ಬಿಗ್‍ಬಾಸ್ ಅನ್ನೋ ನಾಲಾಯಕ್ಕು ಕಾರ್ಯಕ್ರಮ ಇನ್ನೂ ಎಂತೆಂಥಾ ಪ್ರಜೆಗಳನ್ನು ಹುಟ್ಟಿಸಿ ಬೀದಿಗೆ ಬಿಡುತ್ತದೋ ಗೊತ್ತಿಲ್ಲ. ಕಳೆದ ಸೀಜನ್ನಿನಲ್ಲಿ ಗೆದ್ದನಲ್ಲಾ ಶಶಿ ಅನ್ನೋ ಹುಡುಗ? ಆತನ ಚೇಷ್ಟೆಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ.

ಶಶಿಯನ್ನು ಮಾಡ್ರನ್ ರೈತ ಅನ್ನೋ ಹೆಸರಿನಲ್ಲಿ ಬಿಗ್ ಬಾಸ್ ಮನೆಯೊಳಕ್ಕೆ ಬಿಟ್ಟಿದ್ದರು. ಅಗ್ರಿಕಲ್ಚರಿನಲ್ಲಿ ಎಂಎಸ್ಸಿ ಓದಿದ್ದಾನೆ ಅನ್ನೋದು ಬಿಟ್ಟರೆ ಈತ ಕಿತ್ತು ನಾಟಿ ಹಾಕಿರೋದು ಏನಂದರೆ ಏನೂ ಇಲ್ಲ. ಅಸಲಿಗೆ ಈತ ಸಿನಿಮಾ ನಟ ಅನ್ನೋದನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮುಚ್ಚಿಟ್ಟಿದ್ದರು. ಆ ಶೋಗೆ ಹೋಗೋ ಮುಂಚೆನೇ ಶಶಿ `ಶ್ರೀನಿವಾಸ ಕಲ್ಯಾಣ’ ಎನ್ನುವ ಸಿನಿಮಾದಲ್ಲಿ ನಟಿಸಿದ್ದ. ಒಳಗೆ ಕವಿತಾ ಗೌಡಳ ಜೊತೆ ಲವ್ವಲ್ಲಿ ಬಿದ್ದಂತಾ ಎಪಿಸೋಡುಗಳು ಪ್ರಸಾರವಾದವು. ಶೋನಲ್ಲಿ ಗೆದ್ದು ಹೊರಬಂದಮೇಲೂ ಇವರಿಬ್ಬರ ಪ್ರೇಮಸಲ್ಲಾಪಗಳು ಮುಂದುವರೆದಿವೆ ಎನ್ನುವಂತೆ ಸುದ್ದಿಗಳಬ್ಬಿದವು.

ಯಾವಾಗ ಕವಿತಾ ಅನ್ನೋ ಹುಡುಗಿ ಬಿಗ್ ಬಾಸ್ ಶೋ ಒಳಗೆ ನಡೆದ ಒಂದು ಟಾಸ್ಕ್‍ಗೆ ಸಂಬಂಧಿಸಿದಂತೆ ಹೊರಬಂದು ಅರವತ್ತು ದಿನ ಕಳೆದ ಮೇಲೆ ಆ್ಯಡಿಯ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಕೊಟ್ಟು ಕ್ಯಾತೆ ತೆಗೆದಳೋ ಅಲ್ಲಿಗೆ ಶಶಿ ಮತ್ತು ಕವಿತಾ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತು ಎನ್ನುವವರಿದ್ದಾರೆ. ಯಾಕೆಂದರೆ ಈಕೆ ಆ್ಯಂಡಿಯ ಮೇಲೆ ಮುರಕೊಂಡು ಬಿದ್ದಾಗ ಶಶಿ ಈಕೆಯ ಪರ ನಿಂತು ಮಾತಾಡಲಿಲ್ಲ ಅನ್ನೋ ಕಾರಣಕ್ಕೆ ಕವಿತಾ ಮುನಿಸಿಕೊಂಡಳಂತೆ. ಹಾಳಾಗಲಿ ಬಿಡಿ. ಇವರಿಬ್ಬರೂ ಆಡಬಾರದ್ದು ಆಡಿ, ಮಾಡಬಾರದ್ದನ್ನೆಲ್ಲಾ ಮಾಡಿಕೊಂಡು ತಿರುಗಿದರೆ ಯಾವ ದೇಶಕ್ಕೂ ನಷ್ಟವಿಲ್ಲ.

