ಬಿಗ್ಬಾಸ್ ಶೋ ವಿನ್ನರ್ ಆದ ಬಳಿಕ ನಟನೆಯಲ್ಲಿಯೇ ತೊಡಗಿಸಿಕೊಂಡಿದ್ದವರು ಪ್ರಥಮ್. ಇದೀಗ ಅವರು ನಟಭಯಂಕರ ಚಿತ್ರದ ಮೂಲಕ ತಮ್ಮ ಮೂಲ ಆಸಕ್ತಿಯಾದ ನಿರ್ದೇಶನದತ್ತಲೂ ಹೊರಳಿಕೊಂಡಿದ್ದಾರೆ. ಇದರಲ್ಲವರು ನಾಯಕನಾಗಿ ಅಭಿನಯಿಸೋದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈಗ ನಟಭಯಂಕರ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದ ಭೂಮಿಕೆಯಲ್ಲಿಯೇ ಪ್ರಥಮ್ ಕೊಟ್ಟ ಮಾತೊಂದನ್ನು ಉಳಿಸಿಕೊಂಡಿದ್ದಾರೆ!
ಹಿರಿಯ ನಟ ಅಶ್ವತ್ಥ್ ಪುತ್ರ ಶಂಕರ್ ಅಶ್ವತ್ಥ್ ಊಬರ್ ಕ್ಯಾಬ್ ಚಾಲಕರಾಗಿರುವ ಬಗ್ಗೆ ಈ ಹಿಂದೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತಲ್ಲಾ? ಚಿತ್ರರಂಗದಲ್ಲಿ ಅವಕಾಶಗಳಿರದೆ ಕ್ಯಾಬ್ ಚಾಲಕರಾಗಿ ಬದುಕು ನಡೆಸುತ್ತಿದ್ದ ಶಂಕರ್ ಅಶ್ವತ್ಥ್ ಸ್ಥಿತಿಯ ಬಗ್ಗೆ ಎಲ್ಲರೂ ಮರುಗಿದ್ದರು. ಚಿತ್ರರಂಗದ ಮಂದಿಯೂ ಈ ಬಗ್ಗೆ ತಮ್ಮದೇ ರೀತಿಯಲ್ಲಿ ಮಿಡಿದಿದ್ದರು. ಕೆಲ ಮಂದಿ ಸಹಾಯಹಸ್ತವನ್ನೂ ಚಾಚಿದ್ದರು. ಈ ಸಂದರ್ಭದಲ್ಲಿ ಶಂಕರ್ ಅಶ್ವತ್ಥ್ ಅವರನ್ನು ಭೇಟಿಯಾಗಿದ್ದ ಪ್ರಥಮ್ ತಮ್ಮ ಮುಂದಿನ ಚಿತ್ರದಲ್ಲಿ ಒಂದು ಪಾತ್ರ ಕೊಡುವ ಭರವಸೆ ನೀಡಿದ್ದರು.
ಇದೀಗ ಪ್ರಥಮ್ ಆ ಮಾತನ್ನು ಉಳಿಸಿಕೊಂಡಿದ್ದಾರೆ. ತಾನು ನಟಿಸಿ ನಿರ್ದೇಶನ ಮಾಡುತ್ತಿರೋ ನಟಸಾರ್ವಭೌಮ ಚಿತ್ರದಲ್ಲಿ ಅದ್ದಭುತವಾದೊಂದು ಪಾತ್ರವನ್ನು ಶಂಕರ್ ಅಶ್ವತ್ಥ್ ಅವರಿಗೆ ಕೊಟ್ಟಿದ್ದಾರೆ. ಇದೀಗ ಅವರ ಭಾಗದ ಚಿತ್ರೀಕರಣ ಕೂಡಾ ಶುರುವಾಗಿದೆ. ತಮಗೆ ಸಿಕ್ಕ ಪಾತ್ರ ಕಂಡು ಖುದ್ದು ಶಂಕರ್ ಭಾವುಕರಾಗಿದ್ದಾರೆ. ಆರಂಭದಲ್ಲಿ ಪ್ರಥಮ್ ಹೀಗೊಂದು ಮಾತು ಕೊಟಾಗ ಅದು ಬರೀ ಬಾಯಿ ಮಾತಾಗಿರ ಬಹುದೆಂದೇ ಒಂದಷ್ಟು ಮಂದಿ ಅಂದುಕೊಂಡಿರಬಹುದು. ಸ್ವತಃ ಶಂಕರ್ ಅಶ್ವತ್ಥ್ ಕೂಡಾ ಹಾಗೇ ಅಂದುಕೊಂಡಿದ್ದರಂತೆ. ಆದರೆ ಇದೀಗ ಪ್ರಥಮ್ ತನಗೆ ನೀಡಿರೋ ಪಾತ್ರ, ಅದರ ತೀವ್ರತೆ ಮತ್ತು ಒಟಾರೆ ಚಿತ್ರದ ಕಥೆ ಕಂಡು ಶಂಕರ್ ಅಶ್ವತ್ಥ್ ಖುಷಿಗೊಂಡಿದ್ದಾರೆ.
