2018ನೇ ಸಾಲಿನ ಕರ್ನಾಟಕ ಚಿಲನಚಿತ್ರ ಪ್ರಶಸ್ತಿ ವಿರುದ್ಧ ನ್ಯಾಯಾಲಯದಲ್ಲಿ ಕೇಸು (೩೦೬೫/೨೦೨೦) ದಾಖಲಾಗಿದೆ. ಎಸ್. ಕುಮಾರ್, ಗಜೇಂದ್ರ ಮತ್ತು ಸಂಪರ್ ಕುಮಾರ್ ಅವರು ಹೂಡಿರುವ ಈ ಮೊಕದ್ದಮೆಯ ಕುರಿತಾಗಿ ಹಿಯರಿಂಗ್ ನಡೆದಿದ್ದು, ವಾರ್ತಾ ಇಲಾಖೆಯ ಕಮಿಷನರ್, ಕಾರ್ಯದರ್ಶಿಗಳೂ ಸೇರಿದಂತೆ ಏಳು ಮಂದಿಗೆ ಎಮರ್ಜೆನ್ಸಿ ನೋಟೀಸ್ ರವಾನೆಯಾಗಿದೆ.

ವಿವಾದದ ಹಿನ್ನೆಲೆ : ಈ ಪ್ರಶಸ್ತಿಯ ಆಯ್ಕೆ ಮತ್ತು ಸಮಿತಿಯ ಕಾರ್ಯವೈಖರಿಯ ಬಗ್ಗೆ ತಕಾರಾರು ತೆಗೆದಿರುವವರ ನಾಲ್ಕು ಅಂಶಗಳನ್ನು ಪ್ರಶ್ನಿಸಿದ್ದಾರೆ. ೨೦೧೧ರ ಚಲನಚಿತ್ರ ನೀತಿಯ ಪ್ರಕಾರ ಆಯ್ಕೆ ಸಮಿತಿಯಲ್ಲಿರುವ ಅಧ್ಯಕ್ಷರು, ಸದಸ್ಯರು ಸೇರಿದಂತೆ ಆ ವರ್ಷ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಕೆಯಾದ ಪಟ್ಟಿಯಲ್ಲಿನ ಸಿನಿಮಾಗಳಲ್ಲಿ ಭಾಗಿಯಾಗಿರಬಾರದು. ಆದರೆ, ೨೦೧೮ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿಸಲ್ಲಿಸಿದ್ದ ೧೬೨ ಸಿನಿಮಾಗಳ ಪೈಕಿ ಮೂರು ಸಿನಿಮಾಗಳಲ್ಲಿ ಇದೇ ಕಮಿಟಿಯ ನೇತೃತ್ವ ವಹಿಸಿರುವ ಜೋ ಸೈಮನ್ ಅವರು ಭಾಗಿಯಾಗಿದ್ದಾರೆ. ಒಂದು ಸಿನಿಮಾದಲ್ಲಿ ಮಾತ್ರ ಇವರ ದೃಶ್ಯಗಳನ್ನು ಕತ್ತರಿಸಿ ಮಿಕ್ಕ ಸಿನಿಮಾವನ್ನು ಆಯ್ಕೆ ಸಮಿತಿ ಮುಂದೆ ಪ್ರದರ್ಶಿಸಿದ್ದಾರೆ. ಅಬ್ಬೆ ತುಮಕೂರು ಸಿದ್ದಿ ಪುರಾಣ ವಿಶ್ವಾರಾಧ್ಯರು ಮತ್ತು ಕ್ರಾಂತಿಯೋಗಿ ಮಹದೇವರು ಸಿನಿಮಾಗಳಲ್ಲಿ ಜೋ ಸೈಮನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ಇದೇ ಅಬ್ಬೆ ತುಮಕೂರು ಸಿದ್ದಿ ಪುರಾಣ ವಿಶ್ವಾರಾಧ್ಯರು ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ವಿ. ಥಾಮಸ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ದಯಾಳ್ ಪದ್ಮನಾಭನ್ ನಿರ್ದೇಶನದ ಆ ಕರಾಳ ರಾತ್ರಿ 1986ರಲ್ಲಿ ತೆರೆಕಂಡಿದ್ದ ರಾಜಾಸ್ಥಾನಿ ಸಿನಿಮಾ ‘ಪರಿಣತಿ’ಯ ಸ್ಫೂರ್ತಿಯಿಂದ ತಯಾರಾಗಿದೆ ಎಂದು ದೂರಿದ್ದಾರೆ. ಕೆ. ಶಿವರುದ್ರಯ್ಯ ನಿರ್ದೇಶನದಲ್ಲಿ ಬಂದಿರುವ ರಾಮನ ಸವಾರಿ ಸಿನಿಮಾಗೆ ೨ನೇ ಅತ್ಯುತ್ತಮ ಸಿನಿಮಾ ಎನ್ನುವ ಪ್ರಶಸ್ತಿ ನೀಡಲಾಗಿದೆ. ಆಯ್ಕೆಗಾಗಿ ಬಂದಿರುವ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರದ ಹೆಸರೇ ಇಲ್ಲವಂತೆ. ಸ್ವತಃ ವಾರ್ತಾ ಇಲಾಖೆ ವೆಬ್ ಸೈಟಿನಲ್ಲಿ ಪ್ರಕಟಿಸಿರುವ ಪಟ್ಟಿಯಲ್ಲಿ ಕೂಡಾ ಈ ರಾಮನ ಸವಾರಿಯ ಹೆಸರು ನಮೂದಾಗಿಲ್ಲ. ೨೦೧೯ರ ಜನವರಿಯಲ್ಲಿ ಸೆನ್ಸಾರ್ ಆಗಿರುವ ಏಳೆಂಟು ಸಿನಿಮಾಗಳನ್ನು ಸೆನ್ಸಾರ್ ಮಂಡಳಿಯ ಅನುಮತಿ ಪತ್ರ ಪಡೆದು ೨೦೧೮ರ ಸಾಲಿಗೆ ಸೇರಿಸಿಕೊಂಡಿದ್ದಾರೆ. ಆದರೆ ಆ ಚಿತ್ರಗಳನ್ನು ನೋಡಿದ್ದಾರೆ ಅನ್ನೋದಕ್ಕೆ ಯಾವುದೇ ದಾಖಲೆಗಳಿಲ್ಲ.

