ನಾನೂ ಕೂಡಾ ಲೈಟ್ ಬಾಯ್ ಹಂತದಿಂದಲೇ ಬೆಳೆದು ಬಂದವನು. ಆ ಕಷ್ಟ ಏನೆಂದು ಚೆನ್ನಾಗಿ ಗೊತ್ತಿದೆ. ಆದರೆ ನಾನು ಆ ನಂತರ ಹೀರೋ ಆದೆ. ಈ ಕಿರಣ್ ಹಂಪಾಪುರ ಕೂಡಾ ನನ್ನದೇ ಚಿತ್ರಗಳಿಗೂ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದವನು. ಆದರೆ ಇಂದು ಆತನನ್ನು ಕ್ಯಾಮೆರಾಮನ್ ಆಗಿ ನೋಡಲು ತುಂಬಾ ಖುಷಿಯಾಗುತ್ತಿದೆ’’

                       –ಚಾಲೆಂಜಿಂಗ್ ಸ್ಟಾರ್ ದರ್ಶನ್

ಉದಯ್ ಕೆ. ಮೆಹ್ತಾ ನಿರ್ಮಾಣ, ಚಿರಂಜೀವಿ ಸರ್ಜಾ ಅಭಿನಯದಲ್ಲಿ ತಯಾರಾಗಿ ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಚಿತ್ರ ಸಿಂಗ. ಈ ಸಿನಿಮಾಗೆ ಕ್ರಿಯಾಶೀಲ ಛಾಯಾಗ್ರಾಹಕ ಎನಿಸಿಕೊಂಡಿರುವ ಕಿರಣ್ ಹಂಪಾಪುರ ಕ್ಯಾಮೆರಾ ಕೆಲಸ ನಿಭಾಯಿಸಿದ್ದಾರೆ. ಲೈಟ್ ಬಾಯ್ ಆಗಿದ್ದಾಗಲೇ ಕ್ಯಾಮೆರಾದತ್ತ ಕುತೂಹಲಗೊಂಡು ಅದರ ಪಟ್ಟುಗಳನ್ನೆಲ್ಲ ಶ್ರದ್ಧೆಯಿಂದ ಕಲಿತ ಹಂಪಾಪುರ ಈವತ್ತು ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ಛಾಯಾಗ್ರಾಹಕರಾಗಿ ಹೊರ ಹೊಮ್ಮಿದ್ದಾರೆ. ಇವತ್ತು ಅವರ ಹುಟ್ಟು ಹಬ್ಬ ಕೂಡಾ. ಈ ಸಂದರ್ಭದಲ್ಲಿ ಅವರಿಗೊಂದು ಶುಭಾಶಯ ತಿಳಿಸುತ್ತಾ ಅವರ ಬದುಕಿನ ಪುಟ್ಟ ಹಾದಿಯನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಈಗ ಬಿಡುಗಡೆಯಾಗಿರುವ ಸಿಂಗ ಸಿನಿಮಾದ ಟ್ರೇಲರು ಹಾಡುಗಳನ್ನು ನೋಡಿದ ಬಹುತೇಕರು ಕಚಗುಳಿಯಿಡುವಂಥಾ ಚೆಂದದ ದೃಶ್ಯಾವಳಿಗಳಿಗೆ ಮಾರು ಹೋಗಿದ್ದಾರೆ. ಈ ಹಿಂದೆ ಜಯತೀರ್ಥ ನಿರ್ದೇಶಿಸಿದ್ದ ಬ್ಯೂಟಿಫುಲ್ ಮನಸುಗಳು ಚಿತ್ರ ಬಿಡುಗಡೆಯಾದಾಗಲೂ ಈ ಸಿನಿಮಾಗೆ ಕೆಲಸ ಮಾಡಿರುವ ಛಾಯಾಗ್ರಾಹಕನೂ ಹೀರೋನೇ ಎಂಬರ್ಥದಲ್ಲಿ ಕೊಂಡಾಡಿದ್ದರು. ಹೀಗೆ ಅನಾಮಿಕ ಪ್ರೇಕ್ಷಕರೆದೆಯಲ್ಲೂ ತಮ್ಮ ಕ್ಯಾಮೆರಾ ಚಮತ್ಕಾರದ ಮೂಲಕ ಆಹ್ಲಾದ ಮೂಡಿಸಿರುವವರು ಇದೀಗ ಬಹುಬೇಡಿಕೆಯ ಛಾಯಾಗ್ರಾಹಕರಾಗಿ ಹೊರ ಹೊಮ್ಮುತ್ತಿರುವ ಕಿರಣ್ ಹಂಪಾಪುರ!

