ಇದು ಒಂದು ಕಾಲಕ್ಕೆ ಟಿವಿ ಧಾರಾವಾಹಿಗಳಲ್ಲಿ ಮಿಂಚಿ ಮನೆ ಮಾತಾಗಿ ಆ ಬಳಿಕ ಡಬ್ಬಿಂಗ್ ಕಲಾವಿದೆಯಾಗಿ ಪ್ರಸಿದ್ಧಿ ಪಡೆದ ಹುಡುಗಿಯ ಕಥೆ. ಹೆಚ್ಚಿನ ಜನ ಅದೆಷ್ಟೋ ಸಿನಿಮಾಗಳಲ್ಲಿ ನಾಯಕಿಯರ ಧ್ವನಿಗೇ ಮಾರು ಹೋಗೋದಿದೆ. ಅಸಲಿಗೆ ಆ ಪಾತ್ರಕ್ಕೆ ತೆರೆಯ ಹಿಂದೆ ಯಾರೋ ಕಲಾವಿದೆ ಧ್ವನಿಯಾಗಿರುತ್ತಾರೆ. ಇತ್ತೀಚೆಗೆ ತೆರೆ ಕಂಡಿದ್ದ ಒಂದಷ್ಟು ಚಿತ್ರಗಳ ಪಾತ್ರಗಳೂ ಅಂಥಾ ಭಾವನೆ ಹುಟ್ಟಿಸಿದ್ದರೆ ಅದರ ಹಿಂದಿರೋದು ಶಿಲ್ಪಾ ಭಾಗವತರ್ ಅವರ ಅದ್ಭುತ ಕಠಸಿರಿಯಾಗಿದ್ದರೂ ಅಚ್ಚರಿಯೇನಿಲ್ಲ!
ಶಿಲ್ಪಾ ಭಾಗವತರ್ ಅಂದರೆ ತಕ್ಷಣಕ್ಕೆ ಗುರುತು ಸಿಗೋದು ಕಷ್ಟ. ಆದರೆ ಇವರು ನಟಿಸಿರೋ ಸೀರಿಯಲ್ಲುಗಳನ್ನು ಮಾತ್ರ ಕಿರುತೆರೆ ಪ್ರೇಕ್ಷಕರು ಮರೆಯಲು ಸಾಧ್ಯವೇ ಇಲ್ಲ. ಮೃಗ, ಮುತ್ತಿನ ತೋರಣ, ಮಾಂಗಲ್ಯ, ಕುಂಕುಮ ಭಗ್ಯ, ಲಕ್ಷ್ಮಿ ಸೇರಿದಂತೆ ಎಪ್ಪತ್ತಕ್ಕೂ ಹೆಚ್ಚು ಧಾರಾವಾಹಿಗಳ ಥರ ಥರದ ಪಾತ್ರಗಳಲ್ಲಿ ಶಿಲ್ಪಾ ನಟಿಸಿದ್ದಾರೆ. ಇಂಥಾ ಧಾರಾವಾಹಿಗಳ ಪಾತ್ರಗಳ ಮೂಲಕವೇ ಪ್ರೇಕ್ಷಕರ ನೆನಪಲ್ಲುಳಿದಿರೋ ಇವರು ಲಕ್ಷ್ಮಿ ಎಂಬ ಧಾರಾವಾಹಿಯ ಮೂಲಕ ಸ್ಟಾರ್ ನಟಿಯಾಗಿ ಹೊರ ಹೊಮ್ಮಿದ್ದರು. ಹೀಗೆ ನಾನಾ ಧಾರಾವಾಹಿಗಳ ಅದೆಷ್ಟೋ ಪಾತ್ರಗಳ ಮೂಲಕವೇ ಕಿರುತೆರೆ ಪ್ರೇಕ್ಷಕರ ಮನದಂಗಳ ತಲುಪಿಕೊಂಡಿದ್ದ ಇವರ ಒರಿಜಿನಲ್ ಹೆಸರು ಶಿಲ್ಪಾ ಭಾಗವತರ್ ಅಂತ ಹೆಚ್ಚಿನವರಿಗೆ ಗೊತ್ತಿಲ್ಲವೇನೋ…
ಹೀಗೆ ಧಾರಾವಾಹಿಗಳ ನಟನೆಯ ಮೂಲಕವೇ ಚಿರಪರಿಚಿತರಾಗಿ ನಂತರ ಏಕಾಏಕಿ ಅಲ್ಲಿಂದ ಮರೆಯಾದ ಶಿಲ್ಪಾ ಈಗೊಂದಷ್ಟು ವರ್ಷಗಳಿಂದ ಅಗೋಚರ ಧ್ವನಿಯಾಗಿ ಪ್ರೇಕ್ಷಕರನ್ನ ತಲುಪುತ್ತಿದ್ದಾರೆ. ಹೀಗೆ ಡಬ್ಬಿಂಗ್ ಕಲಾವಿದರೂ ಸೇರಿದಂತೆ ತೆರೆಯ ಹಿಂದೆ ಕಾರ್ಯ ನಿರ್ವಹಿಸುವ ಅದೆಷ್ಟೋ ಮಂದಿ ಅನಾಮಿಕರಾಗಿಯೇ ಉಳಿದು ಹೋಗುತ್ತಾರೆ. ಶಿಲ್ಪಾ ಭಾಗವತರ್ ತೆರೆಯ ಮುಂದೆಯೇ ಪ್ರಸಿದ್ಧಿ ಪಡೆದವರು. ಆದರೆ ಸದಾ ಹೊಸತೇನನ್ನೋ ಹುಡುಕುವ ಸ್ವಭಾವ ಮತ್ತು ಮಾಡೋ ಪ್ರತೀ ಕೆಲಸವನ್ನೂ ಎಂಜಾಯ್ ಮಾಡಬೇಕು ಅನ್ನೋ ಉತ್ಸಾಹ ಹೊಂದಿರೋದರಿಂದ ಅವರೀಗ ತೆರೆ ಹಿಂದೆ ಯಾರದ್ದೋ ಪಾತ್ರಗಳಿಗೆ ಧ್ವನಿಯಾಗುತ್ತಾ ಖುಷಿಯಾಗಿದ್ದಾರೆ. ಅಂದಹಾಗೆ ಶಿಲ್ಪಾ ಇದುವರೆಗೂ ಡಬ್ಬಿಂಗ್ ಮಾಡಿರೋ ಚಿತ್ರಗಳ ಸಂಖ್ಯೆ ಎಂಟುನೂರರ ಗಡಿ ದಾಟಿದೆ!
ಹೀಗೆ ಇದೀಗ ಬಹು ಬೇಡಿಕೆಯ ಡಬ್ಬಿಂಗ್ ಆರ್ಟಿಸ್ಟ್ ಆಗಿ ಹೊರ ಹೊಮ್ಮಿರೋ ಶಿಲ್ಪಾ ಭಾಗವತರ್ ಎಲ್ಲರ ಮೊದಲ ಆಧ್ಯತೆ. ಯಾಕೆಂದರೆ, ಹೀರೋಯಿನ್ ಸೇರಿದಂತೆ ನಾನಾ ಪಾತ್ರಗಳಿಗೂ ಧ್ವನಿಯಾಗಬಲ್ಲ ಸಾಮರ್ಥ್ಯ ಅವರಿಗಿದೆ. ಅಷ್ಟಕ್ಕೂ ಶಿಲ್ಪಾ ಧಾರಾವಾಹಿ ನಟಿಯಾಗಿ ಎಂಟ್ರಿ ಕೊಟ್ಟು ಡಬ್ಬಿಂಗ್ ಕಲಾವಿದೆಯಾಗಿ ರೂಪುಗೊಂಡಿದ್ದರ ಹಿಂದೆ ಅಚ್ಚರಿದಾಯಕ ಕಥಾನಕವಿದೆ. ಇವರು ಮೂಲತಃ ಬೆಂಗಳೂರು ಹುಡುಗಿ. ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಬಿ ಎ ಸೈಕಾಲಜಿ ಪದವಿ ಪಡೆದ ಇರದ್ದು ಮಡಿವಂತಿಕೆ ಹೊಂದಿರೋ ಸಂಪ್ರದಾಯಸ್ಥ ಕುಟುಂಬ. ಧ್ವನಿ ಚೆನ್ನಾಗಿದೆ, ಕನ್ನಡ ಸ್ಪಷ್ಟವಾಗಿದೆ ಎಂಬ ಕಾರಣದಿಂದ ಶಿಲ್ಪಾ ಆರಂಭದಲ್ಲಿ ನಿರೂಪಣೆ ಮಾಡಲಾರಂಭಿಸಿದ್ದರು. ನಟಿಯಾಗೋ ಆಸೆ ಇದ್ದರೂ ಅದನ್ನು ಮನೆಯವರ ಮುಂದೆ ಹೇಳೋ ಧೈರ್ಯ ಅವರಲ್ಲಿರಲಿಲ್ಲ.
