ಕನ್ನಡ ಚಿತ್ರರಂಗದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳು ಆಗಾಗ ಅರಳುತ್ತಿರುತ್ತವೆ. ಈ ವಾರ ತೆರೆಗೆ ಬರುತ್ತಿರುವ ಕಬ್ಜ ಸಿನಿಮಾದಲ್ಲೇ ಕನ್ನಡದ ಮೂವರು ಟಾಪ್ ಸ್ಟಾರ್ಗಳಿದ್ದಾರೆ.
ಹಾಗೆ ನೋಡಿದರೆ ಕನ್ನಡದಲ್ಲಿ ಅತಿ ಹೆಚ್ಚು ಮಲ್ಟಿ ಸ್ಟಾರ್ ಸಿನಿಮಾ ಮಾಡಿರೋರಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್.
ರಮೇಶ್ ಅರವಿಂದ್, ಉಪೇಂದ್ರ, ಜಗ್ಗೇಶ್, ರವಿಚಂದ್ರನ್ ರಿಂದ ಹಿಡಿದು ಸುದೀಪ್, ಶ್ರೀಮುರಳಿ ತನಕ ಕನ್ನಡ ಹಿರಿ, ಕಿರಿಯ ಹೀರೋಗಳೊಂದಿಗೆ ತೆರೆ ಹಂಚಿಕೊಂಡ ಹಿರಿಯ ನಟ ಶಿವಣ್ಣ!
ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿವಣ್ಣ ಕಾಂಬಿನೇಷನ್ನಿನಲ್ಲಿ ಸಿನಿಮಾವೊಂದು ಸೆಟ್ಟೇರುವುದು ಖಚಿತವಾಗಿದೆ. ಪಡೆಯಪ್ಪ ಖ್ಯಾತಿಯ ತಮಿಳು ನಿರ್ದೇಶಕ ಕೆ.ಎಸ್. ರವಿಕುಮಾರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಹಿಂದೆ ಕೋಟಿಗೊಬ್ಬ-೨ ಚಿತ್ರವನ್ನು ಇದೇ ರವಿಕುಮಾರ್ ನಿರ್ದೇಶಿಸಿದ್ದರು. ತಮಿಳಿನ ಬಹುತೇಕ ಸೂಪರ್ ಸ್ಟಾರ್ ಗಳಿಗೆ ಹಿಟ್ ಚಿತ್ರಗಳನ್ನು ಕಟ್ಟಿಕೊಟ್ಟಿದ್ದ ರವಿಕುಮಾರ್ ಈಗ ಎರಡನೇ ಸಲ ಕನ್ನಡಕ್ಕೆ ಬರುತ್ತಿದ್ದಾರೆ.
ಈ ಸಿನಿಮಾವನ್ನು ಸದ್ಯ ಕನ್ನಡದ ಅತೀ ಹಿರಿಯ ನಿರ್ಮಾಪಕ ಸೂರಪ್ಪ ಬಾಬು ಅವರು ನಿರ್ಮಿಸುತ್ತಿದ್ದಾರೆ. ಈಗಾಗಲೇ ಸೂರಪ್ಪ ಬಾಬು ದರ್ಶನ್ ಸಿನಿಮಾವೊಂದನ್ನು ಅನೌನ್ಸ್ ಮಾಡಿದ್ದಾರೆ. ದರ್ಶನ್ ಸಾಕಷ್ಟು ನಿರ್ಮಾಪಕರ ಸಿನಿಮಾವನ್ನು ಒಪ್ಪಿರುವುದೇನೋ ನಿಜ. ಆದರೆ, ಯಾರ ಸಿನಿಮಾ ಆದ ಮೇಲೆ ಯಾರಿಗೆ ಡೇಟ್ಸ್ ಕೊಡುತ್ತಾರೆ ಅನ್ನೋದು ಗೊತ್ತಿಲ್ಲ. ಅದು ಅಂತಿಮ ಕ್ಷಣದ ತನಕ ಗೊತ್ತಾಗುವುದೂ ಇಲ್ಲ. ದರ್ಶನ್ ಕಾಲ್ ಶೀಟ್ ಕನ್ಫರ್ಮ್ ಮಾಡುವ ಗ್ಯಾಪಿನಲ್ಲಿ ಮತ್ತೊಂದು ಸಿನಿಮಾ ಶುರು ಮಾಡಿ, ಮುಗಿಸುವ ಪ್ಲಾನು ಬಾಬಣ್ಣ ಅವರದ್ದಿರಬಹುದು!
No Comment! Be the first one.