ಒಂದು ಅನಿರೀಕ್ಷಿತ ಘಳಿಗೆಯಲ್ಲಿ ಬಣ್ಣದ ಜಗತ್ತಿನ ತೆಕ್ಕೆ ಸೇರಿಕೊಂಡು, ಇಲ್ಲಿನ ವಿವಿಧ ವಿಭಾಗಗಳಲ್ಲಿ ನಾನಾ ಕೆಲಸ ಮಾಡುತ್ತಾ ಕ್ಯಾಮೆರಾದತ್ತ ಬೆರಗುಗಣ್ಣಿಂದ ನೋಡಿದ್ದವರು ಕಿರಣ್ ಹಂಪಾಪುರ. ಬಹುಶಃ ಅವರು ಈ ಲೋಕಕ್ಕೆ ಮೊದಲು ಕಾಲಿಟ್ಟಿದ್ದು ನಿಖರವಾಗೊಂದು ಹೆಸರಿಡಲೂ ಸಾಧ್ಯವಾಗದ ಕೆಲಸ ಕಾರ್ಯ ಮಾಡುವ ಮೂಲಕ. ಹಾಗೆ ಕಷ್ಟದ ದಿನಗಳನ್ನೆಲಲ್ಲ ದಾಟಿಕೊಂಡು ಹಂತ ಹಂತವಾಗಿ ಕೆಮೆರಾಗೆ ಹತ್ತಿರಾದ ಅವರಿವತ್ತು ತನ್ನ ಚೆಂದದ ಕಸುಬುದಾರಿಕೆಯಿಂದ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.

ಬಿ.ಎಂ ಗಿರಿರಾಜ್ ನಿರ್ದೇಶನದ ಅದ್ವೈತ, ಜಟ್ಟ, ಗೊಂಬೆಗಳ ಲವ್ ಮುಂತಾದ ಚಿತ್ರಗಳಲ್ಲಿಯೇ ತಮ್ಮ ಕೈಚಳಕ ತೋರಿಸಿದ್ದ ಕಿರಣ್ ಬ್ಯೂಟಿಫುಲ್ ಮನಸುಗಳು ಚಿತ್ರದಲ್ಲಂತೂ ಅಚ್ಚರಿಯಾಗುವಂಥಾ ಕ್ಯಾಮೆರ ವರ್ಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಹಿಂದೆ ಸೌಂಡು ಮಾಡಿದ್ದ ಮಡಮಕ್ಕಿ ಮತ್ತು ಸದ್ಯ ಸುದ್ದಿಯಲ್ಲಿರುವ ಅಮರಾವತಿ ಚಿತ್ರಕ್ಕೂ ಕೆ

ಕ್ಯಾಮೆರ ಕಣ್ಣಾಗಿರುವ ಇವರ ಕೈಲೀಗ ಸಾಲು ಸಾಲು ಚಿತ್ರಗಳಿವೆ. ಜಯತೀರ್ಥ ಅವರದ್ದೇ ನಿರ್ದೇಶನ ಇರುವ ವೆನಿಲ್ಲ ಚಿತ್ರ ಅದರಲ್ಲಿ ಪ್ರಮುಖವಾದವುಗಳು. ಸದ್ಯ ಬಿಡುಗಡೆಗೆ ತಯಾರಾಗಿರುವ ತುಂಡ್ ಹೈಕ್ಳ ಸಾವಾಸ, ನಲ್ಕೆ ಚಿತ್ರಕ್ಕೂ ಕಿರಣ್ ಅವರದ್ದೇ ಕ್ಯಾಮೆರಾ ಕೆಲಸ. ಈ ವಾರ ಸಿಂಗ ಬಿಡುಗಡೆಯಾದ ಮೇಲೆ ಕಿರಣ್ ಲೆವೆಲ್ಲು ಮತ್ತಷ್ಟು ಮೇಲಕ್ಕೇರೋದು ಗ್ಯಾರೆಂಟಿ!

