ಅರಸೊತ್ತಿಗೆಗಾಗಿ ಆಸೆಪಡುವ ಆಸೆಬುರುಕ ರಾಜನಂತೆ ಕಂಡರೂ, ಕಡೆಗೆ ದೇಶೋದ್ಧಾರಕ್ಕಾಗಿ, ಪ್ರಜೆಗಳ ಏಳಿಗೆಗಾಗಿ ಕೇಡುಗರನ್ನು ಕೊಲ್ಲುವ, ನರಸಿಂಹ ರೆಡ್ಡಿಯ ಪರ ನಿಲ್ಲುವ ಅವುಕುರಾಜನ ಪಾತ್ರದಲ್ಲಿ ಕಿಚ್ಚನನ್ನು ಬಿಟ್ಟರೆ ಬೇರೊಬ್ಬರನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಇದು ಒಬ್ಬ ಅಪ್ಪಟ ಕಲಾವಿದನ ನಿಜವಾದ ಗೆಲುವು.
ಅಪ್ರತಿಮ ಕಲಿ, ವೀರ ಸೇನಾನಿ ನರಸಿಂಹ ರೆಡ್ಡಿಯ ಬದುಕನ್ನು ಆಧರಿಸಿದ ‘ಸೈರಾ ಸಿನಿಮಾ ರಿಲೀಸಾಗಿದೆ. ಕಳೆದ ಒಂದು ವರ್ಷದಿಂದ ಪರಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಲೇ ಇವೆ. ಆದರೆ, ಜನ ಅದು ಯಾವ ಸ್ಟಾರ್ ಸಿನಿಮಾ ಆದರೂ ಮೂಸಿ ಕೂಡಾ ನೋಡುತ್ತಿಲ್ಲ. ಮೊಟ್ಟ ಮೊದಲ ಬಾರಿಗೆ ಡಬ್ಬಿಂಗ್ ಸಿನಿಮಾವೊಂದನ್ನು ನೋಡಲು ಕನ್ನಡಿಗರು ಮುಗಿ ಬೀಳುತ್ತಿದ್ದಾರೆ.
ಅದು ಕಿಚ್ಚನ ಕಾರಣಕ್ಕೆ!

ಸೈರಾ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಿದ್ದಾರಲ್ಲಾ? ಅದೆಷ್ಟು ತನ್ಮಯರಾಗಿ ಸುದೀಪ್ ನಟಿಸಿದ್ದಾರೆಂದರೆ, ಸೈರಾ ನರಸಿಂಹ ರೆಡ್ಡಿಯ ಪಾತ್ರವನ್ನು ಬಿಟ್ಟರೆ, ಈ ಸಿನಿಮಾದಲ್ಲಿ ಅತಿ ಹೆಚ್ಚು ಸೆಳೆಯುವುದೇ ಕಿಚ್ಚ ನಟಿಸಿರುವ ಅವುಕು ರಾಜನ ಕ್ಯಾರೆಕ್ಟರ್ರು!
ಈ ಸಿನಿಮಾದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ತಮಿಳಿನ ಸದ್ಯದ ಸೂಪರ್ ಸ್ಟಾರ್ ವಿಜಯ್ ಸೇದುಪತಿ ಸೇರಿದಂತೆ ಭಾರತೀಯ ಚಿತ್ರರಂಗದ ಸಾಕಷ್ಟು ದಿಗ್ಗಜ ನಟರು ನಟಿಸಿದ್ದಾರೆ. ನಿಜ ಹೇಳಬೇಕೆಂದರೆ, ಕಿಚ್ಚನ ಮುಂದೆ ಅಮಿತಾಬ್ ಕೂಡಾ ಡಲ್ಲು ಅನಿಸಿಬಿಡುತ್ತಾರೆ. ಕೆಲವೊಂದು ದೃಶ್ಯಗಳಲ್ಲಿ ಮೆಘಾ ಸ್ಟಾರ್ ಚಿರಂಜೀವಿಯ ನಟನೆಯನ್ನೂ ನುಂಗಿಹಾಕಿದಂತೆ ಕಿಚ್ಚ ನಟಿಸಿದ್ದಾರೆ.

ಆರಂಭದಲ್ಲಿ ಅವುಕುರಾಜ ಖಳನಂತೆ ಕಂಡರೂ ಸಿನಿಮಾದ ಅಂತ್ಯದ ಹೊತ್ತಿಗೆ ಹೀರೋ ಥರಾ ಕಾಣಿಸುತ್ತಾನೆ. ಕ್ಲೈಮ್ಯಾಕ್ಸ್ ಯುದ್ಧದ ದೃಶ್ಯದಲ್ಲಂತೂ ಕಿಚ್ಚ ಕುದುರೆ ಏರಿ ಬರುತ್ತಿದ್ದರೆ, ನೋಡುಗರ ಮೈ ರೋಮಗಳು ಎದ್ದು ನಿಲ್ಲುತ್ತವೆ. ಅಷ್ಟು ಅದ್ಭುತವಾಗಿದೆ.
ಅರಸೊತ್ತಿಗೆಗಾಗಿ ಆಸೆಪಡುವ ಆಸೆಬುರುಕ ರಾಜನಂತೆ ಕಂಡರೂ, ಕಡೆಗೆ ದೇಶೋದ್ಧಾರಕ್ಕಾಗಿ, ಪ್ರಜೆಗಳ ಏಳಿಗೆಗಾಗಿ ಕೇಡುಗರನ್ನು ಕೊಲ್ಲುವ, ನರಸಿಂಹ ರೆಡ್ಡಿಯ ಪರ ನಿಲ್ಲುವ ಅವುಕುರಾಜನ ಪಾತ್ರದಲ್ಲಿ ಕಿಚ್ಚನನ್ನು ಬಿಟ್ಟರೆ ಬೇರೊಬ್ಬರನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಇದು ಒಬ್ಬ ಅಪ್ಪಟ ಕಲಾವಿದನ ನಿಜವಾದ ಗೆಲುವು.
ಇಂಥ ಕಲಾವಿದನನ್ನು ಪಡೆದ ಕನ್ನಡಿಗರು ಒಮ್ಮೆ ‘ಸೈರಾ ಸುದೀಪ್ ಅನ್ನಲೇಬೇಕು!