ಕನ್ನಡ ಚಿತ್ರರಂಗದ ಹಿರಿಯ ಜೀವ ಕೆ.ಎಸ್. ಅಶ್ವಥ್ ಕಷ್ಟದಲ್ಲೇ ಕೊನೆಯುಸಿರೆಳೆದವರು. ಅವರು ಹೋದಮೇಲೆ ಜನ ಚಾಮಯ್ಯ ಮೇಷ್ಟ್ರು, ಅಶ್ವತ್ಥಮರ ಎಂದೆಲ್ಲಾ ಕೊಂಡಾಡಿದರು. ಅವರಿದ್ದಾಗ `ಹೇಗಿದ್ದಾರೆ’ ಅಂತಾ ದಾಕ್ಷಿಣ್ಯಕ್ಕೂ ವಿಚಾರಿಸುವ ಸೌಜನ್ಯ ಯಾರಿಗೂ ಇರಲಿಲ್ಲ. ಅವರ ಸೊಸೆ ಊಟದ ಮೆಸ್ ನಡೆಸಿ ಸಂಸಾರ ತೂಗಿಸಿದ್ದರು. ಅವರ ಮಗ ಶಂಕರ್ ಅಶ್ವಥ್ ಕೂಡಾ ಉತ್ತಮ ನಟ ಅನ್ನಿಸಿಕೊಂಡಿದ್ದರೂ ಅವರನ್ನು ಕರೆದು ಅವಕಾಶ ಕೊಟ್ಟು, ಕೈತುಂಬಾ ಸಂಭಾವನೆಯನ್ನಾದರೂ ಕೊಡಬೇಕಿತ್ತು. ಅದೂ ಆಗಲಿಲ್ಲ. “ಎಲ್ಲರಿಗೂ ತಂತಮ್ಮ ಅಪ್ಪಂದಿರ ಬಗ್ಗೆ ಅಭಿಮಾನ, ಪ್ರೀತಿ ಇದ್ದೇ ಇರುತ್ತದೆ. ಶಂಕರ್ ಮಾತ್ರ ಮಾತೆತ್ತಿದ್ದರೆ ನಮ್ಮ ತಂದೆ ಹಾಗೆಲ್ಲಾ ಇದ್ರು, ಹಿಂಗೆಲ್ಲಾ ಬದುಕಿದ್ರು… ಅಂತಾ ಅಪ್ಪನ ಬಗ್ಗೆ ಪ್ರವಚನ ನೀಡಲು ಶುರು ಮಾಡುತ್ತಾರೆ. ಸಿನಿಮಾ ಸೆಟ್ಟಿಗೆ ಬಂದಮೇಲೆ ನಮ್ಮವೇ ನೂರಾರು ತಾಪತ್ರಯಗಳಿರುತ್ತವೆ. ಅಶ್ವಥ್ ಅವರ ಬಗ್ಗೆ ಕನ್ನಡಿಗರಾದ ಯಾರಿಗಾದರೂ ಅಭಿಮಾನವಿದ್ದೇ ಇರುತ್ತದೆ. ಆದರೆ, ಅವರ ಮಗನ ಬಾಯಲ್ಲಿ ಪಾರಾಯಣ ಕೇಳೋದು ಕಷ್ಟ…’’ ಅನ್ನೋದು ಸಿನಿಮಾರಂಗದ ಕೆಲವರ ಕಂಪ್ಲೇಂಟಾಗಿತ್ತು.