ಬಹುಶಃ ಬಿಗ್ ಬಾಸ್ ಕಾಯ್ರಕ್ರಮದ ವಿನ್ನರ್ ಅನ್ನಿಸಿಕೊಂಡು ಪ್ರಚಾರವೇ ಇಲ್ಲದೆ ಸೊರಗಿದ ಏಕೈಕ  ಕಂಟೆಸ್ಟೆಂಟ್ ಅಂದರೆ ಇವನೇ ಇರಬೇಕು. ಯಾಕೆಂದರೆ, ಕಸ್ತೂರಿ ಚಾನೆಲ್ಲಿನಲ್ಲಿ ಸಾಧಾರಣವಾದ್ದೊಂದು ಸೀರಿಯಲ್ಲಿಗೆ ಬರುವ ಟಿಆರ್‍ಪಿ ಕೂಡಾ ಈ ಬಿಗ್‍ಬಾಸ್ ಪ್ರೋಗ್ರಾಮಿಗೆ ದಕ್ಕಿರಲಿಲ್ಲ. ಸುದೀಪ್ ಇದ್ದಾರೆ ಅನ್ನೋ ಕಾರಣಕ್ಕೆ ಎಲ್ಲೋ ಕೆಲವರು ಈ ಶೋ ನೋಡಿದರೇ ವಿನಃ ಆರಂಭದ ಎಪಿಸೋಡುಗಳಲ್ಲಿದ್ದ ಕ್ರೇಜಾಗಲಿ, ಜನಪ್ರಿಯತೆಯಾಗಲಿ ಆರನೇ ಸೀಜನ್ನಿನ ಹೊತ್ತಿಗೆ ಅಕ್ಷರಶಃ ಮಣ್ಣುಪಾಲಾಗಿತ್ತು|

ಹೀಗಿರುವಾಗ ಶಶಿಯನ್ನು ಹೊರಜಗತ್ತಿನಲ್ಲಿ ಜನ ಗುರುತಿಸದಂತಾದರು. ಇದಕ್ಕೂ ಹಿಂದೆ ಗೆದ್ದವರೆಲ್ಲಾ ಕಡೇ ಪಕ್ಷ ಒಂದೆರಡು ವರ್ಷಗಳಾದರೂ ವರ್ಚಸ್ಸು ಉಳಿಸಿಕೊಂಡು, ಸೆಲೆಬ್ರೆಟಿಗಳೆನಿಸಿಕೊಂಡವರು. ಆದರೆ ಈ ಮಾಡ್ರನ್ ಪ್ಯಾದೆ ಶಶಿಯನ್ನು ಜನ ಮೂಸಿಯೂ ನೋಡಲಿಲ್ಲ. ಹೀಗಿರುವಾಗ ಏನಾದರೂ ಮಾಡಿ ಒಂದಿಷ್ಟು ಜನಪ್ರಿಯತೆ ಪಡೆಯಬೇಕೆನ್ನುವ ಹಪಾಹಪಿಗೆ ಬಿದ್ದ ಶಶಿ “ನಾನು ಜೆ.ಡಿ.ಎಎಸ್. ಪಕ್ಷದ ಬೆಂಗಳೂರು ಉತ್ತರ ಕ್ಷೇತ್ರದ ಎಂಪಿ ಕ್ಯಾಂಡೇಟು” ಅಂತಾ ಸುದ್ದಿ ಹಬ್ಬಿಸಿದ. ಬರಗೆಟ್ಟು ಕುಂತಿದ್ದವರು ಅದನ್ನೇ ದೊಡ್ಡ ನ್ಯೂಸು ಮಾಡಿದರು. ಆದರೆ ಅಲ್ಲಿ ನಡೆದಿದ್ದೇ ಬೇರೆ. ಅಲ್ಲಿಗೆ ಶಶಿ ಹಬ್ಬಿಸಿಕೊಂಡ ಗ್ಯಾಸ್ ಬಲೂನು ಠುಸ್ ಅಂದಿತ್ತು.

ಎಣ್ಣೆ ಏಟಲ್ಲಿ ಯಡವಟ್ಟು ಮಾಡಿಕೊಂಡ!

