ಈ ಹಿಂದೆ ಲವ್ಲಿ ಸ್ಟಾರ್ ಪ್ರೇಮ್ ಮುಖ್ಯ ಭೂಮಿಕೆಯಲ್ಲಿದ್ದ ಮಳೆ ಚಿತ್ರದ ಮೂಲಕ ನಿರ್ದೇಶಕರಾಗಿ ಹೊರ ಹೊಮ್ಮಿ ಗಮನ ಸೆಳೆದಿದ್ದವರು ಶಿವತೇಜಸ್. ಅಜೇಯ್ ರಾವ್ ನಟನೆಯ ಧೈರ್ಯಂ ಶಿವತೇಜಸ್ ನಿರ್ದೇಶನದ ಎರಡನೇ ಚಿತ್ರ. ಆನಂತರ ಲೌಡ್ ಸ್ಪೀಕರ್ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ಶಿವು ಅವರ ನಾಲ್ಕನೇ ಸಿನಿಮಾ ಶಿವಾರ್ಜುನ ಇದೇ ತಿಂಗಳ ಹನ್ನೆರಡರಂದು ತೆರೆಗೆ ಬರುತ್ತಿದೆ. ಈ ಚಿತ್ರ ಈಗಾಗಲೇ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ. ಶಿವಾರ್ಜುನ ಈಗಾಗಲೇ ಹುಟ್ಟಿಸಿರೋ ನಿರೀಕ್ಷೆಗಳೆಲ್ಲವೂ ಗೆಲುವಾಗಿ ಅಪ್ಪಿಕೊಳ್ಳಲಿದೆ ಎಂಬ ಅದಮ್ಯ ಭರವಸೆಗಳನ್ನು ಎದೆಯಲ್ಲಿಟ್ಟುಕೊಂಡಿರುವ ಶಿವ ತೇಜಸ್ ನಡೆದು ಬಂದ ಹಾದಿಯೂ ಅಷ್ಟೇ ಕುತೂಹಲಕರವಾಗಿದೆ.
ಶಿವತೇಜಸ್ ಅವರ ಮೂಲ ಹೆಸರು ಶಿವಮೂರ್ತಿ. ಶ್ರವಣಬೆಳಗೊಳದ ಗೊಮ್ಮಟೇಶ್ವರನ ನೆರಳಲ್ಲಿಯೇ ಇರುವ ದಮ್ಮನಿಂಗಳ ಎಂಬ ಪುಟ್ಟ ಊರಿನವರು. ರಾಜಶೇಖರಪ್ಪ ಮತ್ತು ಸರ್ವಮಂಗಳಾ ದಂಪತಿಯ ಪುತ್ರ. ಇಲ್ಲಿಯೇ ವ್ಯಾಸಂಗ ಮಾಡಿದ್ದ ಶಿವತೇಜಸ್ ಹತ್ತನೇ ತರಗತಿ ವರೆಗೂ ರ್ಯಾಂಕ್ ಸ್ಟೂಡೆಂಟ್. ಇದೇ ಊರಿನಲ್ಲಿ ಆ ಕಾಲಕ್ಕೇ ಪೋಸ್ಟ್ ಮ್ಯಾನ್ ಆಗಿದ್ದ ರಾಜಶೇಖರಪ್ಪನವರಿಗೆ ಮಗ ಡಾಕ್ಟರಾಗಬೇಕೆಂಬ ಬಯಕೆ. ಆದರೆ ಹತ್ತನೇ ತರಗತಿ ಮುಗಿಸೋ ಹೊತ್ತಿಗೆಲ್ಲ ಶಿವ ತೇಜಸ್ ಮನಸಿಗೆ ಸಿನಿಮಾ ಮೋಹದ ಗುಂಗಿಹುಳ ಮನಸನ್ನಾವರಿಸಿಕೊಂಡಿತ್ತು. ಅದೇಕೋ ರ್ಯಾಕ್ ಸ್ಟೂಡೆಂಟ್ ಶಿವ ತೇಜಸ್ ಪಿಯುಸಿಯಲ್ಲಿ ಗೋತಾ ಹೊಡೆದಿದ್ದರು. ಆ ನಂತರ ಪರೀಕ್ಷೆ ಕಟ್ಟಿ ಪಾಸು ಮಾಡಿ ಡಿಗ್ರಿ ಪೂರೈಸಿಕೊಂಡ ಅವರು ಕೆಲ ಕಾಲ ಊರಲ್ಲಿಯೇ ಒಂದು ಬ್ಯುಸಿನೆಸ್ ನಡೆಸಿದರಾದರೂ ಸಿನಿಮಾ ಹುಚ್ಚೆಂಬುದು ಅವರನ್ನು ಗಾಂಧಿನಗರದತ್ತಲೇ ಸೆಳೆಯಲಾರಂಭಿಸಿತ್ತು. ಈ ನಡುವೆ ಪೊಲೀಸ್ ಅಧಿಕಾರಿಯಾಗುವ ರೇಸಿನಲ್ಲಿ ಆಯ್ಕೆಯೂ ಆಗಿದ್ದ ಶಿವತೇಜಸ್ ಆ ಕೆಲಸವನ್ನೂ ನಿರಾಕರಿಸಿದ್ದರು. ಇವರೊಟ್ಟಿಗೇ ಪೊಲೀಸ್ ಕೆಲಸಕ್ಕೆ ಅರ್ಜಿಸಲ್ಲಿಸಿದ್ದ ಅನೇಕರು ಇಂದು ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹುದ್ದೆಗಳಲ್ಲಿದ್ದಾರೆ. ಆ ನಂತರ ಬಂದ ಇತರೇ ಸರ್ಕಾರಿ ಕೆಲಸಗಳನ್ನೂ ನಿರಾಕರಿಸಿದ್ದರು. ಇವೆಲ್ಲದಕ್ಕೂ ಕಾರಣವಾಗಿದ್ದು ಸಿನಿಮಾ ಹಂಬಲ. ಕಡೆಗೂ ಶಿವತೇಜಸ್ ರಾಧಿಕಾ ಕುಮಾರಸ್ವಾಮಿ ಮುಖ್ಯಭೂಮಿಕೆಯಲ್ಲಿದ್ದ ಹುಡುಗಿಗಾಗಿ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರಾಗಿ ಅವಕಾಶ ಗಿಟ್ಟಿಸಿಕೊಂಡಿದ್ದರು.
ಅಲ್ಲಿಂದಲೇ ದಯಾಳ್ ಪರಿಚಯವಾಗಿ ಅವರ ಸಿನಿಮಾಗಳಲ್ಲಿಯೂ ಅನುಭವ ವಿಸ್ತರಿಸಿಕೊಂಡರು. ದಯಾಳ್ ಜೊತೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಶಿವತೇಜಸ್ರ ಕೆಲಸದ ವೇಗ ಕಂಡ ಸಾಧು ಕೋಕಿಲಾ ತಮ್ಮ ಬಳಗಕ್ಕೆ ಸೇರಿಸಿಕೊಂಡಿದ್ದರು. ಅವರ ಜೊತೆಗೂ ಮೂರು ವರ್ಷ ಕೆಲಸ ಮಾಡೋ ಅವಕಾಶ ಬಂದಿತ್ತು. ದಯಾಳ್ ಅವರ ಜೊತೆ ಕೆಲಸ ಮಾಡುವಾಗಲೇ ಶಿವತೇಜಸ್ ಅವರಿಗೆ ಪರಿಚಯವಾಗಿದ್ದದ್ದು ತಾಜ್ ಮಹಲ್ ಚಂದ್ರು. ನಂತರ ಅವರ ಜೊತೆ ತಾಜ್ ಮಹಲ್, ಪ್ರೇಮ್ ಕಹಾನಿ ಮುಂತಾದ ಚಿತ್ರಗಳಿಗೆ ಕೆಲಸ ಮಾಡಿದ್ದರು. ನಂತರ ಚಂದ್ರು ಅವರೇ ಮಳೆ ಚಿತ್ರದ ಮೂಲಕ ಶಿವ ತೇಜಸ್ರನ್ನು ನಿರ್ದೇಶಕರನ್ನಾಗಿ ಮಾಡಿದ್ದರು. ಈವತ್ತು ಶಿವಾರ್ಜುನ ಚಿತ್ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ. ಆದರೆ, ತನ್ನ ಮಗ ಏನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿದ್ದ ತಂದೆಯವರು ಇಲ್ಲ ಎಂಬ ಕೊರಗು ಮಾತ್ರ ಶಿವ ತೇಜಸ್ರನ್ನು ಕೊರೆಯುತ್ತಿದೆ. ಈ ಹಿಂದೆ ಇವರು ಮಳೆ ಚಿತ್ರ ಘೋಷಿಸಿದಾಗ ತಂದೆ ರಾಜಶೇಖರಪ್ಪನವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರಂತೆ. ಅಲ್ಲಿಯೇ ಪತ್ರಿಕೆಯಲ್ಲಿ ಬಂದ ಸುದ್ದಿ ಓದಿ ಖುಷಿಯಾಗಿ ತನ್ನ ಮಗ ಏನಾದರೂ ಸಾಧಿಸಿದರೆ ಸಾಕೆಂದು ಸಂತಸ ಪಟ್ಟಿದ್ದರಂತೆ. ಆದರೆ ಆ ಚಿತ್ರ ಬಿಡುಗಡೆಯಾದಾಗ ಅವರೇ ಇರಲಿಲ್ಲ.
