ಇತ್ತೀಚೆಗೆ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗಳಲ್ಲಿ ʻಶೋಕಿವಾಲʼ ಕೂಡಾ ಒಂದು. ಕೃಷ್ಣ ಅಜೇಯ್ ರಾವ್ ಮತ್ತು ಸಂಜನಾ ಆನಂದ್ ಜೋಡಿಯ ಈ ಚಿತ್ರದ ಹಾಡುಗಳು, ಟ್ರೇಲರ್, ಪೋಸ್ಟರುಗಳು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದ್ದವು. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಿರ್ಮಿಸಿರುವ ಈ ಚಿತ್ರವನ್ನು ಜಾಕಿ ನಿರ್ದೇಶಿಸಿದ್ದಾರೆ.
ಅಯೋಗ್ಯ ಸಿನಿಮಾ ಮೂಲಕ ಹೆಸರು ಮಾಡಿದ ಕ್ರಿಸ್ಟಲ್ ಪಾರ್ಕ್ ಸಂಸ್ಥೆ ಈಗ ಮತ್ತೊಮ್ಮೆ ಅದೇ ಜಾನರಿನ ಚಿತ್ರವನ್ನು ರೂಪಿಸಿದೆ. ಒಂದು ಹಳ್ಳಿ. ಅಲ್ಲೊಬ್ಬ ಹುಡುಗ. ಥೇಟು ಶ್ರೀ ಕೃಷ್ಣನಂತೆ ಹುಡುಗೀರ ಬೆನ್ನುಬೀಳುವ ಚಾಳಿ. ಇವನು ಎಲ್ಲರನ್ನೂ ಇಷ್ಟ ಪಟ್ಟರೂ, ಇವನನ್ನು ಯಾರೂ ಒಪ್ಪಿರೋದಿಲ್ಲ. ಮನೆಯ ಪರಿಸ್ಥಿತಿ ಹೀನಾಯವಾಗಿದ್ದರೂ ಶೋಕಿ ಮಾಡಿಕೊಂಡು ತಿರುಗುವವನ ಹೃದಯ ಸಿಂಹಾಸನದಲ್ಲಿ ಹುಡುಗಿಯೊಬ್ಬಳು ಬಂದು ಕೂರುತ್ತಾಳೆ. ಈತನ ಗುಣ ಶ್ರೀಮಂತಿಕೆಯನ್ನು ಮೆಚ್ಚಿ, ಅಪ್ಪನ ಅಷ್ಟೈಶ್ವರ್ಯಗಳನ್ನು ಎಡಗಾಲಲ್ಲಿ ಒದ್ದು ಬರುತ್ತಾಳೆ. ಮಾಡು, ಸೂರು ಕೂಡಾ ಸರಿ ಇಲ್ಲದ ಮನೆಯಲ್ಲಿ ಹುಡುಗಿ ಹೊಂದಿಕೊಳ್ಳುತ್ತಾಳಾ? ಇಂಥ ಹುಡುಗಿಯನ್ನು ಶೋಕಿವಾಲಾ ಅಚ್ಚರಿಗೊಳಿಸುತ್ತಾನಾ? ಬೆಚ್ಚಿಬೀಳುವಂತೆ ಮಾಡುತ್ತಾನಾ? ಮುದ್ದಿನ ಮಗಳನ್ನು ಹಾರಿಸಿಕೊಂಡು ಬಂದ ಅಳಿಯನ ಮೇಲೆ ಮಾವನ ರಿವೇಂಜು ಯಾವ ರೀತಿ ಇರುತ್ತದೆ? ಅಸಲಿಗೆ ಇವರಿಬ್ಬರನ್ನೂ ಮಾವ ಜೀವಂತ ಉಳಿಯಲು ಬಿಡುತ್ತಾನಾ? ಅನ್ನೋದು ಪ್ರಮುಖ ಕುತೂಹಲ.
ಕನ್ನಡ ಚಿತ್ರರಂಗದಲ್ಲಿ ಹಳ್ಳಿ ಕಥಾವಸ್ತು ಹೊಂದಿರುವ ಕಮರ್ಷಿಯಲ್ ಸಿನಿಮಾವೊಂದು ಬಂದು ಸಾಕಷ್ಟು ದಿನಗಳೇ ಕಳೆದಿದ್ದವು. ಬಡತನವೇ ಹೊದ್ದು ಮಲಗಿದಂತಾ ಪ್ರದೇಶದಲ್ಲಿ ಒಬ್ಬ ಶ್ರೀಮಂತ, ಪುಂಡ ಹುಡುಗರು, ಕುಡಿತಕ್ಕೆ ಮನೆ ಬಾಗಿಲನ್ನೂ ಬಿಡದೆ ಮಾರಿಕೊಳ್ಳುವ ತಂದೆ, ಕಟ್ಟಿಕೊಂಡವಳನ್ನು ನೇರ್ಪಾಗಿ ಬಾಳಿಸಲಾಗದ ಕುಡುಕ ಭಾವ, ತವರು ಸೇರಿದ ತಂಗಿ , ಗ್ರಾಮದ ಸಹಜ ಬದುಕು, ಹುಡುಗರ ಚೇಷ್ಟೆಗಳೇ ಇಲ್ಲಿ ಭರ್ತಿ ಮನರಂಜನೆ ನೀಡುತ್ತವೆ.
