Sharanya Shetty Cinibuzz Kannada

ಗಟ್ಟಿಮೇಳ ಎನ್ನುವ ಧಾರಾವಾಹಿ ನೋಡಿದ್ದವರಿಗೆ ಬಹುಶಃ ಈ ಹುಡುಗಿಯ ಪರಿಚಯವಿರಲೇಬೇಕು. ಪಕ್ಕಾ ವಿಲನ್‌ ಗೆಟಪ್ಪಿನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಬೆಚ್ಚಿಬೀಳಿಸಿದ್ದ ಶರಣ್ಯ ಈಗ ಸೀರಿಯಲ್ಲುಗಳಿಂದ ಸಂಪೂರ್ಣ ಹೊರಬಂದು ಚಿತ್ರರಂಗದಲ್ಲಿ ನೆಲೆ ನಿಲ್ಲುವ ಪ್ರಯತ್ನದಲ್ಲಿದ್ದಾರೆ.

ಜ಼ೀ ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ ಮತ್ತು ಸುವರ್ಣ ಚಾನೆಲ್ಲಿನಲ್ಲಿ ಮೂಡಿಬಂದಿದ್ದ ಮುದ್ದುಲಕ್ಷ್ಮಿ ಎಂಬೆರಡು ಧಾರಾವಾಹಿಗಳ ಮೂಲಕ ಜನಕ್ಕೆ ಪರಿಚಯಗೊಂಡವರು ಶರಣ್ಯ ಶೆಟ್ಟಿ. ಅದೇನೋ ಗೊತ್ತಿಲ್ಲ  ಪ್ರತಿಭಾವಂತರು ಹೆಚ್ಚು ದಿನ ಧಾರಾವಾಹಿ ಜಗತ್ತಿನಲ್ಲಿ ನಿಲ್ಲಲು ಇಷ್ಟ ಪಡೋದಿಲ್ಲ. ಒಂದೆರಡು ಸೀರಿಯಲ್ಲುಗಳಲ್ಲಿ ನಟಿಸುತ್ತಿದ್ದಂತೇ ಸಾಕಪ್ಪಾ ಈ ಸೀರಿಯಲ್ಲಿನ ಸಾವಾಸ ಅನ್ನಿಸಲು ಶುರುವಾಗುತ್ತದೆ. ಇಲ್ಲಿ ಶರಣ್ಯಗೆ ಕೂಡಾ ಅದೇ ಭಾವ ಮೂಡಿತ್ತು. ಇಷ್ಟವಿಲ್ಲದ ಜಾಗದಲ್ಲಿ ಹೆಚ್ಚು ದಿನ ಇರಬಾರದು ಅಂತಾ ತೀರ್ಮಾನಿಸಿದ ಶರಣ್ಯ ಅಲ್ಲಿಂದ ಹೊರಬಂದರು. ಸದ್ಯ ಶರಣ್ಯ ಸಿನಿಮಾರಂಗದತ್ತ ಹೆಚ್ಚು ಗಮನ ಹರಿಸಿದ್ದಾರೆ.

1980, ಹುಟ್ಟುಹಬ್ಬದ ಶುಭಾಶಯಗಳು, ಸ್ಪೂಕಿ ಕಾಲೇಜ್‌, ನಗುವಿನ ಹೂಗಳ ಮೇಲೆ ಮತ್ತು ಪೆಂಟಗನ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ರವಿ ಬೋಪಣ್ಣ ಸಿನಿಮಾದಲ್ಲಿ ಕ್ರೇಜ಼ಿಸ್ಟಾರ್‌ ರವಿಚಂದ್ರನ್‌ ಅವರ ಮಗಳ ಪಾತ್ರದಲ್ಲಿ ನಟಿಸಿರೋದೂ ಇವರೇ.

ಧಾರಾವಾಹಿ ಮತ್ತು ಸಿನಿಮಾ ಜಗತ್ತಿನಲ್ಲಿ ಏಕಕಾಲದಲ್ಲಿ ಹೆಸರು ಮಾಡುತ್ತಿರುವ ಶರಣ್ಯ ಅವರ ಮೂಲ ಕುಂದಾಪುರವಾದರೂ ಇವರ ಕುಟುಂಭಸ್ಥರು ನೆಲೆಸಿರೋದು ತೀರ್ಥಹಳ್ಳಿ, ರಿಪ್ಪನ್‌ ಪೇಟೆ ಆಸು ಪಾಸಿನ ಊರುಗಳಲ್ಲಿ. ಶರಣ್ಯ ತಂದೆ ಶಿವಾನಂದ್ ಅವರು ದಶಕಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಶರಣ್ಯ ಪ್ರಿಂಟರ್ಸ್‌ ಹೆಸರಿನ ಮುದ್ರಣಾಲಯವನ್ನು ನಡೆಸುತ್ತಿದ್ದಾರೆ.

