ಈಗಾಗಲೇ ಟೀಸರ್ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿರುವ “ಸೈರನ್” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಡಾಲಿ ಧನಂಜಯ, ರಾಕ್ ಲೈನ್ ವೆಂಕಟೇಶ್, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಪತ್ರಕರ್ತ ರಂಗನಾಥ್ ಭಾರದ್ವಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ರೇಲರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಚಿತ್ರ ಮೇ 26ರಂದು ಕೆ.ಆರ್ ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಮಗ ಪ್ರವೀರ್ ಶೆಟ್ಟಿ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಡೆಕ್ಕನ್ ಕಿಂಗ್ ಬ್ಯಾನರ್ನಲ್ಲಿ ಬಿಜು ಶಿವಾನಂದ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ರಾಜಾ ವೆಂಕಯ್ಯ ನಿರ್ದೇಶಿಸಿದ್ದಾರೆ. ಕಳೆದ 30 ವರ್ಷಗಳಿಂದ ನಿರ್ದೇಶಕ ಮುರುಗ ದಾಸ್ ಸೇರಿದಂತೆ ಹಲವರ ಬಳಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ರಾಜಾ ವೆಂಕಯ್ಯ ಕೆಲಸ ಮಾಡಿದ್ದಾರೆ. “ಸೈರನ್” ಅವರ ನಿರ್ದೇಶನದ ಮೊದಲ ಕನ್ನಡ ಸಿನಿಮಾ.
ಅದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿಯ ಸಿನಿವೇದಿಕೆ. ಅಲ್ಲಿ ನಡೆದದ್ದು ಅವರ ಮಗ ಪ್ರವೀರ್ ಶೆಟ್ಟಿಯ ಚೊಚ್ಚಲ ಪ್ರಯತ್ನದ “ಸೈರನ್” ಸಿನಿಮಾದ ಟ್ರೈಲರ್ ಬಿಡುಗಡೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಹದಿನೈದರ ಸಂಜೆ ನಡೆದ ಈ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಕ್ ಲೈನ್ ವೆಂಕಟೇಶ್, ಟಿವಿ ನೈನ್ ರಂಗನಾಥ್ ಭಾರದ್ವಾಜ್ ಸೇರಿದಂತೆ ಹತ್ತಾರು ಗಣ್ಯರ ಉಪಸ್ಥಿತಿ ಇತ್ತು. ಪ್ರಧಾನ ಆಕರ್ಷಣೆಯಾಗಿ ನಟ ರಾಕ್ಷಸ ‘ಡಾಲಿ’ ಜೊತೆಯಾಗಿದ್ದರು. ಚಿತ್ರದ ಟ್ರೈಲರ್ ಬಿಡುಗಡೆಯ ನಂತರ ಮೆಚ್ಚಿ ಮಾತಾಡಿದ ಧನಂಜಯ್, ಪ್ರವೀಣ್ ಶೆಟ್ಟಿ ಹೋರಾಟದ ಬಗ್ಗೆ ಹೆಮ್ಮೆ ಪಡುತ್ತಾ, ಇದೀಗ ಅವರ ಮಗ ಹೀರೋ ಆದ ಬಗ್ಗೆ ಖುಷಿಯಿಂದ “ನಮ್ಮ ಚಿತ್ರರಂಗಕ್ಕೆ ವೆಲ್ ಕಮ್” ಅಂದರು. ಖುದ್ದು ಬ್ಯಾಗ್ರೌಂಡ್ ಇಲ್ಲದೆ ಚಿತರಂಗದಲ್ಲಿ ಸಾಧಿಸುವ ಕನಸುಹೊತ್ತು ಬಂದು ಸತತ ಸರ್ಕಸ್ಸಿನ ನಂತರ ಇದೀಗ ತನ್ನದೇ ಆದ ಅಭಿಮಾನಿ ವರ್ಗ ಸೃಷ್ಟಿಸಿಕೊಂಡಿರೋ ಡಾಲಿ ಧನಂಜಯ್ “ನಮ್ಮ ಚಿತ್ರರಂಗದಲ್ಲಿ ಹೊಸಬರಿಗೆ ತುಂಬಾನೆ ಅವಕಾಶವಿದೆ; ಇಲ್ಲಿ ತಾಳ್ಮೆ ಮತ್ತು ಪರಿಶ್ರಮ ಮುಖ್ಯ ಎನ್ನುತ್ತಾ, “ಸೈರನ್” ಟ್ರೈಲರ್ ಮೂಲಕ ಪ್ರವೀರ್ ಶೆಟ್ಟಿ ಖಡಕ್ ಲುಕ್ನಲ್ಲಿ ಹೊಸ ಭರವಸೆ ಮೂಡಿಸುತ್ತಾರೆ ಎಂದರು. ಮಾತು ಮುಂದುವರೆಸಿ ಹಳೆಯ ನೆನಪಿಗೆ ಜಾರಿದ ಡಾಲಿ “ಈ ಹಿಂದೆ ತನ್ನ ಮೊದ-ಮೊದಲ ಸರ್ಕಸ್ ದಿನಗಳಲ್ಲಿ ಹೋರಾಟಗಾರ ಪ್ರವೀಣ್ ಶೆಟ್ಟಿ ಭೇಟಿಯಾದಾಗ ನೋಡಿದ್ದ ಪ್ರವೀರ್ ಶೆಟ್ಟಿ ಆಗ ಚಿಕ್ಕ ಹುಡುಗನಂತಿದ್ದರು, ಆದರೆ ಈಗ ‘ಶೆಟ್ಟಿ ಫಿಟ್ & ಫೈನ್’ ” ಎಂದು ಖುಷಿ ಪಟ್ಟು, ಇಂಡಸ್ಟ್ರಿಗೆ ವೆಲ್ ಕಮ್ ಎಂದು ಮಾತುಮುಗಿಸಿದರು.