ಈಗಾಗಲೇ ಒಂದಷ್ಟು ದಿನಗಳ ಚಿತ್ರೀಕರಣ ನಡೆದಿದೆ. ಇದರ ಸಂಭಾವನೆಯ ಮೊತ್ತವನ್ನು ಕೊಡಲು ಪ್ರಥಮ್ ಮುಂದಾದಾಗ ಶಂಕರ್ ಅಶ್ವತ್ಥ್ ಅಕ್ಷರಶಃ ಭಾವುಕರಾದರಂತೆ. ನೀನು ನನ್ನ ಮಗನಿದ್ದಂತೆ. ಮಗನ ಹತ್ತಿರ ಹೇಗೆ ಹಣ ತೆಗೆದುಕೊಳ್ಳಲಿ ಅಂದಿದ್ದರಂತೆ. ಪ್ರಥಮ್ ತನ್ನ ಚಿತ್ರದಲ್ಲಿ ಪಾತ್ರ ಕೊಡೋದಾಗಿ ಹೇಳಿದಾಗ ಏನೋ ಹುಡುಗ ಬಾಯಿ ಮಾತಿಗೆ ಹೇಳಿದ್ದಾನೆಂದುಕೊಂಡಿದ್ದ ಶಂಕರ್ ಅದನ್ನು ಮರೆತೂ ಬಿಟ್ಟಿದ್ದರಂತೆ. ಆದರೆ ನಟಭಯಂಕರದಲ್ಲಿ ಸಿಕ್ಕ ಪಾತ್ರದಿಂದಾಗಿ ಯಾರನ್ನೂ ಹಿಂದೆ ಮುಂದೆ ನೋಡದೆ ಅಳೆಯಬಾರದೆಂಬ ಪಾಠ ಕಲಿತುಕೊಂಡಿರೋದಾಗಿಯೂ ಶಂಕರ್ ಅಶ್ವತ್ಥ್ ಹೇಳಿದರಂತೆ.
ಶಂಕರ್ ಅಶ್ವತ್ಥ್ ಕಷ್ಟದಲ್ಲಿದ್ದಾರೆ. ಅವರಿಗೆ ಹಣಕಾಸಿನ ನೆರವು ನೀಡಿದರೆ ಅದು ಆ ಕ್ಷಣಕ್ಕಷ್ಟೇ. ಆದರೆ ಸದಾ ನೆನಪಲ್ಲಿಟ್ಟುಕೊಳ್ಳುವಂಥಾ ಪಾತ್ರ ಕೊಟ್ಟರೆ ಅದೇ ದಿಕ್ಕಾಗುತ್ತದೆ ಎಂಬ ಕಾರಣದಿಂದಲೇ ಪ್ರಥಮ್ ನಟಭಯಂಕರದಲ್ಲಿ ಭರ್ಜರಿ ಪಾತ್ರವನ್ನೂ ಶಂಕರ್ ಅವರಿಗೆ ನೀಡಿದ್ದಾರೆ. ಅವರ ಭಾಗದ ಚಿತ್ರೀಕರಣ ಜನವರಿ ಹತ್ತರ ಹೊತ್ತಿಗೆಲ್ಲ ಮುಗಿಯಲಿದೆ.
#
No Comment! Be the first one.