ಎಸ್.ಪಿ.ಬಾಲಸುಬ್ರಹ್ಮಣ್ಯಂ ಭಾರತೀಯ ಚಲನಚಿತ್ರ ರಂಗದ ಬಹುಮುಖ್ಯ ಹೆಸರು. ಐವತ್ತು ವರ್ಷಗಳಿಂದ ಸುಮಾರು ಹದಿನೇಳು ಭಾಷೆಗಳ ಚಲನಚಿತ್ರಗಳಿಗೆ ಹಾಡುತ್ತ ಬಂದಿದ್ದ ಈ ಗಾನ ಗಂಧರ್ವ ಇಂದು ಸ್ವರ ನಿಲ್ಲಿಸಿ ಬಾರದ ಲೋಕಕ್ಕೆ ಹೊರಟಿದ್ದಾರೆ.
ಆಂಧ್ರಪ್ರದೇಶದಲ್ಲಿ ಹುಟ್ಟಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಸಿನೆಮಾಗಳಲ್ಲಿ ಹಾಡುವ ಮೂಲಕ ಪ್ರಸಿದ್ಧಿಗೆ ಬಂದ ಎಸ್ಪೀಬಿ, ಭಾಷೆಗಳ ಹಂಗನ್ನೂ ಮೀರಿ ಬೆಳೆದು ನಿಂತಿರುವ ಮೇರು ಪರ್ವತ. ಉತ್ತರ ದಕ್ಷಿಣವೆನ್ನದೆ ಭಾರತದ ಉದ್ದಗಲಕ್ಕೂ ಇವರ ಅಭಿಮಾನಿಗಳಿದ್ದಾರೆ. ಭಾರತದ ಮುಖ್ಯವಾಹಿನಿಯ ಬಹುತೇಕ ಎಲ್ಲ ಭಾಷೆಗಳಲ್ಲೂ ಹಾಡಿರುವ ಎಸ್ಪೀಬಿ, ಕೆಲವೊಮ್ಮೆ ಆಯಾ ಚಿತ್ರರಂಗದ ಪುನರುಜ್ಜೀವನಕ್ಕೂ ಕಾರಣರಾಗಿದ್ದಾರೆ. ವಿವಿಧ ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಎಸ್ಪೀಬಿ, ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮತ್ತು ಹೀಗೆ ಇಂಥಾ ಪ್ರಶಸ್ತಿಯನ್ನು ಪಡೆದವರಲ್ಲಿ ಮೊದಲಿಗ ಮತ್ತು ಏಕೈಕ ವ್ಯಕ್ತಿಯಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. 25 ಬಾರಿ ಆಂಧ್ರಪ್ರದೇಶ ಸರ್ಕಾರದ ‘ನಂದಿ’ ಪ್ರಶಸ್ತಿಯನ್ನು ಪಡೆದಿರುವುದೊಂದು ದಾಖಲೆ. ಹಲವು ವಿಶ್ವ ವಿದ್ಯಾಲಯಗಳ ಡಾಕ್ಟರೇಟ್ ಗೌರವ ಕೂಡ ಎಸ್ಪೀಬಿ ಪಾಲಿಗೆ ಸಂದಾಯವಾಗಿವೆ.