ಆದರೆ ಕಲೆಯೆಂಬುದು ಇಂಥಾ ಕಟ್ಟುಪಾಡುಗಳಲ್ಲಿ ಬಂಧಿಯಾಗಲು ಬಿಡುವಂಥಾದ್ದಲ್ಲ. ನಟಿಯಾಗಬೇಕೆಂಬ ಆಸೆಯನ್ನು ಹತ್ತಿಕ್ಕಿಕೊಳ್ಳಲಾಗದಿದ್ದಾಗ ಶಿಲ್ಪಾ ಅದಕ್ಕೆ ಮನೆಯವರನ್ನು ಒಪ್ಪಿಸಲು ಬಣ್ಣ ಹಚ್ಚದೆಯೇ ಒಂದು ನಾಟಕ ಪ್ರದರ್ಶನ ನೀಡಿದ್ದರು. ಆಡಿಷನ್ಗೆ ಹೋಗಿ ಬರ್ತೀನಿ. ನಾನೇನು ಸೆಲೆಕ್ಟ್ ಆಗಿ ಬಡ್ತೀನಾ. ಅಂತ ಅಪ್ಪನ ಮುಂದೆ ಮುಗ್ಧೆಯಂತೆ ಮಾತಾಡಿ ಆಡಿಷನ್ ಗೆ ಹೋಗಿದ್ದ ಶಿಲ್ಪಾ ಸೆಲೆಕ್ಟ್ ಆಗ ಸುದ್ದಿಯೊಂದಿಗೇ ಮನೆಗೆ ಮರಳಿದ್ದರಂತೆ. ಮನೆಯವರ ತಣ್ಣಗಿನ ವಿರೋಧದ ನಡುವೆಯೂ ಅವರು ಮೊದಲು ನಟಿಸಿದ್ದು ಟಿ ಎಸ್ ನಾಗಾಭರಣರ ಮಾಹಾಮಾಯಿ ಧಾರಾವಾಹಿಯಲ್ಲಿ. ಅದರಲ್ಲಿ ಸಿಕ್ಕ ಹತ್ತು ದಿನದ ಪಾತ್ರದಲ್ಲಿಯೇ ಚೆಂದಗೆ ನಟಿಸಿದ್ದ ಶಿಲ್ಪಾ ಮತ್ತೊಂದು ಪಾತ್ರದಲ್ಲಿಯೂ ಮುಂದುವರೆಯೋ ಮೂಲಕ ನಟಿಯಾಗಿ ನೆಲೆ ಕಂಡುಕೊಂಡಿದ್ದರು.
