ಪಾಕಿಸ್ತಾನ ಬೆಳೆಸಿದ ಪಾಪಿ ಉಗ್ರರ ಅಟ್ಟಹಾಸ ಮಟ್ಟ ಹಾಕಲು ಭಾರತೀಯ ವೀರ ಯೋಧರು ಕಟಿಬದ್ಧರಾಗಿ ನಿಂತಿದ್ದಾರೆ. ಭಾರತದ ತುಂಬೆಲ್ಲ ಈಗ ನಲವತ್ತು ಮಂದಿ ವೀರ ಯೋಧರನ್ನು ಕಳೆದುಕೊಂಡ ಸೂತಕ ಮಾಸಿಲ್ಲ. ಅದು ಎಂದೂ ಮರೆಯುವಂಥಾದ್ದೂ ಅಲ್ಲ. ಹೀಗೆ ಪ್ರತಿಯೊಬ್ಬ ಭಾರತೀಯರಲ್ಲಿಯೂ ಉಗ್ರವಾದದ ವಿರುದ್ಧ ಒಂದು ಆಕ್ರೋಶ ಇದೆಯಲ್ಲಾ? ಅದನ್ನು ಮತ್ತಷ್ಟು ನಿಗಿನಿಗಿಸುಂಥಾ ಹಾಡೊಂದನ್ನು ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಅವರೇ ರಾಗಸಂಯೋಜನೆಯನ್ನೂ ಮಾಡಿರೋ ಈ ಹಾಡೀಗ ಮ್ಯೂಸಿಕ್ ಬಜ಼ಾರ್ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದೆ.
ಯೋಧ ಶಿವ ಎಂಬ ಶೀರ್ಷಿಕೆಯ ಈ ಹಾಡು ಇಂದು ಸಂಜೆ 6 ಘಂಟೆಗೆ ಬಿಡುಗಡೆಯಾಗಿದೆ. ಉಗ್ರರನ್ನು ಗರ್ಭದಲ್ಲೆ ಸುಟ್ಟ್ಟು ಹಾಕಬೇಕು. ಉಗ್ರನನ್ನು ಫ್ರೆಂಡು ಅಂದ್ರೆ ಮಟ್ಟ ಹಾಕಬೇಕು ಎಂಬ ಮೈ ನವಿರೇಳಿಸೋ ಸಾಲುಗಳನ್ನು ಹೊಂದಿರುವ ಈ ಹಾಡನ್ನು ಬರೆದಿರೋದು ಮಾತ್ರವಲ್ಲದೇ ಸಂಗೀತ ಸಂಯೋಜನೆಯನ್ನೂ ಕೂಡಾ ನಾಗೇಂದ್ರ ಪ್ರಸಾದ್ ಅವರೇ ಮಾಡಿದ್ದಾರೆ.
ಮಹಾಶಿವರಾತ್ರಿ ಶುಭಾಶಯಗಳ ಜೊತೆಗೇ ಬಿಡುಗಡೆಯಾಗಿರೋ ಈ ಹಾಡಿನಲ್ಲಿ ಯೋಧರನ್ನು ರುದ್ರತಾಂಡವವಾಡುವಂತೆ ಪ್ರೇರೇಪಿಸುವಂಥಾ ಸಮ್ಮೋಹಕ ಸಾಲುಗಳಿದ್ದಾವೆ. ಸುತ್ತಿಬಳಸಿ ಎತ್ತೆತ್ತಲಿಂದಲೋ ಬಂದು ಉಗ್ರರ ಪರವಾಗಿ ಮಾತಾಡೋ ಮಂದಿಗೆ ಬಾಣವನ್ನೂ ಬಿಡಲಾಗಿದೆ. ಒಟ್ಟಾರೆಯಾಗಿ ಉಗ್ರರ ವಿರುದ್ಧ ಕುದಿಯುತ್ತಲೇ ದೇಶ ಭಕ್ತಿಯನ್ನು ಉದ್ದೀಪಿಸುವ ಈ ಹಾಡನ್ನು ನಾಗೇಂದ್ರ ಪ್ರಸಾದ್ ಅವರು ಹುತಾತ್ಮ ವೀರ ಯೋಧರಿಗೆ ಅರ್ಪಿಸಿದ್ದಾರೆ. ಇದುವರೆಗೂ ನಾನಾ ಥರದ ಹಾಡುಗಳ ಮೂಲಕವೇ ಜನಮಾನಸ ಸೆಳೆದುಕೊಂಡಿರುವವರು ಕವಿರತ್ನ ವಿ ನಾಗೇಂದ್ರ ಪ್ರಸಾದ್. ಅವರ ಹಾಡುಗಳ ಯಾನದಲ್ಲಿ ಈಗ ಬಿಡುಗಡೆಯಾಗಿರೋ ಈ ಹಾಡಂತೂ ಅಜರಾಮರವಾಗಿ ಉಳಿಯುವಂತಿದೆ. ಈ ಮೂಲಕವೇ ನಾಗೇಂದ್ರ ಪ್ರಸಾದ್ ಅವರು ಈ ಹೊತ್ತಿನಲ್ಲಿ ಭಾರತದ ಪ್ರಜೆಯಾಗಿ ಅವರ ಜವಾಬ್ದಾರಿಯನ್ನೂ ಕೂಡಾ ಪರಿಣಾಮಕಾರಿಯಾಗಿಯೇ ನಿರ್ವಹಿಸಿದ್ದಾರೆ. ಯಾಕೆಂದರೆ ದೇಶ ಎಂಬ ವಿಚಾರ ಬಂದಾಗ ಈ ಹಾಡು ಸದಾ ಕಾಲವೂ ದೇಶಪ್ರೇಮವನ್ನ ಪುಟಿದೇಳಿಸುವಂತೆ ಮಾಡುತ್ತಲೇ ಇರುತ್ತದೆ.