ್ಕೇ ನಿಲ್ಲಿಸಿದ್ದ ಶಶಾಂಕ್ ಬೆಂಗಳೂರಿನತ್ತ ಹೊರಟಿದ್ದರು. ಆ ಹಂತದಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದದ್ದು ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್. ಅವರೇ ಶಶಾಂಕ್ ಪ್ರತಿಭೆಯನ್ನು ಗುರುತಿಸಿ ಮೊದಲ ಸಲ ಸಿನಿಮಾದಲ್ಲಿ ಹಾಡೋ ಅವಕಾಶ ಕೊಟ್ಟಿದ್ದರು. ಒಂದೇ ಸಲ ಎರಡೆರಡು ಚಿತ್ರಗಳಿಗೆ ಹಾಡೋ ಅವಕಾಶವೂ ನಾಗೇಂದ್ರ ಪ್ರಸಾದ್ ಮೂಲಕವೇ ಸಿಕ್ಕಿತ್ತು. ಹೀಗೆ ಬೆಂಗಳೂರಿಗೆ ಬಂದು ಒಂದು ವರ್ಷದ ವರೆಗೆ ಅವರ ಬದುಕು ಸಹನೀಯವಾಗಿತ್ತು. ಆದರೆ ಕಷ್ಟಗಳೆಲ್ಲವೂ ಮುತ್ತಿಕೊಂಡು ಅಗ್ನಿಪರೀಕ್ಷೆಗೀಡು ಮಾಡಿದ್ದು ಆ ನಂತರದಲ್ಲಿಯೇ. ಆ ಹಂತದಲ್ಲಿ ಶಶಾಂಕ್ಗೆ ನಿಗಧಿತ ಆದಾಯ ಅಂತೇನೂ ಇರಲಿಲ್ಲ. ಅವರಿದ್ದದ್ದು ಪಿಜಿಯೊಂದರಲ್ಲಿ. ಅದಕ್ಕೆ ತಿಂಗಳಿಗೆ ಸಾವಿರದ ನೂರು ರೂಪಾಯಿ ಬಾಡಿಗೆ. ರೆಕಾರ್ಡಿಂಗ್ ಸಿಕ್ಕರೆ ಬಾಡಿಗೆ ಕಟ್ಟಿ ಹೊಟ್ಟೆ ಸಂಕಟ ನೀಗುತ್ತಿತ್ತು. ಆದರೆ ಆ ಕಾಲಕ್ಕೆ ಅದಕ್ಕೂ ತತ್ವಾರವಿತ್ತು. ಯಾವ ಪರಿಯಾಗಿ ಕಷ್ಟ ಕಾಲ ಬಂದಿತ್ತೆಂದರೆ, ಪಿಜಿಗೂ ಬಾಡಿಗೆ ಕಟ್ಟಲಾರದೆ ಸೋದರ ಸಂಬಂಧಿಯ ಮನೆಯಲ್ಲಿ ಒಂದಷ್ಟು ದಿನ, ಮೈಸೂರಿನಲ್ಲಿ ಒಂದಷ್ಟು ದಿನ ಅಂತ ಕಾಲ ಕಳೆಯಬೇಕಾಗಿ ಬಂದಿತ್ತು. ಆದರೆ ಮಗ ಚೆನ್ನಾಗಿದ್ದಾನೆ ಅಂತಲೇ ನಂಬಿ ಕೂತಿದ್ದ ಪೋಶಕರಿಗೆ ಇದ್ಯಾವುದನ್ನೂ ಕಡೇ ತನಕ ಶಶಾಂಕ್ ಹೇಳಿರಲೇ ಇಲ್ಲ.
