ನಮ್ ಏರಿಯಾಲ್ ಒಂದಿನ, ತುಘ್ಲಕ್ ಮತ್ತು ಹುಲಿರಾಯ ಮೂಲಕ ಹೊಸಾ ಬಗೆಯ ಚಿತ್ರವನ್ನು ನೀಡಿದ್ದವರು ಅರವಿಂದ್ ಕೌಶಿಕ್. ಸದ್ಯ ಕಮಲಿ ಎನ್ನುವ ಸೂಪರ್ ಹಿಟ್ ಧಾರಾವಾಹಿಯ ನಿರ್ದೇಶನವನ್ನೂ ಮಾಡುತ್ತಿರುವ ಅರವಿಂದ್ ಶಾರ್ದೂಲ ಎಂಬ ಸಿನಿಮಾದೊಂದಿಗೆ ಮರಳಿದ್ದಾರೆ. ಶಾರ್ದೂಲ ಹುಲಿರಾಯನ ಮತ್ತೊಂದು ಹೆಸರು. ಹುಲಿ ಅವರ ಪಾಲಿಗೆ ಲಕ್ಕಿಯೋ, ಈ ಚಿತ್ರದ ಕಥೆಗೆ ಅದು ಹೊಂದುತ್ತದೆಯಾದ್ದರಿಂದ ಆ ಶೀರ್ಷಿಕೆಯಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ವಿಶಿಷ್ಟವಾದ ಈ ಟೈಟಲ್ಲಿನ ಮೂಲಕ ಅಷ್ಟೇ ವಿಶೇಷವಾದೊಂದು ಕಥೆಯೊಂದಿಗೆ ಅರವಿಂದ್ ಕೌಶಿಕ್ ಮರಳಿದ್ದಾರೆ!

ಅರವಿಂದ್ ಕೌಶಿಕ್ ಚಿತ್ರವೆಂದ ಮೇಲೆ ಅದರಲ್ಲೇನೋ ವಿಶೇಷ ಇದ್ದೇ ಇರುತ್ತದೆಂಬುದು ಪ್ರೇಕ್ಷಕರ ನಂಬಿಕೆ. ಅದಕ್ಕನುಗುಣವಾಗಿಯೇ ಸದ್ದೇ ಇಲ್ಲದಂತೆ ಈ ಚಿತ್ರವನ್ನವರು ಮುಗಿಸಿಕೊಂಡಿದ್ದಾರೆ. ಈ ಹಂತದಲ್ಲಿ ಮಾಧ್ಯಮವನ್ನು ತಮ್ಮ ತಂಡದೊಂದಿಗೆ ಮುಖಾಮುಖಿಯಾಗಿರೋ ಅರವಿಂದ್ ಕೌಶಿಕ್ ಶಾರ್ದೂಲನ ಬಗೆಗಿನ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮನುಷ್ಯ ಪ್ರತೀ ನಿತ್ಯದ ಆಗುಹೋಗುಗಳ ಬಗ್ಗೆ ನಿಖರವಾದ ಅರಿವು ಹೊಂದಿರುವಾತ. ಬೆಳಗ್ಗೆ ಎದ್ದಾಗಿನಿಂದ ಅವರವರ ಕೆಲಸ ಕಾರ್ಯಕ್ಕೆ ಇಳಿಯುವವರೆಗೂ ಇಂಥಾದ್ದೇ ಘಟಿಸುತ್ತದೆಂಬ ಅರಿವು ಪ್ರತಿಯೊಬ್ಬರಿಗೂ ಇರುತ್ತದೆ. ಅದರ ಬಗ್ಗೆ ಯಾರಿಗೂ ಕುತೂಹಲವಿರೋದಿಲ್ಲ. ಆದರೆ ಹೊಸಾ ಜಾಗ, ಗುರುತಿರದ ಜನರ ಮಧ್ಯೆ ಹೋಗಿ ನಿಂತಾಗ ಪ್ರತೀ ಕ್ಷಣಗಳೂ ಎದೆಗೆ ಸವರಿಕೊಂಡೇ ಚಲಿಸಿದಂತಾಗುತ್ತದಲ್ಲಾ? ಅಂಥಾದ್ದೊಂದು ಸೂಕ್ಷ್ಮವನ್ನಿಟ್ಟುಕೊಂಡು ಪ್ರಯಾಣದ ಜೊತೆ ಜೊತೆಗೇ ಕಥೆ ಹೇಳಲು ಅರವಿಂದ್ ಮುಂದಾಗಿದ್ದಾರೆ.

