ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ಒಂದರ ಹಿಂದೊಂದು ಚಿತ್ರಗಳನ್ನು ಮಾಡುವುದರಲ್ಲಿ ಹಿರಿಯ ಚಿತ್ರಸಾಹಿತಿ ಮತ್ತು ನಿರ್ದೇಶಕ ಸಿ.ವಿ. ಶಿವಶಂಕರ್​ ಅವರ ಮಗ ವೆಂಕಟ್​ ಭಾರದ್ವಾಜ್​ ಎತ್ತಿದ ಕೈ. ‘ಎ ಡೇ ಇನ್​ ದಿ ಸಿಟಿ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ವೆಂಕಟ್​, ನಂತರದ ವರ್ಷಗಳಲ್ಲಿ ‘ಬಬ್ಲೂಷ’, ‘ಕೆಂಪಿರ್ವೆ’, ‘ಪೇಂಟರ್​’, ‘ಆಮ್ಲೆಟ್​’ ಮುಂತಾದ ಹಲವು ಚಿತ್ರಗಳನ್ನು ನಿರ್ದೇಶಿಸದ್ದಾರೆ. ಈಗ ಸದ್ದಿಲ್ಲದೆ ಅವರು ‘ಶ್ರೀರಂಗ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ಇತ್ತೀಚೆಗೆ ಆ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಈ ಚಿತ್ರ July​ 22ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇದೊಂದು ಅಮ್ಮ-ಮಗನ ಕಾಮಿಡಿ ಚಿತ್ರ ಎನ್ನುವ ಅವರು, ‘ಶ್ರೀರಂಗನ ತಾಯಿಯಾಗಿ ಯಮುನಾ ಶ್ರೀನಿಧಿ ನಟಿಸಿದ್ದಾರೆ. ಅವರಿಗೆ ಫೋನ್​ ಮಾಡಿ, ಕಾಮಿಡಿ ಪಾತ್ರ ಇದೆ ಎಂದಾಗ ಆಗೋಲ್ಲ ಎಂದರು. ‘ಟೈಗರ್​ ಗಲ್ಲಿ’ಯಲ್ಲಿ ಬೇರೆ ತರಹದ ಪಾತ್ರ ಮಾಡಿದ್ದೆ, ಕಾಮಿಡಿ ಆಗುವುದಿಲ್ಲ ಎಂದರು. ಇದೊಂದು ವಿಭಿನ್ನ ಪಾತ್ರವಾಗಿದ್ದು, ನೀವೇ ಮಾಡಬೇಕು ಎಂದೆ. ಕೊನೆಗೆ ಒಪ್ಪಿ ಮಾಡಿದರು. ಬಹಳ ಚೆನ್ನಾಗಿ ಮಾಡಿದ್ದಾರೆ. ತಾಯಿ ಮತ್ತು ಮಗನ ನಡುವೆ ಸ್ಪರ್ಧೆಯೇ ಈ ಚಿತ್ರದ ಕಥಾವಸ್ತು’ ಎನ್ನುತ್ತಾರೆ ಅವರು.

ಈ ಚಿತ್ರದಲ್ಲಿ ಒಂದಕ್ಕಿಂತ ಇನ್ನೊಂದು ವಿಭಿನ್ನ ಪಾತ್ರಗಳಿವೆಯಂತೆ. ಈ ಕುರಿತು ಮಾಹಿತಿ ಕೊಡುವ ವೆಂಕಟ್​, ‘ ಗುರುರಾಜ ಹೊಸಕೋಟೆ ಅವರು ಈ ಚಿತ್ರದಲ್ಲಿ ಎಸ್​.ಆರ್​. ಭೈರಪ್ಪ ಅಂತ ಪಾತ್ರ. ಪ್ರತಿಷ್ಠಿತ ಲೇಖಕರು ಪ್ಲಸ್​ ಗ್ಯಾಂಗ್​ ಲೀಡರ್​ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಅವರೊಬ್ಬರೇ ಅಲ್ಲ. ಚಿತ್ರದಲ್ಲಿ  ಎಲ್ಲರೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ನಾನು ಸಹ ಒಂದು ಪಾತ್ರ ಮಾಡಿದ್ದೇನೆ. ಮೊದಲು ಹಿನ್ನೆಲೆ ಧ್ವನಿ ಅಂತ ಅಂದುಕೊಂಡಿದ್ದೆ. ಕೊನೆಗೆ ನೀವೇ ಮಾಡಿ ಎಂದರು. ನಾನು ಏನು ಪಾತ್ರ ಅಂತ ಸಿನಿಮಾ ನೋಡಿದರೆ ಗೊತ್ತಾಗತ್ತೆ’ ಎನ್ನುತ್ತಾರೆ ವೆಂಕಟ್​.