ಹೀಗೆ ಮೂರು ವರ್ಷ ವನವಾಸ ಅನುಭವಿಸಿದ ಶಶಾಂಕ್ ಅದು ಹೇಗೋ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಅವರ ನಂಬರನ್ನೂ ಕಳೆದುಕೊಂಡಿದ್ದರಂತೆ. ಒಂದೂವರೆ ವರ್ಷಗಳ ಕಾಲ ಅವರ ಸಂಪರ್ಕವೇ ಇರಲಿಲ್ಲ. ಕಡೆಗೂ ಮತ್ತೆ ಸಂಪರ್ಕಕ್ಕೆ ಸಿಕ್ಕ ಶಶಾಂಕ್ಗೆ ಅದೇ ಪ್ರೀತಿಯಿಂದ ನಾಗೇಂದ್ರ ಪ್ರಸಾದ್ ಅವರು ಅವಕಾಶಗಳನ್ನು ಕೊಡಿಸಿದ್ದರು. ಅವರು ಸಾಹಿತ್ಯ ಬರೆಯುವಾಗೆಲ್ಲ ಶಶಾಂಕ್ ಅವರನ್ನು ಪರಿಚಯಿಸುತ್ತಿದ್ದರು. ಹೀಗೆ ಪ್ರೋತ್ಸಾಹ ಕೊಡುತ್ತಲೇ ಬಂದ ನಾಗೇಂದ್ರ ಪ್ರಸಾದ್ ಶಶಾಂಕ್ ಪಾಲಿಗೆ ಗಾಡ್ ಫಾದರ್. ಈವತ್ತಿಗೂ ಶಶಾಂಕ್ ಮೊಬೈಲಿನಲ್ಲಿ ನಾಗೇಂದ್ರ ಪ್ರಸಾದ್ ಅವರ ನಂಬರ್ ಅಣ್ಣ ಗಾಡ್ ಅಂತಲೇ ಸೇವ್ ಆಗಿದೆಯಂತೆ!
ಇಂಥಾ ಕಷ್ಟದ ಹಾದಿಯಲ್ಲಿಯೇ ಸಾಗಿ ಬಂದ ಶಶಾಂಕ್ ಈವತ್ತಿಗೆ ಯಶಸ್ವೀ ಹಿನ್ನೆಲೆ ಗಾಯಕರಾಗಿ ಹೊರ ಹೊಮ್ಮಿದ್ದಾರೆ. ಮುನ್ನೂರಕ್ಕೂ ಹೆಚ್ಚು ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಹತ್ತು ತುಳು, ನಾಲಕ್ಕು ತಮಿಳು ಹಾಡುಗಳ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದ ಬೇಡಿಕೆಯ ಗಾಯಕರಾಗಿಯೂ ಹೊರ ಹೊಮ್ಮಿದ್ದಾರೆ. ಇದುವರೆಗೂ ಐನೂರಕ್ಕೂ ಹೆಚ್ಚು ಲೈವ್ ಸ್ಟೇಜ್ ಶೋಗಳನ್ನು ನೀಡಿರೋದು ಶಶಾಂಕ್ ಅವರ ಹೆಚ್ಚುಗಾರಿಕೆ. ರೇಡಿಯೋ ಮಿರ್ಜಿ ಕೊಡಮಾಡೋ ಬೆಸ್ಟ್ ಸಿಂಗರ್ ಆಫ್ ದಿ ಇಯರ್ ಪ್ರಶಸ್ತಿಯನ್ನೂ ಕೂಡಾ 2014ರಲ್ಲಿ ಶಶಾಂಕ್ ಮುಡಿಗೇರಿಸಿಕೊಂಡಿದ್ದಾರೆ. ಕೃಷ್ಣಲೀಲಾ ಚಿತ್ರದ ಮಾತಾಡ್ರೋ ಮಾತಾಡ್ರಿ, ಮಿಸ್ಟರ್ ಐರಾವರ ಚಿತ್ರದ ಗುಡಿ ಮೇಲೆ ಘಂಟೆ, ರಾಜಕುಮಾರ ಚಿತ್ರದ ಯಾರಿವನು ಕನ್ನಡದವನು ಮುಂತಾದ ಅದೆಷ್ಟೋ ಗೀತೆಗಳು ಶಶಾಂಕ್ ಹಾಡಿರೋ ಹಿಟ್ ಹಾಡುಗಳ ಬತ್ತಳಿಕೆಯಲ್ಲಿವೆ. ಈ ವಾರ ಬಿಡುಗಡೆಯಾಗುತ್ತಿರುವ ರಾಂಧವ ಚಿತ್ರದ ಹಾಡುಗಳು ಅವರನ್ನು ಸಂಗೀತ ನಿರ್ದೇಶಕರಾಗಿಯೂ ಬ್ಯುಸಿಯಾಗಿಸೋದು ಗ್ಯಾರೆಂಟಿ!