ಶಿವಕಾರ್ತಿಕೇಯನ್ ಮತ್ತು ನಯನತಾರಾ ಈ ಹಿಂದೆ ’ವೆಲೈಕ್ಕಾರನ್’ ತಮಿಳು ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದರು. ’ಒರು ಕಲ್ ಒರು ಕನ್ನಡಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಎಂ.ರಾಜೇಶ್ ನಿರ್ದೇಶಿಸಿದ್ದ ಚಿತ್ರವಿದು. ಸೂಪರ್ಸ್ಟಾರ್ ರಜನೀಕಾಂತ್ ಚಿತ್ರವೊಂದರ ಪ್ರೇರಣೆಯಿಂದ ತಯಾರಾಗಿತ್ತು ’ವೆಲೈಕ್ಕಾರನ್’. ಇದೀಗ ಇವರಿಬ್ಬರು ’ಮಿಸ್ಟರ್ ಲೋಕಲ್’ ತಮಿಳು ಚಿತ್ರದಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ. ರಜನೀಕಾಂತ್ ನಟನೆಯ ಸೂಪರ್ಹಿಟ್ ’ಮನ್ನನ್’ ಸ್ಫೂರ್ತಿ ಈ ಚಿತ್ರಕ್ಕಿದೆ ಎನ್ನಲಾಗಿದೆ.
ಶಿವಕಾರ್ತಿಕೇಯನ್ ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಚಿತ್ರದ ಫಸ್ಟ್ ಲುಕ್ ಶೇರ್ ಮಾಡಿದ್ದಾರೆ. ಕಣ್ಣಿಗೆ ಕೂಲಿಂಗ್ ಗ್ಲಾಸು, ಸೂಟ್ ತೊಟ್ಟು ಕುರ್ಚಿ ಮೇಲೆ ಕುಳಿತ ಶಿವಕಾರ್ತಿಕೇಯನ್ ಕೈಲಿ ಟೀ ಗ್ಲಾಸಿದೆ. ಹಿಪ್ಹಾಪ್ ತಮಿಝಾ ಸಂಗೀತ ಸಂಯೋಜಿಸುತ್ತಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರಾಧಿಕಾ ಶರತ್ಕುಮಾರ್, ಸತೀಶ್ ಮತ್ತು ಯೋಗಿ ಬಾಬು ಇದ್ದಾರೆ.
ಶಿವಕಾರ್ತಿಕೇಯನ್ ಇತ್ತೀಚೆಗೆ ’ಸೀಮಾ ರಾಜು’ ತಮಿಳು ಚಿತ್ರದಲ್ಲಿ ನಟಿಸಿದ್ದರು. ಕ್ರೀಡೆಯನ್ನು ಆಧರಿಸಿದ ’ಕಣ’ ತಮಿಳು ಸಿನಿಮಾ ನಿರ್ಮಿಸಿದ್ದ ಅವರು ಚಿತ್ರದ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ’ಮಿಸ್ಟರ್ ಲೋಕಲ್’ ಅಲ್ಲದೆ ಶೀರ್ಷಿಕೆಯಿಡದ ಮತ್ತೆರೆಡು ತಮಿಳು ಚಿತ್ರಗಳಿಗೆ ಅವರು ಸಹಿ ಹಾಕಿದ್ದಾರೆ. ’ಇರುಂಬು ತಿರೈ’ ಖ್ಯಾತಿಯ ನಿರ್ದೇಶಕ ಪಿ.ಮಿತ್ರನ್ ಚಿತ್ರದಲ್ಲೂ ಅವರು ನಟಿಸುವ ಸಾಧ್ಯತೆಗಳಿದ್ದು, ಅವರ ದೊಡ್ಡ ಬಜೆಟ್ನ ಸೈಂಟಿಫಿಕ್-ಫಿಕ್ಷನ್ ಸಿನಿಮಾದ ಬಗ್ಗೆಯೂ ಚರ್ಚೆಯಾಗುತ್ತಿದೆ. ಇತ್ತೀಚಿನ ’ವಿಶ್ವಾಸಂ’ ತಮಿಳು ಚಿತ್ರದಲ್ಲಿ ನಟಿಸಿದ್ದ ನಯನತಾರಾ ಅಭಿನಯದ ’ಐರಾ’, ’ಕೊಲೈಯುತಿರ್ ಕಾಳಂ’ ಚಿತ್ರಗಳು ಸದ್ಯ ತೆರೆಗೆ ಸಿದ್ಧವಾಗಿವೆ.
#
No Comment! Be the first one.