ಇದು ಆ ನಟನ ವಿಷಯ, ಈ ನಟನ ವಿಷಯ ಅಂತೆಲ್ಲಾ ನೋಡದೆ ಕನ್ನಡ ಚಿತ್ರರಂಗದ ಭವಿಷ್ಯವೆಂದು ನೋಡಿ ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ. ಬನ್ನಿ ಕನ್ನಡ ಚಿತ್ರರಂಗವನ್ನು ಉಳಿಸೋಣ. ಪೈರಸಿ ಮಾಡಿದವರಿಗೆ ಶಿಕ್ಷೆಯಾಗುವ ತನಕ ವಿರಮಿಸದಿರೋಣ.
ಕನ್ನಡ ಚಿತ್ರರಂಗದ ಮೇಲೆ ಪೈರಸಿ ದಾಳಿ ಕುರಿತಂತೆ..
ಹತ್ತಿರ ಹತ್ತಿರ ಶತಮಾನದ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಕೆಟ್ಟ ಸಂಪ್ರದಾಯವೊಂದು ಶುರುವಾಗಿ ಹೋಗಿದೆ. ಅದು ಪೈರೇಸಿ ಎಂಬ ಭೂತ. ಈ ಭೂತವನ್ನು ಸುದೀಪ್ ಸಿನಿಮಾ, ಅಪ್ಪು ಸಿನಿಮಾ, ದರ್ಶನ್ ಸಿನಿಮಾ, ಶಿವಣ್ಣ ಸಿನಿಮಾ, ಯಶ್ ಸಿನಿಮಾ, ಗಣೇಶ್ ಸಿನಿಮಾಗೆ ಹಿಡಿದದ್ದು ಅಂತ ವಿಭಾಗಿಸಿ ನೋಡುವ ಅಗತ್ಯವೇ ಇಲ್ಲ. ಏಕೆಂದರೆ ಇದು ಒಬ್ಬರ ಚಿತ್ರಕ್ಕಿಡಿದ ಭೂತವಲ್ಲ ಇಡೀ ಕನ್ನಡ ಚಿತ್ರೋದ್ಯಮಕ್ಕೆ ಹಿಡಿದ ಪೀಡೆ.
ಹಿಂದೆಯೂ ಪೈರಸಿ ಆಗಿತ್ತು! ಆದರೆ ಈ ಪ್ರಮಾಣದಲ್ಲಿ ಎಂದೂ ಆಗಿರಲಿಲ್ಲ. ಪೈಲ್ವಾನ್ ಸಿನಿಮಾವನ್ನು ಏಕೆ ಆ ಮಟ್ಟದಲ್ಲಿ ಪೈರಸಿ ಮಾಡಿದರು ಎಂಬುವುದಕ್ಕಿಂತ ಅಷ್ಟು ದೊಡ್ಡ ಸಿನಿಮಾವನ್ನೇ ಪೈರಸಿ ಮಾಡಿದ ಮೇಲೆ ಸಣ್ಣಪುಟ್ಟ ಸಿನಿಮಾಗಳ ಕಥೆಯೇನು? ಅನ್ನೋ ಪ್ರಶ್ನೆ ಇಲ್ಲಿ ಪ್ರಸ್ತುತವಾಗುತ್ತದೆ. ನಿರ್ಮಾಪಕರ ಪ್ರಕಾರ ಪೈರಸಿಯಿಂದ ಪೈಲ್ವಾನ್ ಸಿನಿಮಾಗೆ ಸುಮಾರು ೨೦ ಕೋಟಿ ನಷ್ಟವಾಗಿದೆಯಂತೆ. ಇದೇ ತರಹದ ನಷ್ಟ ಸಣ್ಣ ನಿರ್ಮಾಪಕರಿಗೆ, ಉದಯೋನ್ಮುಖ ನಟರಿಗಾದರೆ ಏನು ಮಾಡುವುದು? ಈ ಪ್ರಶ್ನೆ ಇಂದು ಪ್ರತಿಯೊಬ್ಬ ಚಿತ್ರೋದ್ಯಮಿಯೂ ಕೇಳಿಕೊಳ್ಳಬೇಕಾಗಿದೆ.