ಇನ್ನು ಪ್ರೇಸ್ ಮೀಟಲ್ಲಿ ಚಿತ್ರತಂಡವನ್ನ ಮಾತಿಗಿಳಿಸಿದಾಗ, ಅವರಂದಂತೆ, ಇದೊಂದು ‘ನೈಜ ಘಟನೆ ಆಧಾರಿತ’ ಚಿತ್ರವಂತೆ. ಹೆಣ್ಣೊಬ್ಬಳ ಬಲಾತ್ಕಾರದ ಬೆನ್ನು ಹತ್ತಿ ಹೊರಡುವ, ಥ್ರಿಲ್ಲಿಂಗ್ ಚಿತ್ರಕಥೆಯಿರುವ ಸಿನಿಮಾವಂತೆ. ಚಿತ್ರದಲ್ಲಿ ನಾಯಕ ಪ್ರವೀರ್ ಶೆಟ್ಟಿ ಜೊತೆ ಲಾಸ್ಯ ಪೊನ್ನು, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್, ಸ್ಪರ್ಶ ರೇಖಾ, ತಮಿಳಿನ ವಯ್ಯಾಬುರಿ, ಸಾಯಿ ಧೀನ ಸೇರಿ ಘಟಾನುಘಟಿಗಳು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರಂತೆ. ಹಾಗೆಯೆ ಚಿತ್ರ ಅದ್ಧೂರಿಯ ಜೊತೆಗೆ, ಪ್ರೇಕ್ಷಕರನ್ನ ಸೀಟಿನ ತುದಿಗೆ ತಂದು ಕೂರಿಸುವಂತೆ ಮೂಡಿ ಬಂದಿದ್ದು, ಪ್ರೇಕ್ಷಕ ಮೆಚ್ಚಿ ಗೆಲ್ಲಿಸುತ್ತಾನೆ ಎನ್ನುವುದು ಚಿತ್ರತಂಡದ ಮಾತು.
ಒಟ್ಟಿನಲ್ಲಿ, ಚಿತ್ರದಲ್ಲಿ ಕೊಲೆಯ ಇನ್ವೆಸ್ಟಿಗೇಶನ್ ನಡೆಸುವ ಖಡಕ್ ಪೊಲೀಸ್ ಪಾತ್ರಧಾರಿಯಾಗಿ ಕಾಣಿಸಿಕೊಂಡ ನವನಟ ಪ್ರವೀರ್ ಶೆಟ್ಟಿ, ತಾನು ಚಿತ್ರರಂಗದಲ್ಲಿ ನೆಲೆಯೂರಲು ಬೇಕಾದಂತೆ, ಸಕಲ ತರಬೇತಿ ಪಡೆದು ಬಂದು ‘ಸೈರನ್’ ಮಾಡಿದ್ದಾರೆ. ಈ ಚಿತ್ರದ ಮೂಲಕ ಸೌಂಡ್ ಮಾಡಲು ಹೊರಟಿರುವ ‘ಆರಡಿ’ ಎತ್ತರದ ‘ಶೆಟ್ಟಿ’ ಶಾರ್ಪ್ ಟ್ರೈಲರ್ ಮೂಲಕ ಸದ್ಯ ಭರವಸೆಯಂತೂ ಹುಟ್ಟಿಸಿದ್ದಾರೆ. ಅದರಂತೆ, ಚಿತ್ರವು ಇದೇ ತಿಂಗಳ ಇಪ್ಪತ್ತಾರನೇ ತಾರೀಖಿಗೆ ಚಿತ್ರಮಂದಿರಕ್ಕೆ ಬರಲಿದ್ದು, ಹೊಸ ಹುಡುಗನ ಅದೃಷ್ಟ ಪರೀಕ್ಷೆ ನಡೆಯಲಿದೆ.
ನಾಗರಾಜ್ ಅರೆಹೊಳೆ