ಭೈರವ ಸಿನಿಮಾಸ್ ಲಾಂಛನದಲ್ಲಿ ಕಲ್ಯಾಣ್ ಸಿ ಹಾಗೂ ರೋಹಿತ್ .ಎಸ್ ಅವರು ನಿರ್ಮಿಸಿರುವ ಶಾರ್ದೂಲ ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಕೊರೋನ ಹಾವಳಿಯಿಂದ ಸಿನಿಮಾ ಬಿಡುಗಡೆ ವಿಳಂಬವಾಗಿದ್ದು, ಅನುಮತಿ ದೊರಕಿದ ಕೂಡಲೆ ಚಿತ್ರವನ್ನು ತೆರೆಗ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.. ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಕೂಡ ವಿಭಿನ್ನವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ…
ನಮ್ ಏರಿಯಾಲ್ ಒಂದಿನ, ತುಘ್ಲಕ್, ಹುಲಿರಾಯ ಮೂಲಕ ಹೊಸಾ ಬಗೆಯ ಚಿತ್ರವನ್ನು ನೀಡಿದ್ದ ಅರವಿಂದ್ ಕೌಶಿಕ್ ಮತ್ತೆ ಶಾರ್ದೂಲದೊಂದಿಗೆ ಮರಳಿದ್ದಾರೆ. ಶಾರ್ದೂಲ ಹುಲಿರಾಯನ ಮತ್ತೊಂದು ಹೆಸರು. ಹುಲಿ ಅವರ ಪಾಲಿಗೆ ಲಕ್ಕಿಯೋ, ಈ ಚಿತ್ರದ ಕಥೆಗೆ ಅದು ಹೊಂದುತ್ತದೆಯಾದ್ದರಿಂದ ಆ ಶೀರ್ಷಿಕೆಯಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ವಿಶಿಷ್ಟವಾದ ಈ ಟೈಟಲ್ಲಿನ ಮೂಲಕ ಅಷ್ಟೇ ವಿಶೇಷವಾದೊಂದು ಕಥೆಯೊಂದಿಗೆ ಅರವಿಂದ್ ಕೌಶಿಕ್ ಮರಳಿದ್ದಾರೆ. ಈ ಸಿನಿಮಾಗೆ ದೆವ್ವ ಇರಬಹುದಾ ಎನ್ನುವ ಟ್ಯಾಗ್ ಲೈನ್ ಕೂಡಾ ಇಡಲಾಗಿದೆ.
ಅರವಿಂದ್ ಕೌಶಿಕ್ ಚಿತ್ರವೆಂದ ಮೇಲೆ ಅದರಲ್ಲೇಲನೋ ವಿಶೇಷ ಇದ್ದೇ ಇರುತ್ತದೆಂಬುದು ಪ್ರೇಕ್ಷಕರ ನಂಬಿಕೆ. ಅದಕ್ಕನುಗುಣವಾಗಿಯೇ ಸದ್ದೇ ಇಲ್ಲದಂತೆ ಈ ಚಿತ್ರವನ್ನವರು ಮುಗಿಸಿಕೊಂಡಿದ್ದಾರೆ. ಮನುಷ್ಯ ಪ್ರತೀ ನಿತ್ಯದ ಆಗುಹೋಗುಗಳ ಬಗ್ಗೆ ನಿಖರವಾದ ಅರಿವು ಹೊಂದಿರುವಾತ. ಬೆಳಗ್ಗೆ ಎದ್ದಾಗಿನಿಂದ ಅವರವರ ಕೆಲಸ ಕಾರ್ಯಕ್ಕೆ ಇಳಿಯುವವರೆಗೂ ಇಂಥಾದ್ದೇ ಘಟಿಸುತ್ತದೆಂಬ ಅರಿವು ಪ್ರತಿಯೊಬ್ಬರಿಗೂ ಇರುತ್ತದೆ. ಅದರ ಬಗ್ಗೆ ಯಾರಿಗೂ ಕುತೂಹಲವಿರೋದಿಲ್ಲ. ಆದರೆ ಹೊಸಾ ಜಾಗ, ಗುರುತಿರದ ಜನರ ಮಧ್ಯೆ ಹೋಗಿ ನಿಂತಾಗ ಪ್ರತೀ ಕ್ಷಣಗಳೂ ಎದೆಗೆ ಸವರಿಕೊಂಡೇ ಚಲಿಸಿದಂತಾಗುತ್ತದಲ್ಲಾ? ಅಂಥಾದ್ದೊಂದು ಸೂಕ್ಷ್ಮವನ್ನಿಟ್ಟು ಕೊಂಡು ಪ್ರಯಾಣದ ಜೊತೆ ಜೊತೆಗೇ ಕಥೆ ಹೇಳಲು ಅರವಿಂದ್ ಮುಂದಾಗಿದ್ದಾರೆ.
