• ಕುಮಾರ್ ಶೃಂಗೇರಿ

ಕನ್ನಡ ಚಿತ್ರರಂಗದ  ಪುರಾತನ ಕೊಂಡಿಯಂತಿದ್ದ ಶಿವರಾಮಣ್ಣನ ಜೀವ ಕೂಡಾ ಕಳಚಿಹೋಗಿದೆ.  ಬಹಳಷ್ಟು ಸಿನಿಮಾಗಳಲ್ಲಿ ನಾಯಕ ನಟರಿಗಿಂತಲೂ ಹೆಚ್ಚು ಸೆಳೆಯುವ ನಟನೆ ಇವರದ್ದಾಗಿತ್ತು. ಶರಪಂಜರ ಚಿತ್ರ ಇವರ ಹೆಸರಿನ ಜೊತೆಗೆ ಪರ್ಮನೆಂಟಾಗಿ ಅಂಂಟಿಕೊಂಡಿದ್ದು ಕೂಡಾ ಇವರ ಅಮೋಘ ನಟನೆಯಿಂದಲೇ.

ಶಿವರಾಂ ಯಾವುದೇ ರೀತಿಯ ಪಾತ್ರಕ್ಕಾದರೂ ಸೈ ಎಂದವರು. ಯಾವತ್ತೂ ಒಂದೇ ರೀತಿಯ ಪಾತ್ರಗಳಿಗೆ ಜೋತು ಬಿದ್ದವರಲ್ಲ. ಅವರದ್ದೇ ಆದ ನಟನಾ ಶೈಲಿ, ನವರಸವನ್ನೂ ಹೊಮ್ಮಿಸುವ ಭಾವಾಭಿವ್ಯಕ್ತಿ ಎಂಥವರನ್ನೂ ಮಂತ್ರಮುಗ್ದರನ್ನಾಗಿಸಿಬಿಡುತ್ತಿತ್ತು.

ಶುಭಮಂಗಳ ಚಿತ್ರದ ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು ನಗುತಾದ ಭೂತಾಯಿ ಮನಸು ಹಾಡಿಗೆ ಶಿವರಾಂ ತೊಡಗಿಸಿಕೊಂಡ ರೀತಿ ಎಂಥಾ ಕಲ್ಲು ಹೃದಯದವರನ್ನೂ ಮೆತ್ತಗಾಗಿಸುವಂಥದ್ದು.  ಇವರ ವ್ಹಾರೆ ಮೇರ ಮುರುಗ ಎಂಬ ಹಾಡು ಕೋಳಿ ಕಾಳಗದ ದೃಶ್ಯ  ಆವತ್ತಿಂದ ಈವತ್ತಿನವರ ತನಕ ಎಲ್ಲರಿಗೂ ಬಾಯಿಪಾಠವೇ ಆಗೀಹೊಗಿದೆ.

ಶಿವರಾಮಣ್ಣ ಒಮ್ಮೆ ಹೀಗಂದಿದ್ದರು. ʻʻನಾನು ಚಿತ್ರರಂಗಕ್ಕೆ ಕಾಲಿಟ್ಟ ಸಮಯದಲ್ಲೇ ಅನೇಕ ಹೀರೋಗಳು ಪ್ರಾದಾರ್ಪಣೆ ಮಾಡಿದರು. ಅವರೆಲ್ಲಾ ಮೊದಮೊದಲಿಗೆ ಶಿವರಾಂ ಗುರುಗಳೇ ಅನ್ನುತ್ತಿದ್ದರು. ನಂತರ ಶಿವರಾಮಣ್ಣ ಅಂದರು. ಕ್ರಮೇಣ ʻಹೇ ಶಿವಾರಾಂʼ ಅನ್ನಲು ಶುರು ಮಾಡಿದರು. ನಾಯಕ ನಟರಿಗಿರುವ ಗೌರವ ಪೋಷಕ ಕಲಾವಿದರಿಗೆ ಇರುವುದಿಲ್ಲವಲ್ಲಾ  ಅಂತಾ ಸಂಕಟವಾಗುತ್ತದೆ.ʼʼ

ನಾಯಕ, ನಾಯಕಿ, ಪೋಷಕ ಕಲಾವಿದ ಎನ್ನುವ ವರ್ಗಗಳೆಲ್ಲಾ ಇರಬಾರದು. ಸಿನಿಮಾ ಅಂದರೆ ಅಲ್ಲಿ ಪಾತ್ರ ನಿರ್ವಹಿಸುವ ಎಲ್ಲರೂ ಕಲಾವಿದರಷ್ಟೇ. ಇಲ್ಲಿ ಮೇಲು-ಕೀಳಿಲ್ಲ. ಹಾಗೆ ವಿಂಗಡಿಸುವ ಸಂಪ್ರದಾಯ ಕೂಡಾ ಇರಬಾರದು ಅನ್ನೋದು ಶಿವರಾಮಣ್ಣನ ಮನದ ಮಾತಾಗಿತ್ತು. ಈ ರೀತಿಯ ಅವರ ಅಲೋಚನೆಗಳಿಂದಲೇ ಬಹುಶಃ ಅವರು ಆಧ್ಯಾತ್ಮದತ್ತ ಹೆಚ್ಚ ವಾಲಿದ್ದರೇನೋ. ಡಾ. ವಿಷ್ಣು ವರ್ಧನ್‌ ಅವರನ್ನು ಆಧ್ಯಾತ್ಮ ಮಾರ್ಗಕ್ಕೆ ಕರೆದೊಯ್ದ ಪುಣ್ಯ ಕೂಡಾ ಶಿವರಾಮಣ್ಣನ ಮೇಲಿದೆ. ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದ ಈ ಹಿರಿಯ ನಟ ಕೆಲ ವರ್ಷಗಳಿಂದ  ಕಪ್ಪು ಮತ್ತು ಕೇಸರಿ ಉಡುಗೆಗಳಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಚಾಮರಾಜ ಪೇಟೆ ಶ್ರೀ ರಾಮಸೇವಾ ಮಂಡಳಿಯ ವಾರ್ಷಿಯ ಸಂಗೀತೋತ್ಸವದ ಕಾರ್ಯಕ್ರಮಗಳಲ್ಲಿ ಶಿವರಾಮಣ್ಣ ಹಲವು ವರ್ಷಗಳಿಂದ ನಿರೂಪಕರಾಗಿಯೂ ಕೆಲಸ ನಿರ್ವಹಿಸಿದ್ದರು.

ಯಾರೆಂದರೆ ಯಾರಿಗೂ ಗೊತ್ತಿಲ್ಲದ ಮತ್ತೊಂದು ವಿಚಾರವಿದೆ. ಇವತ್ತು ಆರ್ಟ್‌ ಆಫ್‌ ಲಿವಿಂಗ್‌ ಮೂಲಕ ಜಗತ್‌ ಪ್ರಸಿದ್ದಿಗೊಂಡಿರುವ ರವಿಶಂಕರ್‌ ಗುರೂಜಿಗೂ ಶಿವರಾಮಣ್ಣನಿಗೂ ನಂಟಿದೆ. ಅದೇನೆಂದರೆ, ಒಂದು ಕಾಲಕ್ಕೆ ರವಿಶಂಕರ್‌ ನ್ಯಾಷನಲ್‌ ಕಾಲೇಜಿನಲ್ಲಿ ಓದುತ್ತಿದ್ದರು. ವಿಪರೀತ ಕಷ್ಟದ ಹಿನ್ನೆಲೆಯಿದ್ದಿದ್ದರಿಂದ ರವಿಶಂಕರ್‌ ಇದೇ ಶಿವರಾಮಣ್ಣನ ಮನೆಯಲ್ಲಿ ವಾರಾನ್ನಕ್ಕೆ ಹೋಗುತ್ತಿದ್ದರು.

ಇವೆಲ್ಲ ಏನೇ ಆಗಲಿ, ಶಿವರಾಮಣ್ಣನ ಅಗಲಿಕೆಯಿಂದ ಕನ್ನಡ ಚಿತ್ರರಂಗ  ಸಕಲಕಲಾವಲ್ಲಭ  ನಟನನ್ನು ಕಳೆದುಕೊಂಡಂತಾಗಿದೆ. ಶ್ರದ್ದಾಂಜಲಿ ಶಿವರಾಮಣ್ಣ  ನಿಮ್ಮ ಅಭಿನಯದ ಚಿತ್ರಗಳು ಇಂದಿನ ನಟರಿಗೆ ದಾರಿದೀಪವಾಗಲಿ…

ಪ್ರಜ್ವಲ್ ಮಾಫಿಯಾ!

Previous article

ಹೊಸತರ ಜೊತೆ ಹಳೆಯ ನಂಟು!

Next article

You may also like

Comments

Leave a reply