ಅಭಿಷೇಕ್ ಚುಬೆ ನಿರ್ದೇಶನದ ’ಸೋನ್ಚಿರಿಯಾ’ ಕ್ರೈಂ-ಥ್ರಿಲ್ಲರ್ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಂಬಲ್ ಕಣಿವೆಯ ಬ್ಯಾಕ್ಡ್ರಾಪ್ನ ಕತೆಯ ಟ್ರೈಲರ್ ತುಂಬಾ ಆಕ್ಷನ್ ಇದೆ. ಮಾನ್ ಸಿಂಗ್ (ಮನೋಜ್ ಭಾಜಪೈ) ನಾಯಕತ್ವದ ಡಕಾಯಿತ ತಂಡ, ಆ ತಂಡದ ಪ್ರಮುಖ ಸದಸ್ಯನಾಗಿ ಲಕ್ನಾ (ಸುಶಾಂತ್ ಸಿಂಗ್ ರಜಪೂತ್), ಮತ್ತೊಂದು ಡಕಾಯಿತ ತಂಡದ ನಾಯಕ ವಕೀಲ್ ಸಿಂಗ್ (ರಣವೀರ್ ಶೌರಿ), ಇಂದುಮತಿ (ಭೂಮಿ ಪಡ್ನೇಕರ್), ಪೊಲೀಸ್ ಅಧಿಕಾರಿ ಗುಜ್ಜಾರ್ (ಅಶುತೋಷ್ ರಾಣಾ) ಪಾತ್ರಗಳು ಟ್ರೈಲರ್ನಲ್ಲಿ ರಿವೀಲ್ ಆಗುತ್ತವೆ. ಚಂಬಲ್ ಕಣಿವೆ ಸಾಲಿನ ಗ್ರಾಮವೊಂದರ ಮದುವೆ ಮನೆಯನ್ನು ಲೂಟಿ ಮಾಡುವ ದೃಶ್ಯದೊಂದಿಗೆ ಆರಂಭವಾಗುವ ಟ್ರೈಲರ್ ರೋಚಕವಾಗಿದೆ.
ಚಂಬಲ್ ಕಣಿವೆಯಲ್ಲಿ ೧೯೭೫ರ ಸುಮಾರಿನಲ್ಲಿ ನಡೆದ ನೈಜ ಘಟನಾವಳಿಗಳು ಚಿತ್ರಕ್ಕೆ ಆಧಾರವಂತೆ. ರಾಜಸ್ತಾನದ ಧೋಲ್ಪುರ್ನಲ್ಲಿ ಬಹುಪಾಲು ಚಿತ್ರೀಕರಣ ನಡೆದಿದೆ. ರೋನ್ನಿ ಸ್ಕ್ರ್ಯೂವಾಲಾ ನಿರ್ಮಾಣದ ಈ ಕತೆಯಲ್ಲಿ ಮಾನ್ಸಿಂಗ್ನ ಪೈಶಾಚಿಕ ಕೃತ್ಯಗಳು, ನಾಟಕೀಯ ತಿರುವುಗಳಿಂದ ತಂಡದ ಸದಸ್ಯರಲ್ಲಿ ಏರ್ಪಡುವ ಗೊಂದಲ, ಯುವತಿಯೊಬ್ಬಳ ಪ್ರವೇಶ, ಸರಿ-ತಪ್ಪುಗಳ ಹೊಯ್ದಾಟದಲ್ಲಿ ಸಾಗುವ ಡಕಾಯಿತ ತಂಡಗಳ ಮೇಲಾಟ.. ಹೀಗೆ ಹತ್ತಾರು ಅಂಶಗಳಿವೆ. ಇಲ್ಲಿ ಜಾತಿ, ಸಾಮಾಜಿಕ ಅಸಮಾನತೆ, ಇದರಿಂದ ದಂಗೆ ಏಳುವ ಮನಸ್ಸುಗಳ ನಿರೂಪಣೆಯಿದೆ. ಸರಿ-ತಪ್ಪುಗಳನ್ನು ಸ್ಪಷ್ಟವಾಗಿ ಅರಿಯದೆ ಸಿಡಿದೇಳುವ ಯುವಕರ ಪಡೆಯಿಂದ ಸಮಾಜ ಎದುರಿಸುವ ಕಂಟಕಗಳನ್ನು ವಿಷದವಾಗಿ ಹೇಳುತ್ತಿದ್ದೇನೆ ಎನ್ನುತ್ತಾರೆ ನಿರ್ದೇಶಕ ಚುಬೆ.
#