ಯಜಮಾನಿಯ ಜಮಾನಾ-ಸುರೇಶಣ್ಣಾ ಇದು ಸರೀನಾ?


ಯಜಮಾನ ಸಿನಿಮಾ ರಿಲೀಸಾಗಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ಹತ್ತತ್ತಿರ ಇಪ್ಪತ್ತೈದು ಕೋಟಿ ಇನ್ವೆಸ್ಟ್ ಮಾಡಿದ ಮೀಡಿಯಾ ಹೌಸ್ ಸಂಸ್ಥೆಗೆ ಅದಾಗಲೇ ಬಂಡವಾಳದ ಮೇಲೆ ಇಪ್ಪತ್ತೈದು ಕೋಟಿ ಲಾಭವಾಗಿದೆ. ಇನ್ನೂ ಆಗಬಹುದು!
ವಿಷಯ ಅದಲ್ಲ… ಯಜಮಾನ ಸಿನಿಮಾದ ನಿರ್ಮಾಣ ಮಾಡಿರೋದು ಮೀಡಿಯಾ ಹೌಸ್‌ನ ಶೈಲಜಾ ನಾಗ್ ಮತ್ತು ಬಿ. ಸುರೇಶ. ಈ ಸಿನಿಮಾದ ಪಬ್ಲಿಸಿಟಿ ವಿಚಾರದಲ್ಲಿ ಕನ್ನಡದ ಯಾವ ಮಾಧ್ಯಮ ಕೂಡಾ ಪೂರ್ವಗ್ರವಿಲ್ಲದೆ ಕೆಲಸ ನಿರ್ವಹಿಸಿದೆ. ದರ್ಶನ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದ ವಾಹಿನಿಗಳು ಕೂಡಾ ಈ ಚಿತ್ರಕ್ಕೆ ಪಾಸಿಟೀವ್ ರಿಪೋರ್ಟನ್ನೇ ನೀಡಿವೆ. ಯಾವುದೇ ಒಂದು ಸಿನಿಮಾ ಆಗಲಿ ವ್ಯವಹಾರಗಳಾಚೆಗೆ ಅದರ ಗುಣಮಟ್ಟವನ್ನಷ್ಟೇ ಗಮನದಲ್ಲಿಟ್ಟುಕೊಂಡು ಸುದ್ದಿ ಮಾಡಿಕೊಡೋದು ಮಾಧ್ಯಮಗಳ ಕರ್ತವ್ಯ ಕೂಡಾ.
ಆದರೆ ಈ ಸಿನಿಮಾದ ನಿರ್ಮಾಪಕಿ ಶೈಲಜಾ ನಾಗ್ ಜಾಹೀರಾತು ನೀಡುವ ವಿಚಾರದಲ್ಲಿ ತಾರತಮ್ಯ ಮಾಡಿದ್ದಾರೆ ಅನ್ನೋ ಅಸಮಧಾನದ ಮಾತು ಈಗ ಎಲ್ಲೆಡೆ ಕೇಳಿಬರುತ್ತಿದೆ. ‘ಅದೇನ್ರೀ ನಿಮ್ಮ ಚಾನೆಲ್ಲಿಗೆ ಜಾಹೀರಾತು ಪಡೆಯೋ ಯೋಗ್ಯತೆ ಇದೆಯಾ?’ ಎನ್ನುವ ಮೂಲಕ ಕೆಲವು ವಾಹಿನಿಗಳ ಜಾಹೀರಾತು ಮುಖಸ್ಥರಿಗೆ ಅವಮಾನ ಮಾಡಿ ಕಳಿಸಿದ್ದಾರಂತೆ. ಕನ್ನಡದ ಹಿರಿಯ ಪತ್ರಿಕಾ ಛಾಯಾಗ್ರಾಹಕರೊಬ್ಬರು ನಡೆಸುವ ಜಾಲತಾಣಕ್ಕಾಗಿ ಅವರು ಜಾಹೀರಾತು ಕೇಳಿದ ಸಂದರ್ಭದಲ್ಲೂ ಇದೇ ರೀತಿ ಏನೋ ಮಾತಾಡಿ ಮನ ನೋಯಿಸಿದ್ದಾರಂತೆ. ಇರಲಿ ಬಿಡಿ, ಮೇಡಮ್ಮು ದುಡ್ಡು ಎಣಿಸೋ ಬ್ಯುಸಿಯಲ್ಲಿರೋವಾಗ ಹೀಗೆಲ್ಲಾ ಮಾಡಿರಬಹುದು ಅಂತಾ ಸುಮ್ಮನಾಗಬಹುದು.