ಪರಭಾಷೆಗಳಲ್ಲೂ ಸ್ಟಾರ್ ವಾರ್ ಗಳಿವೆ.. ಫ್ಯಾನ್ಸ್ ವಾರ್ ಗಳಿವೆ! ಆದರೆ ಈ ಮಟ್ಟಕ್ಕೆ ತಮ್ಮ ಭಾಷೆಯ ಚಿತ್ರವನ್ನು ತಾವೇ ಹಾಳುಮಾಡಿಕೊಳ್ಳುವ ಮಟ್ಟಕ್ಕೆ ಯಾರೂ ಇಳಿದಿರಲಿಲ್ಲ. ಆದರೆ ಕನ್ನಡ ಚಿತ್ರರಂಗದಲ್ಲಿ ಅಂತಹುದ್ದೊಂದು ಸಂಪ್ರದಾಯ ಶುರುವಾಗಿಬಿಟ್ಟಿದೆ. ಇದನ್ನು ಬೇರುಮಟ್ಟದಲ್ಲಿಯೇ ಕತ್ತರಿಸಿ ಬಿಸಾಕದಿದ್ದರೆ ಬಹುಶಃ ಮುಂದಿನ ದಿನಗಳಲ್ಲಿ ಇದು ಶಾಪವಾಗಿ ಕಾಡುವುದರಲ್ಲಿ ಸಂಶಯವೇ ಇಲ್ಲ. ನಿಮಗೆ ಗೊತ್ತಿರಬಹುದು.. ಬಾಲಿವುಡ್ ನವರು ಯಾವಯಾವುದೋ ಕಾರಣಕ್ಕೆ ತಮಗೆ ಗೊತ್ತಿಲ್ಲದೆಯೇ ಅಂಡರ್ ವರ್ಲ್ಡ್ ಅನ್ನು ಬಾಲಿವುಡ್ ಒಳಗೆ ಬಿಟ್ಟುಕೊಂಡುಬಿಟ್ಟರು. ಅದರಿಂದ ಸುಮಾರು 30 ವರ್ಷಗಳ ಕಾಲ ಬಾಲಿವುಡ್ ಅನ್ನುವಂತಹ ಬಾಲಿವುಡ್ ಅಂಡರ್ ವರ್ಲ್ಡ್ ಕಪಿಮುಷ್ಠಿಗೆ ಸಿಕ್ಕಿ ತಂಡಾ ಹೊಡೆದುಬಿಟ್ಟಿತ್ತು. ಕಥೆ ಕೇಳದೆ ಹೀರೋಗಳು ಸಿನಿಮಾಗೆ ಸೈನ್ ಮಾಡಬೇಕಿತ್ತು. ಯಾರಿಗೆಂದರೆ ಅವರಿಗೆ ಕಾಲ್ ಶೀಟ್ ಕೊಡಬೇಕಿತ್ತು. ಎಲ್ಲೂ ಬಹಿರಂಗ ವೇದಿಕೆಗಳನ್ನು ಹಂಚಿಕೊಳ್ಳುವಂತಿರಲಿಲ್ಲ. ಕರೆದಾಗ ನಟನಟಿಯರು ದುಬೈನಲ್ಲಿ ಇರಬೇಕಿತ್ತು.. ಇಂತಹ ಅದೆಷ್ಟೋ ಅವಸಾನಗಳನ್ನು ಬಾಲಿವುಡ್ ಕಂಡಿದೆ. ಸದ್ಯ ಈಗ ಅದರಿಂದ ಮುಕ್ತವಾಗಿ ಜಗತ್ತು ಮೆಚ್ಚುವಂತಹ ಸಿನಿಮಾಗಳನ್ನು ನಿರ್ಮಿಸುತ್ತಿದೆ..

ನಾಳೆ ಕನ್ನಡ ಚಿತ್ರರಂಗದ ಪೈರಸಿ ಕಥೆಯೂ ಅದೇ ಆದರೆ ಹೇಗಿರಬಹುದು ಯೋಚಿಸಿ! ಇಲ್ಲಿ ಯಾರಾದರೂ ಉಳಿಯಲು ಸಾಧ್ಯವೇ? ಯಾರಾದರೂ ಸಿನಿಮಾ ನಿರ್ಮಾಣಕ್ಕೆ ಬರುತ್ತಾರೆಯೇ?
ಇಂತಹ ಪ್ರಶ್ನೆಗಳನ್ನಿಟ್ಟುಕೊಂಡು ಪೈರಸಿ ಭೂತವನ್ನು ಕನ್ನಡ ಚಿತ್ರೋದ್ಯಮದಿಂದ ಹೊರಗಟ್ಟುವ ಕೆಲಸ ಆಗಬೇಕಿದೆ. ಇದು ಆ ನಟನ ವಿಷಯ, ಈ ನಟನ ವಿಷಯ ಅಂತೆಲ್ಲಾ ನೋಡದೆ ಕನ್ನಡ ಚಿತ್ರರಂಗದ ಭವಿಷ್ಯವೆಂದು ನೋಡಿ ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ. ಬನ್ನಿ ಕನ್ನಡ ಚಿತ್ರರಂಗವನ್ನು ಉಳಿಸೋಣ. ಪೈರಸಿ ಮಾಡಿದವರಿಗೆ ಶಿಕ್ಷೆಯಾಗುವ ತನಕ ವಿರಮಿಸದಿರೋಣ.
ನಿಮ್ಮ
ಸುದೀಪ್ ಸಾಂಸ್ಕೃತಿಕ ಪರಿಷತ್ತು
ಬಹಿರಂಗ ಪತ್ರ
No Comment! Be the first one.