ಪ್ರತೀ ವರ್ಷ ಬೇರೆಬೇರೆ ದೇಶಗಳಲ್ಲಿ ನಡೆಯುತ್ತಿದ್ದ ಸೈಮಾ (ಸೌಥ್ ಇಂಡಿಯನ್ ಇಂಟರ್ನ್ಯಾಷನಲ್ ಅವಾರ್ಡ್ಸ್) ಪ್ರಶಸ್ತಿ ಪ್ರದಾನ ಸಮಾರಂಭಗಳು, ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತದೆ ಎಂದು ಸುದ್ದಿಯಾದಾಗ ಎಲ್ಲರೂ ಖುಷಿಪಟ್ಟಿದ್ದರು. ಅದರಲ್ಲೂ ಪುನೀತ್ ರಾಜಕುಮಾರ್ ಸ್ಮರಣಾರ್ಥ ಈ ಸಮಾರಂಭವನ್ನು ಅರಮನೆ ಮೈದಾನದಲ್ಲಿ ಸೆ. 10 ಮತ್ತು 11 ಆಯೋಜಿಸಲಾಗಿದೆ ಎಂಬ ಸುದ್ದಿ ಹೊರಬಿದ್ದಾಗ, ಪುನೀತ್ ಮತ್ತು ಕನ್ನಡ ಚಿತ್ರರಂಗಕ್ಕೆ ಸಂದ ಗೌರವ ಇದು ಎಂದು ಚಿತ್ರರಂಗದವರು ನಂಬಿದ್ದರು. ಆದರೆ, ಸೈಮಾ ಎಂಬುದು ಬರೀ ಪ್ರಶಸ್ತಿ ಪ್ರಧಾನ ಸಮಾರಂಭವಲ್ಲ, ಅದೊಂದು ಅಧ್ವಾನ ಎಂದು ಗೊತ್ತಾಗಿದ್ದು ಸಮಾರಂಭದ ದಿನದಂದೇ.
ಸೈಮಾ ಎಂಬ ಹೆಸರಿನಲ್ಲೇ ಅಂತಾರಾಷ್ಟ್ರೀಯ ಎಂಬ ಪದವಿದೆ. ಹಾಗಿರುವಾಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಬಹುದು ಎಂದು ಭಾವಿಸಿದ್ದವರಿಗೆ ತಣ್ಣೀರು ಎರಚಿದಂತಾಗಿದೆ. ಒಂದು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಇಷ್ಟೊಂದು ಕಳಪೆಯಾಗಿ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಈ ವರ್ಷದ ಕಾರ್ಯಕ್ರಮ ಎದುರಿಗಿದೆ.
ಮೊನ್ನೆ ನಡೆದ ಕಾರ್ಯಕ್ರಮ ಅದೆಷ್ಟು ಅಧ್ವಾನವಾಗಿತ್ತು ಎಂದರೆ ಅದು ಬರೀ ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಈ ಸಮಾರಂಭ ಸೆ. 10 ಮತ್ತು 11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಕಳೆದ ತಿಂಗಳು ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಲಾಗಿತ್ತು. ಆದರೆ, ಇಂಥದ್ದೊಂದು ಸಮಾರಂಭ ನಡೆಯುತ್ತಿದೆ ಎಂದು ಸಮಾರಂಭದ ದಿನದಂದು ಕನ್ನಡ ಚಿತ್ರರಂಗದವರಿಗೇ ನೆನಪಿರಲಿಲ್ಲ. ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಜನಪ್ರಿಯ ನಟ-ನಟಿಯರಿಗೆ, ತಂತ್ರಜ್ನರಿಗೆ ಮತ್ತು ಸಂಘ-ಸಂಸ್ಥೆಗಳಿಗೆ ಈ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ.