ಇದೀಗ ಮಡದಿ ಸವಿತಾ, ಪುಟ್ಟ ಮಗಳು ಮೋಹಿತಾ ಮತ್ತು ತಾಯಿ ಸರ್ವಮಂಗಳಾರ ಪುಟ್ಟ ಸಂಸಾರದ ತುಂಬು ಸಹಕಾರದ ಜೊತೆಗೆ ಶಿವ ತೇಜಸ್ ಹುರುಪಿನಿಂದ ಮುಂದುವರೆಯುತ್ತಿದ್ದಾರೆ. ಈ ಘಳಿಗೆಯಲ್ಲಿಯೇ, ಬೆಂಗಳೂರಿಗೆ ಬಂದ ಹೊಸತರಲ್ಲಿ ದಾಸರಳ್ಳಿಯ ಬಾಡಿಗೆ ಮನೆಯಲ್ಲಿ ತಮ್ಮನ್ನು ಪೊರೆದ ಗೆಳೆಯರನ್ನೂ ಶಿವ ತೇಜಸ್ ಮನದುಂಬಿ ನೆನೆಯುತ್ತಾರೆ. ಇನ್ನು ಕಳೆದ ಮೂವತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪ್ರೊಡಕ್ಷನ್ ಮ್ಯಾನೇಜ್ ಆಗಿ, ಸರ್ಜಾ ಕುಟುಂಬದ ಆಪ್ತರಾಗಿ ಕೆಲಸ ಮಾಡಿಕೊಂಡುಬಂದಿರುವ ನಿರ್ಮಾಪಕ ಶಿವಾರ್ಜುನ್ ಏನೆಂದರೆ ಏನೂ ಕೊರತೆಯಾಗದಂತೆ ‘ಶಿವಾರ್ಜುನ’ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರ ಬಿಡುಗಡೆಗೆ ಮುನ್ನವೇ ಶಿವತೇಜಸ್ ಅವರ ಜೊತೆ ಮತ್ತೊಂದು ಚಿತ್ರವನ್ನು ಶುರು ಮಾಡುವುದಾಗಿಯೂ ಶಿವಾರ್ಜುನ್ ಅನೌನ್ಸ್ ಮಾಡಿದ್ದಾರೆ. ಶಿವತೇಜಸ್ ಕೈಗೆ ನಿರ್ದೇಶನದ ಕೆಲಸ ಒಪ್ಪಿಸಿದರೆ, ಯಾವುದೇ ಅಡೆ ತಡೆ ಇಲ್ಲದೆ, ಅಚ್ಚುಕಟ್ಟಾಗಿ ಸಿನಿಮಾ ರಿಲೀಸಾಗುತ್ತದೆ ಅನ್ನೋ ಮಾತು ಗಾಂಧಿನಗರದ ಉದ್ದಗಲಕ್ಕೂ ವ್ಯಾಪಿಸಿಕೊಂಡಿದೆ. ಇದೊಂದು ಟಾಕ್ ಸಾಕಲ್ಲವೇ? ಒಬ್ಬ ನಿರ್ದೇಶಕ ಕೈತುಂಬಾ ಕೆಲಸ ಪಡೆಯಲು…
No Comment! Be the first one.