ಅತೀ ಹೆಚ್ಚು ಪ್ರಚಾರದ ನಡುವೆ ಅವನೇ ಶ್ರೀಮನ್ನಾರಾಯಣ ಚಿತ್ರ ತೆರೆಗೆ ಬಂದಿದೆ. ಮೊದಲ ಬಾರಿಗೆ ಅತಿಹೆಚ್ಚು ಬಜೆಟ್ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಈ ಹಿಂದೆ ಚಿತ್ರತಂಡ ಹೇಳಿದಂತೆ ಕನ್ನಡ ಚಿತ್ರರಂಗದ ಮಟ್ಟಿಗೆ ಇದು ತೀರಾ ಹೊಸದೆನ್ನುವ ಬಗೆಯ, ಅದ್ಭುತ ತಾಂತ್ರಿಕತೆ ಹೊಂದಿರುವ ಶ್ರೀಮಂತ ಸಿನಿಮಾ!

ಅಮರಾವತಿಯೆನ್ನುವ ಕಾಲ್ಪನಿಕ ಊರು. ಅಲ್ಲಿ ಇಬ್ಬರು ಸಹೋದರರ ಕಾಳಗ. ಗದ್ದುಗೆಗಾಗಿ ಅಪ್ಪನನ್ನೇ ಕೊಂದವನೊಬ್ಬ. ಇಂಥಾ ಊರಲ್ಲಿ ನಾಟಕದ ತಂಡವೊಂದು ಲೂಟಿ ಮಾಡಿ ತಂದ ಪೆಟ್ಟಿಗೆಯೊಂದನ್ನು ಅಡಗಿಸಿಟ್ಟಿರುತ್ತದೆ. ಇದರ ಮೇಲೆ ಎಲ್ಲರ ಕಣ್ಣು. ಇಲ್ಲಿ ಹೀರೋ ನಾರಾಯಣನಿಂದ ಹಿಡಿದು ಸುತ್ತಲ ವಾತಾವರಣದ ತನಕ ಯಾವುದೂ ಸಹಜವಲ್ಲ. ಫ್ಯಾಂಟಸಿ ಜಗತ್ತಿನಲ್ಲಿ ಕಥೆ ತೆರೆದುಕೊಂಡು,  ಮುಕ್ತಾಯದ ತನಕ ಅಂಥದ್ದೇ ಲೋಕದಲ್ಲಿ ಪಯಣಿಸುತ್ತದೆ. ಮೊಬೈಲ್ ಫೋನ್ ಕೂಡಾ ಇಲ್ಲದ ಟೆಲಿಫೋನ್ ಯುಗದಲ್ಲಿ ಈ ಕಥೆ ಜರುಗುತ್ತದೆ. ಇಲ್ಲಿ ನಡೆಯುವ ಘಟನೆಗಳು, ದೃಶ್ಯಗಳೆಲ್ಲಾ ವಾಸ್ತವದಿಂದ ದೂರವಿರುವುದರಿಂದ ಯಾವುದೇ ಬಗೆಯಲ್ಲೂ ಲಾಜಿಕ್ಕು ಹುಡುಕಲು ಹೋಗಬಾರದು. ಹೇಗೆ ಕನಸಿನಲ್ಲಿ ಅಗೋಚರ, ವಿಚಿತ್ರ, ವಿಕ್ಷಿಪ್ತ ಮತ್ತು ವಿಲಕ್ಷಣ ದೃಶ್ಯಗಳು ಬಂದು ಹೋಗುತ್ತವೋ ಹಾಗೇ ಶ್ರೀಮನ್ನಾರಾಯಣನ ಕಥೆ ಕೂಡಾ ಎಲ್ಲಿಂದೆಲ್ಲಿಗೋ ತಿರುಗಿಕೊಂಡು, ಮತ್ತೆಲ್ಲೋ ತಿರುವು ಪಡೆದು ಇನ್ನೆಲ್ಲೋ ಸಿಕ್ಕಿಕೊಳ್ಳುತ್ತದೆ. ಇಂಥದ್ದೊಂದು ಎಳೆಯನ್ನು ಕಲ್ಪಿಸಿಕೊಂಡ ರೀತಿಯಲ್ಲೇ  ಕಟ್ಟಿಕೊಡುವುದು ಕಷ್ಟದಾಯಕ ಕೆಲಸ. ಆದರೆ ಅದನ್ನು ನಿಭಾಯಿಸಿರುವ ಕಾರಣಕ್ಕೆ ರಕ್ಷಿತ್ ಶೆಟ್ಟಿಯ ತಂಡ ಮತ್ತು ಅವರು ಕೇಳಿದ್ದನ್ನೆಲ್ಲಾ ಪೂರೈಸಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯನವರನ್ನು ಮೆಚ್ಚಬೇಕು.

ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ನೋಡಿದಾಗ ಒಟ್ಟಾರೆ ಅನಿಸುವುದಿಷ್ಟು; ಮೇಕಿಂಗ್ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಂಡವರು ಸಿನಿಮಾದ ಕಥೆಯನ್ನು ಇನ್ನಷ್ಟು ಬಿಗಿ ಮಾಡಬಹುದಿತ್ತು. ಹೊಸಾ ಬಗೆಯ ಚಿತ್ರಕತೆಯನ್ನು ಪರಿಚಯಿಸಲು ಯತ್ನಿಸುವುದರ ಜೊತೆಗೇ ಪ್ರೇಕ್ಷಕರು ಇದನ್ನು ಜೀರ್ಣಿಸಿಕೊಳ್ಳುತ್ತಾರಾ ಅಂತಾ ಒಮ್ಮೆ ಯೋಚಿಸಬೇಕಿತ್ತು. ಇಡೀ ಸಿನಿಮಾವನ್ನು ಅತಿರಂಜಕಗೊಳಿಸಲು, ಪ್ರತೀ ಪಾತ್ರವನ್ನು ಫನ್ನಿಯಾಗಿಸಬೇಕಿತ್ತಾ? ತಾವು ಚಿತ್ರಿಸಿದ್ದನ್ನೆಲ್ಲಾ ಪ್ರೇಕ್ಷಕರ ಮೇಲೆ ಹೇರಬೇಕಿತ್ತಾ? ಯಾವುದೇ ಸಿನಿಮಾವಾಗಲಿ ಎಷ್ಟು ಹೊತ್ತಿಗೆ ಇಂಟರ್ವಲ್ ಬರುತ್ತೆ? ಯಾವಾಗ ಮುಗಿಯಬಹುದು ಅಂತಾ ಪ್ರೇಕ್ಷಕರಿಗೆ ಅನ್ನಿಸಬಾರದು. ಆದರೆ ನಾರಾಯಣ ಹಲವು ಕಡೆ ಹಾಗನ್ನಿಸುವಂತೆ ಮಾಡುತ್ತಾನೆ. ಸೂಕ್ತ ಜಾಗಗಳಲ್ಲಿ ನಿರ್ದಾಕ್ಷಿಣ್ಯವಾಗಿ ಕಳೆ ಕೀಳುವ ಕೆಲಸ ಮಾಡಿದ್ದಿದ್ದರೆ ಬಹುಶಃ ಯಾರಿಗೂ ಹಾಗನ್ನಿಸುತ್ತಿರಲಿಲ್ಲವೇನೋ? ಪರಿಸರ, ಪಾತ್ರಗಳೆಲ್ಲವೂ ಅಮೂರ್ತತೆಯಿಂದ ಕೂಡಿರುವುದು ಒಂದು ಮಟ್ಟಕ್ಕೆ ಸಹಿಸಿಕೊಳ್ಳಬಹುದು. ಆದರೆ ಸಿನಿಮಾ ಪೂರ್ತಿ ಅದೇ ಹಾದಿಯಲ್ಲಿರುವುದು ಕಿರಿಕಿರಿಗೆ ಕಾರಣವಾಗುತ್ತದೆ. ಅದೇ ಸಂದರ್ಭದಲ್ಲಿ ಸಿದ್ಧಸೂತ್ರಗಳನ್ನು ಮೀರಿ ಮನುಷ್ಯ ಸಹಜ ದಾಹ, ದುರಾಸೆ,  ಪ್ರೀತಿ, ಹಾಸ್ಯವನ್ನೆಲ್ಲಾ ಇಷ್ಟು ಕ್ರಿಯಾಶೀಲವಾಗಿ ಚಿತ್ರಿಸಿದ್ದಾರಲ್ಲಾ ಎನ್ನುವ ಕಾರಣಕ್ಕೆ ಹೆಮ್ಮೆಯೆನಿಸುತ್ತದೆ. ಹೀಗೆ ನೋಡುಗರನ್ನೇ ಗೊಂದಲಕ್ಕೀಡುಮಾಡಿರುವುದನ್ನು ಶ್ರೀಮನ್ನಾರಾಯಣನ ಪವಾಡವೆಂದುಕೊಳ್ಳಬೇಕು!

