ಶಿವ 143 ಎನ್ನುವ ಸಿನಿಮಾವೊಂದು ವಾರಗಳ ಮುಂಚೆಯಷ್ಟೇ ರಿಲೀಸಾಗಿತ್ತು. ಹಿರಿಯನಟ ರಾಮ್ ಕುಮಾರ್ ಪುತ್ರ ಧೀರೇನ್ ನಟನೆಯ ಮೊದಲ ಸಿನಿಮಾ ಇದು. ಡಾ. ರಾಜ್ ಮೊಮ್ಮಗನ ಮೊದಲ ಸಿನಿಮಾ ತೆರೆಗೆ ಬರುತ್ತಿದೆ, ಈ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆಗುತ್ತಿದ್ದಾನೆ ಅಂದಾಗ ಸಹಜವಾಗೇ ಎಲ್ಲರಲ್ಲೂ ಕುತೂಹಲಗಳಿರುತ್ತವೆ. ಆದರೆ ಶಿವ 143 ಸಿನಿಮಾ ಕುರಿತು ಇಂಥಾ ಯಾವ ಕೌತುಕಗಳೂ ಕಡೇತನಕ ಹುಟ್ಟಲೇ ಇಲ್ಲ. ದುರಂತವೆಂದರೆ ಸಿನಿಮಾ ತೆರೆಗೆ ಬಂದಿರುವ ವಿಚಾರ ಕೂಡಾ ಎಷ್ಟೋ ಜನಕ್ಕೆ ಗೊತ್ತೇ ಆಗಿಲ್ಲ. ಕನ್ನಡ ಚಿತ್ರರಂಗದ ದೊಡ್ಡ ನಿರ್ಮಾಣಸಂಸ್ಥೆ ಜಯಣ್ಣ ಫಿಲಂಸ್ ನಿರ್ಮಿಸಿದ್ದ ಚಿತ್ರವಿದು. ಕೆ.ಆರ್.ಜಿ. ಸಂಸ್ಥೆ ಈ ಚಿತ್ರವನ್ನು ವಿತರಿಸಿತ್ತು. ಹೀಗಿದ್ದೂ ಸಿನಿಮಾ ಶೋಚನೀಯವಾಗಿ ಸೋಲು ಕಂಡಿದೆ. ಜಯಣ್ಣನವರ ಕಾರಣಕ್ಕೆ ಸಿನಿಮಾ ರೈಟ್ಸ್ ಮಾರಾಟವಾಗಿರಬಹುದು. ಆದರೆ ಥೇಟರಿನಲ್ಲಿ ಕೂರಲಿಲ್ಲ ಅನ್ನೋದೇ ಸದ್ಯದ ಕೊರಗು.
ಯಾಕೆ ಹೀಗಾಯ್ತು? ಸಿನಿಮಾದ ಗೆಲುವು, ಸೋಲುಗಳೇನೇ ಇರಲಿ, ಕಡೇಪಕ್ಷ ಇಂಥದ್ದೊಂದು ಸಿನಿಮಾ ಬಂದಿದೆ ಅನ್ನೋದಾದರೂ ಜನಕ್ಕೆ ಗೊತ್ತಾಗಬೇಕಲ್ಲವಾ? ಅದಿಲ್ಲಿ ಸಾಧ್ಯವೇ ಆಗಿಲ್ಲ.

ಹಿಂದೆ ಇದೇ ರಾಜ್ ಕುಟುಂಬದಿಂದ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ರನ್ ಆಂಟನಿ ಹೆಸರಿನ ಚಿತ್ರ ಅದ್ಭುತ ಪ್ರಚಾರದೊಂದಿಗೆ ರಿಲೀಸಾಗಿತ್ತು. ಆ ಚಿತ್ರವನ್ನು ರಘು ಶಾಸ್ತ್ರಿ ಎನ್ನುವ ಹೊಸ ನಿರ್ದೇಶಕನಿಗೆ ಕೊಟ್ಟಿದ್ದರು. ಕಥೆ ಹೇಳುವಾಗ ಅದ್ಭುತವಾಗಿ ಹೇಳಿ ಒಪ್ಪಿಸಿದ್ದ ಶಾಸ್ತ್ರಿ ಅದನ್ನು ದೃಶ್ಯ ರೂಪದಲ್ಲಿ ರೂಪಿಸಿದ್ದ ಪರಿ ಅತ್ಯದ್ಭುತವಾಗಿತ್ತು. ಮೊದಲ ಶೋ ನೋಡಿ ಹೊರಬಂದ ಪ್ರೇಕ್ಷಕರು ಬೆಚ್ಚಿಬಿದ್ದಿದ್ದರು. ಸಿನಿಮಾದಲ್ಲಿ ಧಮ್ಮಿರಲಿಲ್ಲ. ಥೇಟರಲ್ಲಿ ನಿಲ್ಲಲಿಲ್ಲ. ಅದೊಂದು ಸಿನಿಮಾ ಕೊಟ್ಟ ಏಟಿಂದ ವಿನಯ್ ಈ ಕ್ಷಣಕ್ಕೂ ಹೊರಬರಲು ಸಾಧ್ಯವಾಗಿಲ್ಲ. ಸದ್ಯ ಇದೇ ವಿನಯ್ ಅಭಿನಯದ `ಪೆಪೆ’ ಎನ್ನುವ ಸಿನಿಮಾ ವಿನಯ್ ಅವರನ್ನು ಹಳೇ ಸೋಲುಗಳಿಂದ ಮೇಲೆತ್ತುವ ಎಲ್ಲ ಸಾಧ್ಯತೆ ಎದ್ದುಕಾಣುತ್ತಿದೆ.

