ತಾವು ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಗಂಡ, ಮನೆ, ಮಕ್ಕಳ ಕ್ಯಾರೆಕ್ಟರುಗಳ ಜೊತೆಗೆ ಬೆರೆತುಹೋಗಿದ್ದ, ಪತ್ನಿಯ ಪಾತ್ರಗಳಿಗೆ ಶಕ್ತಿ ಮೀರಿ ಜೀವ ತುಂಬುತ್ತಿದ್ದ ಸಿತಾರಾ ನಿಜ ಜೀವನದಲ್ಲಿ ಯಾರಿಗೂ ಮಡದಿಯಾಗಲೇ ಇಲ್ಲ, ಅಮ್ಮ ಅಂದ ಕೂಡಲೇ ನೆನಪಾಗುವ ಈಕೆ ರಿಯಲ್ ಲೈಫಲ್ಲಿ ಅಮ್ಮ ಅಂತಾ ಕರೆಸಿಕೊಳ್ಳುವ ಮನಸ್ಸು ಮಾಡಲಿಲ್ಲ ಅನ್ನೋದು ನಿಜಕ್ಕೂ ವಿಪರ್ಯಾಸವಲ್ಲವೇ?
ದಕ್ಷಿಣ ಭಾರತದ ಅದ್ಭುತ ನಟಿ ಸಿತಾರಾ… ಮೋಹಿನಿ ಆಟ್ಟಂ ಕಲಾವಿದೆಯಾಗಿದ್ದ ಸಿತಾರಾ 1986ರಲ್ಲಿ ಬಂದ ಮಲಯಾಳಂನ ಕಾವೇರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು. ಆ ನಂತರ ಕೆ. ಬಾಲಚಂದರ್ ಕಣ್ಣಿಗೆ ಬಿದ್ದಿದ್ದೇ ಆಕೆಯ ಅದೃಷ್ಟವೇ ಬದಲಾಗಿಹೋಗಿತ್ತು. ಪುದು ಪುದು ಅರ್ಥಂಗಳ್ ಚಿತ್ರದೊಂದಿಗೆ ತಮಿಳಿನಲ್ಲೂ ಸಿತಾರಾ ಖಾತೆ ತೆರೆದರು. ಆ ನಂತರ ತಮಿಳಿನ ಹೆಸರಾಂತ ನಿರ್ದೇಶಕರ ಸಿನಿಮಾಗಳಲ್ಲೆಲ್ಲಾ ಇವರು ಪಾತ್ರ ಪಡೆಯುವಂತಾಯಿತು,
1994ರಲ್ಲಿ ಸ್ಟಾರ್ ಡೈರೆಕ್ಟರ್ ಡಿ. ರಾಜೇಂದ್ರ ಬಾಬು ಅವರು ಸಿತಾರಾಳನ್ನು ಕನ್ನಡಕ್ಕೂ ಕರೆತಂದರು. ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ಹಾಲುಂಡ ತವರು ಸಿನಿಮಾದಲ್ಲಿ ಈಕೆ ಮನೋಜ್ಞವಾಗಿ ನಟಿಸಿದ್ದಳು. ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾವೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಆ ನಂತರ ಕರುಳಿನ ಕುಡಿ, ಕಾವ್ಯ, ಬಂಗಾರದ ಕಳಶ, ದೀರ್ಘ ಸುಮಂಗಲಿ, ಅನುರಾಗ ದೇವತೆ – ಹೀಗೆ ಒಂದರ ಹಿಂದೊಂದು ಸಿನಿಮಾಗಳಲ್ಲಿ, ಕನ್ನಡದ ಟಾಪ್ ಹೀರೋಗಳ ಜೊತೆಗೆ ನಟಿಸುವ ಅವಕಾಶ ಸಿತಾರಾಗೆ ಸಿಕ್ಕಿತ್ತು.