ಶನಿವಾರ ಮತ್ತು ಭಾನುವಾರ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭವಿದೆ ಎಂದು ಮಾಧ್ಯಮದವರಿಗೆ ಮತ್ತು ಚಿತ್ರರಂಗದವಿರಿಗೆ ಮಾಹಿತಿ ಇತ್ತಾದರೂ, ಅದರ ಆಯೋಜಕರ್ಯಾರು? ಎಲ್ಲಿದ್ದಾರೆ? ಆಹ್ವಾನ ಪತ್ರಿಕೆ ಎಲ್ಲಿ ಸಿಗುತ್ತದೆ? ಮುಂತಾದ ಯಾವ ವಿಷಯಗಳೂ ಗೊತ್ತಿರಲಿಲ್ಲ. ಒಂದಿಷ್ಟು ಕಲಾವಿದರನ್ನು ಹೊರತುಪಡಿಸಿ, ಮಿಕ್ಕವರ್ಯಾರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನವಿರಲಿಲ್ಲ. ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೂ ಮತ್ತು ಚಿತ್ರರಂಗದವರಿಗೆ ಪ್ರಶಸ್ತಿ ನೀಡಲಾದರೂ, ಆಯೋಜಕರು ಕನ್ನಡ ಚಿತ್ರರಂಗವನ್ನು ಅದೆಷ್ಟು ಕಡೆಗಣಿಸಿದ್ದರೆಂದರೆ, ಏನಾಗುತ್ತಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರಿಗಾಗಲೀ, ಕಲಾವಿದರ ಸಂಘ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘಕ್ಕಾಗಲೀ ಸೂಕ್ತ ಮಾಹಿತಿ ಇರಲಿಲ್ಲ.
ಕೊನೆಗೆ, ಶನಿವಾರ ಮಧ್ಯಾಹ್ನದ ಹೊತ್ತಿಗೆ ದಿಡಗ್ಗನೆ ಎದ್ದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಬೆಂಗಳೂರಿನಲ್ಲಿ ಪ್ರತಿಷ್ಠಿತ ಪ್ರಶಸ್ತಿ ಕಾರ್ಯಕ್ರಮ ನಡೆಯುತ್ತಿದ್ದರೂ, ಅಪ್ಪು ಹೆಸರಲ್ಲಿ ಕಾರ್ಯಕ್ರಮ ಮಾಡುತ್ತಿದ್ದರೂ, ಚಿತ್ರರಂಗದವರಿಗೆ ಗೊತ್ತಿಲ್ಲ ಎಂದು ಪತ್ರಿಕಾಗೋಷ್ಠಿ ಮಾಡಿ ಹೇಳಬೇಕಾಯಿತು. ಉಮೇಶ್ ಬಣಕಾರ್ ಪತ್ರಿಕಾಗೋಷ್ಠಿ ಮಾಡಿದ ವಿಷಯ ಆಯೋಜಕರಿಗೆ ಗೊತ್ತಾಯಿತೋ, ಇಲ್ಲವೋ ಗೊತ್ತಿಲ್ಲ. ಆದರೆ, ಕನ್ನಡ ಚಿತ್ರರಂಗವನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಹನೆ ಹೆಚ್ಚುತ್ತಿದೆ ಎಂಬ ವಿಷಯ ಮಾತ್ರ ಆಯೋಜಕರಿಗೆ ಗೊತ್ತಾಯಿತು. ತಕ್ಷಣವೇ ಎಚ್ಚೆತ್ತುಕೊಂಡ ಆಯೋಜಕರು ತರಾತುರಿಯಲ್ಲಿ ಒಂದಿಷ್ಟು ಮಂದಿಯನ್ನು ಕಾರ್ಯಕ್ರಮವಕ್ಕೆ ಆಹ್ವಾನಿಸಿದರಂತೆ.
ಬರೀ ಇಷ್ಟೇ ಅಲ್ಲ, ಕಾರ್ಯಕ್ರಮ ಅದೆಷ್ಟು ಅಧ್ವಾನದಿಂದ ಕೂಡಿತ್ತು ಎಂದರೆ, ಅಲ್ಲಿ ಯಾವುದೂ ಸರಿಯಾಗಿ ಆಯೋಜಿತವಾಗಿರಲಿಲ್ಲ. ಶನಿವಾರ, ತೆಲುಗು ಮತ್ತು ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಪ್ರಶಸ್ತಿಗಳನ್ನು ನೀಡಲಾಯಿತು ಮತ್ತು ಭಾನುವಾರ, ತಮಿಳು ಮತ್ತು ಮಲಯಾಳಂ ಚಿತ್ರರಂಗಕ್ಕೆ ಸಂಬಂಧಿಸಿದ ಪ್ರಶಸ್ತಿಗಳನ್ನು ನೀಡಲಾಯಿತು. ಆದರೆ, ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದಿಂದ ಭಾಗವಹಿಸಿದ್ದು ಬೆರಳಣಿಕೆಯಷ್ಟು ನಟರು.
