ತೆರೆಯ ಮೇಲೆ ತನ್ನ ಸೆಕ್ಸಿ ಗ್ಲಾಮರ್ ಇಮೇಜಿನಿಂದ ಕಂಗೊಳಿಸುತ್ತಿದ್ದ ಸ್ಮಿತಾಳ ವೈಯಕ್ತಿಕ ಬದುಕು ಹೇಗಿತ್ತು? ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಆಕೆ ನೇಣಿಗೆ ಕೊರಳೊಡ್ಡಬೇಕಾದ ಸ್ಥಿತಿ ಏಕೆ ನಿರ್ಮಾಣವಾಯಿತು? ಕಲಾವಿದೆಯಾಗಿ ಚಿತ್ರರಂಗದಲ್ಲಿ ಆಕೆಗಿದ್ದ ಸ್ಥಾನಮಾನವೇನು?

ದಕ್ಷಿಣ ಭಾರತದ ಮೋಹಕ ನಟಿ ಸಿಲ್ಕ್ ಸ್ಮಿತಾ ಜೀವನ ಕತೆಯನ್ನಾಧರಿಸಿ ಹಿಂದಿಯಲ್ಲಿ ಡರ್ಟಿ ಪಿಕ್ಚರ್ ಹೆಸರಿನ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಬಿಡುಗಡೆಯಾಗಿ ಒಂದು ವಾರಕ್ಕೇ ಆ ಕಾಲಕ್ಕೆ ಮೂವತ್ತು ಕೋಟಿ ಲಾಭ ಮಾಡಿತ್ತು.  ಸಿಲ್ಕ್ ಪಾತ್ರದಲ್ಲಿ ನಟಿಸಿದ್ದ ವಿದ್ಯಾಬಾಲನ್ ಗೆ ನ್ಯಾಷನಲ್ ಅವಾರ್ಡೂ ಸಿಕ್ಕಿತ್ತು. ಈಗ ಇದೇ ಸಿಲ್ಕ್ ಸ್ಟೋರಿ ಆಧರಿಸಿ ಮತ್ತೊಂದು ಸಿನಿಮಾ ತಯಾರಾಗಲಿದೆ. ಅದು ತಮಿಳಿನಲ್ಲಿ. ಈ ಹಿಂದೆ ಕಾಮಿಡಿ ಹೀರೋ ಸಂತಾನಂ ನಟಿಸಿದ್ದ ಕಣ್ಣಾ ಲಡ್ಡು ತಿನ್ನ ಆಸೆಯಾ ಎನ್ನುವ ಹಿಟ್ ಸಿನಿಮಾ ನೀಡಿದ್ದವರು ಕೆ.ಎಸ್. ಮಣಿಕಂಠನ್. ಕಾಮಿಡಿ ಹಿಟ್ ನೀಡಿದ್ದ ಮಣಿಕಂಠನ್ ಈ ಸಲ ಸ್ಮಿತಾ ಬದುಕಿನತ್ತ ಕ್ಯಾಮೆರಾ ತಿರುಗಿಸಿದ್ದಾರೆ.

