ಎಂ.ಜಿ.ಆರ್. ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಶೈಬ್ಯ. ಸನ್ಮಿತ್ ವಿಹಾನ್ ಎಂಬ ಹೊಸ ಹುಡುಗ ಈ ಸಿನಿಮಾದಿಂದ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾನೆ. ಮೇಘ ಶ್ರೀ ಗೌಡ ಮತ್ತು ಮಿಲನ ರಮೇಶ್ ನಾಯಕಿಯರು. ಮತ್ತು ಯಶೋಧ ಎಸ್. ಸಣ್ಣಪ್ಪನವರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕುರಿ ಸುನೀಲ್ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಎಂ.ಗುರುರಾಜ ಹೆಸರಿನ ನಿರ್ದೇಶಕ ಎಂ.ಜಿ.ಆರ್ ಹೆಸರಿನಲ್ಲಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಆಂಧ್ರ ಮೂಲದ ಎಂ.ಜಿ.ಆರ್ 2013 ರಲ್ಲಿ ಕರ್ನಾಟಕಕ್ಕೆ ಬಂದು ಸಿನಿಮಾ ನಿರ್ದೇಶಿಸಲು ಕಸರತ್ತು ಆರಂಭಿಸಿದರಂತೆ. ಕಡೆಗೊಂದು ದಿನ ಯೋಗರಾಜ್ ಭಟ್ ಬಳಿ ಕೆಲಸ ಮಾಡಲು ಪ್ರಯತ್ನಿಸಿದರೆ ಅದೂ ಸಾಧ್ಯವಾಗಲಿಲ್ಲವಂತೆ. ಯೋಗರಾಜ ಭಟ್ಟರ ಮಾವ ಸತ್ಯಣ್ಣ ಒಮ್ಮೆ ಕರೆದು ‘ಹೀಗೇ ಕತೆ ಹೇಳುತ್ತಾ, ಅವಕಾಶ ಕೇಳಿದರೆ ಯಾರೂ ಛಾನ್ಸು ಕೊಡಲ್ಲ ಬೇರೇನಾದರೂ ಮಾಡು’ ಅಂತಾ ಕಿವಿಮಾತು ಹೇಳಿದರಂತೆ. ಆನಂತರ ತಮ್ಮ ಪ್ರತಿಭೆ ಹೊರಹಾಕಲು ಶಾರ್ಟ್ ಸಿನಿಮಾ ಶುರು ಮಾಡಿದರಂತೆ. ಆಗ ಯಾವುದೋ ವಾಟ್ಸಾಪ್ ಗ್ರೂಪ್ ಮೂಲಕ ಪರಿಚಯವಾದ ಸನ್ಮಿತ್ ವಿಹಾನ್ ಎಂಜಿಆರ್ ಅವರನ್ನು ಕರೆದು ಸಿನಿಮಾ ಮಾಡುವ ಅವಕಾಶ ಕೊಟ್ಟರಂತೆ. ಹಾಗೆ ಶುರುವಾದ ಸಿನಿಮಾ ಶೈಬ್ಯಂ!
ಸಮಾಜದಲ್ಲಿ ಬೆಳೆದ ಯಾರೇ ಆದರೂ ತಮ್ಮ ಶ್ರಮದಿಂದಷ್ಟೇ ಬೆಳೆಯಲು ಸಾಧ್ಯ ಮೂಢನಂಬಿಕೆ, ವಾಮಾಚಾರಗಳಿಂದ ಏನನ್ನೂ ಸಾಧಿಸಲುವಸಾಧ್ಯವಿಲ್ಲ ಅನ್ನೋದು ಈ ಚಿತ್ರದ ಪ್ರಧಾನ ಅಂಶವಂತೆ. ಶೈಬ್ಯ ಎಂದರೆ ನಂಬಿಕೆಯನ್ನು ಉಳಿಸಿಕೊಂಡ ಪತ್ನಿ ಎನ್ನುವ ಅರ್ಥ ಅಂತಾ ನಿರ್ದೇಶಕರು ತಿಳಿಸಿದ್ದಾರೆ!
ಈ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ, ನಾಗರಾಜ ಮೂರ್ತಿ ಛಾಯಾಗ್ರಹಣವಿದೆ. ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ಕೂಡಾ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.