ನಿರ್ದೇಶಕ ಸೂರಿಯ ಕ್ಯಾರೆಕ್ಟರ್ರು ಅವರ ಸಿನಿಮಾಗಳಂತೆಯೇ ಒಂಥರಾ ವಿಕ್ಷಿಪ್ತ. ಯಾರಾದರೂ ಪರಿಚಯಸ್ಥರ್ಯಾರಾದರೂ ಎದುರಿಗೆ ಸಿಕ್ಕರೆ ಜನ್ಮೇಪಿ ಅವರ ಮುಖವನ್ನೇ ನೋಡಿಲ್ಲವೆನ್ನೋ ಹಾಗೆ ನಡೆದುಕೊಳ್ಳೋದು, ಕೆಲವೊಮ್ಮೆ ಇದ್ದಕ್ಕಿದ್ದಂತೆ ತೀರಾ ಆತ್ಮೀಯತೆ ತೋರಿ ಮಾತಾಡೋದು, ಪ್ರಶ್ನೆಯೇ ಇಲ್ಲದೆ ಉತ್ತರಿಸೋದು, ಉತ್ತರಕ್ಕೆ ಕಾದರೂ ತೆಪ್ಪಗಿರೋದು… ಹೀಗೆ ವಿಚಿತ್ರ ಬುದ್ಧಿಯ ಪ್ರತಿಭಾವಂತ ಸೂರಿ. ಇವರ ವ್ಯಕ್ತಿತ್ವದ ಬಗೆಗೇ ಸಾಕಷ್ಟು ಜನರಲ್ಲಿ ಕುತೂಹಲವಿದೆ. ಸೂರಿ ಗುಣ ಸ್ವಭಾವಗಳನ್ನು ಕನ್ನಡದ ಖ್ಯಾತ ಸಂಭಾಷಣೆಕಾರ ಮಾಸ್ತಿ ತೆರೆದಿಟ್ಟಿದ್ದಾರೆ…
ಒಮ್ಮೆ ಟಗರು ಶೂಟಿಂಗ್ ಸಮಯ ಇನ್ನೋವ ಕಾರಿನಲ್ಲಿ ಉಡುಪಿಗೆ ಹೋಗ್ತಿದ್ವಿ ಅಲ್ಲಿ ಘಾಟ್ ಸೆಕ್ಷನ್ ಆರಂಭವಾಗೋದಕ್ಕೂ ಮುಂಚೆ ಒಂದು ಸ್ಥಳದಲ್ಲಿ ಎಳನೀರು ಕುಡಿಯಲು ನಿಲ್ಲಿಸಿದೆವು, ಸೂರಿಯವರು ಇಳಿದು ಆತನಿಗೆ ಎಳನೀರು ಕೊಡಕ್ಕೇಳಿದ್ರು ಅವನು ಅದಕ್ಕೆ ಕೋಕುಮ್ ರಸ ಮತ್ತು ಸ್ವಲ್ಪ ಮಸಾಲೆ ಸೇರಿಸ್ತೀನಿ ಅಂದ ಇವರು ಸರಿ ಅಂದರು, ನಾನು ನನಗೆ ಅದ್ಯಾವುದೂ ಬೆರಸದೇ ಬರೀ ಎಳನೀರನ್ನು ಮಾತ್ರ ಕೊಡುವಂತೆ ಹೇಳಿದೆ, ಸೂರಿಯವರು ಯಾಕ್ರೀ ಅಂದ್ರು ಅದಕ್ಕೆ ನಾನು ಇಲ್ಲ ನಾನು ಪ್ರಯಾಣದಲ್ಲಿ ಪ್ರಯೋಗ ಮಾಡಲ್ಲ ಅಂದೆ ತಕ್ಷಣ ಅವರಿಗೆ ಸಿಕ್ಕಾಪಟ್ಟೆ ನಗು ಬಂದ್ಬಿಡ್ತು, ನಗುತ್ತಾ… ಅಯ್ಯೋ… ನನಗೂ ಅದ್ಯಾವುದೂ ಬೇಡ ಮಾಮೂಲಿ ಎಳನೀರೇ ಕೊಡಪ್ಪಾ ಅಂದ್ರು. ಹೊರಗಿನವರಿಗೆ ಸೂರಿ ಅಂದ್ರೆ ಮೂಡಿ ರಿಸರ್ವ್ಡ್ ಆಗಿರ್ತಾರೆ ಅನ್ನೋ ಮಾತಿದೆ, ಆದರೆ ಹತ್ತಿರದವರಿಗೆ ಗೊತ್ತು ಅವರು ತುಂಬಾನೇ ಜೋವೆಲ್ಲಾಗಿರ್ತಾರೆ, ಹೊಸ ಪರಿಚಯಗಳಿಗೆ ಸ್ವಲ್ಪ ಒಗ್ಗಲ್ಲ ಅವರು ತುಂಬಾ ಹೊಂದ್ಕೋಳೋದು ಅಂದ್ರೆ ಕಲೆಗೆ ಮತ್ತು ಕುಂಚಕ್ಕೆ ಮಾತ್ರ. ಅವರನ್ನ ನಾನು ಮೊದಲು ನೋಡಿದ್ದು ಮಣಿ ಸಿನಿಮಾದ ಶೂಟಿಂಗ್ ನಲ್ಲಿ ಯೋಗರಾಜ್ ಭಟ್ಟರ ಅಸೋಸಿಯೇಟ್ ಆಗಿ ಕೆಲಸ ಮಾಡ್ತಿದ್ರು ರಂಗ ನನಗೆ ಅವರನ್ನ ಪರಿಚಯ ಮಾಡಿಸಿದ್ದ, ಅಲ್ಲಿಂದ ಶುರುವಾಗಿದ್ದು ನನ್ನ ಅವರ ಒಡನಾಟ, ಸ್ನೇಹಿತನಾಗಿ, ಶಿಷ್ಯನಾಗಿ, ಸಹ ನಿರ್ದೇಶಕನಾಗಿ, ಸಂಭಾಷಣೆಕಾರನಾಗಿ ವರುಷಾನುಗಟ್ಟಲೇ ಅವರ ಜೊತೆ ಕಳೆದಿದೀನಿ, ತೀರಾ ಹತ್ತಿರದಿಂದ ಬಲ್ಲೆ….
ಸಿನಿಮಾದ ಒಂದೊಂದೇ ಮಜಲುಗಳನ್ನ ಮೆಟ್ಟಿ ಬಂದಂತವರು, ಚೊಚ್ಚಲ ಸಿನಿಮಾದಿಂದಾನೇ ನಾಲ್ಕು ಜನಕ್ಕಲ್ಲ ನಾಲ್ಕು ಭಾಷೆಗೆ ಗೊತ್ತಾದಂತವ್ರು, ಅವರ ತಂಡದಲ್ಲಿ ತುಂಬಾ ಜನ ಕೆಲಸ ಮಾಡ್ತಿರ್ತಾರೆ….. ಸೂರಿ ಮೇಷ್ಟ್ರಲ್ಲ ಅವರು ಯಾವುದನ್ನೂ ಕಲಿಸಕ್ಕೆ ಹೋಗಲ್ಲ, ಅವರು ಕೆಲಸ ಮಾಡ್ತಿರ್ತಾರೆ ನಾವು ನೋಡಿ ಕಲಿತ್ಕೋತಾ ಹೋಗ್ಬೇಕು. ಸೂರಿ ಒಂದು ಒಳ್ಳೇ ” ಟ್ರೈನಿಂಗ್ ಇನ್ಸ್ಟಿಟ್ಯೂಟ್ “. ಒಂದು ಸಿನಿಮಾಗೆ ಹೋದಾಗ ಪ್ರೇಕ್ಷಕ ಯಾವ ರೀತಿ ತನ್ನನ್ನ ತಾನು ಮರೆತು ಸಿನಿಮಾದಲ್ಲಿ ಮುಳುಗಿರ್ತಾನೋ ಅದೇ ರೀತಿ ಸೂರಿ ಶೂಟಿಂಗ್ ಮಾಡೋವಾಗ ಮುಳುಗಿರ್ತಾರೆ, ಜೊತೇಲಿರೊವ್ರಿಗೆ ಇವರು ಸೆಟ್ಟಲ್ಲಿದಾರ ಸಿಟ್ಟಲ್ಲಿದಾರ ಅನ್ನೋ ಕನ್ಫ್ಯೂಷನ್ ಇರುತ್ತೆ, ಇವರ ಮೊದಲ ಪ್ಲಸ್ ಪಾಯಿಂಟೇನು ಅಂದ್ರೆ ಕಲಾವಿದರ ಕೈಯಲ್ಲಿ ಆ್ಯಕ್ಟ್ ಮಾಡಿಸಲ್ಲ ಬಿಹೇವ್ ಮಾಡಿಸ್ತಾರೆ, ನೀನು ರೌಡಿ ಥರ ಆಕ್ಟ್ ಮಾಡು ಅನ್ನಲ್ಲ ನೀನು ರೌಡಿ ಆಗು ಅಂತಾರೆ, ಕಬಾಬ್ ಮಾಡೊವ್ನ್ ಥರ ಆಕ್ಟ್ ಮಾಡು ಅನ್ನಲ್ಲ….ನನ್ನ ಸಿನಿಮಾಗೆ ಬೇಕು, ನೀನು ಕಬಾಬ್ ಮಾಡು ಅಂತಾರೆ, ಬರ್ಲಿಲ್ಲ ಅಂದ್ರೆ ಕಲಿ ಅಂತಾರೆ…….” ಸಹಜತೆ ” ಗೆ ಒದ್ದಾಡ್ತಾರೆ ಗುದ್ದಾಡ್ತಾರೆ, ನಟನೆ ತೆಗೆಸೋವರೆಗೂ ಬಿಡಲ್ಲ, ಅದಕ್ಕೇ ತುಂಬಾ ಜನ ಆರ್ಟಿಸ್ಟ್ಗಳು ಇವರ ಸಿನಿಮಾಗಳಿಂದ ಬೆಳಕಿಗೆ ಬಂದಿದಾರೆ.
ಬೆಳಿಗ್ಗೆ ಉದಯಿಸಿದ ಸೂರ್ಯ ಆದ್ರೂ ಸಂಜೆ ಹೊತ್ತಿಗೆ ಮಂಕಾಗ್ತಾನೆ ಆದ್ರೆ ಸೆಟ್ಟಲ್ಲಿ ಸೂರಿ ಮಂಕಾಗಿರೋದು ನೋಡೇ ಇಲ್ಲ ಸಂಜೆ ಅಗ್ತಾ ಆಗ್ತಾ ಬ್ರೈಟ್ ಆಗ್ತಾನೇ ಹೋಗ್ತಾರೆ, ಹೆವೀ ಎನರ್ಜಿ ಇರೋ ಅಂತ ವ್ಯಕ್ತಿ, ಅವರು ಮೈಕ್ ಹಿಡಿದು ಹೇಳೋ ಆ್ಯಕ್ಷನ್ ನಲ್ಲೊಂದು ಕಮ್ಯಾಂಡಿಂಗ್ ಇರುತ್ತೆ. ಇವರು ಬದುಕಲ್ಲಿ ತುಂಬಾನೇ ಪ್ರೀತ್ಸೋ ಎರಡು ಪದಗಳು ಅಂದ್ರೆ ಒಂದು ಅಮ್ಮ ಮತ್ತೊಂದು ಸಿನಿಮಾ. ಪಟ್ಟು ಹಿಡಿದ್ರೆ ಅದನ್ನ ಸಾಧಿಸೋವರೆಗೂ ನಿದ್ರೆ ಮಾಡಲ್ಲ ….