ರವಿತೇಜಾ ಮತ್ತು ಚೇತನ್ ಚಂದ್ರ ಈ ಚಿತ್ರದ ನಾಯಕರು. ಐಶ್ವರ್ಯಾ ಮತ್ತು ಕೃತಿಕಾ ರವೀಂದ್ರ ಈ ಚಿತ್ರದ ನಾಯಕಿಯರು. ನಿರ್ದೇಶಕ ಅರವಿಂದ್ ಕೌಶಿಕ್ ಅವರಿಗೆ ದಶಕಗಳಿಂದಲೂ ಸ್ನೇಹಿತರಾಗಿರುವ ರೋಹಿತ್ ಕಲ್ಯಾಣ್ ಜೊತೆ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಹು ಕಾಲದಿಂದಲೂ ಒಂದೊಳ್ಳೆ ಚಿತ್ರವನ್ನು ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದ ರೋಹಿತ್ ಈ ಕಥೆ ಕೇಳಿದಾಕ್ಷಣವೇ ನಿರ್ಮಾಪಕರಾಗಲು ಒಪ್ಪಿಕೊಂಡಿದ್ದರಂತೆ. ಇನ್ನು ಸದಭಿರುಚಿಯ ಚಿತ್ರ ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದ ಕಲ್ಯಾಣ್ ಅವರನ್ನು ನಿರ್ಮಾಪಕರನ್ನಾಗಿ ಮಾಡಿದ್ದೂ ಕೂಡಾ ಅರವಿಂದ್ ಕೌಶಿಕ್ ಅವರ ಚೆಂದದ ಕಥೆಯೇ!

ಇದೊಂದು ಪ್ರಯಾಣದಲ್ಲಿ ನಡೆಯೋ ಕಥೆ. ಆದರೆ ಇದು ಮಾಮೂಲಿ ಪಯಣವಾಗಿರಲಿಕ್ಕಿಲ್ಲ ಎಂಬ ಅಂದಾಜು ನಿರ್ದೇಶಕ ಅರವಿಂದ್ ಕೌಶಿಕ್ ಆಲೋಚನಾ ಕ್ರಮ ಗೊತ್ತಿರುವವರಿಗೆಲ್ಲ ಪಕ್ಕಾ ಆಗಿರುತ್ತದೆ. ಅದು ಈ ಹಿಂದೆ ಹುಲಿರಾಯ ಚಿತ್ರದ ಮೂಲಕವೂ ಸ್ಪಷ್ಟವಾಗಿಯೇ ಸಾಬೀತಾಗಿದೆ. ಸಂತೋಷ್ ರಾಧಾಕೃಷ್ಣನ್ ಸೃಷ್ಟಿಸಿರುವ ಈ ಚಿತ್ರದ ಮೋಷನ್ ಪೋಸ್ಟರ್ ಚಿತ್ರದ ಸಾರವನ್ನು ಹೇಳುವಂತಿದೆ. ಇನ್ನೇನು ಟ್ರೈಲರ್, ಹಾಡು ಮುಂತಾದವನ್ನು ಪ್ರೇಕ್ಷಕರಿಗೆ ತಲುಪಿಸಿ ಶೀಘ್ರದಲ್ಲೇ ತೆರೆಗಾಣಲು ಶಾರ್ದೂಲ ಸಿದ್ಧವಾಗುತ್ತಿದೆ.

#

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಭೀಕರ ದುರಂತದ ಆಚೀಚೆ ರವಿಚಂದ್ರನ್ ಹೇಳಿದ್ದೇನು?

Previous article

ಹರಿಪ್ರಿಯಚರಿತೆ!

Next article

You may also like

Comments

Leave a reply

Your email address will not be published. Required fields are marked *