ಇದೊಂದು ಮೆರ್ರಿ ಗೋ ರೌಂಡ್​ ತರಹದ ಕಾಮಿಡಿ ಚಿತ್ರ ಎನ್ನುತ್ತಾರೆ ಶಿನವ್​ ನವೀನ್​. ಅವರು ಇದಕ್ಕೂ ಮುನ್ನ ವೆಂಕಟ್​ ನಿರ್ದೇಶನದ ‘ಆಮ್ಲೆಟ್​’ ಚಿತ್ರದಲ್ಲೂ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಂತೆ. ಈಗ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ‘ಇದೊಂದು ಶುದ್ಧ ಮನರಂಜನಾತ್ಮಕ ಚಿತ್ರ. ಎಲ್ಲಿಂದ ಶುರುವಾಗುತ್ತದೋ, ಅಲ್ಲಿಗೇ ಬಂದು ನಿಲ್ಲುತ್ತದೆ. ಒಳ್ಳೆಯ ಫ್ಯಾಮಿಲಿ ಸಿನಿಮಾ. ಪ್ರತಿ ಗ್ಯಾಂಗ್​ನಲ್ಲೂ ಒಬ್ಬ ಇರುತ್ತಾರೆ. ಅವರು ಬೇರೆ ವಿಷಯಗಳಲ್ಲಿ ಮುಂದಿರುತ್ತಾರೆ. ಆದರೆ, ಆಧುನಿಕತೆಯ ವಿಷಯದಲ್ಲಿ ಸ್ವಲ್ಪ ಹಿಂದಿರುತ್ತಾರೆ. ಇಲ್ಲಿ ತಾಯಿ ಅಡ್ವಾನ್ಸ್ಡ್​. ನಾನು ಹಿಂದಿರುತ್ತೇನೆ. ತಾಯಿ-ಮಗನ ಕಾಂಬಿನೇಷನ್​ನಲ್ಲಿ ನಡೆಯುವ ಕಥೆ ಇದು. ಇಂಥದ್ದೊಬ್ಬ ಹುಡಗನನ್ನು ಇಟ್ಟುಕೊಂಡು ಹುಡುಗಿ ಹುಡುಕುವುದು ಎಷ್ಟು ಕಷ್ಟ ಎಂದು ಹೇಳುವ ಚಿತ್ರವಿದು’ ಎನ್ನುತ್ತಾರೆ.

‘ಶ್ರೀರಂಗ’ ಚಿತ್ರದಲ್ಲಿ ಶಿನವ್​ಗೆ ನಾಯಕಿಯರಾಗಿ ರಚನಾ ರಾಯ್, ರೂಪ ರಾಯಪ್ಪ ಹಾಗೂ ವಂದನಾ ಶೆಟ್ಟಿ ನಟಿಸಿದ್ದಾರೆ. ಉಳಿದಂತೆ ಗುರುರಾಜ್ ಹೊಸಕೋಟೆ, ಯಮುನಾ ಶ್ರೀನಿಧಿ, ಸಾಗರ್ ಜಯರಾಮ್, ಚಿಪ್ಸ್ ಬಾಬು ಮುಂತಾದವರು ನಟಿಸಿದ್ದಾರೆ. ಮಿಥುನ್ ಛಾಯಾಗ್ರಾಹಣ, ಶಂಕರ್ ರಾಮನ್ ಸಂಭಾಷಣೆ, ಸಮೀರ್ ಕುಲಕರ್ಣಿ ಸಂಗೀತ ಈ ಚಿತ್ರಕ್ಕಿದೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ಕನ್ನಡದ ಟಾಪ್ ರಪೆರ್ ವಿರಾಜ್​ ಕನ್ನಡಿಗ, ಅವಿನಾಶ್ ಛೆಬ್ಬಿ, ಚೈತ್ರಾ ನಾಣಯ್ಯ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಋತು ಕ್ರಿಯೇಷನ್ಸ್​​ನಡಿ ಈ ಚಿತ್ರವನ್ನು ಸುಮಾ ಸಿ.ಆರ್. ನಿರ್ಮಾಣ ಮಾಡಿದ್ದು, ಬಿ.ಎಂ. ದಿಲೀಪ್ ಸಹ ನಿರ್ಮಾಣ ಮಾಡಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಆಗಸ್ಟ್‌ನಲ್ಲಿ ಶೀರ್ಷಿಕೆ ಘೋಷಣೆ; ಸೆಪ್ಟೆಂಬರ್‌ನಲ್ಲಿ ಶೂಟಿಂಗ್‌ ಶುರು

Previous article

You may also like

Comments

Comments are closed.