ಓದಿನಲ್ಲಿ ಯಾವತ್ತಿಗೂ ನಂಬರ್‌ ಒನ್‌ ಇದ್ದ ಶರಣ್ಯಾ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸದಾ ಮುಂದಿರುತ್ತಿದ್ದರು. ಭಾಗವಹಿಸಿದ ಸ್ಪರ್ಧೆಗಳಲ್ಲೆಲ್ಲಾ ಗೆಲುವು ಗ್ಯಾರೆಂಟಿಯಾಗಿರುತ್ತಿತ್ತು. ಬಹುಶಃ ಇದೇ ಶರಣ್ಯ ಒಳಗಿದ್ದ ಪ್ರತಿಭಾವಂತೆಗೆ ಬಣ್ಣದ ಜಗತ್ತಿಗೆ ಕಾಲಿಡಲು ಸ್ಫೂರ್ತಿ ನೀಡಿರಬಹುದು. ಮೂಲತಃ ಭರತನಾಟ್ಯ ಕಲಾವಿದೆಯೂ ಆಗಿರುವ ಶರಣ್ಯಾ 2018ರ ಮಿಸ್‌ ಸೌತ್‌ ಇಂಡಿಯಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಮಾಡೆಲಿಂಗ್‌ ನಂಟು ಹೊಂದಿದ್ದರಿಂದ ನಟನಾವೃತ್ತಿ ಬಹುಬೇಗ ಈಕೆಯನ್ನು ಸೆಳೆಯಿತು.

ಪಿಯೂಸಿಯಲ್ಲಿ ತೊಭತ್ತೆಂಟು ಪರ್ಸೆಂಟೇಜ್‌ ತೆಗೆದುಕೊಂಡು, ಸಿಇಟಿಯಲ್ಲೂ ಒಳ್ಳೇ ರ್ಯಾಂಕ್‌ ಪಡೆದು ಇಂಜಿನಿಯರಿಂಗ್‌ ಸೇರಿದ್ದವಳು ಶರಣ್ಯ. ಇನ್ನೂ ಕಾಲೇಜಿನಲ್ಲಿದ್ದಾಗಲೇ ಸೀರಿಯಲ್‌ ಅವಕಾಶ ಸಿಕ್ಕಿತ್ತು. ಗಟ್ಟಿಮೇಳ ಧಾರಾವಾಹಿ ಈಕೆಗೆ ಒಳ್ಳೇ ಹೆಸರನ್ನೂ ತಂದುಕೊಟ್ಟಿತು. ನಂತರ ಮತ್ತೊಂದು ಧಾರಾವಾಹಿ, ಸಿನಿಮಾ ಅಂತಾ ನಟನೆಯ ನಂಟು ಬಿಡಲೇ ಇಲ್ಲ.

ಹಾಗೆ ನೋಡಿದರೆ ಮಗಳು ನಟನಾ ವತ್ತಿಗೆ ಬರೋದೇ ಇವರ ಮನೆಯವರಿಗೆ ಇಷ್ಟವಿರಲಿಲ್ಲ. ಯಾವಾಗ ಟೀವಿಯಲ್ಲಿ ನೋಡಿದವರು ʻನಿಮ್ಮ ಮಗಳು ಎಷ್ಟು ಚೆಂದ ನಟಿಸುತ್ತಾಳೆʼ ಅನ್ನಲು ಶುರು ಮಾಡಿದರೋ ಆಗ ಸ್ವಲ್ಪ ಸಮಾಧಾನಗೊಂಡಿದ್ದರು. ಈಗಷ್ಟೇ ಇಂಜಿನಿಯರಿಂಗ್‌ ಅಂತಿಮ ವರ್ಷ ಮುಗಿಸಿರುವ ಶರಣ್ಯಾ ಒಂದೊಳ್ಳೆ ಕೆಲಸಕ್ಕೆ ಸೇರಿಬಿಡಲಿ ಅನ್ನೋದು ಮನೆಯವರ ಬಯಕೆ.

ಆದರೆ ಶರಣ್ಯಾಗೆ ಮಾತ್ರ ವಾರದಲ್ಲಿ ಐದು ದಿನ ಒಂದೇ ಕಡೆ ಕೂತು ನೌಕರಿ ಮಾಡುವ ಮನಸ್ಸಿಲ್ಲ. ಏನಾದರೂ ಆಗಲಿ ಚಿತ್ರರಂಗದಲ್ಲೇ ನೆಲೆ ಕಂಡುಕೊಳ್ಳಬೇಕು ಅಂತಾ ತೀರ್ಮಾನಿಸಿಬಿಟ್ಟಿದ್ದಾರೆ. ಈಕೆಯ ಬಯಕೆಗೆ ತಕ್ಕಂತೆ ಒಂದರ ಹಿಂದೊಂದು ಪಾತ್ರಗಳೂ ಹುಡುಕಿಕೊಂಡು ಬರುತ್ತಿವೆ. ಸಿಕ್ಕ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳುವುದಕ್ಕಿಂತಾ ತಮಗೊಪ್ಪುವ ರೋಲನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದು ಶರಣ್ಯ ನಿರ್ಣಯ.

ಚಿತ್ರರಂಗದಲ್ಲಿ ಬೆಳೆದು ನಿಲ್ಲಬೇಕು ಅಂತಾ ಬಯಸಿರುವ ಮತ್ತು ಅದಕ್ಕೆ ಬೇಕಿರುವ ಎಲ್ಲ ಅರ್ಹತೆ ಹೊಂದಿರುವ ಶರಣ್ಯಾಗೆ ಇಂದು ಹುಟ್ಟಿದ ದಿನ. ಈಕೆ ಬಯಸಿದ್ದೆಲ್ಲಾ ದಕ್ಕಲಿ. ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಲಿ ಅಂತಾ ನಾವೂ ಹಾರೈಸೋಣ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಅರವತ್ತರ ನಾಗೇಶ್‌ʼಗೆ ಹದಿನಾರರ ಉತ್ಸಾಹ!

Previous article

ಅಪ್ಪನ ಹೆಸರು ಉಳಿಸ್ತೀನಿ ಅಂದ ಕ್ರೇಜ಼ಿ ಪುತ್ರ!

Next article

You may also like

Comments

Leave a reply

Your email address will not be published. Required fields are marked *