ರವಿತೇಜಾ ಮತ್ತು ಚೇತನ್ ಚಂದ್ರ ಈ ಚಿತ್ರದ ನಾಯಕರು. ಐಶ್ವರ್ಯಾ ಮತ್ತು ಕೃತಿಕಾ ರವೀಂದ್ರ ಈ ಚಿತ್ರದ ನಾಯಕಿಯರು. ಕಲ್ಯಾಣ್, ಹೃಷಿಕೇಶ್, ಮಹೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ಅರವಿಂದ್ ಕೌಶಿಕ್ ಅವರಿಗೆ ದಶಕಗಳಿಂದಲೂ ಸ್ನೇಹಿತರಾಗಿರುವ ರೋಹಿತ್ ಕಲ್ಯಾಣ್ ಜೊತೆ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಹು ಕಾಲದಿಂದಲೂ ಒಂದೊಳ್ಳೆ ಚಿತ್ರವನ್ನು ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದ ರೋಹಿತ್ ಈ ಕಥೆ ಕೇಳಿದಾಕ್ಷಣವೇ ನಿರ್ಮಾಪಕರಾಗಲು ಒಪ್ಪಿಕೊಂಡಿದ್ದರಂತೆ. ಇನ್ನು ಸದಭಿರುಚಿಯ ಚಿತ್ರ ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದ ಕಲ್ಯಾಣ್ ಅವರನ್ನು ನಿರ್ಮಾಪಕರನ್ನಾಗಿ ಮಾಡಿದ್ದೂ ಕೂಡಾ ಅರವಿಂದ್ ಕೌಶಿಕ್ ಅವರ ಚೆಂದದ ಕಥೆಯೇ. ಇದೊಂದು ಪ್ರಯಾಣದಲ್ಲಿ ನಡೆಯೋ ಕಥೆ. ಆದರೆ ಇದು ಮಾಮೂಲಿ ಪಯಣವಾಗಿರಲಿಕ್ಕಿಲ್ಲ ಎಂಬ ಅಂದಾಜು ನಿರ್ದೇಶಕ ಅರವಿಂದ್ ಕೌಶಿಕ್ ಆಲೋಚನಾ ಕ್ರಮ ಗೊತ್ತಿರುವವರಿಗೆಲ್ಲ ಪಕ್ಕಾ ಆಗಿರುತ್ತದೆ.
ವೈ.ಜಿ.ಆರ್ ಮನು ಛಾಯಾಗ್ರಹಣ, ಸತೀಶ್ ಬಾಬು ಸಂಗೀತ ನಿರ್ದೇಶನ, ಶಿವರಾಜ್ ಮೇಹು ಸಂಕಲನ ಹಾಗು ಮಾಸ್ ಮಾದ, ಅಲ್ಟಿಮೇಟ್ ಶಿವ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಅಮೆಜನ್ ಮತ್ತು ನೆಟ್ ಫ್ಲಿಕ್ಸ್ ಸಂಸ್ಥೆ ಗಳಿಗೂ ಚಿತ್ರವನ್ನು ಕಳುಹಿಸಿಕೊಡಲಾಗಿದ್ದು, ಆ ಮಾಧ್ಯಮದಲ್ಲೂ ನಮ್ಮ ಚಿತ್ರ ವೀಕ್ಷಣೆಗೆ ಅನುಮತಿ ದೊರಕುವ ನಿರೀಕ್ಷೆಯಿದೆ ಎನ್ನುತ್ತಾರೆ ನಿರ್ಮಾಪಕರು..