ಎಲ್ಲ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೊಮ್ಮೆ ಆ ಪ್ರಕರಣಕ್ಕೆ ಜೀವ ಬಂದಿದೆ. ಕಾರ್ ಪಾರ್ಕಿಂಗ್ ವಿಷಯದಲ್ಲಿ ನೆರೆಮನೆಯವರ ಜೊತೆಗೆ ಅನುಚಿತವಾಗಿ ವರ್ತಿಸಿದ್ದ ಎಂಬ ಕಾರಣಕ್ಕೆ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಮಗ ಸ್ನೇಹಿತ್ ವಿರುದ್ಧ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಪೊಲೀಸ್ ಸ್ಟೇಶನ್ ಮೆಟ್ಟಿಲು ಸಹ ಏರಿತ್ತು. ಆ ನಂತರ ದೊಡ್ಡವರ ಮಧ್ಯಸ್ಥಿಕೆಯಿಂದ ಪ್ರಕರಣ ತಣ್ಣಗಾಗಿತ್ತು. ಅಷ್ಟೇ ಅಲ್ಲ, ಆರೋಪ ಮಾಡಿದವರೇ ಈ ಪ್ರಕರಣಕ್ಕೂ ಸ್ನೇಹಿತ್ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು.
ಈಗ ಮತ್ತೆ ಈ ಪ್ರಕರಣಕ್ಕೆ ಜೀವ ಬಂದಿದೆ. ಸ್ನೇಹಿತ್ ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ನೆರೆಮನೆಯವರು ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ್ದಾರೆ. ಆದರೆ, ತಮ್ಮ ಮಗ ಆ ರೀತಿ ಮಾತನಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಸ್ನೇಹಿತ್ ತಂದೆ ಸೌಂದರ್ಯ ಜಗದೀಶ್ ಹೇಳಿಕೊಂಡಿದ್ದರು. ಅಷ್ಟೇಏ ಅಲ್ಲ, ತಮ್ಮ ಮಗನ ಮೇಲೆ ನೆರೆಮನೆಯವರು ಹೊರಿಸಿದ್ದ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದರು. ಓದುತ್ತಿರುವ ಮಗನ ಮೇಲೆ ಎಫ್.ಐ.ಆರ್ ದಾಖಲಾದರೆ, ನಾಳೆ ಅವನ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಭಯ ವ್ಯಕ್ತಪಡಿಸಿದ್ದರು.

ಈಗ ಅವರ ಪರವಾಗಿ ಚಿತ್ರರಂಗದವರೂ ನಿಂತಿದ್ದಾರೆ. ಪ್ರಮುಖವಾಗಿ ರಿಯಲ್ ಸ್ಟಾರ್ ಉಪೇಂದ್ರ, ಏನಾದರೂ ಭಿನ್ನಾಬಿಪ್ರಾಯಗಳಿದ್ದರೆ ಸಮಾದಾನದಿಂದ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು, ‘ಸೌಂದರ್ಯ ಜಗದೀಶ್ ಹಾಗೂ ನನ್ನ ಪರಿಚಯ, ಸ್ನೇಹ ಸುಮಾರು ೨೫ ವರ್ಷಗಳಷ್ಟು ಹಳೆಯದು. ಅಂದಿನಿಂದ ಇಂದಿನವರೆಗೂ ನಾನು ಕಂಡಂತೆ ಜಗದೀಶ್ ತುಂಬಾ ಮೃದು ಸ್ವಭಾವದವರು, ಸ್ನೇಹ ಜೀವಿ. ಅವರ ಶ್ರೀಮತಿ ರೇಖಾ, ಮಗ ಸ್ನೇಹಿತ್, ಮಗಳು ಸೌಂದರ್ಯ ಕೂಡಾ ನಮ್ಮ ಕುಟುಂಬಕ್ಕೆ ಪರಿಚಯ. ಇತ್ತೀಚೆಗೆ ಸ್ನೇಹಿತ್ ಬಗ್ಗೆ ಕೇಳಿಬರುತ್ತಿರುವ ಆರೋಪಗಳನ್ನು ಕೇಳಿ ಧಿಗ್ಭ್ರಮೆಯಾಯಿತು. ನಾನು ಕಂಡಂತೆ ಆತ ತುಂಬಾ ವಿನಯವಂತ. ಬೆಳೆಯುತ್ತಿರುವ ಹುಡುಗ, ಏಕೆ ಈ ರೀತಿ ಆರೋಪ ಮಾಡಿದ್ದಾರೆ ಎಂದು ನನಗೆ ತಿಳಿಯದು. ಏನಾದರೂ ಭಿನ್ನಾಬಿಪ್ರಾಯಗಳಿದ್ದರೆ ಸಮಾದಾನದಿಂದ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಒಂದಂತೂ ಎಲ್ಲರಿಗೂ ಅನ್ವಯಿಸುವ ಸತ್ಯ … ಅಜ್ಞಾನದ ಫಲ ಅಹಂಕಾರ, ಅಹಂಕಾರದ ಫಲ ದ್ವೇಶ, ದ್ವೇಶದ ಫಲ ಸರ್ವನಾಶ’ ಎಂದು ಅವರು ಬರೆದುಕೊಂಡಿದ್ದಾರೆ.

ಉಪೇಂದ್ರ ಒಬ್ಬರಷ್ಟೇ ಅಲ್ಲ, ‘ನೆನಪಿರಲಿ’ಪ್ರೇಮ್ ಸಹ ಸ್ನೇಹಿತ್ ಪರವಾಗಿ ನಿಂತಿದ್ದು, ಸ್ನೇಹಿತ್ ಒಳ್ಳೆಯವನು ಎಂದು ಹೇಳಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಜಗದೀಶ್ ಮತ್ತು ಕುಟುಂಬದವರ ವಿನಯವಂತಿಕೆಯ ಕುರಿತು ಮಾತನಾಡಿದ್ದಾರೆ.
ಸೌಂದರ್ಯ ಜಗದೀಶ್ ಹಾಗೂ ರೇಖಾ ಅವರು ಎಷ್ಟು ಶ್ರೀಮಂತರೋಅಷ್ಟೇ ಹೃದಯ ಶ್ರೀಮಂತರು ಕೂಡ ಹೌದು. ಅವರು ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಿದ್ದಾರೆ ಎಂದಿದ್ದಾರೆ. ಸ್ನೇಹಿತ್ ಏನೆಂಬುದು ಎಲ್ಲರಿಗೂ ತಿಳಿದಿದೆ ಆತನ ವಿರುದ್ಧ ಹರಿದಾಡುತ್ತಿರುವ ಆರೋಪಗಳ ಕುರಿತು ಯಾವುದೇ ರೀತಿಯ ಸಾಕ್ಷಿಗಳಿಲ್ಲ. ಬೆಳೆಯಬೇಕೆನ್ನುವ ಹುಡುಗನ ಕುರಿತು ನಿಮ್ಮ ಪ್ರೀತಿ ಇರಲಿ’ ಎಂದು ಪ್ರೇಮ್ ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ ‘ಅಪ್ಪು ಪಪ್ಪು’ ಸೇರಿದಂತೆ ಹಲವು ಚಿತ್ರಗಳಲ್ಲಿ ಬಾಲನಟನಾಗಿ ತನ್ನ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಸ್ನೇಹಿತ್, ಸದ್ಯ ಇಂಜಿನಿಯರಿಂಗ್ ಇಂಜಿನಿಯರಿಂಗ್ ಓದುತ್ತಿದ್ದು, ಓದು ಮುಗಿದ ನಂತರ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಡುವ ಸಾಧ್ಯತೆ ಇದೆ. ಓದಿನ ಜೊತೆಗೆ ಹೀರೋಗೆ ಬೇಕಾದ ಎಲ್ಲ ತಯಾರಿಗಳನ್ನು ಪಡೆಯುತ್ತಿದ್ದಾನೆ.
No Comment! Be the first one.