ತ್ರೇತಾ ಯುಗದಲ್ಲಿ ಕಡಿಮೆ ಜನ ಕೆಟ್ಟವರಿದ್ದರಂತೆ. ಆದ್ದರಿಂದ ಅಲ್ಲಿ ರಾಮಾಯಣ ನಡೆಯಿತು. ದ್ವಾಪರ ಯುಗದಲ್ಲಿ ಸ್ವಲ್ಪ ಜಾಸ್ತಿ ಕೆಟ್ಟವರಿದ್ದರು. ಅದಕ್ಕೇ ನೂರೊಂದು ಜನ ಕೌರವರಿದ್ದ ಮಹಾಭಾರತ ನಡೀತು. ಇವೆರಡಕ್ಕೂ ನಡುವೆ ಇದ್ದ ಸತ್ಯ ಯುಗದಲ್ಲಿ ಈ ಥರದ ಯಾವ ಕಥೇನೂ ನಡೀಲಿಲ್ಲ… ಯಾಕೆಂದ್ರೆ ಅಲ್ಲಿ ಕೆಟ್ಟವ್ರೇ ಇರ್ಲಿಲ್ಲ.. ಅಂಥಾ ಸತ್ಯ ಯುಗದಲ್ಲಿ ಶೂನ್ಯ ಅಂತಾ ಒಬ್ಬ ವ್ಯಾಪಾರಿ ಇದ್ದ. ಯಾವುದೋ ಶಾಪದ ಪರಿಣಾಮವಾಗಿ ಸುಳ್ಳು ಹೇಳಲು ಶುರು ಮಾಡಿದ.
ಜಗಳವೇ ಇರದಿದ್ದ ಸತ್ಯ ಯುಗದಲ್ಲಿ ಶೂನ್ಯನ ಸುಳ್ಳಿನಿಂದ ಜಗಳ ಶುರುವಾಯ್ತು. ಇಂಥದ್ದೊಂದು ಗಲಾಟೆಗೆ ಶೂನ್ಯಾನೇ ಕಾರಣ ಅಂತಾ ಗೊತ್ತಾದಮೇಲೆ ದೇವಾನು ದೇವತೆಗಳೆಲ್ಲಾ ʼನಿನ್ನ ತಪ್ಪನ್ನು ತಿದ್ದಿಕೋ. ಇಲ್ಲದಿದ್ದರೆ ನಿನ್ನನ್ನು ಪ್ರಪಂಚದಿಂದಾನೇ ಹೊರಹಾಕ್ತೀವಿʼ ಅಂತಾ ಎಚ್ಚರಿಸಿದ್ರು. ಆಗ ಶೂನ್ಯ ತನ್ನ ತಪ್ಪನ್ನು ತಿದ್ದಿಕೊಳ್ಳಲು ಸೃಷ್ಟಿಕರ್ತ ಬ್ರಹ್ಮನ ತಪಸ್ಸಿಗೆ ಕೂತ. ಇವನ ತಪ್ಪನ್ನು ತಿದ್ದಿಕೊಳ್ಳಲು ಭ್ರಹ್ಮ ಭೂತ, ಭವಿಷ್ಯ ಮತ್ತು ವರ್ತಮಾನ ಈ ಮೂರನ್ನೂ ಬೆರೆಸಿ, ಒಂದು ಶಂಖಕ್ಕೆ ತುಂಬಿಕೊಟ್ಟ. ಮತ್ತೆ ನಿನ್ನ ಪೂರ್ವಕ್ಕೆ ಹೋಗಿ ನಿನ್ನ ತಪ್ಪನ್ನು ತಿದ್ದಿಕೋ ಅಂತಾ ಹೇಳಿದ. ಶೂನ್ಯ ಬ್ರಹ್ಮ ಕೊಟ್ಟ ಆ ಶಂಖದಿಂದ ತನ್ನ ತಪ್ಪನ್ನು ಸರಿ ಮಾಡಿಕೊಂಡ. ಇದರಿಂದ ಖುಷಿಯಾಗಿ ಸಾಕ್ಷಾತ್ ಬ್ರಹ್ಮನಿಗೆ ಧನ್ಯವಾದ ತಿಳಿಸಲು ಬ್ರಹ್ಮ ಲೋಕಕ್ಕೆ ಹೋದ.