ಕನ್ನಡದ ಜೊತೆ ಜೊತೆಗೆ ತಮಿಳು, ತೆಲುಗು, ಮಲಯಾಳಂಗಳಲ್ಲೂ ಈಕೆ ಬ್ಯುಸೀ ಹೀರೋಯಿನ್ ಎನಿಸಿಕೊಂಡಳು. ನಾಯಕಿಯಾಗಿ ಈ ನಟಿಯ ಜಮಾನಾ ಮುಗೀತು ಅನ್ನುವಷ್ಟರಲ್ಲಿ ಕ್ಯಾರೆಕ್ಟರ್ ರೋಲುಗಳಲ್ಲಿ ಕಾಣಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು ಸಿತಾರಾ. ಈ ಕಾರಣದಿಂದ ತಮಿಳಿನಲ್ಲಿ ರಜಿನಿಕಾಂತ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ಪಡೆಯಪ್ಪ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಈಕೆಗೆ ಅವಕಾಶ ಸಿಕ್ಕಿತು. 2018ರಲ್ಲಿ ಬಂದ ಅಮ್ಮ ಐ ಲವ್ ಯೂ ಸಿನಿಮಾದ ತನಕ ಲೆಕ್ಕ ಹಾಕಿದರೆ ಮೂವತ್ತಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಸಿತಾರಾ ಪಾತ್ರಪೋಷಣೆ ಮಾಡಿದ್ದಾರೆ.
ಇಂಥಾ ಸಿತಾರಾಗೆ ಈಗ ವಯಸ್ಸು ನಲವತ್ತೇಳಾಗಿದೆ. ತೀರಾ ಚಿಕ್ಕ ವಯಸ್ಸಿಗೇ ಸಿನಿಮಾ ರಂಗಕ್ಕೆ ಬಂದು ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಸಿತಾರಾ ಹೀರೋಯಿನ್ ಪಾತ್ರದಿಂದ ಮದರ್ ರೋಲುಗಳಿಗೆ ಪ್ರಮೋಷನ್ ಪಡೆದಾಗಲೂ ಮದುವೆಯಾಗುವ ಮನಸ್ಸು ಮಾಡಲಿಲ್ಲ. ಯಾವುದೇ ಸಂದರ್ಶನದಲ್ಲಿ ‘ಮದುವೆ ಯಾವಾಗ?’ ಅಂತಾ ಕೇಳಿದರೂ ನನಗೆ ಒಪ್ಪುವ ಜೊತೆಗಾರನ ಹುಡುಕಾಟದಲ್ಲಿದ್ದೇನೆ ಎಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದರು.
ಈ ನಡುವೆ ಚಿತ್ರರಂಗದ ಹೆಸರಾಂತ ನಟರೊಂದಿಗೆ ಸಿತಾರಾ ಹೆಸರು ಸೇರಿಕೊಂಡು ಗಾಸಿಪ್ಪು ಹಬ್ಬುತ್ತಿತ್ತಾದರೂ ಆಕೆ ಯಾವುದಕ್ಕೂ ಪ್ರತಿಕ್ರಿಯಿಸುತ್ತಿರಲಿಲ್ಲ. ಕನ್ನಡದ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರ ಪುತ್ರ ಮತ್ತು ಖ್ಯಾತ ನಟ ಮುರಳಿ ತೀರಿಕೊಂಡರಲ್ಲಾ? ಆಗ ಸಿತಾರಾ ಖಿನ್ನರಾಗಿದ್ದರು. ಸಿತಾರಾ ಮತ್ತು ಮುರಳಿ ನಡುವೆ ಶುಭ್ರವಾದ ಸ್ನೇಹ, ಬಾಂಧವ್ಯವಿತ್ತು. ಹೃದಯಾಘಾತದಿಂದ ಮುರಳಿ ಏಕಾಏಕಿ ಪ್ರಾಣಬಿಟ್ಟಾಗ ಸಿತಾರಾ ಬದುಕಿನ ಬಗ್ಗೆ ಆಸಕ್ತಿ ಕಳೆದುಕೊಂಡವರಂತೆ ವರ್ತಿಸಿದ್ದು ನಿಜ. ಆ ನಂತರ ಸಿತಾರಾ ಮದುವೆ ಬಗ್ಗೆ ಜನ ಪ್ರಶ್ನಿಸುವುದನ್ನೇ ಬಿಟ್ಟಿದ್ದರು.
ತೀರಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಿತಾರಾ ‘ನನಗೆ ಮದುವೆಯಾಗಬೇಕು ಅನ್ನೋ ಬಯಕೆಯೇ ಹೊರಟು ಹೋಗಿದೆ. ನನ್ನ ಮನಸ್ಥಿತಿಗೆ ತಕ್ಕ ಸಂಗಾತಿ ಸಿಗುತ್ತಾನೆ ಅಂತಾ ಹುಡುಕುವುದರಲ್ಲೇ ಕಾಲ ತಳ್ಳಿಬಿಟ್ಟೆ. ಈ ಸಮಯದಲ್ಲಿ ನನಗೆ ಒಂಟಿಯಾಗಿರುವುದು ಅಭ್ಯಾಸವಾಗಿ ಹೋಯ್ತು. ಇರುವಷ್ಟೂ ದಿನ ಹೀಗೇ ಇದ್ದುಬಿಡೋಣ ಅನ್ನೋ ತೀರ್ಮಾನಕ್ಕೆ ಬಂದುಬಿಟ್ಟಿದ್ದೀನಿ” ಎಂದಿದ್ದಾರೆ.
ತಾವು ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಗಂಡ, ಮನೆ, ಮಕ್ಕಳ ಕ್ಯಾರೆಕ್ಟರುಗಳ ಜೊತೆಗೆ ಬೆರೆತುಹೋಗಿದ್ದ, ಪತ್ನಿಯ ಪಾತ್ರಗಳಿಗೆ ಶಕ್ತಿ ಮೀರಿ ಜೀವ ತುಂಬುತ್ತಿದ್ದ ಸಿತಾರಾ ನಿಜ ಜೀವನದಲ್ಲಿ ಯಾರಿಗೂ ಮಡದಿಯಾಗಲೇ ಇಲ್ಲ, ಅಮ್ಮ ಅಂದ ಕೂಡಲೇ ನೆನಪಾಗುವ ಈಕೆ ರಿಯಲ್ ಲೈಫಲ್ಲಿ ಅಮ್ಮ ಅಂತಾ ಕರೆಸಿಕೊಳ್ಳುವ ಮನಸ್ಸು ಮಾಡಲಿಲ್ಲ ಅನ್ನೋದು ನಿಜಕ್ಕೂ ವಿಪರ್ಯಾಸವಲ್ಲವೇ? ಸಿತಾರಾ ನಟಿಸಿದ ಬಹುತೇಕ ಸಿನಿಮಾಗಳು ಕೌಟುಂಬಿಕ ಕಥಾ ಹಂದರದ ಕಥೆ ಹೊಂದಿದ್ದವು.
ಸಹಜವಾಗೇ ಈಕೆ ನಟಿಸಿದ ಪಾತ್ರಗಳು ವಿಪರೀತ ಸೆಂಟಿಮೆಂಟಿಂದ ಕೂಡಿರುತ್ತಿದ್ದವು. ಗ್ಲಿಸರಿನ್ ಇಲ್ಲದೆಯೇ ಅಳುವುದು ಸಿತಾರಾಗೆ ಅಭ್ಯಾಸವಾಗಿಬಿಟ್ಟಿತ್ತು. ಜನ ಈಕೆಯನ್ನು ಕಣ್ಣೀರ ದೇವತೆ ಅಂತಾ ಬ್ರಾಂಡ್ ಮಾಡಿದರು. ಬಹುಶಃ ಸಿತಾರಾಗೆ ಈ ಗೋಳು ಸಿನಿಮಾಗಳ, ಭಾವತೀವ್ರತೆಯ ಪಾತ್ರಗಳು ನಿಜ ಜೀವನದಲ್ಲಿ ಸಂಸಾರದೊಳಗೆ ಸಿಕ್ಕಿಕೊಳ್ಳದಂತೆ ಪ್ರೇರೇಪಿಸಿತೋ ಏನೋ? ನೊಂದ ಗೃಹಿಣಿಯ ಪಾತ್ರಗಳು ಭಯ, ವೈರಾಗ್ಯ ಹುಟ್ಟಿಸಿತೇನೋ? ಇದ್ದವರಲ್ಲೂ ಒಬ್ಬೊಬ್ಬರನ್ನೇ ಕಳೆದುಕೊಂಡು, ಏಕಾಂಗಿಯಂತೆ ಜೀವನ ನಡೆಸುತ್ತಿರುವ ಸಿತಾರಾಳ ಮುಂದಿನ ಬದುಕು ಹೇಗಿರಬಹುದು?!