ತೆಲುಗಿನ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಚಿತ್ರದಲ್ಲಿ ಮೊದಲ ಬಾರಿಗೆ ಹಾಡುವ ಅವಕಾಶ ಗಿಟ್ಟಿಸಿಕೊಂಡ ಬಾಲಸುಬ್ರಹ್ಮಣ್ಯಂ, ಅನಂತರ ಹಿಂದಿರುಗಿ ನೋಡಲೇ ಇಲ್ಲ. ಅವರು ಚಿತ್ರಗಳಿಗೆ ಹಾಡಲು ಆರಂಭಿಸಿದ ದಿನಗಳಲ್ಲಿ ದಕ್ಷಿಣದಲ್ಲಿ ಭಾಷೆಗೊಬ್ಬರಂತೆ ಸಂಗೀತ ಸಾರ್ವಭೌಮರಿದ್ದರು. ಎಸ್ಪೀಬಿ ಎಲ್ಲ ನಾಲ್ಕು ಭಾಷೆಗಳ ಗಾಯನದಲ್ಲೂ ಹಿಡಿತ ಸಾಧಿಸಿ ಅತ್ಯಂತ ಕಡಿಮೆ ಅವಧಿಯಲ್ಲೇ ಜನಪ್ರಿಯತೆ ಸಾಧಿಸಿದರು. ಅಷ್ಟೇ ಅಲ್ಲ, ಬಾಲಿವುಡ್ ಅಂಗಳದಲ್ಲೂ ತಮ್ಮ ಕಂಠ ಮಾಧುರ್ಯದ ರುಚಿ ತೋರಿಸಿ ಜನಮನ ಸೂರೆಗೊಂಡಿದ್ದರು. ಸಲ್ಮಾನ್ ಖಾನ್ರಂಥ ನಟರು ಸಿನೆಮಾ ರಂಗಕ್ಕೆ ಕಾಲಿಡುತ್ತಿದ್ದ ಕಾಲದಲ್ಲಿ ಅವರಿಗೆ ದನಿಯಾದ ಎಸ್ಪೀಬಿ, ಅವರನ್ನು ಜನರಿಗೆ ಮತ್ತಷ್ಟು ಯಶಸ್ವಿಯಾಗಿ ತಲುಪಿಸಿದರು. ಬಾಲಿವುಡ್ ಮಂದಿ ದಕ್ಷಿಣದ ಸಿನೆಮಾ ಮಂದಿಯನ್ನು ‘ಮದ್ರಾಸಿ’ ಎಂದು ಮೂಗುಮುರಿಯುತ್ತಿದ್ದ ಕಾಲದಲ್ಲಿ ಎಸ್ಪೀಬಿ ತಮ್ಮ ಛಮಕ್ ತೋರಿಸಿದರು. ಅಲ್ಲಿಯವರು ಬೆರಗಾಗಿ ದಕ್ಷಿಣದ ಚಿತ್ರಗಳತ್ತ ನೋಡುವಂತೆ ಮಾಡಿದರು. ಕಿಶೋರ್ ದಾ ನಂತರದ ನಿರ್ವಾತ ಕಾಲದಲ್ಲಿ ಎಸ್ಪೀಬಿ ಬಾಲಿವುಡ್ಡಿನ ಬಹಳ ಮುಖ್ಯ ಆಸರೆಯಾಗಿ ನಿಂತಿದ್ದರು. ಇಂತಹ ಅದೆಷ್ಟೋ ಸಾಧನೆ ಮಾಡಿಯೂ ನಿಗರ್ವಿಯಾಗಿರುವ ಎಸ್ಪೀಬಿ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದು “ಎದೆ ತುಂಬಿ ಹಾಡುವೆನು” ಕಾರ್ಯಕ್ರಮದಿಂದ. ತಮ್ಮೆಲ್ಲ ಕಾರ್ಯದೊತ್ತಡದ ನಡುವೆಯೂ ಸಂಗೀತ ಹಾಗೂ ಕನ್ನಡಾಭಿಮಾನದಿಂದ ಎಸ್ಪೀಬಿ ಈ ಶೋದಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳಲು ಸಮ್ಮತಿಸಿದ್ದರು. ಅವರ ಉಪಸ್ಥಿತಿಯಿಂದಾಗಿಯೇ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಅತ್ಯದ್ಭುತ ಜನಪ್ರಿಯತೆ ಪಡೆಯಿತು.