ಚಲನಚಿತ್ರ ನೀತಿಯ ಪ್ರಕಾರ ಯಾವುದೇ ರಿಮೇಕ್ ಅಥವಾ ಸ್ಫೂರ್ತಿ ಪಡೆದಿರುವ, ಅವಾಚ್ಯ ಮಾತುಗಳಿರುವ, ಹೆಣ್ಣುಮಕ್ಕಳನ್ನು ಅಸಭ್ಯವಾಗಿ ಚಿತ್ರಿಸಿರುವ ಸಿನಿಮಾಗಳಿಗೆ ಪ್ರಶಸ್ತಿ ನೀಡುವಂತಿಲ್ಲ. ಪ್ರಶಸ್ತಿ ಆಯ್ಕೆ ಸಮಿತಿಯವರಿಗೂ ಅಲ್ಲಿನ ಸಿನಿಮಾಗಳಿಗೂ ಯಾವುದೇ ಸಂಬಂಧ ಇರುವಂತಿಲ್ಲ. ಆದರೆ ಯಾವಾಗ ಜೋ ಸೈಮನ್ ಅವರೇ ಎರಡು-ಮೂರು ಸಿನಿಮಾಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಗೊತ್ತಾಯಿತೋ, ವಾರ್ತಾ ಇಲಾಖೆಯ ಅಧಿಕಾರಿಗಳು ‘ಸಮಿತಿಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಆ ಚಿತ್ರದ ಪ್ರದರ್ಶನದ ಸಂದರ್ಭದಲ್ಲಿ ಇರಬಾರದು.’ ಎಂದು ಬೈಲಾವನ್ನು ತರಾತುರಿಯಲ್ಲಿ ತಿದ್ದುಪಡಿ ಮಾಡಿ, ಸಮಿತಿಯ ಕೆಲಸಗಳನ್ನು ಮುಂದುವರೆಸಿದ್ದಾರಂತೆ.

ಹಾಗಾದರೆ ೨೦೧೨ರಲ್ಲಿ ಭಾರತಿ ವಿಷ್ಣುವರ್ಧನ್ ನೇತೃತ್ವದ ಸಮಿತಿಯಲ್ಲಿ ಅಶೋಕ್ ಕಶ್ಯಪ್ ಸೂಪರ್ ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದರು ಎನ್ನುವ ಕಾರಣಕ್ಕೆ ಆ ವರ್ಷದ ಆಯ್ಕೆಪಟ್ಟಿಯನ್ನು ರದ್ದುಗೊಳಿಸಿದ್ದರಲ್ಲಾ? ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಹೈಕೋರ್ಟ್ ಛೀಮಾರಿ ಹಾಕಿ ಹೊಸ ಸಮಿತಿಯನ್ನು ನೇಮಿಸಿ, ಮತ್ತೊಮ್ಮೆ ಆಯ್ಕೆ ಪ್ರಕ್ರಿಯೆ ನಡೆಸುವಂತೆ ತಾಕೀತು ಮಾಡಿತ್ತಲ್ಲಾ? ಈಗ ಮಾತ್ರ ಬೈಲಾ ತಿದ್ದುಪಡಿ ಮಾಡಿದರೆ ಹೇಗೆ? ಈ ಎಲ್ಲದರ ಕುರಿತಾಗಿ ಸೋಮವಾರ ನ್ಯಾಯಾಲಯದಲ್ಲಿ ಯಾವ ರೀತಿಯ ನಿರ್ಣಯ ನೀಡಲಿದೆಯೋ ಕಾದು ನೋಡಬೇಕು.

CG ARUN

ಮೌನಂ : ಮಗನ ಹುಡುಗಿ ಮೇಲೆ ಅಪ್ಪನ ಪ್ರೇಮಂ!

Previous article

You may also like

Comments

Leave a reply

Your email address will not be published. Required fields are marked *