ಬ್ರಹ್ಮ ಯಥಾಪ್ರಕಾರ ಸೃಷ್ಟಿಕ್ರಿಯೆಯಲ್ಲಿ ತೊಡಗಿದ್ದರಿಂದ ಬಂದು ಶೂನ್ಯನನ್ನು ಭೇಟಿ ಮಾಡೋದು ಐದು ನಿಮಿಷ ತಡವಾಯ್ತು. ಹಾಗೆ ಎದುರಾಗುತ್ತಿದ್ದಂತೇ ಬ್ರಹ್ಮ ಕೇಳಿದ್ದು ಒಂದೇ ಪ್ರಶ್ನೆ… ʻನಾನು ಕೊಟ್ಟ ಆ ಶಂಖ ಎಲ್ಲಿ?ʼ ಅಂತಾ. ಅದನ್ನು ತಪಸ್ಸು ಮಾಡಿದ ಜಾಗದಲ್ಲೇ ಬಿಟ್ಟುಬಂದೆ ಅಂತಾ ಶೂನ್ಯ ಉತ್ತರಿಸಿದ. ಅದಕ್ಕೆ ಬ್ರಹ್ಮದೇವ ಹೇಳ್ತಾನೆ ʻನೀನು ಬ್ರಹ್ಮಲೋಕಕ್ಕೆ ಬಂದು ನನಗಾಗಿ ಐದು ನಿಮಿಷ ಕಾದಿದ್ದೀಯ. ಬ್ರಹ್ಮಲೋಕದ ಒಂದು ದಿನ ಭೂಲೋಕದ ಲಕ್ಷ ಕೋಟಿ ವರ್ಷಗಳಿಗೆ ಸಮ. ನೀನಿಲ್ಲಿ ನಿಂತಿರೋವಾಗ ಅಲ್ಲಾಗಲೇ ತ್ರೇತ, ದ್ವಾಪರ ಮುಗಿದು ಕಲಿಯುಗ ಶುರುವಾಗಿದೆʼ ಅಂದ. ತಕ್ಷಣ ಭೂಲೋಕಕ್ಕೆ ಬಂದ ಶೂನ್ಯ ಆ ಶಂಖವನ್ನು ಹುಡುಕಾಡಿದ. ಎಷ್ಟೇ ತಡಕಾಡಿದರೂ ಅದು ಶೂನ್ಯನಿಗೆ ಸಿಗಲೇ ಇಲ್ಲ. ಹಾಗಾದರೆ ಶೂನ್ಯ ಕಳೆದುಕೊಂಡ ಶಂಖ ಎಲ್ಲಿರಬಹುದು? ಅದು ಶಾಲಿವಾಹನ ಅನ್ನೋ ಊರಿನಲ್ಲಿದೆ! ಆ ಊರಿನ ಯಾವ ಜಾಗದಲ್ಲಿ ಶಂಖ ಸಿಗುತ್ತದೆ? ಯಾರ ಕೈಗೆ ಸಿಗುತ್ತದೆ? ಸಿಕ್ಕ ಶಂಖದಿಂದ ಏನೆಲ್ಲಾ ಬದಲಾವಣೆಗಳಾಗುತ್ತವೆ? ಕಡೆಗೆ ಆ ಶಂಖ ಎಲ್ಲಿಗೆ ತಲುಪುತ್ತದೆ? ಎಂಬಿತ್ಯಾದಿ ವಿವರಗಳನ್ನು ಬಿಚ್ಚಿಟ್ಟಿರುವ ಚಿತ್ರ ಶಾಲಿವಾಹನ ಶಕೆ.
