ಡಾ.ರಾಜ್ಕುಮಾರ್ ಅಭಿನಯದ ಚಲಿಸುವ ಮೋಡಗಳು ಚಿತ್ರವನ್ನು ಕನ್ನಡಿಗರೆಂದೂ ಮರೆಯಲು ಸಾಧ್ಯವಿಲ್ಲ. ಈ ಚಿತ್ರಕ್ಕಿ ಬಾಲಕ ಪುನೀತ್ ಹಾಡಿದ್ದ ಕಾಣದಂತೆ ಮಾಯವಾದನು ಹಾಡೂ ಕೂಡಾ ಇಂದಿಗೂ ಜನಜನಿತ. ಇದೀಗ ಇದೇ ಶೀರ್ಷಿಕೆ ಹೊತ್ತ ಚಿತ್ರವೊಂದು ಸದ್ದಿಲ್ಲದೆ ರೂಪುಗೊಂಡು ಬಿಡುಗಡೆಗೆ ಸನ್ನದ್ಧವಾಗಿದೆ. ಈ ಚಿತ್ರವನ್ನು ಸೋಮ್ ಸಿಂಗ್ ಎಂಬ ಅಪ್ಪಟ ರಾಜ್ಕುಮಾರ್ ಅಭಿಮಾನಿಯೇ ನಿರ್ಮಾಣ ಮಾಡಿದ್ದಾರೆ!
ಸೋಮ್ ಸಿಂಗ್ ತಮ್ಮ ಸ್ನೇಹಿತ ಚಂದ್ರಶೇಖರ್ ನಾಯ್ಡು ಜೊತೆಗೂಡಿ ನಿರ್ಮಾಣ ಮಾಡಿರೋ ಚಿತ್ರ ಕಾಣದಂತೆ ಮಾಯವಾದನು. ದುನಿಯಾ ವಿಜಯ್ ಅಭಿನಯದ ಜಯಮ್ಮನಮಗ ಚಿತ್ರವನ್ನ ನಿರ್ದೇಶನ ಮಾಡಿದ್ದ ವಿಕಾಸ್ ಈ ಮೂಲಕ ನಾಯಕನಾಗಿದ್ದಾರೆ. ಯೋಗರಾಜ ಭಟ್ ಗರಡಿಯಲ್ದಲಿ ಕಾರ್ಯ ನಿರ್ವಹಿಸಿದ್ದ ರಾಜ್ ಪತ್ತಿಪಾಟಿ ಕಾಣದಂತೆ ಮಾಯವಾದನು ಮೂಲಕ ಸ್ವತಂತ್ರ ನಿರ್ದೇಶಕನಾಗಿದ್ದಾರೆ. ಈಗ ತನ್ನದೇ ಆದ ರೀತಿಯಲ್ಲಿ ಸದ್ದು ಮಾಡ್ತಿರೋ ಈ ಚಿತ್ರದ ಮೂಲಕವೇ ಸೋಮ್ ಸಿಂಗ್ ಕೂಡಾ ತಮ್ಮ ಕನಸಿನ ಹಾದಿಯಲ್ಲಿ ಮೊದಲ ಹೆಜ್ಜೆಯಿಟ್ಟಿದ್ದಾರೆ. ಈ ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ಈಗ ಮತ್ತೊಂದು ಹೆಜ್ಜೆ ಎನ್ನುವಂತೆ ಸೋಮಸಿಂಗ್ ಎದುರು ಮತ್ತೊಂದು ಅವಕಾಶ ಎದುರಾಗಿದೆ. ಅದೇನೆಂದರೆ ದುನಿಯಾ ಸೂರಿ ನಿರ್ದೇಶನದ ಪಾಪ್ಕರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟಿಸುವ ಆಫರ್ ನೀಡಿದ್ದಾರೆ. ದುನಿಯಾ ಸೂರಿ ಸೋಮ್ ಸಿಂಗ್ ಅವರನ್ನು ನಟಿಸಲು ಬನ್ನಿ ಅಂದಿದ್ದಾರೆ ಅಂದರೆ ಇವರ ಪ್ರತಿಭೆಯನ್ನು ಸೂರಿ ಗುರುತಿಸಿದ್ದಾರೆ ಎಂದೇ ಅರ್ಥ. ಕನ್ನಡ ಚಿತ್ರರಂಗಕ್ಕೆ ಉತ್ತಮ ಅಭಿನಯ ನೀಡಬಲ್ಲ ಹೊಸ ಮುಖಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ನೋಡಿದರೆ ಸೋಮ್ ಸಿಂಗ್ ಒಂದೊಳ್ಳೆ ಪೋಷಕನಟನಾಗಿ ನಿಲ್ಲಬಲ್ಲ ಅರ್ಹತೆ ಹೊಂದಿದ್ದಾರೆ. ಸೋಮ್ ಸಿಂಗ್ ಅವರಿಗೆ ಒಳ್ಳೇದಾಗಲಿ…