ಇರಲಿ, ಈಗ ಮತ್ತೆ ಧೀರೇನ್ ವಿಚಾರಕ್ಕೆ ಬರೋದಾದರೆ, ಈ ಸಲ ಕೂಡಾ ದೊಡ್ಮನೆಯವರು ಆಯ್ಕೆಯಲ್ಲಿ ಎಡವಿದರಾ ಅನ್ನಿಸುತ್ತದೆ. ಹಾಗೆ ನೋಡಿದರೆ ಶಿವ 143 ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಅನುಭವಿ. ಸ್ಟಾರ್ ಗಳ ಜೊತೆ ಕೆಲಸ ಮಾಡಿ ಗೆದ್ದಿದ್ದಾರೆ. ಆದರೆ ಧೀರೇನ್ ಥರದ ಹುಡುಗನನ್ನು ಲಾಂಚ್ ಮಾಡಲು ಈ ಕತೆಯನ್ನು ಒಪ್ಪಿಕೊಂಡಿದ್ದೇ ಯಡವಟ್ಟಾಯ್ತೇನೋ. ತೆಲುಗಿನ ಆರ್ ಎಕ್ಸ್ 100 ಸಿನಿಮಾವನ್ನು ಕನ್ನಡಕ್ಕೆ ತಂದು ರಿಮೇಕ್ ಮಾಡಿದ್ದರು. ಧೀರೇನ್ ನಟನೆ ಬಗ್ಗೆ ಕೆಮ್ಮಂಗಿಲ್ಲ. ಕನ್ನಡದ ಮಟ್ಟಿಗೆ ಈ ಹುಡುಗ ತಲೆಯೆತ್ತಿನಿಲ್ಲಬಲ್ಲ ಖಡಕ್ ಹೀರೋ ಅನ್ನೋದೂ ನಿಜಾನೇ. ಆದರೆ ರಿಮೇಕ್ ಸಿನಿಮಾವನ್ನು ಲಾಂಚಿಂಗ್ಗೆ ಆಯ್ಕೆ ಮಾಡಿಕೊಂಡಿದ್ದೇ ತಪ್ಪಾದಂತಿದೆ. ಹಾಗೆ ನೋಡಿದರೆ, ಇತ್ತೀಚಿನ ದಿನಗಳಲ್ಲಿ ಕನ್ನಡದ ಪ್ರೇಕ್ಷಕರು ರಿಮೇಕ್ ಚಿತ್ರಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದಾರೆ. ಶಿವಣ್ಣನ ಬೈರಾಗಿ ಮತ್ತು ಡಾಲಿಯ ಮಾನ್ಸೂನ್ ರಾಗ ಸಿನಿಮಾಗಳೆಲ್ಲಾ ಅದಕ್ಕೆ ಲೇಟೆಸ್ಟ್ ಉದಾಹರಣೆ.

ಮೂಲ ಸಿನಿಮಾ ಎಷ್ಟೇ ಅದ್ಭುತವಾಗಿದ್ದರೂ ಜನ ಅದನ್ನು ಮತ್ತೆ ಕನ್ನಡದಲ್ಲಿ ನೋಡಲಿಚ್ಚಿಸುವುದಿಲ್ಲ. ಬೇಕಿದ್ದರೆ ಓಟಿಟಿಯಲ್ಲಿ ಒರಿಜಿನಲ್ ಸಿನಿಮಾವನ್ನೇ ನೋಡಿಕೊಳ್ಳುತ್ತಾರೆ. ಬಹುಶಃ ಇಂಥದ್ದೇ ಕಾರಣಕ್ಕೆ ಶಿವ 143 ಸಿನಿಮಾವನ್ನು ಜನ ಮುಲಾಜಿಲ್ಲದೇ ರಿಜೆಕ್ಟ್ ಮಾಡಿರೋದು. ಎಷ್ಟೇ ಸರ್ಕಸ್ ಮಾಡಿದರೂ ಜನ ಥೇಟರಿಗೇ ಬರಲೇ ಇಲ್ಲ. ಬಿಡುಗಡೆಯ ದಿನ ಕೂಡಾ ಚಿತ್ರಮಂದಿರಗಳು ಭರ್ತಿಯಾಗಲಿಲ್ಲ.
ದೊಡ್ಮನೆ ಹುಡುಗನಿಗೆ ಹೀಗಾಗಬಾರದಿತ್ತು!