ತೀರಾ ಇತ್ತೀಚೆಗೆ ಬಿಗ್‍ಬಾಸ್‍ನಲ್ಲಿ ಸ್ಪರ್ಧಿಸಿದ್ದ ನಯನಾಳ ಮನೆಯಲ್ಲೊಂದು ಎಣ್ಣೆ ಪಾರ್ಟಿ ಅರೇಂಜಾಗಿತ್ತಂತೆ. ಅಲ್ಲಿ ಜೀವಿತಾ, ರಕ್ಷಿತಾ, ನವೀನ್ ಸಜ್ಜು ಸೇರಿದಂತೆ ಸಾಕಷ್ಟು ಜನ ಸೇರಿದ್ದರಂತೆ. ಈ ಹೊತ್ತಿನಲ್ಲಿ ಕುಡಿದು ಚಿತ್ತಾಗಿದ್ದ ಶಶಿ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಒಬ್ಬರನ್ನು ತೀರಾ ಕೆಳಮಟ್ಟದ ಪದ ಉಪಯೋಗಿಸಿ ಮಾತಾಡಿಬಿಟ್ಟಿದ್ದಾನೆ. ಅದು ಹೇಗೋ ಅಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದವರ ಮೊಬೈಲಿನಲ್ಲಿ ರೆಕಾರ್ಡೂ ಆಗಿ ಹೋಗಿದೆ. ವಿಚಾರ ಅಷ್ಟಕ್ಕೇ ನಿಂತಿಲ್ಲ. ಶಶಿ ಯಾರ ಬಗ್ಗೆ ಮಾತಾಡಿದ್ದನೋ ಅವರ ಮೊಬೈಲಿಗೆ ಅಲ್ಲಿ ಕ್ಯಾಪ್ಚರ್ ಆದ ವಿಡಿಯೋ ನಿಯತ್ತಾಗಿ ರವಾನೆಯಾಗಿದೆ. (ಶಶಿ ಅನ್ನೋ ಹುಡುಗ  ಇಂಥ ಹೀರೋ ಬಗ್ಗೆ ಮಾತಾಡಿದ ಅಂತಾ ಅವರ ಹೆಸರನ್ನೂ ನಮೂದಿಸಿಬಿಡಬಹುದು. ಆದರೆ ಅದನ್ನು ಬಹಿರಂಗಪಡಿಸೋದು ಕೂಡಾ ಆ ನಟನ ಹೆಸರಿಗೆ ಅಪಚಾರ ಮಾಡಿದಂತೆ ಎನ್ನುವ ಉದ್ದೇಶ ನಮ್ಮದು. ಈ ಕಾರಣದಿಂದ ಹೆಸರನ್ನು ಜಾಹೀರು ಮಾಡುತ್ತಿಲ್ಲ. ಓದುಗರ ಗಮನಕ್ಕಿರಲಿ..)

ಶಶಿಯಂತಾ ಹೀನ ನಾಲಿಗೆಯ ಮನುಷ್ಯನಿಗೆ ದೊಡ್ಡ ನಟನೊಬ್ಬನ ಬಗ್ಗೆ ತುಚ್ಛವಾಗಿ ಮಾತಾಡೋದು ಸಲೀಸಿರಬಹುದು. ಆದರೆ ಒಬ್ಬ ವ್ಯಕ್ತಿ ಸೂಪರ್ ಸ್ಟಾರ್ ಅನ್ನಿಸಿಕೊಳ್ಳೋದು ಸುಲಭದ ಮಾತಲ್ಲ. ನಟನೊಬ್ಬ ಕೋಟ್ಯಂತರ ಜನ ಅಭಿಮಾನಿಗಳನ್ನು ಹೊಂದೋದರ ಹಿಂದೆ ಅವರು ಪಟ್ಟ ಕಡುಗಷ್ಟದ ಇತಿಹಾಸವಿರುತ್ತದೆ. ಪಡಬಾರದ ಪಾಡು ಪಟ್ಟು ತಮ್ಮ ಪ್ರತಿಭೆಯಿಂದಷ್ಟೇ ಮೇಲೆದ್ದು ನಿಂತಿರುತ್ತಾರೆ. ಆದರೆ ಕೆಲಸಕ್ಕೆ ಬಾರದವರು, ಶಶಿಯಂತಾ ತುಕಾಲಿಗಳು ಅರೆಕ್ಷಣ ಕೂಡಾ ಯೋಚಿಸದೆ ಬಳಸಬಾರದ ಪದ ಬಳಸಿರುತ್ತಾರೆ.