ತಮ್ಮ ಸರಳ, ಸಮಯೋಚಿತ ಮಾತುಗಳು ಹಾಗೂ ಸ್ನೇಹಪರ ನಡವಳಿಕೆಗಳಿಂದ ಎಸ್ಪೀಬಿ ಜನಮಾನಸಕ್ಕೆ ಮತ್ತಷ್ಟು ಹತ್ತಿರವಾದರು. ಮುಂದೆ ಇತರ ಭಾಷೆಯ ಟೀವಿ ವಾಹಿನಿಗಳಲ್ಲೂ ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಪಾಲ್ಗೊಳ್ಳತೊಡಗಿದರು ಎಸ್ಪೀಬಿ. ಸ್ವಯಂಕಲಿಕೆಯಿಂದ ಈ ಎಲ್ಲ ಸಾಧನೆ ಮಾಡಿದ ಇವರು ತಮ್ಮನ್ನು ತಾವು “ಘಂಟಸಾಲರ ಏಕಲವ್ಯ ಶಿಷ್ಯ” ಎಂದೇ ಹೇಳಿಕೊಳ್ಳುತ್ತಾರೆ. ರಾಜನ್ ನಾಗೇಂದ್ರರ ಸಂಗೀತ ನಿರ್ದೇಶನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ ಬಾಲಸುಬ್ರಹ್ಮಣ್ಯಂ ಅವರು ಪರಿಪೂರ್ಣತೆಗೆ ನೀಡುತ್ತಿದ್ದ ಆದ್ಯತೆಯೇ ತಮ್ಮನ್ನು ಮತ್ತಷ್ಟು ಪರಿಪೂರ್ಣ ಹಾಡುಗಾರನನ್ನಾಗಿಸಿತು ಎಂದು ಮನ ತುಂಬಿ ನುಡಿಯುತ್ತಾರೆ. ಚಲನಚಿತ್ರ ಸಂಗೀತದಲ್ಲಿ ಉತ್ತುಂಗ ತಲುಪಿದ ನಂತರ ವಿಧೇಯ ವಿದ್ಯಾರ್ಥಿಯಂತೆ ಶಾಸ್ತ್ರೀಯ ಸಂಗೀತ ಕಲಿತ ಎಸ್ಪೀಬಿ, ವಿನಯವಂತಿಕೆಯ ಸಾಕಾರ ಮೂರ್ತಿಯಂತಿದ್ದಾರೆ. ಎಸ್ಪೀಬಿ ದೈತ್ಯ ಪ್ರತಿಭೆ ಮಾತ್ರವಲ್ಲ, ಅಪಾರ ಪರಿಶ್ರಮಿ ಕೂಡಾ. ದಿನವೊಂದಕ್ಕೆ ಹತ್ತೊಂಭತ್ತು ಹಾಡುಗಳ ರೆಕಾರ್ಡಿಂಗ್ನಲ್ಲಿ ಪಾಲ್ಗೊಂಡ ದಾಖಲೆ ಇವರ ಹೆಸರಲ್ಲಿದೆ. ಭಾರತ ಮಾತ್ರವಲ್ಲ, ಜಾಗತಿಕ ಸಿನೆಮಾರಂಗದಲ್ಲೇ ಇವರ ಸಾಧನೆಯೊಂದು ದಾಖಲೆಯಾಗಿದೆ. ಇದೀಗ 74ನೇ ವರ್ಷದಲ್ಲಿರುವ ಗಾನ ಗಂಧರ್ವನ ಕಂಠಕ್ಕೆ ಮಾತ್ರ ಎಳ್ಳಷ್ಟೂ ಮುಪ್ಪು ಅಡರಿಲ್ಲ. ಇವತ್ತಿಗೂ ಅದೇ ತಾಜಾ ದನಿಯಲ್ಲಿ ಹಾಡುವ ಎಸ್ಪೀಬಿ ಗಾಯನದ ಮೋಡಿಗೆ ಹೊಸ ಪೀಳಿಗೆಯ ಕೇಳುಗರೂ ಒಳಗಾಗಿದ್ದಾರೆ. ಕೆಲವು ವರ್ಷಗಳ ಹಿಂದಿನ ಚೆನ್ನೈ ಎಕ್ಸ್ಪ್ರೆಸ್ ಟೈಟಲ್ ಸಾಂಗ್ ಗಾಯನ ಹೊಚ್ಚಹೊಸ ಕೇಳುಗರನ್ನು ಅವರಿಗೆ ಒದಗಿಸಿಕೊಟ್ಟಿದೆ. ಒಟ್ಟಿಗೆ ಮೂರು ತಲೆಮಾರುಗಳ ಅಭಿಮಾನಿಗಳನ್ನು ಒಂದೇ ಕಾಲಮಾನದಲ್ಲಿ ಹೊಂದಿರುವುದು ಎಸ್ಪೀಬಿ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು.
