ಶೋಕಿವಾಲಾ ಚಿತ್ರದ ಪೋಸ್ಟರ್’ಗಳು ತೀರಾ ಆಕರ್ಷಕವಾಗಿ ಮೂಡಿಬಂದಿದ್ದು, ಎಲ್ಲರನ್ನೂ ಸೆಳೆದಿದೆ. ಇನ್ನೇನು ಈ ಸಿನಿಮಾದ ಪ್ರಚಾರ ಕಾರ್ಯ ಶುರುವಾಗಲಿದ್ದು, ಆಡಿಯೋ ಕೂಡಾ ಶೀಘ್ರದಲ್ಲೇ ಹೊರಬರಲಿದೆ.
‘ಅಜಯ್ ರಾವ್ ವೃತ್ತಿಬದುಕಿನಲ್ಲಿಯೇ ಇಷ್ಟು ಕಲರ್’ಫುಲ್ ಸಿನಿಮಾವೊಂದು ಬಂದಿರಲಿಲ್ಲವೇನೋ’ ಎನ್ನುವಷ್ಟರ ಮಟ್ಟಿಗೆ ಶ್ರೀಮಂತಿಕೆಯಿಂದ ಮೂಡಿಬಂದಿರುವ ಸಿನಿಮಾ ಶೋಕಿವಾಲ. ಅಯೋಗ್ಯ ಎನ್ನುವ ಹಿಟ್ ಸಿನಿಮಾ ಕೊಟ್ಟು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿ ಪರ್ಮನೆಂಟು ಸ್ಥಾನ ಪಡೆದಿರುವವರು ಡಾ. ಟಿ.ಆರ್. ಚಂದ್ರಶೇಖರ್. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರಿನ ಮೂಲಕ ಸಿ. ನಂದಕಿಶೋರ್ ಅರ್ಪಿಸಿ, ಟಿ.ಆರ್. ಚಂದ್ರಶೇಖರ್ ನಿರ್ಮಿಸುವ ಸಿನಿಮಾಗಳು ಅದ್ಧೂರಿಯಾಗಿರುತ್ತವೆ ಅನ್ನೋದು ಬರೀ ಚಿತ್ರರಂಗಕ್ಕೆ ಮಾತ್ರವಲ್ಲ, ಪ್ರೇಕ್ಷಕರಿಗೂ ಈಗಾಗಲೇ ಮನದಟ್ಟಾಗಿಹೋಗಿದೆ. ಸಾಮಾನ್ಯವಾಗಿ ಒಂದು ಸಿನಿಮಾ ಮುಗಿದಮೇಲೆ ಮತ್ತೊಂದು ಸಿನಿಮಾ ಆರಂಭಿಸೋದು ದೊಡ್ಡ ನಿರ್ಮಾಪಕರು, ಸಂಸ್ಥೆಗಳ ರೀತಿ. ಆದರೆ ಕ್ರಿಸ್ಟಲ್ ಪಾರ್ಕ್ ಸಂಸ್ಥೆಯಲ್ಲಿ ಮಾತ್ರ ಏಕಕಾಲಕ್ಕೆ ಮೂರ್ನಾಲ್ಕು ಸಿನಿಮಾಗಳು ನಿರ್ಮಾಣಹಂತದಲ್ಲಿರುತ್ತವೆ. ಸದ್ಯ ಈ ಸಂಸ್ಥೆ ನಿರ್ಮಿಸುತ್ತಿರುವ ಸಿನಿಮಾಗಳ ಪೈಕಿ ಬುದ್ಧಿವಂತ-೨ ಚಿತ್ರೀಕರಣದ ಹಂತದಲ್ಲಿದೆ. ಹುಟ್ಟುಹಬ್ಬದ ಶುಭಾಶಯಗಳು ಮತ್ತು ಶೋಕಿವಾಲ ಶೂಟಿಂಗ್ ಮುಗಿಸಿ ತೆರೆಗೆ ಬರಲು ರೆಡಿಯಾಗುತ್ತಿವೆ.