ಅದಾದ ನಂತರದಲ್ಲಿ ಸಾಲುಸಾಲಾಗಿ ಎಪ್ಪತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅವರು ಥರ ಥರದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೀಗೆ ನಟಿಯಾಗಿ ಬ್ಯುಸಿಯಾಗಿರೋವಾಗಲೇ ಬೇರೇನಾದರೂ ಮಾಡಬೇಕೆಂಬ ತುಡಿತ ಉಂಟಾಗಿ ಒಂದೆರಡು ವರ್ಷ ಶಿಲ್ಪಾ ನಟನೆಯಿಂದ ದೂರವೇ ಉಳಿದಿದ್ದರು. ಈ ಅವಧಿಯಲ್ಲವರು ಬ್ಯೂಟಿಶಿಯನ್ ಕೋರ್ಸ್ ಕಲಿತಿದ್ದರಂತೆ. ಈ ಅವಧಿಯಲ್ಲಿ ಅವರೊಳಗಿದ್ದ ಮತ್ತೊಂದು ಪ್ರತಿಭೆ ಅವರ ಅರಿವಿಗೇ ಬಂದಿತ್ತಂತೆ. ಹಿಂದೆ ಧಾರಾವಾಹಿ ಪಾತ್ರಗಳಿಗೆ ತಾವೇ ಡಬ್ ಮಾಡುತ್ತಿದ್ದಾಗ ಅನೇಕರು ಮೆಚ್ಚಿಕೊಳ್ಳುತ್ತಿದ್ದರು. ಈ ಕಾರಣದಿಂದಲೇ ಸಿನಿಮಾಗಳಲ್ಲಿಯೂ ಅವಕಾಶ ಸಿಕ್ಕಿತ್ತಾದರೂ ನಟನೆ ಮತ್ತು ಡಬ್ಬಿಂಗ್ ವೃತ್ತಿಗೆ ಸಮಯ ಹೊಂದಿಸಲು ಸಾಧ್ಯವಿಲ್ಲದೆ ಶಿಲ್ಪಾ ಮುಂದುವರೆದಿರಲಿಲ್ಲ.
ನಟನೆಯಿಂದ ದೂರ ಸರಿದಿದ್ದ ಅವಧಿಯಲ್ಲಿ ಡಬ್ಬಿಂಗ್ ವೃತ್ತಿ ಶುರು ಮಾಡಿದರೆ ಹೇಗೆಂಬ ಆಲೋಚನೆ ಶಿಲ್ಪಾರನ್ನು ಕಾಡಲಾರಂಭಿಸಿತ್ತು. ಅದಕ್ಕಾಗಿ ಅಖಾಡಕ್ಕಿಳಿದಾಗಲೇ ಮೊದಲ ಸಲ ಅವಕಾಶ ಸಿಕ್ಕಿದ್ದು ಸಂತೋಶ್ ರೈ ಪಾತಾಜೆ ನಿರ್ದೇಶನದ ೭ ಓ ಕ್ಲಾಕ್ ಚಿತ್ರದಲ್ಲಿ. ಹೀಗೆ ಅವರು ಡಬ್ಬಿಂಗ್ ವೃತ್ತಿ ಆರಂಭಿಸಿದ್ದು ೨೦೧೩ರಲ್ಲಿ. ಬರೀ ನಾಯಕಿ ಮಾತ್ರವಲ್ಲದೇ ನಾಯಕಿಯ ತಂಗಿ, ತಾಯಿ, ಅಜ್ಜಿ ಪಾತ್ರಗಳಿಗೂ ಧ್ವನಿ ನೀಡುವ ಕಲೆಗಾರಿಕೆ ಶಿಲ್ಪಾರಿಗೆ ಒಲಿದು ಬಿಟ್ಟಿದೆ. ಇದೇ ಹಾದಿಯಲ್ಲಿ ಸಾಗಿ ಬಂದ ಅವರೀಗ ಕನ್ನಡದ ಸ್ಟಾರ್ ಡಬ್ಬಿಂಗ್ ಆರ್ಟಿಸ್ಟ್. ಮಾಲಾಶ್ರೀಯಂಥಾ ನಟಿಯ ಗಂಡುಬೀರಿ ಪಾತ್ರಗಳನ್ನು ನೋಡಿ ಬೆಳೆದುಬಂದ ಈಕೆಯನ್ನು ಜೊತೆಗಿರುವವರು ನೀನು ಗಂಡಿನಂಥಾ ಹೆಣ್ಣು ಅನ್ನುತ್ತಿರುತ್ತಾರಂತೆ. ಯಾವ ಮಾಲಾಶ್ರೀಯನ್ನು ಆರಾಧಿಸುತ್ತಿದ್ದರೋ ಅದೇ ಮಾಲಾಶ್ರೀಗೆ ತಾನೇ ಕಂಠದಾನ ಮಾಡುತ್ತೇನೆಂದು ಯಾವತ್ತೂ ಭಾವಿಸಿರಲಿಲ್ಲವಂತೆ. ಆದರೆ ಸಿನಿಮಾವೊಂದರಿಂದ ಅದು ಸಾಕಾರಗೊಂಡಿದೆ. ಇನ್ನು ನಿರ್ದೇಶಕ ರವಿಶ್ರೀವತ್ಸ ಅವರೊಟ್ಟಿಗೆ ಕೆಲಸ ಮಾಡಿದ ಅನುಭವವನ್ನು ಶಿಲ್ಪಾ ಮರೆಯೋದಿಲ್ಲ. ಯಾಕೆಂದರೆ ಯಾವುದೇ ಕಲಾವಿದರಿಂದ ನಯವಾಗಿ ಕೆಲಸ ತೆಗೆಸಿಕೊಳ್ಳುವ ಛಾತಿ ಶ್ರೀವತ್ಸರದ್ದು ಎನ್ನುವ ಅಭಿಪ್ರಾಯ ಶಿಲ್ಪಾರದ್ದು.
ಯಾವ ಕೆಲಸವನ್ನಾದರೂ ಎಂಜಾಯ್ ಮಾಡಬೇಕು ಅನ್ನೋ ಮನಸ್ಥಿತಿ ಹೊಂದಿರೋ ಅವರ ಮುಂದೆ ಸಾಕಷ್ಟು ಅವಕಾಶಗಳಿವೆ. ಶಿಲ್ಪಾ ಅವರಿಗೆ ವೃತ್ತಿ ವಿಚಾರದಲ್ಲಿ ಒಂದಿಷ್ಟು ಕೊರಗೂ ಇದೆ. ಎಲ್ಲ ವಿಭಾಗಗಳಿಗೂ ಪ್ರಶಸ್ತಿಗಳಿವೆ. ಆದರೆ, ಕಲಾವಿದರ ನಟನೆಗೆ ತಕ್ಕಂತೆ ಭಾವನೆ ಹೊರಹೊಮ್ಮಿಸುವ ಕಂಠದಾನ ಕಲಾವಿದರಿಗೆ ಮಾತ್ರ ಯಾವ ಅವಾರ್ಡೂ ಇಲ್ಲ ಅನ್ನೋದು ಇವರ ಬಹುದೊಡ್ಡ ಬೇಜಾರು. ಇನ್ನು, ಸಿನಿಮಾಗಳಲ್ಲಿ ಬೇರೆಲ್ಲದಕ್ಕೂ ಮನಸಾರೆ ಖರ್ಚು ಮಾಡುವ ಜನ ಕಂಠದಾನ ಕಲಾವಿದರ ಸಂಭಾವನೆಯನ್ನು ಮಾತ್ರ ಹೆಚ್ಚಿಸುತ್ತಿಲ್ಲ. ಕೇಳಿದರೂ ‘ಅಷ್ಟೊಂದು ಕೊಡಬೇಕಾ’ ಅಂತಾ ರಾಗ ಎಳೆಯುತ್ತಾರೆ ಎನ್ನುವ ಶಿಲ್ಪಾ ಕಂಠದಾನ ಕಲಾವಿದೆಯಾಗಿ ಇದ್ದುದರಲ್ಲೇ ನೆಮ್ಮದಿ ಕಂಡುಕೊಂಡಿದ್ದಾರೆ.
No Comment! Be the first one.