ಒಂದು ಊರು. ಅಲ್ಲೊಬ್ಬ ದುಷ್ಟ. ಕಂಡವರ ಆಸ್ತಿಗೆ ಕಣ್ಣಿಡುವ ಕುತಂತ್ರಿ. ಅಡ್ಡ ಬಂದವರನ್ನು ಅಡ್ಡಡ್ಡ ಮಲಗಿಸೋ ರೌಡಿ. ಅವನಿಗೊಬ್ಬ ‘ಬಡ್ಡಿ ಮಗ’ನಂಥಾ ತಮ್ಮ. ಇವರನ್ನೆಲ್ಲಾ ಪೊರೆಯುವ ರಾಜಕಾರಣಿ. ಇಂಥವರ ಮಧ್ಯೆ ಊರ ಹೆಣ್ಮಕ್ಕಳ ಮಾನ, ಪ್ರಾಣ ಕಾಪಾಡಲು ನಿಂತ ಪರೋಪಕಾರಿ ಸಿಂಗ. ಇವನು ಸರ್ಕಸ್ಸಲ್ಲಿ ಶೋ ಕೊಡೋ ಸಿಂಹ ಅಲ್ಲ. ಕಾದು ಕಾದು ಬೇಟೆ ಆಡೋ ಕಾಡಿನ ರಾಜ. ಇವನ ಜನಸೇವೆಗೆ ಒತ್ತಾಸೆಯಾಗಿ ನಿಂತ ತ್ಯಾಗಮಯಿ ತಾಯಿ. ಇಷ್ಟೆಲ್ಲಾ ಇದ್ದಮೇಲೆ ಪ್ರೀತಿಸೋ ಹುಡುಗಿಯ ಪ್ರೇರಣೆ. ಇದು ಸಿಂಗ ಸಿನಿಮಾದ ಪ್ರಧಾನ ಎಳೆ.

ಊರಿಡೀ ದುಶ್ಮನಿ ಕಟ್ಟಿಕೊಂಡು ತಿರುಗೋ ಸಿಂಗನಿಗೆ ಕೊಲ್ಲಲು ನಿಂತ ಜನರ ಮೇಲೆ ರೋಷ, ಕಾಯೋ ದೇವರ ಮೇಲೆ ಪ್ರೀತಿ. ಸಿಂಗ ಚಿತ್ರದಲ್ಲಿ ಶಿವರಾಜ್ ಕೆ.ಆರ್.ಪೇಟೆ, ವಿಜಯ್ ಚೆಂಡೂರ್ ಸೇರಿದಂತೆ ಹೊಸಾ ಕಾಮಿಡಿ ನಟರ ದಂಡೇ ಇದೆ. ರಘು ನಿಡುವಳ್ಳಿ ಬರೆದ ಸಂಭಾಷಣೆ ಚಿತ್ರದ ತೂಕವನ್ನು ಹೆಚ್ಚಿಸಿದೆ. ಕಲರ್ ಫುಲ್ ಹಿನ್ನೆಲೆಯನ್ನು ಅಷ್ಟೇ ಆಕರ್ಷಕವಾಗಿ ತೆರೆದಿಟ್ಟಿದ್ದಾರೆ ಛಾಯಾಗ್ರಾಹಕ ಕಿರಣ್ ಹಂಪಾಪುರ. ಪಕ್ಕಾ ಕಮರ್ಷಿಯಲ್ ಫಾರ್ಮುಲಾದ ಸಿನಿಮಾವನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ ನಿರ್ದೇಶಕ ವಿಜಯ್ ಕಿರಣ್. ಹೊಸ್ಮನೆ ಮೂರ್ತಿ ಅವರ ಕಲಾನಿರ್ದೇಶನದ ಕುಸುರಿ ಕೆಲಸ ಸಿಂಗನಿಗೆ ಮೆರುಗು ತಂದಿದೆ.

ಅಡ್ಡಾದಿಡ್ಡಿ ಬೆಳೆದಿರೋ ಹೀರೋ ಚಿರು ಸರ್ಜಾ ದೇಹ ಕೂಡಾ ಪಾತ್ರಕ್ಕೆ ಪೂರಕವಾಗಿರೋದು ಗಮನಾರ್ಹ ಅಂಶ. ತಾರಾ ಅನುರಾಧ ಅವರ ನಟನೆ ಅದ್ಭುತ. ಅದಿತಿ ಪ್ರಭುದೇವ ಕನ್ನಡ ಚಿತ್ರರಂಗದ ಪಾಲಿಗೆ ವರವಾಗಿರುವ ನಾಯಕನಟಿ ಅನ್ನೋದು ಸಿಂಗ ಸಿನಿಮಾದಲ್ಲೂ ಸಾಬೀತಾಗಿದೆ.

ಬಡ್ಡಿ ಹಣ ಕೊಟ್ಡು ಬಡ ಜನರ  ಬದುಕು ಹಾಳು ಮಾಡೋ ಗೂಂಡಾಗಳು, ನೆಲ ನುಂಗುವ ಡಾನ್’ಗಳಿಗೆ ಸಿಂಹಸ್ವಪ್ನವಾಗಿ ಕಾಡುವ ಸಿಂಗನ ಪಾತ್ರದಲ್ಲಿ ಚಿರು ಅಬ್ಬರಿಸಿದ್ದಾರೆ. ಗರ್ಭದಿಂದಲೇ ಪೊರೆಯಲು ಶುರು ಮಾಡುವ ತಾಯಿ ಹೆತ್ತ ಜೀವಕ್ಕೆ ಸಂಚಕಾರ ಬಂದ ಹೊತ್ತಲ್ಲಿ ತನ್ನ ಕುಡಿಯನ್ನು ಉಳಿಸಿಕೊಳ್ಳಲು ಅಂಗಲಾಚಲೂಬಹುದು ಮಿತಿ ಮೀರಿದರೆ ರಕ್ತಹರಿಸಲೂಬಲ್ಲಳು ಅನ್ನೋದನ್ನು ಸಿಂಗ ಸಿನಿಮಾದಲ್ಲಿ ಮನಮುಟ್ಟುವಂತೆ ನಿರೂಪಿಸಿದ್ದಾರೆ. ಚಿತ್ರದಲ್ಲಿ ರಕ್ತಪಾತ ಒಂದಿಷ್ಟು ಹೆಚ್ಚೆನಿಸಿದರೂ ಅದು ಕತೆಗೆ ಪೂರಕವಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಸಿಂಗ ಪಕ್ಕಾ ಕಮರ್ಷಿಯಲ್, ಆ್ಯಕ್ಷನ್ ಅಂಶಗಳನ್ನು ಹೊಂದಿರುವ ಸಿನಿಮಾ. ಹೊಡೆದಾಟ, ಸೆಂಟಿಮೆಂಟ್ ಸಬ್ಜೆಕ್ಟುಗಳನ್ನು ಇಷ್ಟಪಡೋ ವರ್ಗಕ್ಕೆ ಹೇಳಿಮಾಡಿಸಿದಂತ ಚಿತ್ರ.

 

 

CG ARUN

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಒಂದು ಮಿಲಿಯನ್ ಹಿಟ್ಸ್ ಪಡೆದ ಶೋಕಿಲಾಲ!

Previous article

ದೊಡ್ಮನೆ ಮೊಮ್ಮಗಳ ಚಿತ್ರಕ್ಕೆ ಟೈಟಲ್ ಫಿಕ್ಸ್!

Next article

You may also like

Comments

Leave a reply

Your email address will not be published. Required fields are marked *