ಕಾಮಿಡಿ ಪೊಲೀಸ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಖುಷಿ ಕೊಡುತ್ತಾರೆ. ಪಾತ್ರವೇ ಹಾಗಿರೋದರಿಂದ ಅರುಣಾ ಬಾಲರಾಜ್ ನಟನೆ ಓವರ್ ಅನ್ನಿಸೋದಿಲ್ಲ. ಡುಮ್ಮ ಗಿರಿ, ಹೇಮಂತ್ ಸುಶೀಲ್ ಮತ್ತು ಅಜೇಯ್ ರಾವ್ ಕಾಂಬಿನೇಷನ್ ವರ್ಕೌಟ್ ಆಗಿದೆ. ಸಂಜನಾ ಆನಂದ್ ಚೆಲುವು ತೆರೆಯ ಅಂದವನ್ನು ಹೆಚ್ಚಿಸಿದೆ. ಶರತ್ ಲೋಹಿತಾಶ್ವ, ತಬಲಾ ನಾಣಿ, ನಾಗರಾಜಮೂರ್ತಿ ಯಥಾಪ್ರಕಾರದ ಪಾತ್ರಗಳಲ್ಲಿ ನಟಿಸಿದ್ದಾರೆ. ನಟ ಮುನಿಗೆ ಮತ್ತೆ ಎದ್ದುಬರುವ ಪಾತ್ರ ಇಲ್ಲಿ ಸಿಕ್ಕಿದೆ. ನಿರ್ದೇಶಕ ಜಾಕಿ ಚಿತ್ರದ ಮೊದಲ ಭಾಗದಲ್ಲಿ ಇನ್ನೊಂದಿಷ್ಟು ಕಂಟೆಂಟ್ ಸೇರಿಸಬಹುದಿತ್ತು. ಕಥೆ ಕಟ್ಟುವುದಕ್ಕಿಂತಾ ಹೆಚ್ಚಾಗಿ ಕುಸುರಿ ಕೆಲಸಕ್ಕೆ ಬಹುಶಃ ಹೆಚ್ಚು ಗಮನ ಕೊಟ್ಟಿರೋದು ಕಾಣುತ್ತದೆ.
ಪ್ರೀತಿಯ ಶ್ರೇಷ್ಟತೆ, ಹೆತ್ತವರ ಪ್ರಾಮುಖ್ಯತೆಯ ಬಗ್ಗೆ ಪ್ರಶಾಂತ್ ರಾಜಪ್ಪ ಬರೆದ ಮಾತುಗಳು ಮನಮುಟ್ಟುತ್ತವೆ. ನವೀನ್ ಕುಮಾರ್ ಕ್ಯಾಮೆರಾ ಕೆಲಸ ಶೋಕಿವಾಲನ ಬ್ಯೂಟಿ ಹೆಚ್ಚಿಸಿದೆ. ಪ್ರತಿಯೊಂದು ಫ್ರೇಮಲ್ಲೂ ʻನವೀನತೆʼ ಎದ್ದುಕಾಣುತ್ತದೆ. ನವೀನ್ ಮತ್ತು ಪ್ರಶಾಂತ್ ರಾಜಪ್ಪ ʻಶೋಕಿವಾಲʼನನ್ನು ಬಳಸಿಕೊಂಡು ಹೆಚ್ಚು ಸ್ಕೋರ್ ಮಾಡಿದ್ದಾರೆ. ಶ್ರೀಧರ್ ಸಂಭ್ರಮ್ ಹಾಡುಗಳು ಈಗಾಗಲೇ ಎಲ್ಲೋ ಕೇಳಿದ ಫೀಲು ಹುಟ್ಟಿಸಿದ್ದು ಯಾಕೋ ಗೊತ್ತಿಲ್ಲ!
ಒಟ್ಟಾರೆಯಾಗಿ, ಮನರಂಜಿಸುವುದನ್ನೇ ಉದ್ದೇಶವಾಗಿಸಿಕೊಂಡ ಸರಕು ಇಲ್ಲಿದೆ. ಮನೆಮಂದಿಯೆಲ್ಲಾ ಒಟ್ಟೊಟ್ಟಿಗೇ ಹೋಗಿ ನೋಡಬಹುದಾದ ಚಿತ್ರ ಇದಾಗಿದೆ.
Comments