ಈ ನಡುವೆ ಅವಕಾಶಗಳಿಲ್ಲದೇ ಕಡೆಗೆ ಉಬರ್ ಕ್ಯಾಬ್ ಓಡಿಸುವ ಕಾಯಕ ಆರಂಭಿಸಿದ್ದರು. ಈ ವಿಚಾರ ಹೇಗೋ ಬಹಿರಂಗವಾಗಿ, ಟೀವಿ ಮಾಧ್ಯಮಗಳಲ್ಲಿ ದಿನಗಟ್ಟಲೆ ಸುದ್ದಿಗೆ ಆಹಾರವಾಗಿತ್ತು. ಆ ನಂತರ ಶಂಕರ್ ಅಶ್ವಥ್ ಅವರ ಬಗ್ಗೆ ಇವತ್ತಿನ ಸಿನಿಮಾ ನಿರ್ದೇಶಕ, ನಿರ್ಮಾಪಕರು ತೋರಿದ ಕಾಳಜಿ ನಿಜಕ್ಕೂ ದೊಡ್ಡದು. ಉಬರ್ ಕ್ಯಾಬ್ ನ್ಯೂಸಾದ ನಂತರ ಏನಿಲ್ಲವೆಂದರೂ ಶಂಕರ್ ಅಶ್ವಥ್ ಇಪ್ಪತ್ತೈದಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಮೂಲಕ ಶಂಕರ್ ಕೈತುಂಬಾ ಅವಕಾಶ ಮತ್ತು ಒಂದು ಮಟ್ಟಿಗಿನ ವರಮಾನವನ್ನೂ ಪಡೆಯುವಂತಾಗಿದೆ.

ಸಿನಿಮಾಗಳಲ್ಲಿ ಭರಪೂರ ಅವಕಾಶಗಳಿದ್ದರೂ “ಯಾವುದೇ ಕಾರಣಕ್ಕೂಉಬರ್ ಕ್ಯಾಬ್ ಓಡಿಸೋದು ನಿಲ್ಲಿಸೋದಿಲ್ಲ. ಶೂಟಿಂಗ್ ಬ್ರೇಕ್ ಸಿಕ್ಕಾಗ ಈಗಲೂ ಡ್ರೈವಿಂಗ್ ಕೆಲಸಕ್ಕೆ ಹೋಗುತ್ತಿರುತ್ತೇನೆ. ಎಷ್ಟೋ ಜನ ಗುರುತಿಸಿ ಅಭಿಮಾನದಿಂದ ಮಾತಾಡಿಸುತ್ತಾರೆ. ಯಾವ ಕೆಲಸವೂ ಕೀಳಲ್ಲ. ಡ್ರೈವರ್ ಕೆಲಸ ಸ್ವಾಭಿಮಾನದ ಕೆಲಸ. ನಟನಾ ವೃತ್ತಿಯಂತೆ ಚಾಲಕ ಕೆಲಸವನ್ನು ಕೂಡಾ ನಾನು ಹೆಮ್ಮೆಯಿಂದಲೇ ನಿಭಾಯಿಸುತ್ತೇನೆ” ಎಂದು ಸ್ವತಃ ಶಂಕರ್ ಅಶ್ವಥ್ ಹೇಳಿಕೊಂಡಿದ್ದಾರೆ.

ನಿಜ. ಕೆಲಸ ಯಾವುದಾದರೇನು? ಶ್ರದ್ಧೆಯಿಂದ ನಿಭಾಯಿಸುವುದಷ್ಟೇ ಮುಖ್ಯ. ಶಂಕರ್ ಅಶ್ವಥ್ ಸದ್ಯ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಯಾವತ್ತಿಗೂ ಅವರು ಹೀಗೇ ಕಾರ್ಯನಿರತರಾಗೇ ಇರಲಿ. ಇನ್ಯಾವತ್ತೂ ಅವರ ಬದುಕಿನಲ್ಲಿ ಆರ್ಥಿಕ ಸಂಕಷ್ಟಗಳು ಇಣುಕದಿರಲಿ. ತಂದೆ ಅಶ್ವಥ್ ಅವರನ್ನು ಮೀರಿಸುವ ಮರವಾಗುವತ್ತ ಗಮನಹರಿಸಲಿ…

CG ARUN

ಎಣ್ಣೆ ಏಟಲ್ಲಿ ಯಡವಟ್ಟು ಮಾಡಿಕೊಂಡ ಶಶಿ!

Previous article

ನೆರವೇರಿತು ಅಂಜು ಚಿತ್ರದ ಮುಹೂರ್ತ!

Next article

You may also like

Comments

Leave a reply

Your email address will not be published. Required fields are marked *