ಅದಕ್ಕೊಂದು ಒಳ್ಳೇ ಉದಾಹರಣೆಯೆಂದರೆ ಒಮ್ಮೆ ಸೂರಿಯವರ ತಾಯಿ ಮಾತನಾಡುತ್ತ ”ಎನೋ ಸೂರಿ ನೀನು ತಿನ್ಕೊಂಡು ಕುಡ್ಕೊಂಡು ಹಿಂಗ್ ಹೊಟ್ಟೆ ಬರಸ್ಕೊಂಡಿದೀಯ, ನಿನಗಿದು ಚೆನ್ನಾಗಿ ಕಾಣಲ್ಲ” ಅಂದಿದಾರೆ ….ಅಷ್ಟೇ ….ಮರುದಿನವೇ ಜಿಮ್ಮಿಗೆ ಸೇರಿ, ಮೂರು ತಿಂಗಳಲ್ಲೇ ಕ(ಕೊ)ಬ್ಬಿಣದಂತಿದ್ದ ದೇಹವನ್ನು ಚಿನ್ನದಂತೆ ಕರಗಿಸಿ ಸಿಕ್ಸ್ ಪ್ಯಾಕಲ್ಲಿ ಕಾಣಿಸಿಕೊಂಡಂತಹ ಹಠವಾದಿ. ಇವರು ತುಂಬಾ ಮುದ್ದಿಸುವ ಮತ್ತು ಜಿದ್ದಿಸುವ ವ್ಯಕ್ತಿ ಅಂದ್ರೆ ಅದು ಯೋಗರಾಜ್ ಸರ್, ಇವರ ಮೇಲೆ ಸೂರಿಯದ್ದು ಆರೋಗ್ಯಕರ ಸ್ಪರ್ಧೆ, ಅಮ್ಮನ ಕೈ ಊಟ ಬಿಟ್ರೆ ಸೂರಿಯವರು ತುಂಬಾ ಇಷ್ಟ ಪಡೋ ಊಟ ಅಂದ್ರೆ ಅದು ಯೋಗ್ ರಾಜ್ ಸಾರ್ ಮನೆಯ ಊಟವನ್ನೇ.
ಇನ್ನು ಜಯಂತ್ ಕಾಯ್ಕಿಣಿಯವರು ಅಂದ್ರೆ ತುಂಬಾನೇ ಅಚ್ಚುಮೆಚ್ಚು ಅವರ ಸಾಹಿತ್ಯದ ಹುಚ್ಚಭಿಮಾನಿ ಇವರು, ಮತ್ತೆ ಇವರು ಹೆದರುತ್ತಿದ್ದದ್ದು ಇವರ ಅಸೋಸಿಯೇಟ್ ಡೈರೆಕ್ಟರ್ ಅಭಿ ಗೆ, ಹೆದರಿಕೆ ಅಂದರೆ ಇನ್ನೆಂಥದ್ದೂ ಅಲ್ಲ ನಾಳಿನ ಶೂಟಿಂಗ್ ಪ್ರೋಗ್ರಾಮ್ ಕೇಳ್ತಾನೆ ಮತ್ತು ಕತೆಯಲ್ಲಿ ಹುಳುಕು ಹುಡುಕ್ತಾನೆ ಅಂತ! ಇನ್ನು ಇವರ ಮೈನ್ strenght ಅಂತಾನೆ ಹೇಳ್ಬೇಕಂದ್ರೆ ಅದು ಎಡಿಟರ್ ದೀಪು ಎಸ್ ಕುಮಾರ್, ಇವತ್ತಿಗೂ ಸೂರಿ ಹೃದಯತುಂಬಿ ಗೌರವಿಸೋದು ಅಂದ್ರೆ ಅದು ಈತನನ್ನೇ, ಸೂರಿ ಬೇಕಾದ್ರೆ ಹೀರೋ ಇಲ್ಲದೇ ಸಿನಿಮಾ ಮಾಡ್ತಾರೆ ಆದ್ರೆ ದೀಪು ಇಲ್ಲದೇ ಸಿನಿಮಾ ಮಾಡಲ್ಲ ಮತ್ತು ಮಾಡಿಲ್ಲ. ಸೂರಿಯವರನ್ನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆಸ್ಬೇಕು ಸಾಧಕರ ಸೀಟಿನಲ್ಲಿ ಕೂರಿಸ್ಬೇಕು ಅಂತ ಚಾನಲ್ ನವರು ಇನ್ನಿಲ್ಲದಂಗ್ ಪ್ರಯತ್ನಿಸಿದ್ರೂ ಇವರು ಮಾತ್ರ ಸುತಾರಾಂ ಒಪ್ಪಲಿಲ್ಲ, ಕಾರಣ ಕೇಳಿದ್ದಕ್ಕೆ ಅವರು ಹೇಳಿದ್ದು ಒಂದೇ ಮಾತು ‘ನಾ ಸಾಧಕನಲ್ಲ ಅಂತ’, ಇವರು ಯಾವತ್ತೂ ಆಸೆ ಮತ್ತು ಅಸೂಯೆನ ಪಟ್ಟವರಲ್ಲ, ಸಿನಿಮಾದಲ್ಲಿ ಸೋಲುಗೆಲುವನ್ನ ಮಾನದಂಡವಾಗಿ ಪರಿಗಣಿಸಿದವರೇ ಅಲ್ಲ, ಪ್ರಯತ್ನ ಮತ್ತು ಪರಿಶ್ರಮಾನ ನಂಬಿದವರು. ಇವರು ತಮ್ಮ ಸಿನಿಮಾಗಳ ಮೂಲಕ ರಂಜಿಸಿದ್ದಾರೆ, ಒಂದಷ್ಟು ಜನಕ್ಕೆ ಆಚಾರ್ಯರಾದರೆ ಇನ್ನೊಂದಷ್ಟು ಜನಕ್ಕೆ ದ್ರೋಣಾಚಾರ್ಯರಾಗಿದ್ದಾರೆ, ದುಡಿದಿದ್ದಾರೆ ದುಡುಕಿದ್ದಾರೆ, ತಿದ್ದಿದ್ದಾರೆ ತಿದ್ಕೊಂಡಿದ್ದಾರೆ, ಇವರಲ್ಲಿ ಕೋಪ ಇದೆ ಲೋಪ ಇದೆ, ಸಿನಿಮಾದ ರೂಪ ಇದೆ… ಒಟ್ಟಾರೆ ಸೂರಿ ಅನ್ನೋದು ಒಂದು ಅನುಭವದ ಪುಸ್ತಕ ಇಂದು ಈ ಪುಸ್ತಕ ಮುದ್ರಣವಾದ ದಿನ!….
ಸೂರಿಯವರಿಗೆ ಜನುಮದಿನದ ಶುಭಾಶಯಗಳು. ನಮ್ಮ ಕನ್ನಡ ಚಿತ್ರರಂಗ ಕಂಡ ಉತ್ಕೃಷ್ಟ ತಯಾರಕರಿವರು, ಇವರಿಗೆ ದೇವರು ಹೆಚ್ಚಿನ ಶಕ್ತಿ ನೀಡಲಿ, ಸೂರಿಯವರು ಇನ್ನೂ ಹೆಚ್ಚೆಚ್ಚು ಸಿನಿಮಾಗಳನ್ನು ನಿರ್ದೇಶಿಸಲಿ ಎಂದು ಆಶಿಸುತ್ತೇನೆ
– ಮಾಸ್ತಿ