ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ನನ್ನನ್ನು ಜನ ಇಷ್ಟಪಡೋದು ಕಲಾವಿದನಾಗಿ. ರಾಜಕೀಯ ನನಗೆ ಸರಿಹೊಂದೋದಿಲ್ಲ. ಹೀಗಾಗಿ ನಾನು ಯಾರ ಪರವೂ ಪ್ರಚಾರ ಮಾಡೋದಿಲ್ಲ’ ಎಂದು ಹೇಳಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರ ಸಹೋದರ ಮಧು ಬಂಗಾರಪ್ಪ ಪರ ಶಿವಣ್ಣ ಪ್ರಚಾರಕ್ಕೆ ತೆರಳುತ್ತಾರೆ ಅನ್ನೋ ಅಂದಾಜಿತ್ತು. ಯಾವಾಗ ಶಿವಣ್ಣ ಪ್ರಚಾರಕ್ಕೆ ಹೋಗಲಿಲ್ಲವೋ ಅದು ನಾನಾ ರೀತಿಯ ಗಾಳಿಸುದ್ದಿಗಳಿಗೆ ಕಾರಣವಾಗಿತ್ತು. ಈಗ ಸ್ವತಃ ಶಿವರಾಜ್ ಕುಮಾರ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ‘ಜನ ನಿಮ್ಮನ್ನು ನೋಡುವ ದೃಷ್ಟಿಕೋನವೇ ಬೇರೆ. ನೀವು ಚುನಾವಣಾ ಪ್ರಚಾರಕ್ಕೆ ಬರುವುದು ಬೇಡ’ ಎಂದು ಖುದ್ದು ಮಧು ಬಂಗಾರಪ್ಪ ತಿಳಿಸಿದ್ದಾರಂತೆ. ಮಧು ಬಂಗಾರಪ್ಪ ಬಯಕೆಯಂತೆ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಶಿವಣ್ಣ ಪತ್ನಿ ಪರ ಪ್ರಚಾರ ನಡೆಸಿದ್ದರು. ಆದರೆ ಈ ಬಾರಿ ಸ್ಪಷ್ಟ ನಿರ್ಧಾರದಿಂದ ಎಲೆಕ್ಷೆನ್ ಪ್ರಚಾರದಿಂದ ಶಿವಣ್ಣ ದೂರ ಉಳಿದಿದ್ದಾರೆ.