ಅಷ್ಟಕ್ಕೂ ಕಿರಣ್ ಹಂಪಾಪುರ ಎಂಬ ಅದ್ಭುತ ಪ್ರತಿಭೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದೇ ಆಕಸ್ಮಿಕವಾಗಿ. ಕೆಆರ್ ನಗರದ ಪುಟ್ಟ ಹಳ್ಳಿ ಹಂಪಾಪುರದ ಬಡ ದಂಪತಿಗಳ ಮಗನಾದ ಕಿರಣ್ ಬಲು ಪುಟ್ಟ ವಯಸ್ಸಿಗೇ ದುಡಿಯಲು ಹೋಗುವಂಥಾ ಅನಿವಾರ್ಯವಿತ್ತು. ಬಹುಶಃ ಅದು ಬದುಕಿನ ಬಗ್ಗೆ ಕನಸು ಕಾಣಲೂ ಆಗದ ಬಡತನ. ಹೀಗಿರುವಾಗ ಅದೊಂದು ದಿನ ಸಂಬಂಧಿಕರೊಬ್ಬರು ಕಿರಣ್ ಮನೆಗೆ ಬಂದಿದ್ದರಂತೆ. ಹಾಗೆ ಬಂದವರು ಬಹುಶಃ ಸೀರಿಯಲ್ಲುಗಳಿಗೆ ಕಾರ್ಮಿಕರನ್ನು ಪೂರೈಸುವ ಕೆಲಸ ಮಾಡುವವರಾಗಿದ್ದಿರಬಹುದು. ಅವರ ಬಳಿ ಕಿರಣ್ ತಾಯಿ ತಮ್ಮ ಮಗನನ್ನೂ ಬೆಂಗಳೂರಿಗೆ ಕರೆದುಕೊಂಡು ಹೋಗಿ ಒಂದು ಕೆಲಸ ಕೊಡಿಸಿ ಅಂತ ಕೇಳಿಕೊಂಡಿದ್ದರಂತೆ. ಹಾಗೆ ಆ ಸಂಬಂಧಿಕರು ಕಿರಣರನ್ನು ಸೀದಾ ಕರೆ ತಂದು ಬಿಟ್ಟಿದ್ದು ಬೆಂಗಳೂರಿಗೆ. ಅದಾದ ಬಳಿಕವೇ ಅದು ಸೀರಿಯಲ್ ಲೋಕ ಎಂಬ ಬಗ್ಗೆ ಕಿರಣ್ ಗೆ ಅರ್ಥವಾಗಿತ್ತು. ಆಗಿನ್ನೂ ಹದಿನೆಂಟು ವರ್ಷದ ಕಿರಣ್ ಸೀರಿಯಲ್ ಸೆಟ್ಟುಗಳಲ್ಲಿ ಹೇಳಿದ ಕೆಲಸಗಳನ್ನೆಲ್ಲ ಮಾಡುತ್ತಾ ಮುಂದುವರೆದರು. ಹೀಗೆ ಅನಿರೀಕ್ಷಿತವಾಗಿ ಈ ಲೋಕಕ್ಕೆ ಬಂದ ಕಿರಣ್ ಚಕಿತಗೊಂಡಿದ್ದು ಕೆಮೆರಾದತ್ತ. ಬಳಿಕ ತಾವೇ ಪರಿಚಯ ಮಾಡಿಕೊಂಡು ಕೆಮೆರಾಮನ್ ಗಳ ಜೊತೆ ಸಹಾಯಕ್ಕೆ ಹೋಗಲಾರಂಭಿಸಿದರು. ಲೈಟ್ ಬಾಯ್ ಆಗಿ ಮುಂದುವರೆದರು. ಅಲ್ಲಿ ಸಿಕ್ಕ ಚೂರು ಪಾರು ಅವಕಾಶಗಳನ್ನೇ ಬಳಸಿಕೊಂಡು ಕೆಮೆರಾಗೆ ಕೈಯಿಟ್ಟ ಇವರ ಉತ್ಸಾಹ ಕಂಡು ಅಸಿಸ್ಟೆಂಟ್ ಆಗಿ ಕರೆದುಕೊಂಡವರು ಶೇಖರ್ ಚಂದ್ರ.

2002ರಿಂದೀಚೆಗೆ ಈ ವಲಯದಲ್ಲಿ ಕೆಲಸ ಮಾಡುತ್ತಾ ಬಂದಿರುವ ಕಿರಣ್ ಹಂಪಾಪುರ ಶೇಖರ್ ಚಂದ್ರರ ನೆರಳು ಸಿಕ್ಕ ನಂತರ ತಿರುಗಿ ನೋಡಲೇ ಇಲ್ಲ. ಅದ್ವೈತ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಹೊರಹೊಮ್ಮಿದ ಹಂಪಾಪುರರ ದೃಶ್ಯಗಳೇ ಮಾತಾಡುವಂಥಾ ಚಮತ್ಕಾರ ಸೃಷ್ಟಿಸಬಲ್ಲ ಪ್ರತಿಭೆ ಹೊಂದಿರುವವರು. ಅವರ ಚೆಂದದ ಕೆಲಸಗಳೇ ಕೈ ತುಂಬಾ ಅವಕಾಶಗಳನ್ನು ತಂದು ಕೊಡುತ್ತಿವೆ. ಕ್ಯಾಮೆರಾ ಮೂಲಕ ಪ್ರತೀ ದೃಶ್ಯಗಳನ್ನೂ ಪದೇ ಪದೆ ಕಾಡುವ ಚೆಂದದ ಕವಿತೆಯಂತೆ ಕಟ್ಟಿಕೊಡುವ ಕಿರಣ್ ಹಂಪಾಪುರ ಅವರಿಗೆ ಇನ್ನಷ್ಟು ಅವಕಾಶಗಳು ಅರಸಿ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ…

CG ARUN

ಸದ್ಯದಲ್ಲೇ ನಿಗರ್ವ ಟ್ರೇಲರ್ ಬಿಡುಗಡೆ!

Previous article

ವೆಂಕಟನಿಗೆ ಹುಚ್ಚು ಬಿಡ್ತಂತೆ!

Next article

You may also like

Comments

Leave a reply

Your email address will not be published. Required fields are marked *