ಆದರೆ ಸದಾ ಸ್ಥಿತಿಪ್ರಜ್ಞರಂತೆ ಕಾಣುವ, ಎದುರಿಗೆ ಸಿಕ್ಕ ಯಾರನ್ನೇ ಆದರೂ ‘ಗೆಳೆಯಾ…’ ಅಂತಾ ಬಾಯ್ತುಂಬಾ ಕರೆಯುತ್ತ ನಗುನಗುತ್ತಾ ತಬ್ಬಿಕೊಂಡು, ಕೈಕುಲುಕುವ ಸುರೇಶಣ್ಣ ಕೂಡಾ ಮಾಧ್ಯಮದವರ ಬೇಸರಕ್ಕೆ ಗುರಿಯಾಗಿದ್ದಾರೆ. ಸುರೇಶರಂಥಾ ನಿರ್ದೇಶಕ, ನಿರ್ಮಾಪಕರು ಸಾಮಾನ್ಯಕ್ಕೆ ಕಲಾತ್ಮಕ ಸಿನಿಮಾಗಳನ್ನು, ಸೀರಿಯಲ್ಲುಗಳನ್ನು ಮಾಡೋದರಿಂದ ಮಾಧ್ಯಮದ ಒಂದು ವರ್ಗ ಇವರಿಂದ ಏನೆಂದರೇನೂ ನಿರೀಕ್ಷಿಸದೆ ತಮ್ಮಿಂದಾದ ಒಳಿತನ್ನು ಮಾಡುತ್ತಾ ಬಂದಿದ್ದಾರೆ. ಅದೇ ಮನಸ್ಥಿತಿಯಲ್ಲಿ ತಮ್ಮ ಬರಹಗಳಿಗಾಗಿ ‘ಯಜಮಾನ’ನ ಫೋಟೋ ಕೊಡಿ ಅಂತಾ ಕೇಳಿದರೂ, ಸಿನಿಮಾದ ಇನ್ಯಾವುದೋ ವಿವರ ಕೇಳಲು ಕರೆ ಮಾಡಿದರೂ, ಮೆಸೇಜು ಮಾಡಿದರೂ ಅದನ್ನು ಪೂರ್ತಿ ಕೇಳುವ, ನೋಡುವ ಮುಂಚೆಯೇ ‘ಕಮರ್ಷಿಯಲ್ ವಿಚಾರವೇನಿದ್ರೂ ಮೇಡಮ್ಮು ನೋಡ್ಕಂತಾರೆ…’ ಅಂದುಬಿಟ್ಟಿದ್ದರಂತೆ.

“ಏನೋ ಆತ್ಮೀಯರು ಅಂತಾ ಮನೆತನಕ ಬಂದು ಮಾತಾಡಿಸಲು ಹೋದವರನ್ನು ಬಾಗಿಲಿನಲ್ಲೇ ನಿಲ್ಲಿಸಿ ನಾನು ಊಟ ಹಾಕಲ್ಲ ಅಂದಹಾಗಾಯ್ತು ಸುರೇಶಣ್ಣನ ವರಸೆ” ಅಂತಾ ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ತಮಗೆ ಬೇಕು ಅನಿಸಿದವರನ್ನೆಲ್ಲಾ ಕರೆದು ಕೂರಿಸಿ ಮೀಡಿಯಾ ಹೌಸಿನವರು ಉಪಚಾರ ಮಾಡಿ ಕಳಿಸಿದ್ದಾರೆ ಅನ್ನೋದು ನಿಜ. ಆದರೆ ಉಳಿದವರೆಲ್ಲರೂ ಕೂಡಾ ಅದೇ ರೀತಿ ಆತಿಥ್ಯ ಬಯಸುತ್ತಿದ್ದಾರೆ ಅಂತಾ ಶೈಲಜಾ ನಾಗ್ ಅವರಾಗಲಿ, ಬಿ. ಸುರೇಶ ಆಗಲಿ ಯಾಕೆ ತೀರ್ಮಾನಿಸಿದರೋ ಗೊತ್ತಿಲ್ಲ!
ವಿಶ್ವಾಸವನ್ನಷ್ಟೇ ಬಯಸೋರನ್ನು ಹೀಗೆ ತೂಕದ ಯಂತ್ರದ ಮೇಲೆ ಕೂರಿಸೋದು ಸರೀನಾ ಸುರೇಶಣ್ಣಾ?


Posted

in

by

Tags:

Comments

Leave a Reply