ಮೇಲೆ ತಿಳಿಸಿದ ಪುರಾಣಕಥೆಯನ್ನು ಚಿತ್ರದ ಆರಂಭದಲ್ಲಿ ಹಿನ್ನೆಲೆ ಧ್ವನಿಯ ಮೂಲಕ ಕಟ್ಟಿಕೊಡಲಾಗಿದೆ. ನಂತರ ನಾಲ್ಕು ಜನ ಹುಡುಗರ ಕತೆ ಶುರುವಾಗುತ್ತೆ. ಒಬ್ಬೊಬ್ಬರದ್ದೂ ಒಂದೊಂದು ಹಿನ್ನೆಲೆ, ಧಾವಂತ. ನಾಲ್ಕೂ ಜನ ಆ ದಿನ ಬಾವಿಯೊಂದರಲ್ಲಿ ಸ್ನಾನ ಮುಗಿಸಿ, ಮುಂದೆ ನಡೆಯಲಿರುವ ಕಬಡ್ಡಿ ಟೋರ್ನಮೆಂಟಿಗೆ ಪ್ರಾಕ್ಟೀಸ್ ಮಾಡಲು ಹೊರಡಬೇಕು. ಈ ನಡುವೆ ನಡೆಯುವ ಅನಾಹುತಗಳೇನು? ನಾಯಕನ ಕೈಗೆ ಸಿಗುವ ಶಂಖ ನಡೆದ ಅನಾಹುತಗಳನ್ನೆಲ್ಲಾ ಅಳಿಸಿಹಾಕುತ್ತಾ? ಮುಂದಾಗುವ ಯಡವಟ್ಟುಗಳನ್ನು ತಪ್ಪಿಸುತ್ತಾ? ಹಾಗೊಮ್ಮೆ ಆ ಶಂಖವನ್ನು ಬಳಸಿಕೊಂಡು ಒಂದು ಗಂಡಾಂತರವನ್ನು ತಪ್ಪಿಸಲು ಹೋದರೆ, ಮತ್ತೊಂದು ಮಹಾ ಅನಾಹುತಕ್ಕೆ ಕಾರಣವಾಗುತ್ತದಾ? ನೋಡುಗರ ಮೈಂಡಿಗೆ ಕ್ಷಣಕ್ಷಣಕ್ಕೂ ಕೆಲಸ ಕೊಡುತ್ತಾ, ನೋಡಿಸಿಕೊಂಡು ಹೋಗುವ ಸಿನಿಮಾ ಶಾಲಿವಾಹನಶಕೆ!
ಈ ಹಿಂದೆ ಒಂದ್ ಕಥೆ ಹೇಳ್ಲಾ ಮತ್ತು ವಾವ್ ಎನ್ನುವ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದ ಗಿರೀಶ್ ಸ್ವತಃ ಇಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ʻಕಥೆಯ ಸರಕು ಗಟ್ಟಿಯಾಗಿದ್ದರೆ, ಬಜೆಟ್ಟು ಗಿಜೆಟ್ಟೆಲ್ಲಾ ಮ್ಯಾಟ್ರೇ ಅಲ್ಲʼ ಅನ್ನೋದನ್ನು ನಿರೂಪಿಸಿರುವ ಸಿನಿಮಾ ಇದು. ಒಂದು ಹಳ್ಳಿ, ಒಂದು ಬಾವಿ, ನಾಲ್ಕು ಜನ ಯುವಕರು, ಪರೀಕ್ಷೆ ಬರೆಯಲು ಹೊರಟ ಪ್ರೀತಿಸಿದ ಹುಡುಗಿ, ತಾಯಿ, ರೈತಾಪಿ ಮುದುಕಿ ಈ ಥರ ಕೆಲವೇ ಪಾತ್ರಗಳ ಜೊತೆಗೊಂದು ರೂಪಕದಂತೆ ಆಗಾಗ ಕಾಣಿಸಿಕೊಳ್ಳುವ ಚಿರತೆ… ಇವಿಷ್ಟನ್ನೂ ಒಂದರ ಪಕ್ಕಕ್ಕೊಂದು ಅಚ್ಚುಕಟ್ಟಾಗಿ ಜೋಡಿಸಿ, ಒಂದಕ್ಕೊಂದು ಸಂಬಂಧ ಬೆಸೆದು, ಹಿಂದಕ್ಕೂ ಮುಂದಕ್ಕೂ ಚಲಿಸುವಂತೆ ಮಾಡುವ ಟೈಮ್ ಲೂಪ್ ಕತೆ ಶಾಲಿವಾಹನಶಕೆಯಲ್ಲಿದೆ.