ಈ ಹಾಡುಹಕ್ಕಿಗೆ ಗಾಯನ ಮಾತ್ರವಲ್ಲದೆ ನಟನೆಯಲ್ಲೂ ಅಪರಿಮಿತ ಆಸಕ್ತಿ. ಹಾಗೆಂದೇ ಮೊದಲ ಬಾರಿಗೆ ಕನ್ನಡದ ಮಿಥಿಲೆಯ ಸೀತೆಯರು ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಾರೆ ಎಸ್ಪೀಬಿ. ಅನಂತರ ತೊಂಭತ್ತರ ದಶಕದಲ್ಲಿ ಮುದ್ದಿನ ಮಾವ ಚಿತ್ರದಲ್ಲಿ ನಾಯಕ ನಟ – ನಟಿಯಷ್ಟೇ ಮಹತ್ವದ, ಟೈಟಲ್ ರೋಲ್ನಲ್ಲಿ ಅಭಿನಯಿಸುವ ಇವರು ತಮ್ಮೊಳಗಿನ ನಟನಾ ಸಾಮಥ್ರ್ಯ ತೆರೆದಿಟ್ಟು ಅಭಿಮಾನಿಗಳ ಹುಬ್ಬೇರುವಂತೆ ಮಾಡುತ್ತಾರೆ. ಆದರೆ ನಟನೆಗೆ ಕೊಡುವಷ್ಟು ಸಮಯ ತಮ್ಮ ಬಳಿ ಇಲ್ಲ ಅನ್ನುವ ಬೇಸರ ಇವತ್ತಿಗೂ ಎಸ್ಪೀಬಿ ಮನಸಿನಲ್ಲಿದೆ. ಅದನ್ನು ಆಗಿಂದಾಗ ತಮ್ಮ ಆಪ್ತರ ಬಳಿ ಅವರು ಹೇಳಿಕೊಳ್ಳೋದೂ ಇದೆ. ಹಾಡುವಾಗ ಅದರ ಸಾಹಿತ್ಯದಲ್ಲಿ ತಲ್ಲೀನರಾಗಿಬಿಡುವ ಎಸ್ಪೀಬಿ ಎಷ್ಟೋ ಬಾರಿ ಕಣ್ಣೀರು ಸುರಿಸಿದ್ದೂ ಇದೆ. ಅದರಲ್ಲೂ ತಾಯಿಯ ಬಗ್ಗೆ, ಗೆಳೆತನದ ಬಗ್ಗೆ ಇರುವ ಹಾಡುಗಳು ಅವರನ್ನು ಹೆಚ್ಚು ಭಾವುಕವಾಗಿಸ್ತದೆಯಂತೆ. ಕನ್ನಡ ಚಿತ್ರ ರಂಗದಲ್ಲಿ ವಿಷ್ಣುವರ್ಧನ್ರೊಂದಿಗೆ ಹೆಚ್ಚು ವೈಯಕ್ತಿಕವಾಗಿ ಒಡನಾಡಿದ್ದ ಎಸ್ಪೀಬಿ, ಅವರ ‘ರಾಮಾಚಾರಿ’ ಚಿತ್ರದ ಹಾಡುಗಳಿಗೆ ಮೊದಲ ಬಾರಿಗೆ ದನಿಯಾಗಿದ್ದರು. ಅನಂತರ ವಿಷ್ಣು ಚಿತ್ರಗಳನ್ನು ಒಪ್ಪಿಕೊಳ್ಳುವಾಗೆಲ್ಲ ಎಸ್ಪೀಬಿ ಹಾಡುವುದನ್ನು ಖಾತ್ರಿಪಡಿಸಿಕೊಂಡೇ ಸಹಿ ಹಾಕುತ್ತಿದ್ದರಂತೆ! ಪ್ರತಿ ವರ್ಷ ಜೂನ್ 4ರಂದು ಎಸ್ಪೀಬಿ ಹುಟ್ಟುಹಬ್ಬದ ದಿನ ಚೆನ್ನೈಗೆ ಖುದ್ದಾಗಿ ಹೋಗಿ ವಿಶ್ ಮಾಡಿ ಬರುತ್ತಿದ್ದರಂತೆ ವಿಷ್ಣುವರ್ಧನ್. ತಮ್ಮ ಈ ಒಡನಾಟವನ್ನು ನೆನೆದಾಗೆಲ್ಲ ಕಣ್ಣೀರಾಗುತ್ತಿದ್ದರು ಎಸ್ಪೀಬಿ. ಭಾರತದ ಬಹುತೇಕ ಮುಖ್ಯವಾಹಿನಿಯ ಭಾಷೆಗಳಲ್ಲಿ ಹಾಡಿದ್ದರೂ ಎಸ್ಪೀಗೆ ಕನ್ನಡದ ಮೇಲೆ ವಿಚಿತ್ರ ಸೆಳೆತ. ಇದನ್ನು ಅವರೇ ಬಹಳ ಸಲ ಹೇಳಿಕೊಂಡಿದ್ದಾರೆ. ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಅವರು ಆಡುವ ಮಾತುಗಳು ಅವರನ್ನು ಪರಭಾಷಿಕರೆಂದು ನಂಬಲು ಕಷ್ಟವೆನಿಸುವ ಹಾಗೆ ಮಾಡುತ್ತವೆ. ಅಷ್ಟು ಅಭಿಮಾನಪೂರ್ವಕವಾಗಿ ಕನ್ನಡದ ಬಗ್ಗೆ ಮಾತನಾಡುತ್ತಿದ್ದವರು ಬಾಲಸುಬ್ರಹ್ಮಣ್ಯಂ.
No Comment! Be the first one.