ತೊಂಬತ್ತರ ದಶಕದಲ್ಲಿ ನಟಿ ಶಕೀಲಾ ದಕ್ಷಿಣ ಭಾರತದ ಜನಪ್ರಿಯ ಪೋರ್ನ್ ಸ್ಟಾರ್. ಒಂದು ಅಂದಾಜಿನಂತೆ ಆಗ ಅವರ ನೂರಕ್ಕೂ ಹೆಚ್ಚು ಮಲಯಾಳಂ ಪೋರ್ನ್ ಸಿನಿಮಾಗಳು ತಯಾರಾಗಿದ್ದರು. ಕೇರಳ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಗಳು ಅಲ್ಲಿನ ಸ್ಟಾರ್ ಹೀರೋಗಳಾದ ಮುಮ್ಮೂಟಿ, ಮೋಹನ್ಲಾಲ್ ಚಿತ್ರಗಳ ಗಳಿಕೆಯನ್ನೂ ಹಿಂದಿಕ್ಕುತ್ತಿದ್ದವು ಎನ್ನಲಾಗುತ್ತದೆ.
ಅಡಲ್ಟ್ ಸಿನಿಮಾಗಳಿಂದ ವಿರಾಮ ಬೇಕೆನಿಸಿದಾಗ ಶಕೀಲಾ ನಿಧಾನವಾಗಿ ಮುಖ್ಯವಾಹಿನಿ ಚಿತ್ರಗಳತ್ತ ಹೊರಳಿದರು. ’ಬಾಸ್ ಎಂಗಿರಾ ಭಾಸ್ಕರನ್’, ’ಸಕಲಕಲಾ ವಲ್ಲಭನ್’ ತಮಿಳು ಚಿತ್ರಗಳಲ್ಲಿನ ಅವರ ಪಾತ್ರಗಳಿಗೆ ಮೆಚ್ಚುಗೆಯೂ ವ್ಯಕ್ತವಾಯ್ತು. ಹೀಗೆ, ಶಕೀಲಾ ಸಿನಿಮಾ ಬದುಕೇ ಒಂದು ರೋಚಕ ಕತೆಯಂತಿದೆ. ಕನ್ನಡದ ಚಿತ್ರನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಜೀವನಕತೆಯನ್ನೀಗ ಸಿನಿಮಾ ಮಾಡುತ್ತಿದ್ದಾರೆ.
ಇಂತಿಪ್ಪ ಶಕೀಲಾ ಮೊನ್ನೆ ಸಂದರ್ಶನವೊಂದರಲ್ಲಿ ದಶಕದ ಹಿಂದಿನ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ. ಅದೀಗ ತಮಾಷೆಗೆ ಕಾರಣವಾಗಿದೆ. ಆಗ ಚಿತ್ರನಿರ್ಮಾಪಕ ಮಣಿಯಾಂಪಿಳ್ಳ ರಾಜು ಅವರ ಮೇಲೆ ತಮಗೆ ಲವ್ವಾಗಿತ್ತು, ಅವರಿಗೆ ಪ್ರೇಮಪತ್ರ ಬರೆದಿದ್ದಾಗಿ ಶಕೀಲಾ ಹೇಳಿಕೊಂಡಿದ್ದಾರೆ. ಮೋಹನ್ ಲಾಲ್ ಅಭಿನಯದ ’ಚೋಟಾ ಮುಂಬೈ’ ಮಲಯಾಳಂ ಚಿತ್ರದಲ್ಲಿ ನಾನು ನಟಿಸುತ್ತಿದ್ದೆ. ಆಗ ನನ್ನ ತಾಯಿ ಆನಾರೋಗ್ಯಕ್ಕೀಡಾಗಿದರು. ಚಿತ್ರದ ನಿರ್ಮಾಪಕ ಮಾಣಿಯಾಂಪಿಳ್ಳ ರಾಜು ಅವರಲ್ಲಿ ಹೋಗಿ ಆರ್ಥಿಕ ನೆರವು ಕೋರಿದ್ದೆ. ಅವರು ಮರುಮಾತನಾಡದೆ ನನಗೆ ಹಣಕಾಸಿನ ನೆರವು ನೀಡಿದ್ದರು. ಅವರ ಈ ಒಳ್ಳೆಯತನಕ್ಕೆ ನಾನು ಮಾರುಹೋಗಿ ಅವರನ್ನು ಪ್ರೀತಿಸಲಾರಂಭಿಸಿದ್ದೆ. ಪ್ರೇಮನಿವೇದನೆಯ ಪತ್ರವನ್ನೂ ಬರೆದಿದ್ದೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದಿದ್ದಾರೆ ಶಕೀಲಾ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ರಾಜು, ನಾನು ಅವರಿಗೆ ಹಣಕಾಸಿನ ಸಹಾಯ ಮಾಡಿದ್ದು ನಿಜ. ಆದರೆ ಈ ರೊಮ್ಯಾಂಟಿಕ್ ಅಧ್ಯಾಯದ ಬಗ್ಗೆ ಮಾಹಿತಿ ಇಲ್ಲ! ಎಂದು ಜಾರಿಕೊಂಡಿದ್ದಾರೆ.