ದರೋಡೆ, ಪತ್ತೇದಾರಿ, ಕೌಬಾಯ್ ಶೈಲಿಯ ಸಿನಿಮಾಗಳು ಸಾಕಷ್ಟು ಬಂದು ಹೋಗಿವೆ. ಆದರೆ ರೆಟ್ರೋ ಶೈಲಿಯಲ್ಲಿ ಇಡೀ ಸಿನಿಮಾವನ್ನು ರೂಪಿಸಿರುವುದು ಶ್ರೀಮನ್ನಾರಾಯಣನ ಹೆಚ್ಚುಗಾರಿಕೆ. ಕಲಾನಿರ್ದೇಶನ, ಕಾಸ್ಟೂಮ್ಸ್, ಛಾಯಾಗ್ರಹಣ, ಸಾಹಸ ಇಡೀ ಸಿನಿಮಾದ ಪ್ಲಸ್ ಪಾಯಿಂಟ್. ಸಿಜಿ ಮತ್ತು ಕಲರ್ ಗ್ರೇಡಿಂಗ್ ಕೆಲಸ ಉತ್ತಮವಾಗಿದೆ. ರಕ್ಷಿತ್ ಶೆಟ್ಟಿ ಸಹಜ ನಟನೆ ಖುಷಿ ಕೊಟ್ಟರೂ ಅವರ ಡೈಲಾಗ್ ಡೆಲಿವರಿಯಲ್ಲಿನ ಹೈ ಸ್ಪೀಡು ಸಿಟ್ಟು ತರಿಸುತ್ತದೆ. ಬಾಲಾಜಿ ಮನೋಹರ್ ಮತ್ತು ಪ್ರಮೋದ್ ಶೆಟ್ಟಿ ಚಿತ್ರದ ಪಾತ್ರಗಳಂತೆಯೇ ನಟನೆಯಲ್ಲೂ ಜಿದ್ದಿಗೆ ಬಿದ್ದು ಅಭಿನಯಿಸಿದ್ದಾರೆ. ಪ್ರಮೋದ್ ಶೆಟ್ಟರ ವಿಕಟ ನಗೆ, ಬಾಡಿ ಲಾಂಗ್ವೇಜು ಗಮನಾರ್ಹ. ಚೂರಿ ಕಟ್ಟೆ ಸಿನಿಮಾದಲ್ಲೇ ತಾವು ಎಂಥಾ ನಟ ಅನ್ನೋದನ್ನು ಸಾಬೀತು ಮಾಡಿದ್ದ ಬಾಲಾಜಿ ಮನೋಹರ್ ಇಲ್ಲಿ ಏಳುಬೆಟ್ಟದ ದೊರೆ, ಅಧಿರಾಧಿಪತಿ ರಾಮ ರಾಮನಗಿ ಮತ್ತಷ್ಟು ಗಮನ ಸೆಳೆಯುತ್ತಾರೆ. ಪಾತ್ರ ಯಾವುದಾದರೂ ಸರಿ ಅದನ್ನು ನುಂಗಿಕೊಂಡಂತೆ ನಿಭಾಯಿಸಬಲ್ಲೆ ಅನ್ನೋದನ್ನು ಪ್ರಮೋದ್ ತುಕಾರಾಮನ ವೇಷದಲ್ಲಿ ನಿರೂಪಿಸಿದ್ದಾರೆ. ಅಚ್ಯುತ್ ಕುಮಾರ್ ಮತ್ತು ಗೋಪಾಲ್ ದೇಶಪಾಂಡೆ ಸಿಕ್ಕ ಜಾಗಗಳಲ್ಲೇ ಸ್ಕೋರು ಮಾಡಿಕೊಂಡಿದ್ದಾರೆ.  ನಾಯಕಿ ಶಾನ್ವಿ ಮುಖ ಮತ್ತು ಮಾತು ಎರಡೂ ಮುದ್ದುಮುದ್ದಾಗಿದೆ.

ಮಾಮೂಲಿ ಸಿನಿಮಾಗಳನ್ನು ನೋಡಿ ನೋಡಿ ಸಾಕಾಗಿದೆ ಅನ್ನಿಸಿದವರು ಒಮ್ಮೆಯಾದರೂ ಶ್ರೀಮಾನ್ನಾರಾಯಣನ ದರ್ಶನ ಮಾಡಬಹುದು. ವಾಸ್ತವದಿಂದ ಭ್ರಮಾಲೋಕಕ್ಕೆ ಜಾರಿ ಒಂದಷ್ಟು ಹೊತ್ತು ವಿಹರಿಸಬಹುದು, ನಾರಾಯಣನ ಅಡ್ವೆಂಚರುಗಳನ್ನು ಕಂಡು ಎಂಜಾಯ್ ಮಾಡಬಹುದು.

CG ARUN

ಬಡ್ಡಿ ಮಗನ್ ಲೈಫಲ್ಲಿ ಬಂದ ಹುಡುಗಿ…

Previous article

ಸಾರ್ವಜನಿಕರ ಬಗ್ಗೆ ಧನ್ಯತಾಭಾವ!

Next article

You may also like

Comments

Leave a reply

Your email address will not be published. Required fields are marked *