ಟಗರು ಚಿತ್ರದ ಡಾಲಿ ಪಾತ್ರದಿಂದ ಏಕಾಏಕಿ ನಟ ಧನಂಜಯ್ ಅವರ ನಸೀಬೇ ಬದಲಾಗಿದೆ. ಈಗ ಧನಂಜಯ್ ರಾಂಗೋಪಾಲ್ ವರ್ಮಾ ನಿರ್ಮಾಣದ ತೆಲುಗು ಚಿತ್ರ ಭೈರವ ಗೀತಾದಲ್ಲಿ ಬ್ಯುಸಿಯಾಗಿದ್ದಾರೆ. ಅದನ್ನು ಮುಗಿಸಿಕೊಂಡು ವಾಪಾಸಾಗೋ ಮುನ್ನವೇ ನಿರ್ದೇಶಕ ಸೂರಿ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಎಲ್ಲ ತಯಾರಿ ಮಾಡಿಕೊಂಡು ಕಾಯುತ್ತಿದ್ದಾರೆ!
ಇದೀಗ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ದೆಸೆಯಿಂದಲೇ ಈ ಚಿತ್ರದ ಕಥೆ ಸ್ಲಂನಲ್ಲಿ ಅರಳಿಕೊಳ್ಳುತ್ತದೆ ಎಂಬ ಸೂಚನೆಯೂ ಸಿಕ್ಕಿದೆ. ಧನಂಜಯ್ ಕೂಡಾ ಅಂಥಾದ್ದೇ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ.
ಇದೊಂದು ನೈಜ ಘಟನೆಯಾಧಾರಿತ ಚಿತ್ರ. ಕೆಂಡಸಂಪಿಗೆ ಚಿತ್ರದ ಛಾಯೆಯಲ್ಲಿ, ಅದರ ನೆರಳಿರದ ರೀತಿಯಲ್ಲಿ ಸೂರಿ ಈ ಚಿತ್ರದ ಕಥೆ ರೆಡಿ ಮಾಡಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಧನಂಜಯ್ಗೆ ಮೂವರು ನಾಯಕಿಯರೂ ಇರಲಿದ್ದಾರೆ. ಈಗಾಗಲೇ ಉಳಿಕೆ ತಾರಾಗಣದ ಆಯ್ಕೆ ಕಾರ್ಯವೂ ಅಂತಿಮ ಹಂತ ತಲುಪಿದೆ. ಚಿತ್ರೀಕರಣ ಕೂಡಾ ಅಷ್ಟೇ ಬೇಗ ಆರಂಭವಾಗಿದೆ.
ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದರೂ, ನಟನೆಯ ಕೌಶಲ್ಯ ಇದ್ದರೂ ಕೂಡಾ ಧನಂಜಯನಿಗೆ ಸರಿಯಾದೊಂದು ಗೆಲುವು ಸಿಕ್ಕಿರಲಿಲ್ಲ. ಆದರೆ ಸೂರಿ ಸೃಷ್ಟಿಸಿದ್ದ ಡಾಲಿ ಪಾತ್ರ ಎಲ್ಲವನ್ನೂ ಅದಲು ಬದಲಾಗಿಸಿದೆ. ಮುಂದೆ ಧನಂಜಯ್ ಹೀರೋ ಆದರೂ ಕೂಡಾ ಅದು ಸೂರಿಯಿಂದ ಟೇಕಾಫ್ ಆದರೆ ಮಾತ್ರವೇ ಮತ್ತೊಂದು ಪವಾಡ ಸೃಷ್ಟಿ ಸಾಧ್ಯ ಅಂತ ಪ್ರೇಕ್ಷಕರೇ ಮಾತಾಡಿಕೊಂಡಿದ್ದರು. ಆ ಇಂಗಿತ ಸಾಕಾರಗೊಳ್ಳೋ ಕ್ಷಣಗಳು ಹತ್ತಿರಾಗಿವೆ.
#