ಇಬ್ಬರು ಹುಡುಗರು, ಇಬ್ಬರು ಹುಡುಗಿಯರು. ತುಂಬಾನೇ ಒಳ್ಳೇ ಫ್ರೆಂಡ್ಸು. ಒಬ್ಬರನ್ನು ಬಿಟ್ಟು ಒಬ್ಬರು ಇರೋದಿಲ್ಲ. ಒಬ್ಬೊಬ್ಬರದ್ದೂ ಒಂದೊಂದು ಗುಣ-ಸ್ವಭಾವ. ಒಬ್ಬ ಯಾವ ಹಿನ್ನೆಲೆಯೂ ಇಲ್ಲದ ಅನಾಥ. ಮತ್ತೊಬ್ಬ ಶ್ರೀಮಂತ, ಕೋಪಿಷ್ಟ. ಹುಡುಗಿಯರಲ್ಲೊಬ್ಬಳು ಮಹಾನ್ ಹೆದರುಪುಕ್ಲಿ. ಭಯ ಅನ್ನೋದು ಈಕೆಯನ್ನು ಭ್ರಮೆಯ ರೂಪದಲ್ಲಿ ಕಾಡುತ್ತಿರುತ್ತೆ. ಯಾರಿಗೂ ಕಾಣದ ದೆವ್ವಗಳು ಈಕೆಯ ಕಣ್ಣ ಮುಂದೆ ಬಂದು ನಿಲ್ಲಬಲ್ಲವು.
ಈ ನಾಲ್ಕೂ ಜನ ಅದೊಮ್ಮೆ ಪ್ರವಾಸಕ್ಕೆಂದು ಹೊರಟಿರುತ್ತಾರೆ. ಕಾರು ದಡಕ್ಕಂತಾ ನಿಲ್ಲುತ್ತದೆ. ಅದು ದಟ್ಟ ಕಾಡಿನ ನಟ್ಟನಡುವಿನ ರಸ್ತೆ. ಅಲ್ಲೊಂದು ಮೈಲಿಗಲ್ಲು. ಅದರ ಮೇಲೆ ಬರೆದ ಹೆಸರು ಶಾರ್ದೂಲ!
ನಿಂತ ಕಾರಿನ ಜೊತೆ ಕತೆ ಪ್ರಯಾಣ ಶುರು ಮಾಡುತ್ತದೆ. ನರಭಕ್ಷಕನಂಥಾ ಮನುಷ್ಯ ಎದುರಾಗುತ್ತಾನೆ. ಭ್ರಮೆ ಮತ್ತು ವಾಸ್ತವದ ಜೊತೆ ಸಂಘರ್ಷವಾಗುತ್ತಲೇ ಸಾಗುತ್ತದೆ. ಅಲ್ಲಲ್ಲಿ ಕಿರ್ರಂತಾ ಗರಗಸದ ಶಬ್ಧ. ಕತೆ ಕೂಡಾ ಅದೇ ಗರಗಸದಂತೆ ಹಿಂದಕ್ಕೂ ಮುಂದಕ್ಕೂ ಚಲಿಸುತ್ತದೆ. ಕತ್ತರಿಸಿಬಿದ್ದ ಕೈ, ತೊಪತೊಪ ಬೀಳುವ ಮಾಂಸದ ಮುದ್ದೆ, ತಲೆಬುರುಡೆ, ಸ್ಕೆಲಿಟನ್ನುಗಳೆಲ್ಲಾ ಅತಿರೇಕ ಅನಿಸಿದರೂ ನೋಡುಗರನ್ನು ಭಯ ಪಡಿಸಲು ಅದೊಂದೇ ದಾರಿ.
ಗೊಂದಲ, ಭ್ರಮೆ, ಭಯ, ದ್ವಂದ್ವಗಳ ಜೊತೆಗೆ ನಿರ್ದೇಶಕ ಅರವಿಂದ್ ಕೌಶಿಕ್ ತೀರಾ ಮುಖ್ಯವಾದ ವಿಚಾರಗಳನ್ನೂ ನಾಜೂಕಾಗಿ ತೆರೆದಿಟ್ಟಿದ್ದಾರೆ. ʻʻಸ್ನೇಹ, ವಿಶ್ವಾಸಗಳೆಲ್ಲಾ ಮೇಲ್ನೋಟದ ವಿಚಾರವಾದರೂ ಬಹುತೇಕರ ಆಂತರ್ಯದಲ್ಲಿ ಹಣ ಸಂಪಾದನೆಯೊಂದೇ ಪರಮ ಗುರಿಯಾಗಿರುತ್ತದೆ. ಒಳಗೊಳಗೇ ಸ್ಕೀಮು ರೂಪಿಸಿ, ಕಾಸಿಗಾಗಿ ಯಾವುದೇ ಘಳಿಗೆಯಲ್ಲೂ ಕತ್ತು ಕುಯ್ಯುವ ಜನ ನಮ್ಮ ಸುತ್ತ ಇರಬಹುದು. ಅವರು ತಮ್ಮ ಮುಖವಾಡಕ್ಕಿಟ್ಟ ಹೆಸರು ಫ್ರೆಂಡ್ಶಿಪ್ಪು. ದೆವ್ವಗಳು ಇರೋದು ಮನುಷ್ಯನ ಮನಸ್ಸಿನೊಳಗೆ. ಭಯ ಅನ್ನೋದೇ ನಿಜವಾದ ದೆವ್ವʼʼ ಎನ್ನುವ ಸಿದ್ದಾಂತವನ್ನು ಹೇಳುತ್ತಲೇ ಮತ್ತೊಂದು ಕೋನವನ್ನೂ ಅನಾವರಣಗೊಳಿಸುತ್ತಾರೆ. ಶಾರ್ದೂಲ ಚಿತ್ರದ ಉಪಶೀರ್ಷಿಕೆಯಲ್ಲಿ ಕೇಳಿರುವ ʻದೆವ್ವ ಇರಬಹುದಾ?ʼ ಎನ್ನುವ ಒಂದು ಪ್ರಶ್ನೆಗೆ ಸಿನಿಮಾದ ಅಂತ್ಯದಲ್ಲಿ ಬಗೆಬಗೆಯ ಉತ್ತರ ದೊರೆಯುತ್ತದೆ.