ತನ್ನ ಮಾದಕ ನೃತ್ಯ – ನೋಟದಿಂದ ನೋಡುಗರೆದೆಗೆ ಕಿಚ್ಚು ಹಚ್ಚುತ್ತಿದ್ದ ಸಿಲ್ಕ್ ಸ್ಮಿತಾ ಎಂಬ ನಟಿ ಅಕ್ಷರಶಃ ರಸಿಕರ ರಾಣಿಯಾಗಿದ್ದವಳು. ದಕ್ಷಿಣ ಭಾರತದ ಖ್ಯಾತನಾಮರ ಜೊತೆಯಲ್ಲೆಲ್ಲಾ ಹೆಜ್ಜೆಹಾಕಿದ್ದ ಸ್ಮಿತಾ ಹಣ, ಜನಪ್ರಿಯತೆ ಎರಡನ್ನೂ ಯಥೇಚ್ಚವಾಗಿ ಸಂಪಾದಿಸಿದ್ದ ಕಲಾವಿದೆ. ಹಾಗಾಗಿ ಬಿಚ್ಚಮ್ಮಂದಿರ ಪರ್ವವೇ ಚಿತ್ರರಂಗವನ್ನಾಳುತ್ತಿದ್ದರೂ ಒಂದು ಕಾಲದ ಏಜ್ ಓಲ್ಡ್ ನಟಿಯಾಗಿದ್ದ ಸ್ಮಿತಾಳ ಜೀವನ ಕತೆಯನ್ನಾಧರಿಸಿದ ಮತ್ತೊಂದು ಸಿನಿಮಾ ಬರಲಿದೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಸಿಲ್ಕ್ ಸ್ಮಿತಾ ಓದಿದ್ದು ಕೇವಲ ೩ನೆಯ ತರಗತಿಯವರೆಗೆ ಮಾತ್ರ. ತೆಲುಗು ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಹಣವನ್ನಾಗಲೀ, ಯಶಸ್ಸನ್ನಾಗಲೀ ಹೇಗೆ ಕಾಪಾಡಬೇಕೆಂದು ಆಕೆಗೆ ತಿಳಿಯುತ್ತಿರಲಿಲ್ಲ. ಹಣ ಕೊಟ್ಟರೇ ಕೊಟ್ಟರು, ಇಲ್ಲವಾದರೆ ಇಲ್ಲ. ಅದ್ಯಾವ ಪುಣ್ಯಾತ್ಮ ಅವಳಿಗೆ ಸಿಲ್ಕ್ ಎಂದು ನಾಮಕರಣ ಮಾಡಿದನೋ! ರೇಶ್ಮೆಗೂಡಿನಂತಹ ಸಿಲ್ಕ್ ಸುಮಾರು ಹದಿನೈದು ವರ್ಷಗಳ ಚಿತ್ರಜೀವನದುದ್ದಕ್ಕೂ ಸಿಲ್ಕಿನ ಎಳೆಎಳೆಯಾಗಿ ಬಿಡಿಸಿಕೊಂಡೇ ಬೆಳೆದಳು. ಗೂಡಿನೊಳಗಿನ ಹುಳು ಸತ್ತಿರುವಂತೆ ಅವಳ ಆದರ್ಶಗಳು ಎಂದೋ ಸತ್ತು ಹೋಗಿತ್ತು. ಆದರೆ ಆಸೆಗಳು ದಿನದಿನಕ್ಕೂ ಜೀವಂತವಾಗುತ್ತಿದ್ದವು.

ತೆರೆಯ ಮೇಲೆ ತನ್ನ ಸೆಕ್ಸಿ ಗ್ಲಾಮರ್ ಇಮೇಜಿನಿಂದ ಕಂಗೊಳಿಸುತ್ತಿದ್ದ ಸ್ಮಿತಾಳ ವೈಯಕ್ತಿಕ ಬದುಕು ಹೇಗಿತ್ತು? ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಆಕೆ ನೇಣಿಗೆ ಕೊರಳೊಡ್ಡಬೇಕಾದ ಸ್ಥಿತಿ ಏಕೆ ನಿರ್ಮಾಣವಾಯಿತು? ಕಲಾವಿದೆಯಾಗಿ ಚಿತ್ರರಂಗದಲ್ಲಿ ಆಕೆಗಿದ್ದ ಸ್ಥಾನಮಾನವೇನು? ಎಂಬಿತ್ಯಾದಿ ವಿವರಗಳು ಈ ಸಿನಿಮಾದಲ್ಲಿರಲಿವೆಯಂತೆ. ಈ ಬಾರಿ ಸ್ಮಿತಾಳ ಪಾತ್ರವನ್ನು ಯಾರು ನಿಭಾಯಿಸುತ್ತಾರೆ ಅನ್ನೋ ವಿಚಾರವಿನ್ನೂ ಜಾಹೀರಾಗಿಲ್ಲ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಅಮ್ಮನ ರೊಮ್ಯಾನ್ಸ್‌ ನೋಡುವುದು ಮಗನಿಗೆ ಇಷ್ಟವಿಲ್ಲವಂತೆ

Previous article

ನವೆಂಬರ್ 1ರಂದು ನಮ್ಮ ಫ್ಲಿಕ್ಸ್ ನಲ್ಲಿ ಭ್ರಮೆ!

Next article

You may also like

Comments

Leave a reply

Your email address will not be published. Required fields are marked *