ಇನ್ನು, ಕಾರ್ಯಕ್ರಮದಲ್ಲೂ ಸಾಕಷ್ಟು ಗೊಂದಲವಿತ್ತು. ಸಂಜೆ 7ಕ್ಕೆ ಶುರುವಾಗಬೇಕಿದ್ದ ಸೈಮಾ, ಶುರುವಾಗಿದ್ದು 9.30ಕ್ಕೆ. 11ಕ್ಕೆ ಮುಗಿಯಬೇಕಾಗಿದ್ದ ಕಾರ್ಯಕ್ರಮ ಮುಗಿದಿದ್ದು 1ಕ್ಕೆ. ಅಷ್ಟರಲ್ಲಿ ಬಹಳಷ್ಟು ಜನ ಸುಸ್ತಾಗಿದ್ದರು. ಹೇಳೋಕೆ ಇದೊಂದು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ. ಆದರೆ, ಬೀದಿಯಲ್ಲಿ ನಡೆಯುವ ಕಾರ್ಯಕ್ರಮಗಳೇ ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತದೆ ಎಂಬ ಮಾತು ಚಿತ್ರರಂಗದವರಿಂದ ಮತ್ತು ಮಾಧ್ಯಮದವರಿಂದ ಕೇಳಿಬಂತು.
ಒಟ್ಟಾರೆ ಸೈಮಾ ಎಂದರೆ ಹಾಗಿರಬಹುದು, ಹೀಗಿರಬಹುದು ಎಂದೆಲ್ಲ ಕಲ್ಪಸಿಕೊಂಡಿದ್ದ ಜನ ಮತ್ತು ಚಿತ್ರರಂಗ, ಇಷ್ಟೇನಾ ಎನ್ನುವಂತೆ ಮುಗಿದು ಹೋಯಿತು. ಜಾಹೀರಾತಿನಿಂದ ದುಡ್ಡೆತ್ತುವುದಕ್ಕಾಗಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂಬ ನಂಬಿಕೆ ಇನ್ನಷ್ಟು ಗಟ್ಟಿಯಾಯಿತು. ಇನ್ನು, ಪ್ರಶಸ್ತಿಗಳ ಬಗ್ಗೆಯೂ ಸಾಕಷ್ಟು ಗೊಂದಲ ಮತ್ತು ಅನುಮಾನಗಳಿವೆ. ಅದರಲ್ಲೂ ತೆಲುಗಿನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸಾಯಿಪಲ್ಲವಿಗೆ ಸಿಗಬೇಕಿತ್ತು ಎಂಬ ಮಾತು ಕೇಳಿಬರುತ್ತಿದೆ. ಪೂಜಾ ಹೆಗ್ಡೆ ದುಡ್ಡು ಕೊಟ್ಟು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು ಎಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಇದೊಂದು ಉದಾಹರಣೆಯಷ್ಟೇ. ಇದೇ ರೀತಿ ಎಷ್ಟೋ ಪ್ರಶಸ್ತಿಗಳು ಗೋಲ್ಮಾಲ್ ಆಗಿರುವ ಸಾಧ್ಯತೆ ಇದೆ.
ಏನೇ ಇರಲಿ, ಇಂಥದ್ದೊಂದು ಅಂತಾರಾಷ್ಟ್ರೀಯ ಪ್ರಶಸ್ತಿ ಎಂಬ ಹೆಸರಿನಲ್ಲಿ ಆಯೋಜಕರು ಮಾತ್ರ ಕೋಟಿಕೋಟಿ ಬಾಚಿಕೊಂಡಿದ್ದಾರೆ. ಇಲ್ಲಿ ದಡ್ಡರಾಗಿದ್ದು ಮತ್ತು ಬಫೂನ್ಗಳೆನಿಸಿಕೊಂಡಿದ್ದು ಮಾತ್ರ ಚಿತ್ರರಂಗದವರು ಎಂದರೆ ಸುಳ್ಳಲ್ಲ.
ಭಾಗ:2 ದರ್ಶನ್ ಯಾಕೆ ಎದ್ದುಬಂದರು?
No Comment! Be the first one.