ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾಗಳ ನಟಿ ಶ್ರದ್ಧಾ ದಾಶ್ ಇದೀಗ ಕಿರುಚಿತ್ರದ ಮೂಲಕ ಸುದ್ದಿಯಾಗಿದ್ದಾರೆ. ಚಿಲುಕೂರಿ ಆಕಾಶ್ರೆಡ್ಡಿ ನಿರ್ದೇಶಿಸಿರುವ ‘ಪ್ಯೂರ್ ಸೋಲ್’ ಇಂಗ್ಲಿಷ್ ಕಿರುಚಿತ್ರದಲ್ಲಿ ಅವರಿಗೆ ಬೋಲ್ಡ್ ಪಾತ್ರವಿದೆ. ಚಿತ್ರದ ಕಥಾನಾಯಕ ಒಬ್ಬ ಚಿತ್ರಕಲಾವಿದ. ಆತನಿಗೆ ರೂಪದರ್ಶಿಯಾಗಿ ನಾಯಕಿ (ಶ್ರದ್ಧಾ) ಬೆತ್ತಲಾಗಿ ಪೋಸ್ ಕೊಡುತ್ತಾರೆ. ಕಿರುಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಶ್ರದ್ಧಾ ನಿಲುವಿಗೆ ಆಕೆಯ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ‘ಎವರಿ ಕಲರ್ ಹ್ಯಾಸ್ ಎಮೋಷನ್’ ಎನ್ನುವುದು ಕಿರುಚಿತ್ರದ ಅಡಿಬರಹ. ಶಶಾಂಕ್ ತಿರುಪತಿ ಸಂಗೀತ ಸಂಯೋಜಿಸಿದ್ದು, ಪ್ರೇಮ್ ಸಾಗರ್ ಛಾಯಾಗ್ರಹಣ ಮಾಡಿದ್ದಾರೆ.
ಶ್ರದ್ಧಾ ದಾಸ್ ಈ ಹಿಂದೆ ಎರಡು ಕಿರುಚಿತ್ರಗಳಲ್ಲಿ ನಟಿಸಿದ್ದರು. ‘ಪ್ಯೂರ್ ಸೋಲ್’ ಅವರ ಮೂರನೇ ಕಿರುಚಿತ್ರ. “ಇದೊಂದು ಸೋಷಿಯಲ್ ಡ್ರಾಮಾ. ಸ್ತ್ರೀ ಸೌಂದರ್ಯಪ್ರಜ್ಞೆ ಬಗ್ಗೆ ಚರ್ಚಿಸಲ್ಪಡುವ ಕಿರುಚಿತ್ರ ಹಲವು ಅರ್ಥಗಳನ್ನು ಧ್ವನಿಸುತ್ತದೆ. ಜಾಗತಿಕ ಪ್ರೇಕ್ಷಕರನ್ನು ತಲುಪುವ ದೃಷ್ಟಿಯಿಂದ ಇದನ್ನು ಇಂಗ್ಲಿಷ್ನಲ್ಲಿ ಚಿತ್ರಿಸಲಾಗಿದೆ” ಎನ್ನುವ ಶ್ರದ್ಧಾಗೆ ಕಿರುಚಿತ್ರಗಳು ತುಂಬಾ ಖುಷಿಕೊಡುತ್ತವಂತೆ. “ಕಿರುಚಿತ್ರಗಳಲ್ಲಿ ಆಸಕ್ತಿಕರ ಸ್ಕ್ರಿಪ್ಟ್ಗಳು ಸಿಗುತ್ತವೆ. ಸಿನಿಮಾಗಳಲ್ಲಿ ನಾಯಕಿಯರಿಗೆ ಸಿಗದ ಪ್ರಾಮುಖ್ಯತೆ ಇಲ್ಲಿ ಯತೇಚ್ಛವಾಗಿ ಸಿಗುತ್ತದೆ. ಭಿನ್ನ ಪಾತ್ರಗಳಿಗೆ ತೆರೆದುಕೊಳ್ಳುವ ಅವಕಾಶ ಹೆಚ್ಚು. ನಾನು ಈ ಕ್ಷೇತ್ರದ ಬಗ್ಗೆ ತುಂಬಾ ಉತ್ಸುಕಳಾಗಿದ್ದೇನೆ” ಎನ್ನುವ ಅವರು ಭಿನ್ನ ಕಥಾವಸ್ತುವಿನ ಕಿರುಚಿತ್ರಗಳನ್ನು ಎದುರುನೋಡುತ್ತಿದ್ದಾರೆ.