ಶೋಕಿವಾಲ ಚಿತ್ರಕ್ಕಾಗಿ ಬೆಂಗಳೂರು, ಮೈಸೂರು, ಚನ್ನಪಟ್ಟಣ, ಶ್ರೀರಂಗಪಟ್ಟಣ, ಮದ್ದೂರು, ಮಂಡ್ಯ, ತುಮಕೂರು, ಮಾಗಡಿ ಮುಂತಾದ ಕಡೆ ಈ ಚಿತ್ರಕ್ಕಾಗಿ ಚಿತ್ರೀಕರಣ ನಡೆಸಲಾಗಿದೆ. ಕಡೆಯದಾಗಿ ಮದ್ದೂರಿನ ತೈಲೂರಿನಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿ ಕುಂಬಳಕಾಯಿ ಒಡೆದಿದ್ದಾರೆ. ಚಿತ್ರೀಕರಣದ ಜೊತೆಯಲ್ಲೇ ಡಬ್ಬಿಂಗ್ ಸೇರಿದಂತೆ ಬಹುತೇಕ ತಾಂತ್ರಿಕ ಕೆಲಸಗಳನ್ನೂ ಮುಗಿಸಿದ್ದಾರೆ. ಜಾಕಿ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಶ್ರೀಧರ್ ವಿ. ಸಂಭ್ರಮ್ ಮ್ಯೂಸಿಕ್ ಮಾಡಿದ್ದಾರೆ.
ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್, ಗೌಸ್ ಪೀರ್, ಚೇತನ್ ಕುಮಾರ್ ಮತ್ತು ಜಯಂತ ಕಾಯ್ಕಿಣಿ ಹಾಡುಗಳನ್ನು ಬರೆದಿದ್ದಾರೆ. ಮೋಹನ್ ಕೊರಿಯೋಗ್ರಫಿ, ವಿಕ್ರಂ ಮೋರ್ ಸಾಹಸ, ಪ್ರಶಾಂತ್ ರಾಜಪ್ಪ ಸಂಭಾಷಣೆ, ಕೆ.ಎಂ. ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ ಸಂಸ್ಥೆ ನಿರ್ಮಿಸುವ ಬಹುತೇಕ ಎಲ್ಲ ಚಿತ್ರಗಳಿಗೂ ಕಾರ್ಯ ನಿರ್ವಹಿಸುತ್ತಾ ಬಂದಿರುವ ಬಾಲು ಕುಮಟಾ ಅವರ ನಿರ್ಮಾಣ ಮೇಲ್ವಿಚಾರಣೆ ಶೋಕಿವಾಲ ಸಿನಿಮಾಗೂ ಇದೆ. ಅಜಯ್ ರಾವ್ ಜೊತೆಗೆ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಪ್ರಮೋದ್ ಶೆಟ್ಟಿ, ಗಿರಿ, ಮುನಿರಾಜು, ತಬಲಾ ನಾಣಿ, ಅರುಣಾ ಬಾಲರಾಜ್, ನಾಗರಾಜ ಮೂರ್ತಿ ಮುಂತಾದವರ ತಾರಾಗಣವಿರುವ ಶೋಕಿವಾಲಾ ಬಹುತೇಕ ಪೂರ್ಣಗೊಂಡಿದೆ.
ಶೋಕಿವಾಲಾ ಚಿತ್ರದ ಪೋಸ್ಟರ್’ಗಳು ತೀರಾ ಆಕರ್ಷಕವಾಗಿ ಮೂಡಿಬಂದಿದ್ದು, ಎಲ್ಲರನ್ನೂ ಸೆಳೆದಿದೆ. ಇನ್ನೇನು ಈ ಸಿನಿಮಾದ ಪ್ರಚಾರ ಕಾರ್ಯ ಶುರುವಾಗಲಿದ್ದು, ಆಡಿಯೋ ಕೂಡಾ ಶೀಘ್ರದಲ್ಲೇ ಹೊರಬರಲಿದೆ. ಶ್ರೀಧರ್ ವಿ. ಸಂಭ್ರಮ್ ಈ ಸಿನಿಮಾಗಾಗಿ ಸಖತ್ ಫ್ರೆಶ್ ಎನಿಸುವಂಥಾ ಟ್ಯೂನುಗಳನ್ನು ನೀಡಿದ್ದಾರಂತೆ. ಈ ಚಿತ್ರದ ಎಲ್ಲ ಹಾಡುಗಳೂ ಪ್ರತಿಯೊಬ್ಬರನ್ನೂ ಮೆಚ್ಚಿಸಲಿವೆ. ಆ ಮೂಲಕ ಶ್ರೀಧರ್ ದೊಡ್ಡ ಗೆಲುವಿನಿಂದ ಸಂಭ್ರಮಿಸೋದು ಗ್ಯಾರೆಂಟಿ ಎನ್ನುವಂತಾ ಮಾತುಗಳು ಈಗಾಗಲೇ ಸ್ಟುಡಿಯೋ ಹೊರಗೆ ಕೇಳಿಸುತ್ತಿವೆ. ಅದು ನಿಜವಾಗಲಿ, ಅಜಯ್ ರಾವ್ ಶೋಕಿವಾಲ ತೆರೆಮೇಲೆ ಆದಷ್ಟು ಬೇಗ ಲಕಲಕಿಸಲಿ!