ಹಾಗೆ ನೋಡಿದರೆ ಈ ತನಕ ಟೈಮ್ ಲೂಪ್ ಕಥಾ ಹಂದರವನ್ನು ಹೊಂದಿದ ಸಾಕಷ್ಟು ಚಿತ್ರಗಳು ಬಂದಿವೆ. ಆದರೆ ಸೀಮಿತ ವ್ಯಾಪ್ತಿಯಲ್ಲಿ ಇಷ್ಟು ಶ್ರದ್ಧೆಯಿಂದ ರೂಪಿಸಿರುವ ಚಿತ್ರ ಇದಾಗಿದೆ. ಸುಂದರ್ ವೀಣಾ ಮತ್ತು ಕಾಮಿಡಿ ಕಿಲಾಡಿಯ ಹುಡುಗ ಇಬ್ಬರನ್ನು ಬಿಟ್ಟು ತೆರೆಯಲ್ಲಿ ಕಾಣಿಸಿಕೊಂಡಿರುವ ಬಹುತೇಕರು ಹೊಸಬರೇ. ಯಾರೋ ಹೆಸರಾಂತ ನಟರು ಇಲ್ಲಿದ್ದಿದ್ದರೆ ಬಹುಶಃ ಶಾಲಿವಾಹನಶಕೆ ಇಷ್ಟೊಂದು ಶಕ್ತಿಯುತವಾಗಿ ಮೂಡಿಬರುತ್ತಿರಲಿಲ್ಲವೇನೋ. ಕಥೆಯೇ ಇಲ್ಲಿ ಹೊಸಬರನ್ನು ಬೇಡಿದೆ. ಅದನ್ನು ಸಮರ್ಥವಾಗಿ ಒದಗಿಸಿದ್ದಾರಷ್ಟೇ.
ರಂಗಭೂಮಿ ಹಿನ್ನೆಲೆಯ ಕಲಾವಿದರನ್ನು ಏಕಾಏಕಿ ಕ್ಯಾಮೆರಾ ಮುಂದೆ ನಿಲ್ಲಿಸಿದರೆ ಸರಿಯಾಗಿ ಒಗ್ಗುವುದಿಲ್ಲ ಎನ್ನುವ ಆರೋಪವಿದೆ. ಆದರೆ, ಇಲ್ಲಿ ನಿರ್ದೇಶಕ ಗಿರೀಶ್ ರಂಗಭೂಮಿ ನಟರನ್ನು ಸಿನಿಮಾಗೆ ಹೇಗೆ ಬೇಕೋ ಅಷ್ಟು ಮಾತ್ರ ದುಡಿಸಿಕೊಂಡಿದ್ದಾರೆ. ಹೀಗಾಗಿ ಎಲ್ಲ ದೃಶ್ಯಗಳೂ ಕಣ್ಣ ಮುಂದೆಯೇ ನಡೆಯುತ್ತಿದೆಯಾ ಎನ್ನುವಷ್ಟರ ಮಟ್ಟಿಗೆ ಸಹಜವಾಗಿ ಮೂಡಿಬಂದಿದೆ. ಶಾಲಿವಾಹನಶಕೆ ಚಿತ್ರ ಇಷ್ಟು ನೈಜವಾಗಿ ಮೂಡಿಬರಲು ಛಾಯಾಗ್ರಾಹಕ ಅರುಣ್ ಸುರೇಶ್ ಕೂಡಾ ಅಪಾರವಾಗಿ ಶ್ರಮಿಸಿರೋದು ಎದ್ದು ಕಾಣುತ್ತದೆ. ಸಿನಿಮಾಗೆ ಆಯ್ಕೆ ಮಾಡಿಕೊಂಡಿರುವ ಪರಿಸರ ಕೂಡಾ ಬ್ಯೂಟಿಫುಲ್ ಆಗಿದೆ. ಸಾಕಷ್ಟು ಚಿತ್ರಗಳಲ್ಲಿ ಡ್ರೋನ್ ಶಾಟ್ಸ್ ಗಳನ್ನು ಅಗತ್ಯಕ್ಕಿಂತಾ ಹೆಚ್ಚಾಗಿ ಬಳಸುತ್ತಾರೆ. ಆದರಿಲ್ಲಿ ಎಷ್ಟು ಬೇಕೋ ಅಷ್ಟನ್ನೇ ಉಪಯೋಗಿಸಿಕೊಂಡಿದ್ದಾರೆ. ಹಿನ್ನೆಲೆ ಸಂಗೀತ ಕೂಡಾ ಸಿನಿಮಾವನ್ನು ನೋಡಿಸಿಕೊಂಡು ಹೋಗುವಲ್ಲಿ ಸಹಕಾರಿಯಾಗಿದೆ. ಓಟಿಟಿಗೆ ಹೇಳಿಮಾಡಿಸಿದಂತಿರುವ ಈ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ!
No Comment! Be the first one.