ನಿರೂಪಣೆ : ಶಶಿಧರ ಚಿತ್ರದುರ್ಗ ಫೋಟೋ : ಪ್ರಗತಿ ಅಶ್ವತ್ಥ ನಾರಾಯಣ
ಕೆ.ಎಸ್.ಎಲ್.ಸ್ವಾಮಿ (ರವೀ) ನಿರ್ದೇಶನ ಮತ್ತು ನಿರ್ಮಾಣದ `ಮಿಥಿಲೆಯ ಸೀತೆಯರು’ ಸಿನಿಮಾ ಶೂಟಿಂಗ್ ಸಂದಭ. ನಾನು ಚಿತ್ರದ ಸಹನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಚಿತ್ರದಲ್ಲಿ ಶಂಕರ್ನಾಗ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಅತಿಥಿ ಪಾತ್ರವೊಂದರಲ್ಲಿ ನಟಿಸಬೇಕಿತ್ತು. ಬೆಂಗಳೂರಿನ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಶೂಟಿಂಗ್. ಶಂಕರ್ನಾಗ್ ದೂರದ ಊರಿನಲ್ಲಿ ಮತ್ತೊಂದು ಚಿತ್ರೀಕರಣ ಮುಗಿಸಿಕೊಂಡು ಫ್ಲೈಟ್ನಿಂದ ಇಳಿದವರು ನೇರವಾಗಿ `ಮಿಥಿಲೆಯ ಸೀತೆಯರು’ ಸೆಟ್ಗೆ ಬಂದಿದ್ದರು. ಮನೆಗೆ ಹೋದರೆ ಅಧ ದಿನ ವ್ಯಯವಾಗಿ ನಿರ್ಮಾಪಕರಿಗೆ ತೊಂದರೆಯಾಗುತ್ತದೆ ಎನ್ನುವ ಕಾಳಜಿ ಅವರದು. ಆದರೆ ಇಲ್ಲೊಂದು ಸಮಸ್ಯೆಯಿತ್ತು. ಪೊಲೀಸ್ ಅಧಿಕಾರಿಯಾದ್ದರಿಂದ ಅವರು ಗಡ್ಡ ತೆಗೆಯಲೇಬೇಕಿತ್ತು! ಏನು ಮಾಡಬೇಕೆಂದು ನಾವು ಚಿಂತಿಸುತ್ತಿರುವಾಗ, ಅವರೇ ಇದಕ್ಕೊಂದು ಐಡಿಯಾ ಸೂಚಿಸಿದರು. ಮೊದಲು ಯೋಜಿಸಿದಂತೆ ಪೊಲೀಸ್ ಸಮವಸ್ತ್ರದ ಮೇಲಿನ ಬಿಲ್ಲೆಯಲ್ಲಿ `ಕೆ.ಎಸ್.ಶಂಕರ್’ ಎನ್ನುವ ಇಂಗ್ಲಿಷ್ ಹೆಸರಿತ್ತು. ಶಂಕರ್ನಾಗ್ ಅದನ್ನು `ಕೆ.ಎಸ್.ಷರೀಫ್’ ಎಂದು ತಿದ್ದಿಬಿಟ್ಟರು! ಅಲ್ಲಿಗೆ ಗಡ್ಡದ ಸಮಸ್ಯೆ ಬಗೆಹರಿಯಿತು.
ಮಾಲ್ಗುಡಿ ಡೇಸ್ ಸರಣಿಯ ಸಂಚಿಕೆಯೊಂದನ್ನು ಚಿತ್ರಿಸುವ ಸಂದಭದಲ್ಲಿನ ಒಂದು ಘಟನೆ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನೀರಿನೊಳಗೆ ವಿಗ್ರಹ ಹುಡುಕುವ ಪ್ರಾಚ್ಯವಸ್ತು ವಿಷಯಕ್ಕೆ ಸಂಬಂಸಿದ ಕಥೆ ಹೇಳುವ ಸಂಚಿಕೆಯದು. ಆಗ ನಾನು ಕಲಾ ನಿರ್ದೇಶಕ ಜಾನ್ ದೇವರಾಜ್ ಅವರಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದೆ. ಆಗುಂಬೆಯ ಆಸುಪಾಸಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಸನ್ನಿವೇಶವೊಂದಕ್ಕಾಗಿ ನೀರಿನ ಫಾಲ್ಸ್ ಬೇಕಿತ್ತು. ಹತ್ತಿರದಲ್ಲೆಲ್ಲೂ ಫಾಲ್ಸ್ ಇರಲಿಲ್ಲ. ದೂರದಲ್ಲೆಲ್ಲೋ ಇದ್ದ ಫಾಲ್ಸ್ಗೆ ವಾಹನಗಳಲ್ಲಿ ತೆರಳಲು ರಸ್ತೆಯ ಅನುಕೂಲವೂ ಇರಲಿಲ್ಲ. `ಇಲ್ಲೇ ನಾವೊಂದು ಫಾಲ್ಸ್ ಕ್ರಿಯೇಟ್ ಮಾಡೋಣ!’ ಎಂದರು ಶಂಕರ್ನಾಗ್. ಅದು ಹೇಗೆ ಮಾಡುತ್ತಾರೋ ಎನ್ನುವ ಅಚ್ಚರಿ, ಕುತೂಹಲ ನಮಗೆ. ಅಲ್ಲೊಂದು ಎತ್ತರದ ಮಣ್ಣಿನ ದಿಬ್ಬ ಗುರುತಿಸಿದರು. ಎತ್ತಿನ ಗಾಡಿಯಲ್ಲಿ ಇಪ್ಪತ್ತು ಡ್ರಮ್ಗಳಲ್ಲಿ ನೀರು ತರಿಸಿ, ಡ್ರಮ್ಗಳ ಸಮೇತ ದಿಬ್ಬದ ಮೇಲೆ ನಮ್ಮೆಲ್ಲರನ್ನೂ ನಿಲ್ಲಿಸಿದರು. ದಿಬ್ಬದ ಇಳಿಜಾರಿನಲ್ಲಿ ಮಣ್ಣನ್ನು ಕೊರೆದು ನೀರು ರಭಸವಾಗಿ ಹರಿಯುವಂತೆ ಅನುವು ಮಾಡಿದೆವು. ಮೇಲೆ ಎಲ್ಲರಿಗೂ ಡ್ರಮ್ಗಳಿಗೆ ಅಡ್ಡವಾಗಿ ಹಲಗೆ ಹಿಡಿಯುವಂತೆ ಶಂಕರ್ನಾಗ್ ಸೂಚಿಸಿದ್ದರು. ಅವರು ಟೇಕ್ ಹೇಳುತ್ತಿದ್ದಂತೆ, ಒಮ್ಮೆಗೇ ಹಲಗೆ ತೆಗೆದು ಪಕ್ಕಕ್ಕೆ ಓಡಬೇಕು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರಿಂದ ಒಂದೇ ಟೇಕ್ಗೆ ಶಾಟ್ ಓಕೆ ಆಯ್ತು! ಅದ್ಭುತ ಐಡಿಯಾಗಳಿದ್ದರೆ ಕೆಲಸ ಅದೆಷ್ಟು ಸುಲ`ವಾಗುತ್ತದೆ ಎನ್ನುವ ಪಾಠ ಕಲಿತೆವು.
No Comment! Be the first one.