ಮೇಘನಾ ರಾಜ್ ಪ್ರತಿಭಾವಂತೆ. ನಟನೆಯಲ್ಲಿ ಮಾತ್ರವಲ್ಲದೆ, ಮನೋಜ್ಞವಾಗಿ ಹಾಡಲೂ ಬಲ್ಲರು ಅನ್ನೋದು ಈ ಹಿಂದೆ ಉದಯ್ ಮೆಹ್ತಾ ನಿರ್ಮಾಣದ ಸಿಂಗ ಸಿನಿಮಾದಲ್ಲೇ ಸಾಬೀತಾಗಿತ್ತು. ಈಗ ಮತ್ತೆ ಶಿವಾರ್ಜುನ ಸಿನಿಮಾಗಾಗಿ ಮೇಘನಾ ಹಾಡಿದ್ದಾರೆ. ಸದ್ಯ ಪತಿ ಚಿರು ನಟನೆಯ ಎರಡು ಸಿನಿಮಾಗಳಿಗಾಗಿ ಹಾಡಿರುವ ಮೇಘನಾ ಭವಿಷ್ಯದಲ್ಲಿ ಸಾಕಷ್ಟು ಬೇರೆ ನಟನ ಸಿನಿಮಾಗಳ ಹಾಡಿಗೂ ದನಿಯಾಗಲಿದ್ದಾರೆ. ಹಾಗೆ ನೋಡಿದರೆ ಮೇಘನಾ ಮೊದಲ ಬಾರಿಗೆ ಹಾಡಿದ್ದು ಮಲಯಾಳಂನ ೧೦೦ ಡಿಗ್ರಿ ಸಿನಿಮಾಗೆ. ಆ ನಂತರ ಕನ್ನಡದ ಬಹುಪರಾಕ್ ಸಿನಿಮಾಗೆ ಕೂಡಾ ದನಿ ನೀಡಿದ್ದರು. ಈಗ ಮೇಘನಾ ಹಾಡಿರುವ ನಾಲ್ಕನೇ ಹಾಡು ಶಿವಾರ್ಜುನ ಸಿನಿಮಾದಲ್ಲಿ ಸೇರಿಕೊಂಡಿದೆ. ಸಂಜಿತ್ ಹೆಗ್ಡೆ ಜೊತೆ ಹಾಡಿರುವ ಡ್ಯುಯೆಟ್ ಸಾಂಗ್ ಇದಾಗಿದ್ದು, ಎಲ್ಲರಿಗೂ ಇಷ್ಟವಾಗುವಂತೆ ಮೂಡಿಬಂದಿದೆ.
ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿರ್ಮಿಸುತ್ತಿರುವ, ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿರುವ ‘ಶಿವಾರ್ಜುನ‘ ಚಿತ್ರ ಇದೇ ತಿಂಗಳ ೧೨ಕ್ಕೆ ತೆರೆಗೆ ಬರುತ್ತಿದೆ. ಶಿವತೇಜಸ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಮಾತಿನ ಜೋಡಣೆ ಮುಕ್ತಾಯವಾಗಿದೆ. ಹೆಚ್.ಸಿ.ವೇಣು ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರಾಗ್ ಸಂಗೀತ ನೀಡಿದ್ದಾರೆ.
ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ವಿನೋದ್, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಯೋಗರಾಜ್ ಭಟ್ ಹಾಗೂ ಚೇತನ್ಕುಮಾರ್(ಬಹದ್ದೂರ್) ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಅಮೃತ, ಅಕ್ಷತ, ತಾರಾ, ಅವಿನಾಶ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ಸಾಧುಕೋಕಿಲ, ರವಿ ಕಿಶನ್, ತರಂಗ ವಿಶ್ವ, ಕೆ.ಆರ್.ಪೇಟೆ ಶಿವರಾಜ್, ನಯನ ಮುಂತಾದವರಿದ್ದಾರೆ.