ಹೀಗೆ… ಶಶಿ ಮಾತಾಡಿದ್ದು, ಅದನ್ನು ಅಲ್ಲಿದ್ದವರಲ್ಲೇ ಯಾರೋ `ಕೈಂಡ್ಲೀ ವಾಚ್ ದಿಸ್ ವಿಡಿಯೋ’ ಅನ್ನೋ ಮೆಸೇಜಿನೊಂದಿಗೆ ತಲುಪಿಸಿದ್ದು ಎಲ್ಲವೂ ಆಗಿತ್ತಲ್ಲಾ? ಬೇರೆ ಯಾರೇ ಆಗಿದ್ದರೆ ಶಶಿಯನ್ನು ತಾವಿದ್ದಲ್ಲಿಗೇ ಕರೆಸಿಕೊಂಡು ಕೆರ ತೆಗೆದುಕೊಂಡು ಜ್ವರ ಬರೋತನಕ ಬಾರಿಸುತ್ತಿದ್ದರೋ ಏನೋ? ಆದರೆ ಆ ನಟ ಹಾಗೆ ಮಾಡಲಿಲ್ಲ. ಸೀದಾ ಶಶಿಯ ಫೋನಿಗೆ ಮೆಸೇಜು ಮಾಡಿ ‘ಐ ಯಾಮ್ —- ಹಿಯರ್’ ಎಂದು ಶಶಿ ಬಳಸಿದ್ದ ಪದವನ್ನು ಹಾಕಿ `ಥ್ಯಾಂಕ್ಯೂ’ ಎಂದು ಸುಮ್ಮನಾಗಿದ್ದಾರೆ. ಆ ಮೆಸೇಜು ನೋಡುತ್ತಿದ್ದಂತೇ ಶಶಿಯ ಬುಡದಲ್ಲಿ ಬುಳಬುಳ ಅಂಥಾ ಭೇದಿ ಕಿತ್ತುಕೊಂಡಿದೆ. ತಕ್ಷಣ ಆ ಹೀರೋಗೆ ಕರೆ ಮಾಡಿ `ಹಾಗಲ್ಲ ಹೀಗಲ್ಲ’ ಅಂತಾ ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದ್ದಾನೆ. ಇವನ ಯಾವ ಸಬೂಬಿಗೂ ಸೊಪ್ಪು ಹಾಕದ ಹೀರೋ “ನಾನು ಇವತ್ತು ತುಂಬಾ ಒಳ್ಳೇ ಮೂಡಲ್ಲಿದೀನಿ… ನಿನ್ನನ್ನ ಕ್ಷಮಿಸಿದ್ದೀನಿ. ಬದುಕ್ಕೋ ಹೋಗು” ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ.

ಅದ್ಯಾವುದೋ ಬಿಗ್‍ಬಾಸು ಶೋ, ಅದರ ಗೆಲುವು, ಒಬ್ಬ ಸಾಮಾನ್ಯ ಹುಡುಗನ ತಲೆ ತಿರುಗಿಸುತ್ತದೆ. ದೊಡ್ಡ ಹೀರೋ ಬಗ್ಗೆ ಕೆಟ್ಟದಾಗಿ ಮಾತಾಡೋ ಧೈರ್ಯ ಮೂಡಿಸುತ್ತದೆ ಎಂದರೆ, ಇಂಥಾ ಕಾರ್ಯಕ್ರಮವನ್ನು ಕನ್ನಡದ  ಸ್ಟಾರ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಮುಂದೆ ನಿಂತು ನಡೆಸಿಕೊಡಬೇಕಾ? ಘಾತುಕರು ಹುಟ್ಟಿಕೊಳ್ಳಲು ಕಾರಣರಾಗಬೇಕಾ?

ಇವೆಲ್ಲ ಏನೇ ಆಗಲಿ, ಶಶಿ ಮತ್ತು ಅವನಂತಾಡುವ ಸೋಕಾಲ್ಡ್ ಸೆಲೆಬ್ರಿಟಿಗಳು ಇನ್ನಾದರೂ ತಮ್ಮ ಇತಿ ಮಿತಿಗಳನ್ನು ಅರಿತುಕೊಂಡು ಬದುಕಲಿ. ಯಾರೊಬ್ಬರ ಬಗ್ಗೆ ಮಾತಾಡೋ ಮುಂಚೆ ಒಂದಿಷ್ಟು ಯೋಚಿಸಿ ನಾಲಿಗೆಗೆ ಕೆಲಸ ಕೊಡಲಿ…

CG ARUN

ರಾಂಧವ: ಇದು ಕರ್ನಾಟಕದ ವೈಭವವನ್ನು ಸಾರುವ ವಿಡಿಯೋ!

Previous article

ಶಂಕರ್ ಅಶ್ವಥ್ ಉಬರ್ ಓಡಿಸೋದು ನಿಲ್ಲಿಸೋದಿಲ್ಲವಂತೆ!

Next article

You may also like

Comments

Leave a reply

Your email address will not be published. Required fields are marked *