ರವಿತೇಜ ಬ್ರಿಲಿಯಂಟಾಗಿ ನಟಿಸಿದ್ದಾರೆ. ಕೃತಿಕಾ ರವೀಂದ್ರ ನಟನೆಯನ್ನು ಮೀರಿ ಪಾತ್ರ ಪೋಷಣೆ ಮಾಡಿದ್ದಾರೆ. ಕೃತಿಕಾ ಮುಖದ ಮೇಲಿನ ಭಯ ನೋಡುಗರನ್ನೂ ಆತಂಕಕ್ಕೆ ದೂಡುತ್ತದೆ. ಚೇತನ್ ಚಂದ್ರನ ಕೋಪ, ಮಹೇಶನ ಕ್ರೋಧ ತೆರೆಮೇಲೆ ಪರಿಣಾಮಕಾರಿಯಾಗಿ ಪ್ರತಿಫಲಿಸಿದೆ. ಸಿನಿಮಾ ಪೂರ್ತಿ ಥೇಟು ದೆವ್ವದಂತೇ ಸುಳಿದಾಡುವ ನವೀನ್ ಕುಮಾರ್ ಕೊನೆಯಲ್ಲಿ ಬಂದರೂ ಸಂಪೂರ್ಣ ಆವರಿಸಿಕೊಳ್ಳುತ್ತಾರೆ. ಅವರ ಬಣ್ಣ, ಕಣ್ಣು, ನಟನೆ ಎಲ್ಲವೂ ಗಮನ ಸೆಳೆಯುತ್ತವೆ. ಇನ್ನೊಂಚೂರು ಎಫರ್ಟ್ ಹಾಕಿದರೂ ನವೀನ್ ಇಂಡಿಯಾ ಲೆವೆಲ್ಲಿನಲ್ಲಿ ಬೆಳೆದು ನಿಲ್ಲಬಹುದಾದ ಖಳನಟ ಎನಿಸುತ್ತಾರೆ.
ನಿರ್ದೇಶಕ ಅರವಿಂದ್ ಮೊದಲಿನಿಂದಲೂ ಒಂದೇ ಜಾನರಿಗೆ ಜೋತುಬಿದ್ದವರಲ್ಲ. ಎಲ್ಲರೂ ಚೌಕಟ್ಟಿನೊಳಗೆ ಸಿನಿಮಾ ಮಾಡುತ್ತಿದ್ದ ಸಮಯದಲ್ಲೇ ತುಘ್ಲಕ್, ನಮ್ ಏರಿಯಾಲ್ ಒಂದಿನ ಥರದ ಚಿತ್ರಗಳನ್ನು ಕೊಟ್ಟವರು. ಮತ್ತೆ ʻಹುಲಿರಾಯʼದಂಥ ಕ್ಲಾಸಿಕ್ ಸೃಷ್ಟಿಸಿದವರು. ಎಲ್ಲವನ್ನೂ ಮುಟ್ಟಬಲ್ಲೆ ಎನ್ನುವ ಕಾನ್ಫಿಡೆನ್ಸಿನಿಂದಲೋ ಏನೋ ಈ ಸಲ ಸಸ್ಪೆನ್ಸ್-ಥ್ರಿಲ್ಲರ್, ಹಾರರ್ ಎಲ್ಲವೂ ಬೆರೆತಿರುವ ಜಾನರಿಗೆ ಕೈಯಿಟ್ಟಿದ್ದಾರೆ. ಅರವಿಂದ್ ಕೌಶಿಕ್ ಕೆರಿಯರಿನಲ್ಲಿ ಶಾರ್ದೂಲ ಮಹತ್ವದ ಸಿನಿಮಾ ಅನ್ನಿಸಿಕೊಳ್ಳದೇ ಹೋಗಬಹುದು. ಆದರೆ ಒಂದು ಸಲ ನೋಡಲಂತೂ ಅಡ್ಡಿಯಿಲ್ಲ.
No Comment! Be the first one.