ಯಜಮಾನ ಸಿನಿಮಾದಿಂದ ಪೊನ್ನುಕುಮಾರ್ ಔಟ್ ಆಗಿ, ಹರಿಕೃಷ್ಣ ನಿರ್ದೇಶಕ ಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡದ್ದರ ಹಿನ್ನೆಲೆ ಏನು ಅನ್ನೋದು ಇವತ್ತಿಗೂ ಗೌಪ್ಯವಾಗೇ ಇದೆ. ಕತೆ ರೆಡಿಮಾಡೋದರಿಂದ ಹಿಡಿದು ಎಲ್ಲ ಹಂತದಲ್ಲೂ ಹರಿಕೃಷ್ಣ ಇದ್ದರು ಅನ್ನೋದೇನೋ ನಿಜ. ದರ್ಶನ್ ರಂಥಾ ಸೂಪರ್ ಸ್ಟಾರು, ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಬಿ.ಸುರೇಶ, ಶೈಲಜಾ ನಾಗ್ ಮತ್ತವರ ಮೀಡಿಯಾ ಹೌಸು… ಇಷ್ಟೆಲ್ಲಾ ಇದ್ದಾಗ ಆ ಸಿನಿಮಾದಿಂದ ನಿರ್ದೇಶಕನನ್ನೇ ಕಿತ್ತು ಬೇರೊಬ್ಬರನ್ನು ಕೂರಿಸುತ್ತಾರೆಂದರೆ ಅದಕ್ಕೆ ದೊಡ್ಡ ಕಾರಣವೇ ಇರುತ್ತದೆ.
ಇದೇನೇ ಆದರೂ ಆರಂಭದಲ್ಲಿದ್ದ ನಿರ್ದೇಶಕನನ್ನು ಕೂಡಾ ಪತ್ರಿಕಾಗೋಷ್ಟಿಗೆ ಕರೆಸಬೇಕು ಅನ್ನೋದು ನಿರ್ಮಾಣ ಸಂಸ್ಥೆಯ ದೊಡ್ಡ ಗುಣವಾ? ಅಥವಾ ಸ್ವತಃ ದರ್ಶನ್ ಆಜ್ಞಾಪಿಸಿದ್ದರಾ ಗೊತ್ತಿಲ್ಲ!
ಒಟ್ಟಾರೆ ಹೊಸ ನಿರ್ದೇಶಕ ಹರಿಕೃಷ್ಣ ಮಾತು ಮುಗಿಸುತ್ತಿದ್ದಂತೇ ಹಳೇ ಡೈರೆಕ್ಟರ್ ಪೊನ್ನುಕುಮಾರ್ ರನ್ನು ಸಹಾ ವೇದಿಕೆಗೆ ಕರೆಸಲಾಯ್ತು. ಪೊನ್ನು ಕೂಡಾ ತಾನು ಎತ್ತಂಗಡಿಯಾಗಿರೋ ನಿರ್ದೇಶಕ ಅನೋದನ್ನೇ ಮರೆತು ಸಿನಿಮಾದ ಒಂದೊಂದು ವಿಭಾಗದ ಬಗ್ಗೆಯೂ ಮಾತಾಡುತ್ತಾ ಹೀರೋ ದರ್ಶನ್ ಅವರಿಗೆ ಉಘೇ ಉಘೇ ಅನ್ನುತ್ತಿತ್ತು. ಅದೆಲ್ಲಿತ್ತೋ ಮೇಡಮ್ಮು ಶೈಲಕ್ಕನಿಗೆ ಸಿಟ್ಟು… ಕೂತಲ್ಲೇ ಬುಸುಬುಸು ಅನ್ನತೊಡಗಿದ್ದರು. ಅದು ಪೊನ್ನುಕುಮಾರು ಅದನ್ನು ಅರ್ಥ ಮಾಡಿಕೊಳ್ಳದೇ ಮಾತಾಡುತ್ತಲೇ ಇತ್ತು. ನೋಡೋ ತನಕ ನೋಡಿದ ಶೈಲಮ್ಮ ಎದ್ದು ನಿಂತವರೇ ‘ಏನ್ರೀ ಎಲ್ಲಾ ನೀವೇ ಮಾತಾಡಿಬಿಟ್ರೆ….. ಬೇರೆಯವರು ಏನು ಮಾತಾಡ್ತಾರೆ. ಬನ್ರೀ ಸಾಕು ಅನ್ನೋ ರೀತಿಯಲ್ಲಿ ತುಂಬಿದ ಪತ್ರಿಕಾಗೋಷ್ಟಿಯಲ್ಲಿ ಅವಾಜು ಬಿಟ್ಟರು. ಶೈಲಜಾ ಅವರ ವಾಯ್ಸಿಗೆ ಅದೆಂಥಾ ತಾಕತ್ತೆಂದರೆ, ಮೈಕಿಲ್ಲದೆಯೂ ಮೈದಾನವನ್ನು ನಡುಗಿಸುತ್ತದೆ. ಇಂಥಾದ್ದರಲ್ಲಿ ಯಜಮಾನಿ ಶೈಲಜಾ ಕೂಗಿಗೆ ಇಡೀ ಪತ್ರಿಕಾಗೋಷ್ಟಿಯೇ ಬೆಚ್ಚಿಬಿದ್ದಿತ್ತು. ಇನ್ನು ಪೊನ್ನು ಕುಮಾರ್ ಪಾಡು ಏನಾಗಬೇಡ. ಗಾಬರಿಯಿಂದ ಸ್ಟೇಜು ಇಳಿದ ಕುಮಾರ್ ಮತ್ತೆ ಯಾರ ಕಣ್ಣಿಗೂ ಕಾಣಿಸಲೇ ಇಲ್ಲ…
ಇದಲ್ಲವೇ ಯಜಮಾನ್ತಿಯ ಗತ್ತು!